ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲೆನಾಡಿನಲ್ಲಿ ಮಳೆ ಬಿರುಸು; ಪ್ರವಾಹ ಪರಿಸ್ಥಿತಿ, ಚಿಕ್ಕೋಡಿ ತಾಲ್ಲೂಕಿನಲ್ಲಿ ಮುಳುಗಡೆ ಸ್ಥಿತಿಯಲ್ಲಿ 6 ಸೇತುವೆ

Last Updated 20 ಜುಲೈ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಮಲೆನಾಡು ಮತ್ತು ಘಟ್ಟ ಪ್ರದೇಶಗಳಲ್ಲಿ ಮುಂಗಾರು ಬಿರುಸಾಗಿದ್ದು, ಪ್ರಮುಖ ನದಿಗಳ ನೀರಿನ ಮಟ್ಟ ಏರಿಕೆಯಾಗಿದೆ. ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.

ರಾಜ್ಯದ ಪ್ರಮುಖ ಜಲಾಶಯಗಳ ಮಟ್ಟವೂ ಏರಿಕೆಯಾಗತೊಡಗಿದ್ದು, ಒಳಹರಿವಿನ ಪ್ರಮಾಣ ಹೆಚ್ಚಳವಾಗಿದೆ. ಮಳೆ ಅವಘಡದಿಂದಾಗಿ ಚಿಕ್ಕಮಗಳೂರು ಜಿಲ್ಲೆಯ ಕಳಸದಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಇಬ್ಬರು ಸತ್ತಿದ್ದಾರೆ.

ಸೇತುವೆ ಮುಳುಗಡೆ: ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆ ಆಗುತ್ತಿರುವುದರಿಂದ ಕೃಷ್ಣಾ ಹಾಗೂ ಅದರ ಉಪನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ಚಿಕ್ಕೋಡಿ ತಾಲ್ಲೂಕಿನಲ್ಲಿ ನಾಲ್ಕು ಸೇತುವೆಗಳು ಮುಳುಗಡೆ ಯಾಗಿವೆ. ಕೊಡಗು ಜಿಲ್ಲೆಯಲ್ಲಿ ಗುರುವಾರ ಮಳೆಯ ಅಬ್ಬರ ತಗ್ಗಿದ್ದರೂ ಬುಧವಾರ ರಾತ್ರಿಯಿಡೀ ಸುರಿದ ಭಾರಿ ಮಳೆಯಿಂದ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಹಳ್ಳ, ಕೊಳ್ಳಗಳು ತುಂಬಿ ಹರಿಯುತ್ತಿವೆ.

ಕುಸಿದ ಹೆದ್ದಾರಿ: ವಿರಾಜಪೇಟೆಯ ಪೆರುಂಬಾಡಿ ಬಳಿ ಕೊಣನೂರು– ಮಾಕುಟ್ಟ ಅಂತರರಾಜ್ಯ ಹೆದ್ದಾರಿ ಕುಸಿದಿದ್ದು ವಾಹನ ಸಂಚಾರ ಬಂದ್‌ ಆಗಿದ್ದು, ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ. ಭಾಗಮಂಡಲ– ತಲಕಾವೇರಿ ರಸ್ತೆಯ ಎರಡು ಸ್ಥಳಗಳಲ್ಲಿ ಗುಡ್ಡ ಕುಸಿದಿದೆ. ಮಡಿಕೇರಿ–ಮಂಗಳೂರು ಹೆದ್ದಾರಿ ನಡುವೆ ಬೃಹತ್‌ ಮರವೊಂದು ಉರುಳಿಬಿದ್ದ ಪರಿಣಾಮ ನಸುಕಿನ ಜಾವ 4ರಿಂದ 8 ಗಂಟೆಯ ತನಕ ಸಂಚಾರ ಸ್ಥಗಿತಗೊಂಡಿತ್ತು.

ಗಂಜಿ ಕೇಂದ್ರಕ್ಕೆ ಸಿದ್ಧತೆ: ಕಾವೇರಿ ನದಿ ಮತ್ತಷ್ಟು ಮೈದುಂಬಿಕೊಂಡು ಹರಿಯುತ್ತಿದ್ದು ಸಿದ್ದಾಪುರ ಸಮೀಪದ ಕರಡಿಗೋಡು, ಚಿಕ್ಕನಹಳ್ಳಿ, ನೆಲ್ಯಹುದಿಕೇರಿ, ಬೆಟ್ಟದಕಾಡು, ಕೂಡುಗದ್ದೆ ವ್ಯಾಪ್ತಿಯ ನದಿಪಾತ್ರದ ಜನರು ಎಚ್ಚರಿಕೆ ವಹಿಸುವಂತೆ ಜಿಲ್ಲಾಡಳಿತ ಸೂಚಿಸಿದೆ. ಮಳೆಯ ಆರ್ಭಟ ಮುಂದುವರಿದರೆ ಗಂಜಿಕೇಂದ್ರ ತೆರೆಯಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಬಾಳೆಲೆ– ನಿಟ್ಟೂರು ಸೇತುವೆ ಸಂಪೂರ್ಣ ಮುಳುಗಿದೆ. ದಕ್ಷಿಣ ಕೊಡಗಿನ ಬಿ.ಶೆಟ್ಟಿಗೇರಿ ಸಂಪರ್ಕ ಸೇತುವೆ ಮೇಲೆ ನೀರು ಹರಿಯುತ್ತಿದೆ.

ಭಾಗಮಂಡಲದ ತ್ರಿವೇಣಿ ಸಂಗಮದಲ್ಲೂ ನೀರಿನ ಪ್ರಮಾಣ ಕಡಿಮೆಯಾಗಿಲ್ಲ. ಹಾರಂಗಿ ಜಲಾಶಯ ಭರ್ತಿಯಾಗಲು 9 ಅಡಿ ಬಾಕಿಯಿದೆ.

ಲಿಂಗನಮಕ್ಕಿಗೆ 3 ಅಡಿ ನೀರು: ಶಿವಮೊಗ್ಗ ಜಿಲ್ಲೆಯಾದ್ಯಂತ ಗುರುವಾರವೂ ಮಳೆ ಅಬ್ಬರ ಮುಂದುವರಿದಿದೆ. ಸರಾಸರಿ 200 ಮಿ.ಮೀ ಮಳೆಯಾಗಿದೆ.
ಲಿಂಗನಮಕ್ಕಿ ಜಲಾಶಯದ ಮಟ್ಟ ಒಂದೇ ದಿನದಲ್ಲಿ 3 ಅಡಿ ಏರಿಕೆ ಕಂಡಿದೆ.

ಲಿಂಗನಮಕ್ಕಿ ಜಲಾಶಯಕ್ಕೆ 40,345  ಕ್ಯುಸೆಕ್, ಭದ್ರಾ ಜಲಾಶಯಕ್ಕೆ 18,092 ಕ್ಯುಸೆಕ್‌ ನೀರು ಹರಿದು ಬಂದಿದೆ.  ತುಂಗಾ ಜಲಾಶಯಕ್ಕೆ 40,878 ಕ್ಯುಸೆಕ್ ನೀರು ಹರಿದು ಬರುತ್ತಿದ್ದು, 39,140 ಕ್ಯುಸೆಕ್ ನೀರು ನದಿಗೆ ಬಿಡಲಾಗಿದೆ. ಈ ನದಿ ತುಂಬಿ ಹರಿಯುತ್ತಿದ್ದು, ಪ್ರವಾಹದ ಭೀತಿ ಎದುರಾಗಿದೆ. ಹಿನ್ನೀರಿನ ಮಟ್ಟ ಏರಿಕೆಯಾದ ಪರಿಣಾಮ ಮಂಡಗದ್ದೆ ಪಕ್ಷಿಧಾಮದಲ್ಲಿ ವಿದೇಶಿ ಪಕ್ಷಿಗಳು ಕಟ್ಟಿಕೊಂಡಿದ್ದ ಗೂಡುಗಳು ಕೊಚ್ಚಿಹೋಗಿವೆ.

ಹೊಸನಗರ– ಕೊಲ್ಲೂರು ರಸ್ತೆಯ ಸಂಪೆಕಟ್ಟೆ ಬಳಿ ಮರ ಉರುಳಿದ ಪರಿಣಾಮ ಮೂರು ಗಂಟೆಗಳ ಕಾಲ ವಾಹನ ಸಂಚಾರಕ್ಕೆ ಅಡ್ಡಿಯಾಯಿತು.

ಬೆಣ್ಣೆತೊರಾ ಜಲಾಶಯ ಒಳಹರಿವು ಏರಿಕೆ: ಕಲಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕು ಹೆಬ್ಬಾಳ ಸಮೀಪದ ಬೆಣ್ಣೆತೊರಾ ಜಲಾಶಯದಲ್ಲಿ ಗುರುವಾರ  ಒಳ ಹರಿವು 340 ಕ್ಯೂಸೆಕ್‌ಗೆ ಏರಿಕೆಯಾಗಿದೆ. ಜಲಾಶಯದ ಗರಿಷ್ಠ ಎತ್ತರ 438.89 ಮೀ. ಇದ್ದು, ಬಹುತೇಕ ಭರ್ತಿಯಾಗಿದೆ. ಅಮರ್ಜಾ ಜಲಾಶಯದ ಗರಿಷ್ಠ ಎತ್ತರ 461.50 ಮೀ. ಇದ್ದು, ಸದ್ಯ 459.88 ಮೀ. ಭರ್ತಿಯಾಗಿದೆ. ಚಂದ್ರಂಪಳ್ಳಿ ಜಲಾಶಯದ ಗರಿಷ್ಠ ಎತ್ತರ 493.16 ಮೀ. ಇದ್ದು, 487.48 ಮೀ. ಭರ್ತಿಯಾಗಿದೆ.

ಜನಜೀವನ ಅಸ್ತವ್ಯಸ್ತ: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನಾದ್ಯಂತ ಸುರಿಯುತ್ತಿರುವ ಜಡಿಮಳೆಗೆ ಗುರುವಾರ ಜನಜೀವನ ಅಸ್ತವ್ಯಸ್ತವಾಯಿತು. ತಾಲ್ಲೂಕಿನ ಶಾಲಾ– ಕಾಲೇಜುಗಳಿಗೆ ರಜೆ ನೀಡಲಾಯಿತು. ಕಚೇರಿಗಳು ತೆರೆದಿದ್ದರೂ ಜನಸಂಚಾರ ವಿರಳವಾಗಿತ್ತು.

ಮಳೆಯ ಜತೆಗೆ ಗಾಳಿ ಬೀಸಿದ್ದರಿಂದ ಬಾಳೂರು ಹೋಬಳಿಯ ಮೇಗೂರು ಗ್ರಾಮದಲ್ಲಿ ಮನೆ ಕುಸಿದಿದೆ. ಜನ್ನಾಪುರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಬೃಹತ್‌ ಮರವೊಂದು ಬಿದ್ದ ಪರಿಣಾಮ ಶಾಲಾ ಕಾಂಪೌಂಡಿಗೆ ಹಾನಿಯಾಗಿದೆ.

ಶೃಂಗೇರಿ ತಾಲ್ಲೂಕಿನಲ್ಲಿಯೂ ವರುಣನ ಆರ್ಭಟ ಮುಂದುವರಿದಿದೆ. ತುಂಗಾ ನದಿ ಮೈದುಂಬಿ ಹರಿಯುತ್ತಿದೆ. ಮಳೆಯ ಪ್ರಯುಕ್ತ ತಾಲ್ಲೂಕಿನ ಶಾಲಾ, ಕಾಲೇಜಿಗೆ ರಜೆ ನೀಡಲಾಗಿತ್ತು. ಶೃಂಗೇರಿಯಲ್ಲಿ 14 ಸೆಂ.ಮೀ. ಮಳೆ ಸುರಿದಿದೆ.

ಮಲೆನಾಡಲ್ಲಿ ಮುಂದುವರಿದ ಮಳೆ:  ಶಿರಸಿ, ಸಿದ್ದಾಪುರ, ಯಲ್ಲಾಪುರ, ಮುಂಡಗೋಡ ಹಾಗೂ ಹಳಿಯಾಳದಲ್ಲಿ ಉತ್ತಮ ಮಳೆಯಾಗಿದೆ.

ಸೂಪಾ ಜಲಾಶಯದ ನೀರಿನ ಮಟ್ಟದಲ್ಲಿ ಏರಿಕೆ ಕಂಡುಬಂದಿದೆ. ಜಲಾಶಯದ ಗರಿಷ್ಠ ಮಟ್ಟ 564 ಮೀ ಇದ್ದು, ಗುರುವಾರಕ್ಕೆ 538.80 ಮೀಟರ್‌ವರೆಗೆ ನೀರು ಸಂಗ್ರಹವಾಗಿದೆ. ಬುಧವಾರ 34,427 (3 ಟಿಎಂಸಿ ಅಡಿ) ಕ್ಯುಸೆಕ್‌ ಇದ್ದ ಒಳಹರಿವು ಗುರುವಾರ 42,753 (4 ಟಿಎಂಸಿ ಅಡಿ)ಕ್ಯುಸೆಕ್‌ಗೆ ಏರಿದೆ.
ಗಾಳಿ–ಮಳೆ; ಯುವತಿಗೆ ಗಾಯ: ಸಕಲೇಶಪುರ ತಾಲ್ಲೂಕಿನ ಯಡಕೇರಿ ಗ್ರಾಮದಲ್ಲಿ ಗಾಳಿ, ಮಳೆಗೆ ಮರವೊಂದು ಮನೆ ಮೇಲೆ ಬಿದ್ದು ಚೈತ್ರಾ (18) ಎಂಬ ಯುವತಿಗೆ ಗಾಯವಾಗಿದೆ. ಇಲ್ಲಿಯ ಕ್ರಾಫರ್ಡ್‌ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕುಸಿದ ಗುಡ್ಡ: ಕುಮಟಾ ತಾಲ್ಲೂಕಿನ ಮಣಕಿ ಬಳಿಯ ರಾಷ್ಟ್ರೀಯ ಹೆದ್ದಾರಿ–66ರ ಬದಿಯಲ್ಲಿ ಗುರುವಾರ ಮಧ್ಯಾಹ್ನ ಗುಡ್ಡ ಕುಸಿದು, ಒಂದು ತಾಸು ವಾಹನ ಸಂಚಾರ ಸ್ಥಗಿತಗೊಂಡಿತ್ತು.

ಪಶ್ಚಿಮಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆಯಾಗುತ್ತಿರುವುದರಿಂದ ನಿಪ್ಪಾಣಿ ಸಮೀಪದ ಅಕ್ಕೋಳ–ಸಿದ್ನಾಳ ಗ್ರಾಮಗಳ ಮಧ್ಯೆ ವೇದಗಂಗಾ ನದಿಗೆ ನಿರ್ಮಿಸಿರುವ ಸೇತುವೆ ಜಲಾವೃತವಾಗಿರುವುದು.

ಕೃಷ್ಣಾ ನದಿಗೆ 1 ಲಕ್ಷ ಕ್ಯುಸೆಕ್‌ ನೀರು

ಮಹಾರಾಷ್ಟ್ರದ ಪಶ್ಚಿಮ ಘಟ್ಟದಲ್ಲಿ ಗುರುವಾರವೂ ಮಳೆ ಮುಂದುವರಿದಿದ್ದು, ರಾಜಾಪುರ ಬ್ಯಾರೇಜ್‌ನಿಂದ 75,000 (7.2 ಟಿಎಂಸಿ ಅಡಿ) ಕ್ಯುಸೆಕ್‌ ನೀರು ಹೊರಬಿಡಲಾಗಿದ್ದು, ವೇದಗಂಗಾ, ದೂಧಗಂಗಾ ಹಾಗೂ ಪಂಚಗಂಗಾ ನದಿಗಳ ನೀರೂ ಸೇರಿಕೊಂಡು ಚಿಕ್ಕೋಡಿಯ ಕಲ್ಲೋಳ ಬಳಿ ಕೃಷ್ಣಾ ನದಿಯಲ್ಲಿ 1 ಲಕ್ಷ (9.9 ಟಿಎಂಸಿ ಅಡಿ)ಕ್ಯುಸೆಕ್ ನೀರು ಹರಿಯುತ್ತಿದೆ.

ನದಿ ನೀರಿನ ಮಟ್ಟದಲ್ಲಿ ಹೆಚ್ಚಳವಾಗಿರುವುದರಿಂದ ಚಿಕ್ಕೋಡಿ ತಾಲ್ಲೂಕಿನ ಮಲಿಕವಾಡ– ದತ್ತವಾಡ, ಜತ್ರಾಟ– ಭೀವಶಿ ಅಕ್ಕೋಳ–ಸಿದ್ನಾಳ, ಭೋಜವಾಡಿ– ಕುನ್ನೂರ ಸೇತುವೆಗಳು ಗುರುವಾರ ಮುಳುಗಡೆಯಾಗಿವೆ. ಎರಡು ದಿನಗಳ ಹಿಂದೆ ಮುಳುಗಡೆಯಾಗಿದ್ದ ಕಲ್ಲೋಳ– ಯಡೂರ ಹಾಗೂ ಕಾರದಗಾ– ಭೋಜ ಸೇತುವೆಗಳು ಅದೇ ಸ್ಥಿತಿಯಲ್ಲಿವೆ.

ಘಟಪ್ರಭಾ ನದಿ ಮೈದುಂಬಿ ಹರಿಯುತ್ತಿದ್ದು, ಗೋಕಾಕ ನಗರದ ಹೊರವಲಯದ ಸಿಂಗಳಾಪೂರ ಸೇತುವೆ ನೀರಿನಲ್ಲಿ ಮುಳುಗಿದೆ.

ಎರಡು ದಿನಗಳಿಂದ ಸುರಿದ ಸತತ ಮಳೆಗೆ ಕುಮಟಾದಲ್ಲಿ ಅಘನಾಶಿನಿ ನದಿ ತುಂಬಿ ಹರಿಯುತ್ತಿರುವುದು.

ಮುನ್ನೆಚ್ಚರಿಕೆ ಕ್ರಮ: ‘ಕೃಷ್ಣಾ ನದಿ ತೀರದ ಜನರಿಗೆ ಎಚ್ಚರಿಕೆಯಿಂದ ಇರುವಂತೆ ಸೂಚಿಸ ಲಾಗಿದೆ. ಒಳಹರಿವಿನ ಪ್ರಮಾಣವು 1.5 ಲಕ್ಷ ಕ್ಯುಸೆಕ್‌ ಮೀರಿದರೆ ನದಿ ತೀರದ ಪ್ರದೇಶಗಳಿಗೆ ನೀರು ನುಗ್ಗುವ ಸಂಭವವಿದ್ದು, ಪರಿಸ್ಥಿತಿ ಎದುರಿಸಲು ಜಿಲ್ಲಾಡಳಿತ ಸಜ್ಜಾಗಿದೆ’ ಎಂದು ಜಿಲ್ಲಾಧಿಕಾರಿ ಎನ್‌.ಜಯರಾಮ್‌ ತಿಳಿಸಿದರು.

ಆಲಮಟ್ಟಿ, ತುಂಗಭದ್ರಾ, ಜಲಾಶಯಗಳ ಒಳಹರಿವು ಹೆಚ್ಚಳ: ಬುಧವಾರ 38,452 (3.4 ಟಿಎಂಸಿ ಅಡಿ) ಕ್ಯುಸೆಕ್‌ ಇದ್ದ ಆಲಮಟ್ಟಿ ಜಲಾಶಯದ ಒಳಹರಿವು ಗುರುವಾರ 67,004 (6 ಟಿಎಂಸಿ ಅಡಿ)ಕ್ಯುಸೆಕ್‌ಗೆ ಏರಿದ್ದು, 27,720 (2.4 ಟಿಎಂಸಿ ಅಡಿ) ಕ್ಯುಸೆಕ್‌ ಹೊರಹರಿವು ಇತ್ತು. ರಾತ್ರಿಯ ವೇಳೆಗೆ ನೀರಿನ ಹರಿವಿನ ಪ್ರಮಾಣವು 70 ರಿಂದ 80 ಸಾವಿರ ಕ್ಯುಸೆಕ್‌ಗೆ ಹೆಚ್ಚಾಗಬಹುದು ಎಂದು ಕೆಬಿಜೆಎನ್‌ಎಲ್‌ ಮೂಲಗಳು ತಿಳಿಸಿವೆ.

ಬುಧವಾರ 513.90 ಮೀ ನಷ್ಟಿದ್ದ ಜಲಾಶಯದ ಮಟ್ಟವು ಗುರುವಾರ 514.30 ಮೀ ತಲುಪಿದೆ. ನೀರಿನ ಸಂಗ್ರಹ 53.930 ಟಿಎಂಸಿ ಅಡಿಯಿಂದ, 57.065 ಟಿಎಂಸಿ ಅಡಿಗೇರಿದ್ದು, ಒಂದೇ ದಿನ 4 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ.

‘ಬುಧವಾರ 5419 ಕ್ಯುಸೆಕ್‌ ಇದ್ದ ತುಂಗಭದ್ರಾ ಜಲಾಶಯದ ಒಳಹರಿವು ಗುರುವಾರ 15,464 (1.3 ಟಿಎಂಸಿ ಅಡಿ)ಕ್ಯುಸೆಕ್‌ಗೆ ಏರಿದ್ದು, 1,456 ಕ್ಯುಸೆಕ್‌ ಹೊರಹರಿವು ಇದೆ.

ಜಲಾಶಯದಲ್ಲಿ ಸದ್ಯ 16.94 ಟಿಎಂಸಿ ಅಡಿ ಸಂಗ್ರಹವಾಗಿದೆ. ಒಂದು ಟಿಎಂಸಿ ಅಡಿಗೂ ಹೆಚ್ಚು ನೀರು ಹರಿದು ಬಂದಿದೆ’ ಎಂದು  ತುಂಗಭದ್ರಾ ಜಲಾಶಯ ಆಡಳಿತ ಮಂಡಳಿ ಕಾರ್ಯದರ್ಶಿ ಡಿ. ರಂಗಾರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

ಕಾವೇರಿ ಕಣಿವೆಯಲ್ಲಿ ಉತ್ತಮ ಮಳೆ:  ಮಂಡ್ಯ ಜಿಲ್ಲೆ ಕೆಆರ್‌ಎಸ್‌ ಜಲಾಶಯಕ್ಕೆ 8,059 ಕ್ಯುಸೆಕ್‌ ನೀರು ಹರಿದು ಬಂದಿದೆ. 124.80 ಅಡಿ ಸಾಮರ್ಥ್ಯದ ಜಲಾಶಯದಲ್ಲಿ ಗುರುವಾರ 79.55 ಅಡಿ ನೀರು ಸಂಗ್ರಹವಾಗಿದೆ.

ಕೇರಳದ ವೈನಾಡಿನಲ್ಲಿ ಮಳೆಯಾಗುತ್ತಿದ್ದು, ಕಬಿನಿ ಜಲಾಶಯದ ನೀರಿನ ಮಟ್ಟದಲ್ಲೂ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ.

ಹೇಮಾವತಿಗೆ ನಾಲ್ಕು ಅಡಿ ನೀರು: ಹಾಸನ ಜಿಲ್ಲೆಯ ಗೊರೂರಿನ  ಹೇಮಾವತಿ ಜಲಾಶಯದ ಒಳಹರಿವಿನಲ್ಲಿ ಹೆಚ್ಚಳವಾಗಿದೆ.   ಒಂದೇ ದಿನದಲ್ಲಿ ಅಣೆಕಟ್ಟೆಗೆ 4 ಅಡಿ ನೀರು ಹರಿದು ಬಂದಿದೆ. 12,926 ಕ್ಯುಸೆಕ್‌ ಒಳಹರಿವು ಇದೆ.

ಗುರುವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ  ಭಾಗಮಂಡಲದಲ್ಲಿ 287.4, ಮಡಿಕೇರಿಯಲ್ಲಿ 156.1, ನಾಪೋಕ್ಲು 127.6, ಪೊನ್ನಂಪೇಟೆಯಲ್ಲಿ 266.6, ಶಾಂತಳ್ಳಿಯಲ್ಲಿ 200 ಮಿ.ಮೀ ಮಳೆಯಾಗಿದೆ.

ಶಿವಮೊಗ್ಗದ ತುಂಗಾ ನದಿಯಲ್ಲಿ ಗುರುವಾರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಭಿನವ್ ಖರೆ ಈಜಿದರು

ತುಂಬಿ ಹರಿದ ತುಂಗೆಯಲ್ಲಿ ಈಜಿದ ಎಸ್‌ಪಿ

ಶಿವಮೊಗ್ಗ: ತುಂಬಿ ಹರಿಯುತ್ತಿದ್ದ ತುಂಗಾ ನದಿಯಲ್ಲಿ ಗುರುವಾರ ಒಂದು ಕಿ.ಮೀವರೆಗೆ  ಈಜುವ ಮೂಲಕ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಭಿನವ್‌ ಖರೆ ಸಾಹಸಿಗರನ್ನು ಹರಿದುಂಬಿಸಿದರು.

ಸಾಹಸ ಮತ್ತು ಸಂಸ್ಕೃತಿ ಅಕಾಡೆಮಿ ಹಮ್ಮಿಕೊಂಡಿದ್ದ ರಾಫ್ಟಿಂಗ್‌ನಲ್ಲಿ ಭಾಗಿಯಾಗಿದ್ದ ಅವರು, ಹೊರವಲಯ ರಸ್ತೆಯ ಹೊಸ ಸೇತುವೆ ಬಳಿ ನೀರಿಗೆ ಜಿಗಿದು ಕೋಟೆ ರಸ್ತೆಯ ಕೋರ್ಪಳಯ್ಯನ ಛತ್ರದವರೆಗೂ ಈಜಿದರು.

‘ಈಜುವುದು ನನಗೆ ಹವ್ಯಾಸವಾಗಿದೆ. ಪ್ರಕೃತಿ ವಿಕೋಪ, ವಿಪತ್ತು ನಿರ್ವಹಣೆ ಸಮಯದಲ್ಲಿ ನೆರವಾಗಲು ಜಿಲ್ಲಾ ಸಶಸ್ತ್ರ ಮೀಸಲು ಪಡೆಯ 15 ಸಿಬ್ಬಂದಿಗೆ ತರಬೇತಿ ನೀಡುವ ಆಲೋಚನೆ ಇದೆ’ ಎಂದು ಎಸ್‌ಪಿ ಹೇಳಿದರು.

ಅವಘಡ: ಮೂವರ ಸಾವು

ಮಳೆ ಅವಘಡಕ್ಕೆ ರಾಜ್ಯದಲ್ಲಿ ಮೂವರು ಮೃತಪಟ್ಟಿದ್ದಾರೆ. ವೇಗವಾಗಿ ಬೀಸಿದ ಗಾಳಿಯಿಂದಾಗಿ ತಲೆ ಮೇಲೆ ಮರ ಬಿದ್ದು ಗಂಭೀರ ಗಾಯಗೊಂಡಿದ್ದ ಚಿಕ್ಕಮಗಳೂರು ಜಿಲ್ಲೆಯ ಕಳಸ ಸಮೀಪದ ಗಣಪತಿಕಟ್ಟೆ ನಿವಾಸಿ ಸಂತೋಷ ಅವರ ಪತ್ನಿ ಭಾಗ್ಯ (35) ಗುರುವಾರ ಮೃತಪಟ್ಟಿದ್ದಾರೆ.

ಹಳ್ಳ ಹಾಗೂ ತುಂಬಿದ ಚರಂಡಿಗೆ ಬಿದ್ದು ಕಾರವಾರದ ಆನಂದು ವಿಷ್ಣು ನಾಯ್ಕ (50) ಹಾಗೂ ಕೋಡಿಬಾಗದ ಅನಿಲ್‌ ಪಾವಸ್ಕರ್‌ (45) ಎಂಬುವವರು ಮೃತಪಟ್ಟಿದ್ದಾರೆ.

ತಾಲ್ಲೂಕಿನ ಸಿದ್ದರ ಗ್ರಾಮದ ಅಜಗೇರಿ ಹಳ್ಳದಲ್ಲಿ ಬುಧವಾರ ರಾತ್ರಿ ಕಾಲು ಜಾರಿ ಬಿದ್ದಿದ್ದ ಆನಂದು ಮೃತದೇಹವು ಗುರುವಾರ ಪತ್ತೆಯಾಗಿದೆ.

ಕಾರವಾರದ ಹಳೆ ಮೀನುಮಾರುಕಟ್ಟೆ ಎದುರಿನ ತೆರೆದ ಚರಂಡಿಯಲ್ಲಿ ಜಾರಿಬಿದ್ದು ಅನಿಲ್‌ ಮೃತಪಟ್ಟಿದ್ದು, ಈ ಸಂಗತಿ ಗುರುವಾರ ಬೆಳಕಿಗೆ ಬಂದಿದೆ.

ಭಾಗಮಂಡಲ: 29 ಸೆಂ.ಮೀ. ಮಳೆ

ಬೆಂಗಳೂರು: ಗುರುವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ ಉತ್ತಮ ಮಳೆಯಾಗಿದೆ.

ಭಾಗಮಂಡಲದಲ್ಲಿ 29 ಸೆಂ.ಮೀ. ಕೊಟ್ಟಿಗೆಹಾರದಲ್ಲಿ 21 ಸೆಂ.ಮೀ. ಮಳೆಯಾಗಿದೆ.

ಆಗುಂಬೆಯಲ್ಲಿ 20 ಸೆಂ.ಮೀ., ಹೊಸನಗರದಲ್ಲಿ 16 ಸೆಂ.ಮೀ., ವಿರಾಜಪೇಟೆಯಲ್ಲಿ 15 ಸೆಂ.ಮೀ., ಕಮ್ಮರಡಿಯಲ್ಲಿ 14 ಸೆಂ.ಮೀ., ನಾಪೊಕ್ಲು, ಕಳಸದಲ್ಲಿ ತಲಾ 13 ಸೆಂ.ಮೀ., ಕದ್ರಾ, ಮಡಿಕೇರಿಯಲ್ಲಿ ತಲಾ 12 ಸೆಂ.ಮೀ., ಸಿದ್ದಾಪುರ, ಕೊಲ್ಲೂರು, ಲೊಂಡಾ, ಜಯಪುರದಲ್ಲಿ ತಲಾ 11 ಸೆಂ.ಮೀ., ಶೃಂಗೇರಿಯಲ್ಲಿ 10 ಸೆಂ.ಮೀ., ಧರ್ಮಸ್ಥಳ, ಮಂಚಿಕೇರಿ, ಹುಂಚದಕಟ್ಟೆ, ಲಿಂಗನಮಕ್ಕಿ, ಕೊಪ್ಪದಲ್ಲಿ ತಲಾ 9 ಸೆಂ.ಮೀ. ಮಳೆ ಆಗಿದೆ.

ಮುಂದಿನ 48 ಗಂಟೆಗಳಲ್ಲಿ ರಾಜ್ಯದ ಬಹುತೇಕ ಪ್ರದೇಶಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT