ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಿಗಳ ವರ್ಗಾವಣೆ: ಅನಿತಾ ಧಾರವಾಡಕ್ಕೆ, ಕೃಷ್ಣಕುಮಾರ್‌ ಕಲಬುರ್ಗಿಗೆ

Last Updated 20 ಜುಲೈ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಅಧೀಕ್ಷಕಿ ಆರ್‌.ಅನಿತಾ ಅವರನ್ನು ಧಾರವಾಡದ ಕೇಂದ್ರ ಕಾರಾಗೃಹಕ್ಕೆ ವರ್ಗಾವಣೆ ಮಾಡಲಾಗಿದೆ. ಮುಖ್ಯ ಅಧೀಕ್ಷಕ ಹುದ್ದೆಯಿಂದ ಬಿಡುಗಡೆ ಮಾಡಿದ್ದ ಕೃಷ್ಣಕುಮಾರ್‌ ಅವರನ್ನು ಕಲಬುರ್ಗಿ ಜೈಲಿಗೆ ನಿಯೋಜಿಸಲಾಗಿದೆ.

ಜೈಲಿನಲ್ಲಿ ನಡೆದಿದೆ ಎನ್ನಲಾದ ಅಕ್ರಮದ ಬಗ್ಗೆ ನಿವೃತ್ತ ಐಎಎಸ್‌ ಅಧಿಕಾರಿ ವಿನಯ್‌ಕುಮಾರ್ ವಿಚಾರಣೆ ಆರಂಭಿಸಿರುವ ಬೆನ್ನಲ್ಲೇ ರಾಜ್ಯ ಸರ್ಕಾರ ಈ ಆದೇಶ ಹೊರಡಿಸಿದೆ.

‘ಕಾರಾಗೃಹದಲ್ಲಿ ಬಂದಿಯಾಗಿರುವ ಎಎಐಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ. ಶಶಿಕಲಾ, ಅಧಿಕಾರಿಗಳಿಗೆ ಲಂಚ ನೀಡಿ ವಿಶೇಷ ಸೌಲಭ್ಯ ಪಡೆಯುತ್ತಿದ್ದಾರೆ’ ಎಂಬ ಆರೋಪವಿದೆ. ಆ ಶಶಿಕಲಾ ಉಳಿದುಕೊಂಡಿರುವ ಮಹಿಳಾ ಬ್ಯಾರಕ್‌ ಉಸ್ತುವಾರಿಯನ್ನು ಆರ್‌.ಅನಿತಾ ವಹಿಸಿಕೊಂಡಿದ್ದರು. ಜತೆಗೆ ಕಾರಾಗೃಹದ ಮುಖ್ಯ ಅಧೀಕ್ಷಕರ ಹುದ್ದೆಯ ಹೆಚ್ಚುವರಿ ಹೊಣೆಯನ್ನೂ ನಿರ್ವಹಿಸುತ್ತಿದ್ದರು.

ಈಗ ಅವರ ವರ್ಗಾವಣೆಯಿಂದ ತೆರವಾದ ಸ್ಥಾನಕ್ಕೆ ಕಾರಾಗೃಹದ ಪಿ.ಎಸ್‌.ರಮೇಶ್‌ ಅವರನ್ನು  ನಿಯೋಜಿಸಲಾಗಿದೆ. ಮುಖ್ಯ ಅಧೀಕ್ಷಕರ ಹುದ್ದೆಗೆ ಕಲಬುರ್ಗಿ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ಸೋಮಶೇಖರ್‌ ಅವರನ್ನು ನಿಯೋಜಿಸಲಾಗಿದೆ.

ಎಡಿಜಿಪಿ ಮೇಘರಿಕ್‌ ಭೇಟಿ: ಕಾರಾಗೃಹಗಳ ಇಲಾಖೆಯ ಎಡಿಜಿಪಿ ಆಗಿ ಅಧಿಕಾರ ವಹಿಸಿಕೊಂಡಿರುವ ಎನ್‌.ಎಸ್‌.ಮೇಘರಿಕ್‌ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಗುರುವಾರ ಭೇಟಿ ನೀಡಿದರು.

ಬೆಳಿಗ್ಗೆ ಮನೆಯಿಂದ ನೇರವಾಗಿ ಬಂದು ಕಾರಾಗೃಹದ ಒಳಗೆ ಹೋದ ಅವರು, ಮುಖ್ಯ ಅಧೀಕ್ಷಕರ ಕಚೇರಿಯಲ್ಲಿ  ಕುಳಿತು ಅಧಿಕಾರಿಗಳ ಜತೆ ಮಾತುಕತೆ ನಡೆಸಿದರು.

‘ಕೈದಿಗಳ ಮನಪರಿವರ್ತನೆಗೆ ಜೈಲಿದೆ. ಇಲ್ಲಿ ಅಕ್ರಮಗಳಿಗೆ ಅವಕಾಶ ನೀಡಬಾರದು. ಇಲ್ಲಿನ  ಬೆಳವಣಿಗೆಗಳು ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗುತ್ತಿವೆ ಎಂಬುದನ್ನು ಮರೆಯಬಾರದು. ತಪ್ಪೆಸಗುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇನೆ’ ಎಂದು ಮೇಘರಿಕ್‌ ಎಚ್ಚರಿಕೆ ಸಹ ನೀಡಿದರು.ಇದೇ ವೇಳೆ ಬ್ಯಾರಕ್‌ಗಳಿಗೆ ಭೇಟಿ ನೀಡಿ, ಕೆಲ ಕೈದಿಗಳಿಂದ ಪ್ರಸಕ್ತ ಘಟನೆ ಬಗ್ಗೆ ಮಾಹಿತಿ ಪಡೆದರು ಎಂದು ಗೊತ್ತಾಗಿದೆ.

ಒಂದೇ ಅಡುಗೆ ಮನೆಯಿಂದ ಊಟ: ಅಡುಗೆ ಮನೆ ಪರಿಶೀಲಿಸಿದ ಮೇಘರಿಕ್‌, ‘ಜೈಲಿಗೆ ಇದೊಂದೇ ಅಡುಗೆ ಮನೆ ಇರಬೇಕು. ಊಟ ಹಂಚಿಕೆಯಲ್ಲಿ ತಾರತಮ್ಯ ಮಾಡಬಾರದು. ಪ್ರತ್ಯೇಕವಾಗಿ ಅಡುಗೆ ಮಾಡಿಕೊಳ್ಳುವುದಕ್ಕೆ ಕೈದಿಗಳಿಗೆ ಅವಕಾಶ ನೀಡಬಾರದು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಇದನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT