ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ 16 ಜಿಲ್ಲೆಗಳಲ್ಲಿ ಶಾಶ್ವತ ಬರ

15 ವರ್ಷಗಳಿಂದ ಪದೇಪದೇ ಬರ ಮತ್ತು ನೀರಿನ ತತ್ವಾರ
Last Updated 20 ಜುಲೈ 2017, 19:30 IST
ಅಕ್ಷರ ಗಾತ್ರ

ಮೈಸೂರು: ಕೇಂದ್ರ ಕೃಷಿ ಇಲಾಖೆಯು ರಾಜ್ಯದಲ್ಲಿ ಶಾಶ್ವತ ಬರಪೀಡಿತ 16 ಜಿಲ್ಲೆಗಳನ್ನು ಗುರುತಿಸಿದ್ದು, ಬರ ನಿರ್ವಹಣೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಕ್ರಿಯಾ ಯೋಜನೆ ರೂಪಿಸುವಂತೆ ಕಂದಾಯ ಇಲಾಖೆಗೆ ಸೂಚನೆ ನೀಡಿದೆ.

2000ರಿಂದ 2015ರ ವರೆಗೆ 10ಕ್ಕಿಂತ ಹೆಚ್ಚು ಬಾರಿ ಬರಪೀಡಿತವೆಂದು ಘೋಷಣೆಯಾಗಿರುವ ವಿವಿಧ ರಾಜ್ಯಗಳ 24 ಜಿಲ್ಲೆಗಳನ್ನು ಗುರುತಿಸಿದ್ದು ಅದರಲ್ಲಿ ಕರ್ನಾಟಕ ರಾಜ್ಯದ ಜಿಲ್ಲೆಗಳದ್ದೇ ಸಿಂಹಪಾಲು.

ಮೈಸೂರು, ಮಂಡ್ಯ, ಬಾಗಲಕೋಟೆ, ಬೆಂಗಳೂರು ಗ್ರಾಮಾಂತರ, ಬೆಳಗಾವಿ, ಬಳ್ಳಾರಿ, ಬೀದರ್‌, ವಿಜಯಪುರ, ದಾವಣಗೆರೆ, ಗದಗ, ಕಲಬುರ್ಗಿ, ಹಾಸನ, ಕೋಲಾರ, ಕೊಪ್ಪಳ, ಚಿತ್ರದುರ್ಗ, ತುಮಕೂರು ಜಿಲ್ಲೆಗಳು ಸೇರಿವೆ. ಈ ಜಿಲ್ಲೆಗಳು 15 ವರ್ಷಗಳಿಂದ ಪದೇಪದೇ ಬರ ಹಾಗೂ ನೀರಿನ ತತ್ವಾರ ಎದುರಿಸುತ್ತಿವೆ.

‘ಸಮಸ್ಯೆ ಬಗೆಹರಿಸಲು ಸ್ಥಳೀಯವಾಗಿ ಶಾಶ್ವತ ಯೋಜನೆ ರೂಪಿಸುವ ಉದ್ದೇಶವನ್ನು ಹೊಂದಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಮಾಹಿತಿ ಒದಗಿಸಲು ಸೂಚನೆ ಬಂದಿದೆ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಸೋಮಸುಂದರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಕೇಂದ್ರ ಸರ್ಕಾರವು ಹೈದರಾಬಾದ್‌ನ ಕೇಂದ್ರೀಯ ಒಣಭೂಮಿ ಕೃಷಿ ಸಂಶೋಧನಾ ಸಂಸ್ಥೆಗೆ (ಸಿಆರ್‌ಐಡಿಎ) ಈ ಜವಾಬ್ದಾರಿ ವಹಿಸಿದೆ. ಈ ಸಂಸ್ಥೆಯು ರಾಜ್ಯ ಸರ್ಕಾರದ ಸಹಯೋಗದಲ್ಲಿ ಮಾಹಿತಿ ಕಲೆಹಾಕಿ ಕ್ರಿಯಾ ಯೋಜನೆ ರೂಪಿಸಿ ಕೇಂದ್ರಕ್ಕೆ ಸಲ್ಲಿಸಲಿದೆ.

ಬರಪೀಡಿತ ಜಿಲ್ಲೆಗಳ ಮಳೆಯ ಪ್ರಮಾಣ, ಅಂತರ್ಜಲ ಮಟ್ಟ, ಜಲಾಶಯಗಳ ಪರಿಸ್ಥಿತಿ, ಮಣ್ಣಿನ ಸ್ವರೂಪ, ಬೆಳೆದ ಬೆಳೆಗಳು, ನಷ್ಟವಾದ ಬೆಳೆಗಳು, ಬರಕ್ಕೆ ಕಾರಣವಾಗಿರುವ ಅಂಶಗಳು, ಸಮಸ್ಯೆ ಪರಿಹಾರಕ್ಕೆ ಕೈಗೊಂಡಿರುವ ಕ್ರಮಗಳು, ನರೇಗಾ ವತಿಯಿಂದ ನಡೆದಿರುವ ಕೆಲಸಗಳ ಅಂಕಿಅಂಶಗಳನ್ನು ಸಂಗ್ರಹಿಸಲಾಗುತ್ತಿದೆ.

ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಕೃಷಿ, ತೋಟಗಾರಿಕೆ, ನೀರಾವರಿ ಇಲಾಖೆಯ ಅಧಿಕಾರಿಗಳು ಹಾಗೂ ಪರಿಣತರನ್ನು ಒಳಗೊಂಡ ಜಿಲ್ಲಾಮಟ್ಟದ ತಾಂತ್ರಿಕ ಮತ್ತು ಸಲಹಾ ಸಮಿತಿ ರಚಿಸಲಾಗಿದೆ. ಈ ಸಮಿತಿಯು ಕ್ರಿಯಾ ಯೋಜನೆ ರೂಪಿಸಲಿದೆ.

* ಬರ ನಿರ್ವಹಣೆಗೆ ಪರಿಹಾರ ಕಂಡುಕೊಳ್ಳಲು ಯೋಜನೆ ರೂಪಿಸಲಾಗುತ್ತಿದೆ. ಬರಕ್ಕೆ ಸಂಬಂಧಿಸಿದ ಅಂಕಿಅಂಶ ಸಂಗ್ರಹಿಸಿ ಕೇಂದ್ರಕ್ಕೆ ಸಲ್ಲಿಸಬೇಕು

–ಸೋಮಸುಂದರ್‌, ಜಂಟಿ ನಿರ್ದೇಶಕ, ಕೃಷಿ ಇಲಾಖೆ, ಮೈಸೂರು 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT