ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಂತ್ರ ಬಳಸಿದ ರೈತರಿಗೆ ದೊರೆಯದ ನೆರವು!

Last Updated 21 ಜುಲೈ 2017, 5:56 IST
ಅಕ್ಷರ ಗಾತ್ರ

ಕವಿತಾಳ: ತೊಗರಿ ಬಿತ್ತನೆ ಮಾಡಿದ ರೈತರಿಗೆ ಕೃಷಿ ಇಲಾಖೆ ಮೂಲಕ ಸರ್ಕಾರವು ಸಹಾಯಧನ ಘೋಷಿಸಿತ್ತು. ಈಚೆಗೆ ಸಹಾಯಧನ ಯೋಜನೆಯನ್ನು ಪರಿಷ್ಕರಣೆ ಮಾಡಿರುವುದರಿಂದ ಯಂತ್ರ ಬಳಸಿ ಬಿತ್ತನೆ ಮಾಡಿರುವ ರೈತರಿಗೆ ಈ ಯೋಜನೆಯ ಲಾಭ ದೊರೆಯದಂತಾಗಿದೆ.

ಹೊಸ ಆದೇಶವು ರೈತರಲ್ಲಿ ಗೊಂದಲ ಉಂಟು ಮಾಡಿದೆ. ಬಹುತೇಕ ರೈತರು ಜೂನ್‌ ಆರಂಭದಲ್ಲಿ ಬಿತ್ತನೆ ಮಾಡಿದ್ದಾರೆ. ಕೈಯಿಂದ (ಊರಿದ) ನಾಟಿ ಮಾಡಿದ ರೈತರಿಗೆ ಮಾತ್ರ ಸಹಾಯಧನ ನೀಡುವುದಾಗಿ ಪರಿಷ್ಕೃತ ಆದೇಶದಲ್ಲಿ ತಿಳಿಸಲಾಗಿದೆ. ಗಿಡದಿಂದ ಗಿಡಕ್ಕೆ ಅಂತರ ಕಾಯ್ದುಕೊಳ್ಳುವುದರಿಂದ ಹೆಚ್ಚಿನ ಇಳುವರಿ ಪಡೆಯಲು ಸಾಧ್ಯ.

ರೋಗಗಳನ್ನು ಸುಲಭವಾಗಿ ತಡೆಗಟ್ಟಬಹುದು ಎನ್ನುವ ತಾಂತ್ರಿಕ ಕಾರಣಗಳಿಂದ ಇಲಾಖೆ ಈ ಹೊಸ ನಿಯಮಾವಳಿ ಮಾಡಿದೆ ಎನ್ನುವುದು ಅಧಿಕಾರಿಗಳ ವಿವರಣೆ.
ಆದರೆ, ಬಿತ್ತನೆ ಪೂರ್ವ ಯಾವುದೇ ಮಾಹಿತಿಯನ್ನು ರೈತರಿಗೆ ನೀಡಿಲ್ಲ. ಹೀಗಾಗಿ ಅನೇಕ ರೈತರು ಸಾಂಪ್ರದಾಯಿಕವಾಗಿ ಯಂತ್ರ ಮತ್ತು ಎತ್ತುಗಳನ್ನು ಬಳಸಿ ಬಿತ್ತನೆ ಮಾಡಿದ್ದಾರೆ. ವಟಗಲ್, ಅಮೀನಗಡ, ಯತಗಲ್, ಬಸಾಪುರ, ಹರ್ವಾಪುರ, ತುಪ್ಪದೂರು, ಗುಡಿಹಾಳ, ಯಕ್ಲಾಸ್ಪುರ, ಇರಕಲ್, ಆನಂದಗಲ್ ಸೇರಿದಂತೆ ಸಮೀಪದ ಪಾಮನಕಲ್ಲೂರು ಹೋಬಳಿ ವ್ಯಾಪ್ತಿಯಲ್ಲಿ ಅಂದಾಜು 300 ಹೆಕ್ಟೇರ್‌ ಪ್ರದೇಶದಲ್ಲಿ ತೊಗರಿಯನ್ನು ಬಿತ್ತನೆ ಮಾಡಲಾಗಿದೆ.

ಸಹಾಯಧನ ಯೋಜನೆಯ ನಿಯಮಾನುಸಾರ ಬಿತ್ತನೆ ಮಾಡಿದವರು ಬೀಜ ಮತ್ತು ಕ್ರಿಮಿನಾಶಕ ಖರೀದಿ ರಶೀದಿಯನ್ನು ಕೃಷಿ ಇಲಾಖೆಗೆ ನೀಡಿದಲ್ಲಿ ಹೆಕ್ಟೆರ್‌ಗೆ ₹ 2,500ರಿಂದ ₹ 6ಸಾವಿರ ಮಿತಿಯಲ್ಲಿ ಕೃಷಿ ಇಲಾಖೆಯಿಂದ ಸಹಾಯಧನ ಸಿಗುತ್ತಿತ್ತು. ಪರಿಶಿಷ್ಟ ಜಾತಿ ಮತ್ತು ಪಂಗಡದ ರೈತರಿಗೆ ಶೇ 90 ಹಾಗೂ ಸಾಮಾನ್ಯ ವರ್ಗದ ರೈತರಿಗೆ ಶೇ 50 ಸಹಾಯಧನ ನೀಡಲಾಗುತ್ತಿದೆ.

‘ಟ್ರ್ಯಾಕ್ಟರ್‌ ಚಾಲಿತ ಬಿತ್ತನೆ ಕೂರಿಗೆ (ಸೀಡ್ಲರ್‌) ಯಂತ್ರವನ್ನು ಖರೀದಿಸಲು ಪ್ರೋತ್ಸಾಹ ನೀಡಿದ ಕೃಷಿ ಇಲಾಖೆ ಈಗ ಅದನ್ನು ಬಳಸಿ ಬಿತ್ತನೆ ಮಾಡಿದ ರೈತರಿಗೆ ಪ್ರೋತ್ಸಾಹಧನ ನೀಡಲು ನಿರಾಕರಿಸುತ್ತಿದೆ. ಇದು ಗೊಂದಲದ ನಿರ್ಧಾರವಾಗಿದೆ’ ಎಂದು ರೈತರಾದ ಅಮರೇಶ ಮೇಟಿ ಮತ್ತು ಶಿವಪುತ್ರ ಗೊರ್ಲಟ್ಟಿ ದೂರಿದರು.

ಸರ್ಕಾರದ ಮಾನ್ಯತೆ ಪಡೆದ ಕೃಷಿ ಇಲಾಖೆ ಶಿಫಾರಸು ಮಾಡುವ ಟಿಎಸ್‌ಆರ್‌–3 ತಳಿ ತೊಗರಿ ಕಾಳು ಸರಿಯಾದ ರೀತಿಯಲ್ಲಿ ಬೇರ್ಪಡದೆ (ಬೇಳೆ ಆಗಿಸಿ ಮಾರ್ಪಡಿಸಿದಾಗ) ಬೇಳೆ ಸೀಳುತ್ತದೆ. ತೇವಾಂಶ ಕಡಿಮೆ ಇದ್ದಾಗ್ಯೂ ಉತ್ತಮ ಇಳುವರಿ ಲಭಿಸುತ್ತದೆ ಎನ್ನುವ ಕಾರಣದಿಂದ ಎಲ್ಲರೂ ಹುಲ್ಯಾಳ ತಳಿಯನ್ನು ಬಿತ್ತನೆ ಮಾಡುತ್ತಿದ್ದಾರೆ. ಮೇ ತಿಂಗಳಲ್ಲಿ ಮಾಹಿತಿ ನೀಡಿದ್ದಲ್ಲಿ ಕೈಯಿಂದ ಬಿತ್ತನೆ ಮಾಡಬಹುದಿತ್ತು. ಬಿತ್ತನೆ ಮಾಡಿ ತಿಂಗಳು ಕಳೆದಿದೆ.

ಕೆಲವು ಕಡೆ ಬೆಳೆಗಳು ಒಂದು ಹಂತದಲ್ಲಿ ಇರುವಾಗ ಈ ರೀತಿ ಆದೇಶ ನೀಡಿರುವುದು ಸರಿಯಲ್ಲ. ಮಳೆಯಾಗದೆ ಬೆಳೆಯನ್ನು ರಕ್ಷಿಸಿಕೊಳ್ಳಲು ಪರದಾಡುತ್ತಿರುವ ರೈತರಿಗೆ ಸಹಾಯಧನ ಯೋಜನೆಯ ಹೊಸ ನಿಯಮಾವಳಿಗಳು ಅನುಕೂಲವಾಗುತ್ತಿಲ್ಲ.

* * 

ಬೆರಳೆಣಿಕೆ ರೈತರು ಮಾತ್ರ ಕೈಯಿಂದ ತೊಗರಿ ಊರಿದ್ದಾರೆ.  ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಇಲಾಖೆ ಆದೇಶದಂತೆ  ಕ್ರಮ ಕೈಗೊಳ್ಳಲಾಗುವುದು
ಸುರೇಶ ನಾಗನೂರು
ಸಹಾಯಕ ಕೃಷಿ ಅಧಿಕಾರಿ ಪಾಮನಕಲ್ಲೂರು
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT