ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಮಹಿಳೆಯರಿಗೆ ನಿರಾಸೆ: ಜಪಾನ್‌ಗೆ ಜಯ

Last Updated 20 ಜುಲೈ 2017, 19:30 IST
ಅಕ್ಷರ ಗಾತ್ರ

ಜೋಹಾನ್ಸ್‌ಬರ್ಗ್: ಭಾರತ ತಂಡವು ಮಹಿಳೆಯರ ವಿಶ್ವ ಹಾಕಿ ಸೆಮಿಫೈನಲ್‌ ಲೀಗ್ ಟೂರ್ನಿಯಲ್ಲಿ ಗುರುವಾರ ನಿರಾಸೆ ಅನುಭವಿಸಿತು.
5 ಮತ್ತು 6ನೇ  ಸ್ಥಾನಗಳಿಗೆ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಭಾರತ ತಂಡವು 0–2 ಗೋಲುಗಳಿಂದ ಜಪಾನ್ ತಂಡದ ಎದುರು ಸೋತಿತು. ಜುಲೈ 22ರಂದು ಏಳು ಮತ್ತು ಎಂಟನೇ ಸ್ಥಾನಕ್ಕಾಗಿ ನಡೆಯುವ ಪಂದ್ಯದಲ್ಲಿ ಭಾರತ ಆಡಲಿದೆ.

ಭಾರತ ತಂಡವು ಪಂದ್ಯದ ಆರಂಭದಲ್ಲಿಯೇ ಗೋಲು ಗಳಿಸುವ ಅವಕಾಶ ಪಡೆದಿತ್ತು. ಮೊದಲ ನಿಮಿಷದಲ್ಲಿಯೇ ಮೋನಿಕಾ ಅವರು ಶರವೇಗದಲ್ಲಿ ಚೆಂಡನ್ನು ಗೋಲುಪೆಟ್ಟಿಗೆಯತ್ತ ಹೊಡೆದಿದ್ದರು. ಆದರೆ, ಜಪಾನ್ ತಂಡದ ಗೋಲ್‌ಕೀಪರ್ ಮೆಗುಮಿ ಕಾಗೆಯಮಾ ಅವರು ಚುರುಕಿನಿಂದ ಜಿಗಿದು ಚೆಂಡು ತಡೆದರು. ಇದಾದ ನಂತರ ಜಪಾನ್ ತಂಡವು ರಕ್ಷಣೆಯನ್ನು ಮತ್ತಷ್ಟು ಬಿಗಿಗೊಳಿಸಿತು. 

ಇನ್ನೊಂದೆಡೆ ಜಪಾನ್ ತಂಡದ ಸ್ಟ್ರೈಕರ್‌ಗಳು ಆಕ್ರಮಣಕಾರಿಯಾಗಿ ಆಡುವ ಮೂಲಕ ಭಾರತದ ರಕ್ಷಣಾ ಆಟಗಾರರ ಮೇಲೆ ಒತ್ತಡ ಹೆಚ್ಚಿಸಿದರು. ಇದರಿಂದಾಗಿ ಏಳನೇ ನಿಮಿಷದಲ್ಲಿ ಜಪಾನ್ ಮೊದಲ ಪೆನಾಲ್ಟಿ ಕಾರ್ನರ್ ಪಡೆಯುವಲ್ಲಿ ಸಫಲವಾಯಿತು. ಅದನ್ನು ಸ್ಟ್ರೈಕರ್ ಕಾನಾ ನೊಮುರಾ ಅವರು ಗೋಲಿನಲ್ಲಿ ಪರಿವರ್ತಿಸಿದರು.

ಎಂಟು ಮತ್ತು ಹತ್ತನೇ ನಿಮಿಷಗಳಲ್ಲಿಯೂ ಜಪಾನ್ ತಂಡವು ಪೆನಾಲ್ಟಿ ಕಾರ್ನರ್ ಗಿಟ್ಟಿಸಿತು. ಆದರೆ, ರಕ್ಷಣಾ ಆಟಗಾರ್ತಿ ಮೋನಿಕಾ ಮತ್ತು ಗೋಲ್‌ಕೀಪರ್ ಸವಿತಾ ಅವರ ಅಮೋಘ ಆಟದ ಫಲವಾಗಿ ಅವು ಗೋಲಿನಲ್ಲಿ ಪರಿವರ್ತನೆಯಾಗಲಿಲ್ಲ.

ಭಾರತ ತಂಡದ ಆಟಗಾರ್ತಿಯರು ಜಪಾನ್ ರಕ್ಷಣಾ ಕೋಟೆಯನ್ನು ದಾಟಲು ಮಾಡಿದ  ಪ್ರಯತ್ನಗಳು ವಿಫಲವಾದವು. ಎರಡನೇ ಕ್ವಾರ್ಟರ್‌ನಲ್ಲಿ ಭಾರತದ ಆಟಗಾರ್ತಿಯರ ಗೋಲುಗಳಿಸುವ ಪ್ರಯತ್ನಗಳಿಗೆ ಫಲ ಸಿಗಲಿಲ್ಲ. ಜಪಾನಿನ ಅಕಿಕೊ ಕೆಟೊ ಆಕರ್ಷಕ ಡ್ರಿಬ್ಲಿಂಗ್ ಮೂಲಕ ಚೆಂಡನ್ನು ಗೋಲುಪೆಟ್ಟಿಗೆ ಸೇರಿಸಲು ಪ್ರಯತ್ನಿಸಿದರು. ಗೋಲ್‌ಕೀಪರ್ ಸವಿತಾ ಅವರು ತಡೆಗೋಡೆಯಾಗಿ ನಿಂತರು. 

29ನೇ ನಿಮಿಷದಲ್ಲಿ ಲಭಿಸಿದ ಮತ್ತೊಂದು ಪೆನಾಲ್ಟಿ ಕಾರ್ನರ್‌ ಅವಕಾಶವನ್ನು ಜಪಾನ್ ತಂಡದ ನಾಹೊ ಇಚಿತಾನಿ ಅವರು ಗೋಲಿನಲ್ಲಿ ಪರಿವರ್ತಿಸಿದರು.

ನಂತರದ ಅವಧಿಯಲ್ಲಿಯೂ ಜಪಾನ್ ತಂಡದ ಆಟಗಾರ್ತಿಯರು ಭಾರತದ ರಕ್ಷಣಾಕೋಟೆಯನ್ನು ಪುಡಿಗಟ್ಟುವ ಪ್ರಯತ್ನ ಮುಂದುವರಿಸಿದರು.  ಗೋಲುಪೆಟ್ಟಿಗೆಯ ಸಮೀಪ ಚೆಂಡು ತೆಗೆದುಕೊಂಡು ಹೋಗುವಲ್ಲಿ ಸಫಲತೆಯನ್ನೂ ಸಾಧಿಸಿದರು. ಆದರೆ ಸವಿತಾ ಅವರ ಅಮೋಘ ಆಟವು ಗಮನ ಸೆಳೆಯಿತು.  ಹೆಚ್ಚು ಗೋಲುಗಳ ಅಂತರದಿಂದ ಭಾರತವು ಸೋಲುವುದನ್ನು ಸವಿತಾ ತಪ್ಪಿಸಿದರು. ಆದರೆ ರಾಣಿ ನಾಯಕತ್ವದ ತಂಡವು ಒಂದೂ ಗೋಲು ಗಳಿಸಲು ಸಾಧ್ಯವಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT