ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫುಟ್‌ಬಾಲ್‌: ಭಾರತ ತಂಡಕ್ಕೆ ಸೋಲು

Last Updated 20 ಜುಲೈ 2017, 19:30 IST
ಅಕ್ಷರ ಗಾತ್ರ

ದೋಹಾ: ಎಚ್ಚರಿಕೆಯ ಆಟವಾಡಿದರೂ ಐಗೋಲು ಗಳಿಸಲು ವಿಫಲವಾದ ಭಾರತ ತಂಡದವರು 23 ವರ್ಷದೊಳಗಿನವರ ಎಎಫ್‌ಸಿ ಚಾಂಪಿಯನ್‌ಷಿಪ್‌ನ ಅರ್ಹತಾ ಸುತ್ತಿನ ಮೊದಲ ಪಂದ್ಯದಲ್ಲಿ ಸೋತರು.

ಇಲ್ಲಿನ ಜಸಿಮ್‌ ಬಿನ್ ಹಮಾದ್‌ ಕ್ರೀಡಾಂಗಣದಲ್ಲಿ ಬುಧವಾರ ತಡರಾತ್ರಿ ನಡೆದ ಪಂದ್ಯದಲ್ಲಿ ಸಿರಿಯಾ ತಂಡದವರು 2–0 ಗೋಲುಗಳಿಂದ ಭಾರತವನ್ನು ಮಣಿಸಿದರು.

ಉಭಯ ತಂಡದವರೂ ಆರಂಭದಿಂದಲೇ ಎಚ್ಚರದಿಂದ ಆಡಿದರು. ಹೀಗಾಗಿ ಪಂದ್ಯದ ಪೂರ್ವಾರ್ಧದಲ್ಲಿ ಗೋಲು ದಾಖಲಾಗಲಿಲ್ಲ. ಉತ್ತರಾರ್ಧದಲ್ಲಿ ಸಿರಿಯಾ ಮೇಲೆ ಒತ್ತಡ ಹೇರಲು ಪ್ರಯತ್ನಿಸಿದ ಭಾರತಕ್ಕೆ ಫಲ ಸಿಗಲಿಲ್ಲ. ಆದರೆ ಚೆಂಡಿನ ಮೇಲೆ ನಿಯಂತ್ರಣ ಸಾಧಿಸಿದ ಎದುರಾಳಿಗಳು ಯಶಸ್ಸು ಕಂಡರು. ಭಾರತದ ಡ್ಯಾನಿಯೆಲ್‌ ಲಾಲಿಂಪುಯಾ ಅವರಿಗೆ ಪಂದ್ಯದ ಆರಂಭದಲ್ಲೇ ಉತ್ತಮ ಅವಕಾಶ ಲಭಿಸಿತ್ತು.

ಆದರೆ ಅದನ್ನು ಸದುಪಯೋಗ ಮಾಡಿಕೊಳ್ಳಲಿಲ್ಲ. ನಂತರ ನಿಖಿಲ್ ಪೂಜಾರಿ ಚುರುಕಿನ ಆಟದ ಮೂಲಕ ಎದುರಾಳಿ ಆಟಗಾರರನ್ನು ನಿರಂತರ ಕಾಡಿದರು. 37ನೇ ನಿಮಿಷದಲ್ಲಿ ಭಾರತಕ್ಕೆ ಅತ್ಯುತ್ತಮ ಅವಕಾಶ ಲಭಿಸಿತು. ಆದರೆ ಜರ್ಮನ್‌ಪ್ರೀತ್‌ ಸಿಂಗ್‌ ಬಲಗಾಲಲ್ಲಿ ಒದ್ದ ಚೆಂಡು ಗೋಲು ಪೆಟ್ಟಿಗೆಯ ಕಂಬಕ್ಕೆ ಬಡಿದು ವಾಪಸಾಯಿತು. ನಂತರ ಅನಿರುಧ್‌ ಥಾಪ ದೂರದಿಂದ ನೀಡಿದ ಪಾಸ್‌ ಅನ್ನು ಪಡೆದ ನಿಶು ಕುಮಾರ್ ಗೋಲು ಗಳಿಸಲು ಶ್ರಮಿಸಿದರು. ಆದರೆ ಚೆಂಡು ಗೋಲು ಪೆಟ್ಟಿಗೆಯ ಒಳಗೆ ಸೇರಲಿಲ್ಲ. 

ಮಧ್ಯಂತರ ಅವಧಿಯ ನಂತರ ಆರಂಭದಲ್ಲೇ ಮನ್‌ವೀರ್ ಸಿಂಗ್‌ ಹೆಡರ್ ಮೂಲಕ ತಂಡದ ಖಾತೆ ತೆರೆಯಲು ಪ್ರಯತ್ನಿಸಿದರು. ಆದರೆ ಸಿರಿಯಾದ ಗೋಲ್‌ಕೀಪರ್‌ ಚೆಂಡನ್ನು ಸಮರ್ಥವಾಗಿ ತಡೆದರು.

64ನೇ ನಿಮಿಷದಲ್ಲಿ ಸಿರಿಯಾ ಖಾತೆ ತೆರೆಯಿತು. ಭಾರತದ ಗೋಲ್‌ಕೀಪರ್‌ ವಿಶಾಲ್ ಖೇಥ್‌ ಅವರನ್ನು ವಂಚಿಸಿದ ಸಿರಿಯಾ ಸ್ಟ್ರೈಕರ್‌ ರಾಬೀ ಸ್ರೋರ್‌ ಚೆಂಡನ್ನು ಗುರಿ ಮುಟ್ಟಿಸಿದರು. 72ನೇ ನಿಮಿಷದಲ್ಲಿ ಭಾರತ ಮೊದಲ ಬಾರಿ ಬದಲಿ ಆಟಗಾರನನ್ನು ಕಣಕ್ಕೆ ಇಳಿಸಿತು.

ಡ್ಯಾನಿಯೆಲ್‌ ಬದಲಿಗೆ ಹಿತೇಶ್‌ ಅಂಗಳಕ್ಕೆ ಇಳಿದರು. 81ನೇ ನಿಮಿಷದಲ್ಲಿ ಲಾಲ್‌ರುವಥಾರ ಮತ್ತು ಅನಿರುಧ್‌ ಥಾಪ ಬದಲಿಗೆ ಸಾರ್ಥಕ್‌ ಗೋಲ್ವಿ ಮತ್ತು ರಾಬಿನ್‌ಸನ್ ಸಿಂಗ್‌ ಬಂದರು. ಆದರೂ ತಂಡದ ಕನಸು ನನಸಾಗಲಿಲ್ಲ.

84ನೇ ನಿಮಿಷದಲ್ಲಿ ನಿಖಿಲ್ ಪೂಜಾರಿ ನೀಡಿದ ಪಾಸ್‌ನಲ್ಲಿ ಗೋಲು ಗಳಿಸಲು ಲಭಿಸಿದ ಉತ್ತಮ ಅವಕಾಶವನ್ನು ಹಿತೇಶ್‌ ಕೈಚೆಲ್ಲಿದರು. 88ನೇ ನಿಮಿಷದಲ್ಲಿ ಫರೇಸ್‌ ಅರ್ನೌಟ್‌ ಗೋಲು ಗಳಿಸಿ ಸಿರಿಯಾದ ಮುನ್ನಡೆಯನ್ನು ಹೆಚ್ಚಿಸಿದರು. ಶುಕ್ರವಾರ ನಡೆಯಲಿರುವ ಪಂದ್ಯದಲ್ಲಿ ಭಾರತ ತಂಡ ಬಲಿಷ್ಠ ಖತಾರ್‌ ವಿರುದ್ಧ ಸೆಣಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT