ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಸ್ತ್ರಚಿಕಿತ್ಸೆ ವೇಳೆಯೇ ಗಿಟಾರ್‌ ನುಡಿಸಿದ ರೋಗಿ

ಚಲನೆ ಕಳೆದುಕೊಂಡಿದ್ದ ಕಿರುಬೆರಳು, ಉಂಗುರ ಬೆರಳಿಗೆ ಮರುಜೀವ
Last Updated 20 ಜುಲೈ 2017, 20:05 IST
ಅಕ್ಷರ ಗಾತ್ರ

ಬೆಂಗಳೂರು: ವೈದ್ಯರು ಮಿದುಳು ಶಸ್ತ್ರಚಿಕಿತ್ಸೆ ಮಾಡುತ್ತಿದ್ದರೆ, ರೋಗಿಯು ಗಿಟಾರ್‌ ನುಡಿಸುತ್ತಿದ್ದರು. ಶಸ್ತ್ರಚಿಕಿತ್ಸೆ ನಡೆಸುತ್ತಿದ್ದಂತೆ ಮಿದುಳಿನಿಂದ ಹೊರಟ ಸಂಜ್ಞೆಗಳು ಚಲನೆಯನ್ನು ಕಳೆದುಕೊಂಡಿದ್ದ ಅವರ ಕಿರುಬೆರಳು ಹಾಗೂ ಉಂಗುರ ಬೆರಳಿಗೆ ಮರು ಜೀವ ನೀಡಿದ್ದವು.

ಹೀಗೊಂದು ಶಸ್ತ್ರಚಿಕಿತ್ಸೆಯನ್ನು ಭಗವಾನ್ ಮಹಾವೀರ ಜೈನ್‌ ಆಸ್ಪತ್ರೆಯ ವೈದ್ಯರು ಮಾಡಿದ್ದಾರೆ.

ಗುರುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಆಸ್ಪತ್ರೆಯ ನರರೋಗ ತಜ್ಞ ಡಾ. ಶರಣ್ ಶ್ರೀನಿವಾಸನ್, ‘ಗಿಟಾರ್‌ ವಾದಕ, ಬಿಹಾರದ ಅಭಿಷೇಕ್‌ ಪ್ರಸಾದ್‌ ಅವರ ಕಿರುಬೆರಳು, ಉಂಗುರ ಬೆರಳುಗಳ ಚಲನೆ ಕಷ್ಟಕರವಾಗಿತ್ತು. ಇದರಿಂದ ಅವರಿಗೆ ಗಿಟಾರ್ ನುಡಿಸಲು ಕಷ್ಟವಾಗಿತ್ತು. ಮಿದುಳಿನ ನರಗಳಲ್ಲಿ ಉಂಟಾಗಿದ್ದ ಅತಿಸೂಕ್ಷ್ಮ ಗಾಯದಿಂದ ದೇಹದ ಕೆಲ ಭಾಗಕ್ಕೆ ಸಂಜ್ಞೆಗಳು ಸರಿಯಾಗಿ ರವಾನೆಯಾಗದೇ, ಇಂತಹ ಸಮಸ್ಯೆ ಕಾಣಿಸಿಕೊಂಡಿತ್ತು’ ಎಂದು ಹೇಳಿದರು.

‘ಎಂಆರ್‌ಐ ಯಂತ್ರದ ಸಹಾಯದಿಂದ ಅಭಿಷೇಕ್ ಅವರ ತಲೆಯಲ್ಲಿ ಸಣ್ಣ ರಂಧ್ರ ಕೊರೆದು, ನರಗಳಲ್ಲಿನ ದೋಷವನ್ನು ಸರಿಪಡಿಸಲು ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಈ ವೇಳೆ ಅವರು ಸಂಪೂರ್ಣ ಎಚ್ಚರವಾಗಿದ್ದು, ಗಿಟಾರ್ ನುಡಿಸುತ್ತಿದ್ದರು. ಸಮಸ್ಯೆ ಇರುವ ನರಗಳಿಗೆ ಚಿಕಿತ್ಸೆ ನೀಡುತ್ತಿದ್ದಂತೆಯೇ ಅವರ ಕೈ ಬೆರಳುಗಳ ಚಲನೆಯಲ್ಲೂ ವ್ಯತ್ಯಾಸ ಗೋಚರವಾಗಿತ್ತು. ವೈದ್ಯರು ಅಭಿಷೇಕ್ ಅವರೊಂದಿಗೆ ಸಂವಹನ ನಡೆಸಿ, ಸಮಸ್ಯೆಯನ್ನು ಸಂಪೂರ್ಣ ಬಗೆಹರಿಸಿದ್ದರು’ ಎಂದು ತಿಳಿಸಿದರು.

ಆಸ್ಪತ್ರೆಯ ನರರೋಗ ತಜ್ಞ ಡಾ. ಸಿ.ಸಿ. ಸಂಜೀವ್, ‘ಇಂತಹ ಸಮಸ್ಯೆಯಿಂದ ಬೆರಳುಗಳು ಶಾಶ್ವತವಾಗಿ ಮಡಚಿಕೊಳ್ಳಬಹುದು ಅಥವಾ ದೇಹದ ಇನ್ನಿತರ ಭಾಗಕ್ಕೆ ಸಮಸ್ಯೆ ವ್ಯಾಪಿಸುವ ಸಾಧ್ಯತೆ ಇರುತ್ತದೆ. ಪಾರ್ಶ್ವವಾಯುಗೆ ಒಳಗಾಗುವ ಸಂಭವವೂ ಇರುತ್ತದೆ’ ಎಂದರು.

ಅಭಿಷೇಕ್ ಪ್ರಸಾದ್ ಮಾತನಾಡಿ, ‘ಆರಂಭದಲ್ಲಿ ಗಿಟಾರ್‌ ನುಡಿಸುವುದನ್ನು ಕಲಿಯಲು ಹೆಚ್ಚಿನ ಅಭ್ಯಾಸ ಮಾಡಿದ್ದರಿಂದ ಮೂಳೆ ಹಾಗೂ ಸ್ನಾಯುಗಳ ಬಳಲುವಿಕೆ ಉಂಟಾಗಿತ್ತು. ಚಿಕಿತ್ಸೆ ಪಡೆದರೂ ಪ್ರಯೋಜನವಾಗಿರಲಿಲ್ಲ. ನರರೋಗ ತಜ್ಞರನ್ನು ಭೇಟಿಯಾದ ಬಳಿಕ ನಿಜವಾದ ಸಮಸ್ಯೆ ಗೊತ್ತಾಗಿತ್ತು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT