ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಹುಲ್‌, ರೋಹಿತ್‌ ಮೇಲೆ ನಿರೀಕ್ಷೆ

ಶ್ರೀಲಂಕಾದಲ್ಲಿ ಕೊಹ್ಲಿ ಬಳಗ; ಅಧ್ಯಕ್ಷರ ಇಲೆವನ್ ವಿರುದ್ಧದ ಪಂದ್ಯ ಇಂದು ಆರಂಭ
Last Updated 20 ಜುಲೈ 2017, 20:08 IST
ಅಕ್ಷರ ಗಾತ್ರ

ಕೊಲಂಬೊ: ಭಾರತ ಕ್ರಿಕೆಟ್ ತಂಡ ಇಲ್ಲಿ ನಡೆಯಲಿರುವ ಮೊದಲ ಅಭ್ಯಾಸ ಪಂದ್ಯದಲ್ಲಿ ಅಧ್ಯಕ್ಷರ ಇಲೆವನ್ ತಂಡವನ್ನು ಶುಕ್ರವಾರ ಎದುರಿಸಲಿದೆ.

ಮೂರು ಟೆಸ್ಟ್‌ ಪಂದ್ಯಗಳ ಸರಣಿಗೆ ಸಜ್ಜಾಗುತ್ತಿರುವ ಭಾರತ ತಂಡ ಈ ಪಂದ್ಯದಲ್ಲಿ ಬ್ಯಾಟಿಂಗ್‌ ಅಭ್ಯಾಸಕ್ಕೆ ಹೆಚ್ಚು ಒತ್ತು ನೀಡಲಿದೆ. ಈ ನಿಟ್ಟಿನಲ್ಲಿ ರೋಹಿತ್ ಶರ್ಮಾ ಮತ್ತು ಕೆ.ಎಲ್‌.ರಾಹುಲ್ ಅವರಿಗೆ ಈ ಪಂದ್ಯ ಮಹತ್ವದ್ದಾಗಲಿದೆ.

ಭಾರತದ ಸ್ಫೋಟಕ ಆರಂಭಿಕ ಬ್ಯಾಟ್ಸ್‌ಮನ್‌ ರೋಹಿತ್ ಶರ್ಮಾ ಒಂಬತ್ತು ತಿಂಗಳಿಂದ ಟೆಸ್ಟ್ ಪಂದ್ಯ ಆಡಲಿಲ್ಲ. ಕಳೆದ ಅಕ್ಟೋಬರ್‌ನಲ್ಲಿ ಅವರು ನ್ಯೂಜಿಲೆಂಡ್‌ ವಿರುದ್ಧ ಕೊನೆಯ ಪಂದ್ಯ ಆಡಿದ್ದರು. ನಂತರ ಅದೇ ತಂಡದ ವಿರುದ್ಧ ನಡೆದ ಏಕದಿನ ಕ್ರಿಕೆಟ್ ಸರಣಿಯ ಪಂದ್ಯದಲ್ಲಿ ಅವರ ತೊಡೆಗೆ ಗಾಯವಾಗಿತ್ತು. ಹೀಗಾಗಿ ಅವರನ್ನು ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗಿತ್ತು. ಗುಣಮುಖರಾದ ನಂತರ ಅವರು ಪ್ರಥಮ ದರ್ಜೆ ಕ್ರಿಕೆಟ್‌ ಆಡಲಿಲ್ಲ.

ಇಂಡಿಯನ್‌ ಪ್ರೀಮಿಯರ್ ಲೀಗ್‌ ಮತ್ತು ಚಾಂಪಿಯನ್ಸ್‌ ಟ್ರೋಫಿಯಲ್ಲಿ ಉತ್ತಮ ಸಾಮರ್ಥ್ಯ ತೋರಿದ್ದರು. ಆದರೆ ಭಾರತ ತಂಡ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಂಡಾಗ ಅವರಿಗೆ ವಿಶ್ರಾಂತಿ ನೀಡಲಾಗಿತ್ತು. ಶ್ರೀಲಂಕಾದಲ್ಲಿ ನಡೆಯುವ ಪಂದ್ಯಗಳಿಗೆ ಅವರು ಪೂರ್ಣ ಫಿಟ್ ಆಗಿರಬೇಕು ಎಂಬ ಉದ್ದೇಶದಿಂದ ಆಯ್ಕೆ ಸಮಿತಿ ಈ ನಿರ್ಧಾರ ಕೈಗೊಂಡಿತ್ತು.

ಆಸ್ಟ್ರೇಲಿಯಾ ವಿರುದ್ಧದ ಸರಣಿಯ ಏಳು ಇನಿಂಗ್ಸ್‌ಗಳಲ್ಲಿ ಆರು ಅರ್ಧಶತಕ ಗಳಿಸಿದ್ದ ಕೆ.ಎಲ್.ರಾಹುಲ್‌ ಭುಜದ ಶಸ್ತ್ರಚಿಕಿತ್ಸೆಯ ನಂತರ ತಂಡಕ್ಕೆ ಮರಳಿದ್ದಾರೆ. ಶಸ್ತ್ರಚಿಕಿತ್ಸೆಯ ಕಾರಣ ಅವರು ಐಪಿಎಲ್‌, ಚಾಂಪಿಯನ್ಸ್‌ ಟ್ರೋಫಿ ಮತ್ತು ವೆಸ್ಟ್‌ ಇಂಡೀಸ್ ವಿರುದ್ಧದ ಸರಣಿಯಲ್ಲಿ ಆಡಿರಲಿಲ್ಲ.

ಅಭ್ಯಾಸ ಪಂದ್ಯದಲ್ಲಿ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ತಳವೂರಿ ಗಮನ ಸೆಳೆಯಲು ಮತ್ತು ಆ ಮೂಲಕ ಟೆಸ್ಟ್ ಪಂದ್ಯದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಇವರಿಬ್ಬರೂ ಪ್ರಯತ್ನಿಸಲಿದ್ದಾರೆ.

ರವಿಶಾಸ್ತ್ರಿಗೂ ಮಹತ್ವದ ಪಂದ್ಯ: ತಂಡದ ಕೋಚ್‌ ಆದ ನಂತರ ರವಿಶಾಸ್ತ್ರಿ ಅವರಿಗೆ ಇದು ಮೊದಲ ಪಂದ್ಯ. ಆದ್ದರಿಂದ ಅವರಿಗೂ ಈ ಪಂದ್ಯ ಮಹತ್ವದ್ದು. ಹೊಸ ಕೋಚ್‌ ಮತ್ತು ನೆರವು ಸಿಬ್ಬಂದಿ ಜೊತೆ ಇಲ್ಲಿಗೆ ಬಂದಿಳಿದಿರುವ ಭಾರತ ಎರಡು ದಿನಗಳ ಪಂದ್ಯದಲ್ಲಿ ತನ್ನ ಬತ್ತಳಿಕೆಯಲ್ಲಿರುವ ಎಲ್ಲ ಅಸ್ತ್ರಗಳನ್ನು ಪ್ರಯೋಗಿಸಲು ಶ್ರಮಿಸಲಿದೆ.

ಈ ಮೂಲಕ 26ರಂದು ಆರಂಭವಾಗುವ ಮೊದಲ ಟೆಸ್ಟ್‌ಗೆ ಉತ್ತಮ ತಂಡವನ್ನು ಅಂಗಳಕ್ಕೆ ಇಳಿಸಲು ಪ್ರಯತ್ನಿಸಲಿದೆ. ತಂಡಕ್ಕೆ ಮರಳಿರುವ ವೇಗಿಗಳಾದ ಇಶಾಂತ್ ಶರ್ಮಾ ಮತ್ತು ಮಹಮ್ಮದ್ ಶಮಿ ಅವರು ಈ ಪಂದ್ಯದಲ್ಲಿ ಪರೀಕ್ಷೆಗೆ ಒಳಗಾಗಲಿದ್ದಾರೆ.

ಭುಜದ ನೋವಿಗೆ ಒಳಗಾಗಿ ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಎರಡು ಟೆಸ್ಟ್ ಪಂದ್ಯಗಳಿಂದ ಹೊರಗೆ ಉಳಿದಿದ್ದ ಆಲ್‌ರೌಂಡರ್‌ ಹಾರ್ದಿಕ್ ಪಾಂಡ್ಯ ಕೂಡ ತಂಡಕ್ಕೆ ಮರಳಿದ್ದು ಉಮೇಶ್ ಯಾದವ್ ಭಾರತದ ಬೌಲಿಂಗ್‌ ದಾಳಿಗೆ ಮೊನಚು ತುಂಬಲಿದ್ದಾರೆ.

ಶ್ರೀಲಂಕಾದ ನಿಧಾನಗತಿಯ ಪಿಚ್‌ ಗಮನದಲ್ಲಿರಿಸಿಕೊಂಡು ಭಾರತ ತಂಡದಲ್ಲಿ ಮೂವರು ಪ್ರಭಾವಿ ಸ್ಪಿನ್ನರ್‌ಗಳಿಗೆ ಅವಕಾಶ ನೀಡಲಾಗಿದೆ. ಚೈನಾಮನ್‌ ಬೌಲರ್‌ ಕುಲದೀಪ್‌ ಯಾದವ್‌, ಆಫ್‌ಸ್ಪಿನ್ನರ್‌ ರವಿಚಂದ್ರನ್‌ ಅಶ್ವಿನ್‌ ಮತ್ತು ಎಡಗೈ ಸ್ಪಿನ್ನರ್ ರವೀಂದ್ರ ಜಡೇಜ ತಂಡದಲ್ಲಿದ್ದಾರೆ. ಇವರು ಕೂಡ ತಂಡದ ನಾಯಕನ ಗಮನ ಸೆಳೆಯಲು ಪ್ರಯತ್ನಿಸಲಿದ್ದಾರೆ.

ಭಾರತ: ವಿರಾಟ್‌ ಕೊಹ್ಲಿ (ನಾಯಕ), ಶಿಖರ್‌ ಧವನ್‌, ಕೆ.ಎಲ್‌. ರಾಹುಲ್‌, ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ (ಉಪನಾಯಕ), ರೋಹಿತ್ ಶರ್ಮಾ, ರವಿಚಂದ್ರನ್ ಅಶ್ವಿನ್‌, ರವೀಂದ್ರ ಜಡೇಜ, ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್‌), ಇಶಾಂತ್ ಶರ್ಮಾ, ಉಮೇಶ್‌ ಯಾದವ್‌, ಹಾರ್ದಿಕ್ ಪಾಂಡ್ಯ, ಭುವನೇಶ್ವರ್ ಕುಮಾರ್‌, ಮಹಮ್ಮದ್ ಶಮಿ, ಕುಲದೀಪ್ ಯಾದವ್‌, ಅಭಿನವ್‌ ಮುಕುಂದ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT