ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯ ಲಾಭಕ್ಕೆ ಪ್ರತ್ಯೇಕ ಧರ್ಮದ ಹೋರಾಟ

Last Updated 21 ಜುಲೈ 2017, 5:39 IST
ಅಕ್ಷರ ಗಾತ್ರ

ಬೀದರ್‌: ‘ಮಾತೆ ಮಹಾದೇವಿ ಅವರು ರಾಜಕೀಯ ಲಾಭಕ್ಕಾಗಿ ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ. ಹಿಂದೂ ಧರ್ಮವನ್ನು ಒಡೆಯಲು ಪ್ರಯತ್ನಿಸುತ್ತಿದ್ದಾರೆ. ಅವರು ಲಿಂಗಾಯತರ ಹೆಸರಲ್ಲಿ ಪ್ರತ್ಯೇಕ ರಾಜ್ಯ ಕೇಳಿದರೂ ಅಚ್ಚರಿ ಪಡುವ ಅಗತ್ಯವಿಲ್ಲ’ ಎಂದು ಶ್ರೀರಾಮ ಸೇನೆಯ ರಾಜ್ಯ ಘಟಕದ ಅಧ್ಯಕ್ಷ ಸಿದ್ಧಲಿಂಗ ಸ್ವಾಮಿ ಹೇಳಿದರು.

ನಗರದಲ್ಲಿ ಗುರುವಾರ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಾಮಾನ್ಯ ಲಿಂಗಾಯತರಿಗೆ ನ್ಯಾಯ ದೊರಕಿಸಿಕೊಡುವ ಉದ್ದೇಶ ಮಾತೆ ಮಹಾದೇವಿಗೆ ಇಲ್ಲ. ತಮ್ಮ ಪ್ರತಿಷ್ಠೆಯನ್ನು ಉತ್ತುಂಗಕ್ಕೆ ಒಯ್ಯಲು ದೊಂಬರಾಟ ನಡೆಸಿದ್ದಾರೆ. ಬಸವಣ್ಣ ಅವರಿಗೆ ಒಳ್ಳೆಯ ಬುದ್ಧಿಯನ್ನು ಕೊಡಲಿ ಎಂದೇ ಆಶಿಸುವೆ’ ಎಂದರು.

‘ಬಸವಣ್ಣನ ವಚನಗಳನ್ನೇ ತಿದ್ದಿರುವ ಅವರಿಂದ ಲಿಂಗಾಯತ ಹಾಗೂ ವೀರಶೈವ ಪದದ ಅರ್ಥವನ್ನು ಅರಿತುಕೊಳ್ಳುವ ಅಗತ್ಯವಿಲ್ಲ. ಧರ್ಮದ ಹೆಸರಲ್ಲಿ ರಾಜಕೀಯ ಮುಖಂಡರನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಳ್ಳಲು ಹೋರಾಟ ನಡೆಸಿದ್ದಾರೆ. ರಾಜಕೀಯ ಲಾಭಕ್ಕಾಗಿ ಧರ್ಮವನ್ನು ಬಳಸಿಕೊಳ್ಳುತ್ತಿರುವ ಗೋಮುಖ ವ್ಯಾಘ್ರಗಳಿಂದ ಎಚ್ಚರಿಕೆ ವಹಿಸಬೇಕಾಗಿದೆ’ ಎಂದು ಹೇಳಿದರು.

‘ಭಾಲ್ಕಿಯ ಬಸವಲಿಂಗ ಪಟ್ಟದ್ದೇವರು ಮಾತೆ ಮಹಾದೇವಿ ಅವರೊಂದಿಗೆ ಸೇರಿಕೊಂಡು ಲಿಂಗಾಯತ ಪ್ರತ್ಯೇಕ ಧರ್ಮ ಮಾನ್ಯತೆಗೆ ಹೋರಾಟ ನಡೆಸಿರುವುದು ನೋವು ತಂದಿದೆ. ಭಾಲ್ಕಿ ತಾಲ್ಲೂಕಿನಲ್ಲಿ ದಲಿತರು ಕ್ರೈಸ್ತ ಧರ್ಮಕ್ಕೆ ಮತಾಂತರ ಹೊಂದುತ್ತಿದ್ದು, ಅವರಿಗೆ ದೀಕ್ಷೆ ನೀಡಿ ವೀರಶೈವ–ಲಿಂಗಾಯತ ಧರ್ಮವನ್ನು ಬಲಪಡಿಸುವ ಕೆಲಸ ಮಾಡಲಿ’ ಎಂದು ಸಿದ್ಧಲಿಂಗ ಸ್ವಾಮಿ ಸಲಹೆ ನೀಡಿದರು.

‘ರಾಜಕೀಯ ಲಾಭ ಪಡೆಯಲು ಶಾಸಕ ರಹೀಂ ಖಾನ್ ಹಾಗೂ ವಿಧಾನ ಪರಿಷತ್ ಸದಸ್ಯ  ವಿಜಯಸಿಂಗ್‌ ಅವರೂ ಲಿಂಗಾಯತರ ರ್‌್ಯಾಲಿಯಲ್ಲಿ ಪಾಲ್ಗೊಂಡಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವೀರಶೈವ–ಲಿಂಗಾಯತರ ಒಡಕಿನ ಲಾಭ ಪಡೆದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ’ ಎಂದು ಅವರು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT