ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿಗೆ ಸಿಗದ 37 ಸಾವಿರ ಹೆಕ್ಟೇರ್‌ ಭೂಮಿ

Last Updated 21 ಜುಲೈ 2017, 5:48 IST
ಅಕ್ಷರ ಗಾತ್ರ

ಯಾದಗಿರಿ: ‘ಜಿಲ್ಲೆಯಲ್ಲಿ ವಿವಿಧ ಕಾರಣಗಳಿಗೆ ಒಟ್ಟು 37 ಸಾವಿರ ಹೆಕ್ಟೇರ್‌ ಕೃಷಿಭೂಮಿ ಕೈಬಿಟ್ಟು ಹೋಗಿದೆ. ಇದರಿಂದ ಕೃಷಿ ಉತ್ಪಾದನೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ’ ಎಂದು ರಾಜ್ಯ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಡಾ.ಟಿ.ಎನ್.ಪ್ರಕಾಶ್ ಕಮ್ಮರಡಿ ಆತಂಕ ವ್ಯಕ್ತಡಿಸಿದರು. ಜಿಲ್ಲಾಡಳಿತ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆ ಹಾಗೂ ರೈತರೊಂದಿಗೆ ಸಂವಾದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಮಧ್ಯವರ್ತಿಗಳ ಹಾವಳಿ, ಸಿಗದ ವೈಜ್ಞಾನಿಕ ಬೆಲೆ, ಅನಿಶ್ಚಿತ ಮಳೆ, ಲಾಭದಾಯಕವಾಗದ ಕೃಷಿ ಉತ್ಪನ್ನ ಹೀಗೆ ನಾನಾ ಕಾರಣಗಳಿಂದಾಗಿ ರೈತರು ಕೃಷಿಯಿಂದ ವಿಮುಖರಾಗುತ್ತಿರುವುದು ಆಯೋಗದ ಗಮನಕ್ಕೆ ಬಂದಿದೆ. ಒಟ್ಟಾರೆ ರಾಜ್ಯದಲ್ಲಿ 50 ಲಕ್ಷ ಹೆಕ್ಟೇರ್‌ ಕೃಷಿಭೂಮಿ ಕೈಬಿಟ್ಟು ಹೋಗಿದೆ. ಕೃಷಿಯಿಂದ ವಿಮುಖರಾದ ರೈತರ ಮನವೊಲಿಸಿ ಕೃಷಿಭೂಮಿ ಉಳಿಸಲು ಆಯೋಗ ಸರ್ಕಾರಕ್ಕೆ ವರದಿ ನೀಡಿದೆ’ ಎಂದು ತಿಳಿಸಿದರು.

ಇದರಿಂದ ಅಸಮಾಧಾನಗೊಂಡ ರೈತ ಮುಖಂಡರಾದ ದುರ್ಗಪ್ಪ ಹಪ್ಪಳ, ಮಲ್ಲಿಕಾರ್ಜುನ ಸತ್ಯಂಪೇಟೆ, ಮಲ್ಲನಗೌಡ ಪರಿವಾಣ, ‘ನಿಮ್ಮ ಅಂಕಿಅಂಶ ನಮಗೆ ಬೇಕಿಲ್ಲ. ಆಯೋಗ ರೈತರ ಸಮಸ್ಯೆ ಬಗೆಹರಿಸುವಲ್ಲಿ ಮಾಡಿರುವ ಮತ್ತು ಮಾಡಲು ಉದ್ದೇಶಿಸಿರುವ ಯೋಜನೆ ಬಗ್ಗೆ ತಿಳಿಸಿ’ ಎಂದು ಪ್ರಶ್ನಿಸಿದರು.

‘ಒಕ್ಕಲುತನ ರೈತರಿಗೆ ಒಗ್ಗುತ್ತಿಲ್ಲ ಸ್ವಾಮಿ. ಈಗ ಟೊಮೆಟೊ ಕೆಜಿಗೆ ₹100 ಇದೆ. ಆದರೆ, ರೈತರ ಬಳಿ ಉತ್ಪಾದನೆ ಇಲ್ಲ. ಮಾರುಕಟ್ಟೆ ದರ ಲಾಭ ಮಧ್ಯವರ್ತಿಗಳ ಪಾಲಾಗುತ್ತಿದೆ. ತೊಗರಿ ಬೆಂಬಲ ಬೆಲೆ ನೀಡಿ ಖರೀದಿಸಿದರೂ ರೈತರ ತೊಗರಿ ಸಂಪೂರ್ಣ ಖರೀದಿಸಿಲ್ಲ. ಸುರಪುರ ಎಪಿಎಂಸಿಯಲ್ಲಿ ಈಗಲೂ 4 ಸಾವಿರ ಕ್ವಿಂಟಲ್ ತೊಗರಿ ಖರೀದಿ ಆಗಿಲ್ಲ. ರೈತರ ಪರಿಸ್ಥಿತಿ ಚಿಂತಾಜನಕವಾಗಿರುವುದರಿಂದ ಕೃಷಿಯಿಂದ ದೂರ ಉಳಿದಿದ್ದಾರೆ’ ಎಂದು ರೈತರು ಅಸಮಾಧಾನ ತೋಡಿಕೊಂಡರು.

33ಲಕ್ಷ ಕ್ವಿಂಟಲ್‌ ತೊಗರಿ ಖರೀದಿ: ರಾಜ್ಯದಲ್ಲಿ 1,27000 ರೈತರಿಂದ ಒಟ್ಟು 33ಲಕ್ಷ ಕ್ವಿಂಟಲ್‌ ತೊಗರಿ ಖರೀದಿಸಿರುವ ಸರ್ಕಾರ ಅದನ್ನು ಪಡಿತರ ಫಲಾನುಭವಿಗಳಿಗೆ ಹಂಚಿದೆ. ತೊಗರಿ ಖರೀದಿ ಮತ್ತು ಬೆಂಬಲ ಬೆಲೆ ಪಾವತಿಯಲ್ಲಿ ರೈತರಿಗೆ ಅನ್ಯಾಯವಾಗಿದೆ. ಈ ಕುರಿತು ಸರ್ಕಾರದ ಗಮನ ಸೆಳೆಯಲಾಗುವುದು’ ಎಂದು ಪ್ರತಿಕ್ರಿಯಿಸಿದರು.

‘ತೊಗರಿ ಕ್ವಿಂಟಲ್‌ಗೆ ₹7 ಸಾವಿರ ಬೆಲೆಗೆ ಖರೀದಿಸುವಂತೆ ಕೃಷಿಬೆಲೆ ಆಯೋಗ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಆದರೆ, ಸರ್ಕಾರ ₹5500ಗೆ ತೊಗರಿ ಖರೀದಿಸಿದೆ. ಅಲ್ಲದೇ ಈ ಮೂರು ವರ್ಷದಲ್ಲಿ ರಾಜ್ಯದಲ್ಲಿ ರೈತರು ಬೆಳೆದಿರುವ 20 ಬೆಳೆಗಳು ನಷ್ಟದಲ್ಲಿವೆ’ ಎಂಬುದಾಗಿಯೂ ಆಯೋಗ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಆಯೋಗ ರೈತರ ಬೆನ್ನೆಲುಬಿನಂತೆ ಕೆಲಸ ಮಾಡುತ್ತಿದೆ’ ಎಂದರು.

ಸ್ಥಿರ ಬೆಲೆ ನೀಡಿ ಸ್ವಾಮಿ: ‘ಆಯೋಗ, ಸರ್ಕಾರಗಳು ರೈತರನ್ನು ಉಳಿಸುವ ಕೆಲಸ ಮಾಡಿಲ್ಲ. ನಮಗೆ ಯಾವುದೇ ಶಿಫಾರಸು, ವರದಿ ಸಲ್ಲಿಕೆ ಬೇಡ ಸ್ವಾಮಿ. ರೈತರಿಗೆ ಸ್ವಾಮಿನಾಥನ್‌ ವರದಿ ಶಿಫಾರಸಿನಂತೆ ಸ್ಥಿರ ಬೆಲೆ ಕೊಡುವಂತೆ ಸರ್ಕಾರದ ಮೇಲೆ ಒತ್ತಡ ಹಾಕಿ ಉಪಕಾರ ಮಾಡಿ ಸ್ವಾಮಿ’ ಎಂದು ರೈತ ಮುಖಂಡ ಮಲ್ಲಿಕಾರ್ಜುನ ಸತ್ಯಂಪೇಟೆ ಆಯೋಗದ ಅಧ್ಯಕ್ಷರನ್ನು ಒತ್ತಾಯಿಸಿದರು.

ಬೆಳೆವಿಮೆ ಏನಾಯಿತು?: ‘ನಮ್ಮ ಜಿಲ್ಲೆಯ ರೈತರು ಒಟ್ಟು ₹9 ಕೋಟಿ ಬೆಳೆವಿಮೆ ಕಂತು ಕಟ್ಟಿದ್ದಾರೆ. ಆದರೆ, ಅತಿವೃಷ್ಟಿ–ಅನಾವೃಷ್ಟಿಗೆ ಸಿಕ್ಕಿದ್ದು ಮಾತ್ರ ₹1 ಕೋಟಿ. ಈ ಕುರಿತು ಸರ್ಕಾರ ಮತ್ತು ಆಯೋಗ ಏಕೆ ಧ್ವನಿ ಎತ್ತಿಲ್ಲ’ ಎಂದು ರೈತಮುಖಂಡ ಮಲ್ಲನಗೌಡ ಪರಿವಾಣ ಪ್ರಶ್ನಿಸಿದರು.

‘ವಿಜ್ಞಾನಿಗಳು ಮತ್ತು ಸರ್ಕಾರ ರೈತರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿವೆ. ಕೃಷಿ ಅಧಿಕಾರಿಗಳು ರೈತರಿಗೆ ಸಮರ್ಪಕ ಮಾಹಿತಿ, ಸೌಲಭ್ಯಗಳನ್ನು ಒದಗಿಸದೇ ವಂಚಿಸುತ್ತಿದ್ದಾರೆ. ಆಯೋಗ ಈ ಕುರಿತ ಏನು ಕ್ರಮಕೈಗೊಂಡಿದೆ? ವರದಿ, ಅಂಕಿಅಂಶ, ಶಿಫಾರಸು ಮಾಡಲಿಕ್ಕೆ ಸೀಮಿತವಾಗಿದೆಯೇ’ ಎಂದು ತರಾಟೆ ತೆಗೆದುಕೊಂಡರು.
ರೈತರ ಪ್ರಶ್ನೆಗಳಿಗೆ ಆಯೋಗದ ಅಧ್ಯಕ್ಷರು ಔಪಚಾರಿಕ ಉತ್ತರ ನೀಡಲು ಪ್ರಯತ್ನಿಸಿದರು.

ಅಧಿಕಾರಿಗಳಿಗೆ ರೈತರ ಸವಾಲು
ಅಧಿಕಾರಿಗಳಿಗೆ ನಾವು ಭೂಮಿ ಒದಗಿಸಿ ಖರ್ಚುವೆಚ್ಚ ಕೊಡುತ್ತೇವೆ. ಅವರು ತೋಟಗಾರಿಕೆ, ಸಾಮಾನ್ಯ ಕೃಷಿ ಮಾಡಿ ಲಾಭದಾಯಕ ತೋರಿಸಲಿ ಎಂದು ರೈತ ದುರ್ಗಪ್ಪ ಸವಾಲು ಹಾಕಿದರು.

‘ಅಧಿಕಾರಿಗಳು ಸರ್ಕಾರದ ಸೌಲಭ್ಯದ ಜತೆಗೆ ಸಕಾಲಿಕವಾಗಿ ಬೆಳೆಗೆ ಪೂರಕ ಮಾಹಿತಿ ಒದಗಿಸಿ ಕ್ಷೇತ್ರಕಾರ್ಯ ಮಾಡಿದರೆ ಮಾತ್ರ ರೈತರು ಉಳಿಯಲು ಸಾಧ್ಯ. ಅಧಿಕಾರಿಗಳು ಕಡತ ಜೋಡಿಸಿ ಸರ್ಕಾರಕ್ಕೆ ವಿವರ ನೀಡಿದರೆ ರೈತರನ್ನು ಉಳಿಸಿದಂತಾಗುವುದಿಲ್ಲ’ ಎಂದರು. ರೈತರ ಎಲ್ಲಾ ಪ್ರಶ್ನೆ ಹಾಗೂ ಅಸಮಾಧಾನಗಳಿಗೆ ಆಯೋಗದ ಅಧ್ಯಕ್ಷರು ಸೇರಿದಂತೆ ಎಲ್ಲಾ ಅಧಿಕಾರಿಗಳು ಪ್ರತಿಕ್ರಿಯಿಸಲಿಲ್ಲ.

ತೊಗರಿ ವಿವರ
33 ಲಕ್ಷ ಕ್ವಿಂಟಲ್‌ ತೊಗರಿ ಖರೀದಿಸಿರುವ ಒಟ್ಟು ತೊಗರಿ

₹7ಸಾವಿರ ಕ್ವಿಂಟಲ್ ತೊಗರಿ ಖರೀದಿಗೆ ಆಯೋಗ ಶಿಫಾರಸು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT