ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಯುರ್ವೇದ ಪದ್ಧತಿ ಅನುಸರಿಸಲು ಸಲಹೆ

Last Updated 21 ಜುಲೈ 2017, 6:13 IST
ಅಕ್ಷರ ಗಾತ್ರ

ಕೊಪ್ಪಳ: ಜಠರ ಸಂಬಂಧಿ ಸಮಸ್ಯೆಗಳಿಗೆ ಕೇವಲ ಆಧುನಿಕ ವೈದ್ಯ ಪದ್ಧತಿಯನ್ನು ತಿಳಿದರೆ ಸಾಲದು, ಬದಲಾಗಿ ಆಯುರ್ವೇದ ಪದ್ಧತಿಯನ್ನು ಅನುಸರಿ ಸಬೇಕು ಎಂದು ಹಾಸನ ಎಸ್‌ಡಿಎಂ ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಡಾ.ಪ್ರಸನ್ನ ಎನ್‌.ರಾವ್‌ ಹೇಳಿದರು.

ನಗರದ ಶಿವಶಾಂತವೀರ ಮಂಗಲ ಭವನದಲ್ಲಿ ಗುರುವಾರ ಶ್ರೀ ಜಗದ್ಗುರು ಗವಿಸಿದ್ದೇಶ್ವರ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಶಲ್ಯತಂತ್ರ ಸ್ನಾತಕೋತ್ತರ ವಿಭಾಗದ ವತಿಯಿಂದ ಹಮ್ಮಿಕೊಳ್ಳಲಾದ ಜಠರ ಸಂಬಂಧಿ ಸಮಸ್ಯೆಗಳಿಗೆ ಆಯುರ್ವೇದ ಚಿಕಿತ್ಸೆ ‘ಸೌಶ್ರುತ – 2017’ ಶೀರ್ಷಿಕೆಯ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

‘ಜಠರ ಸಂಬಂಧಿ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಜ್ಞಾನ ಹಂಚಿ ಕೊಳ್ಳಬೇಕು. ಕೌಶಲ ಬೆಳೆಸಿಕೊಳ್ಳಬೇಕು. ಇವೆರಡನ್ನು ವಿಸ್ತರಿಸುತ್ತಾ ಹೋಗಬೇಕು. ಕಾಲೇಜಿನ ತರಗತಿಯೊಳಗೆ ಕಲಿಯುವು ದಕ್ಕಿಂತಲೂ ಹೆಚ್ಚು ಕಾಲೇಜಿನ ಹೊರಗೆ ಕಲಿಯುವುದೂ ಬಹಳಷ್ಟಿದೆ’ ಎಂದರು.

‘ಪಿತ್ತಕೋಶದ ಕಾರ್ಯ ಚಟುವಟಿಕೆ ಸಮರ್ಪಕವಾಗಿದ್ದರೆ ಉದರ ಸಂಬಂಧಿ ಸಮಸ್ಯೆಗಳು ಇರುವುದಿಲ್ಲ. ಅದಕ್ಕಾಗಿ ನಮ್ಮ ಸಂಸ್ಕೃತಿಯ ಅನುಸಾರ ಜೀವನ ಪದ್ಧತಿಯನ್ನು ರೂಢಿಸಿಕೊಳ್ಳಬೇಕು’ ಎಂದು ಅವರು ಹೇಳಿದರು.

ಬೀದರ್‌ ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಡಾ.ಆರ್‌.ಎಸ್‌.ಸಾರಶೆಟ್ಟಿ ಮಾತನಾಡಿ, ‘ನಮ್ಮ ಯಾವುದೇ ಜ್ಞಾನ ಅಥವಾ ಅಧ್ಯಯನವನ್ನು ಸಮಕಾಲೀನ ವಿಜ್ಞಾನ ಅಥವಾ ವಸ್ತು ಸಂಗತಿ ಗಳೊಡನೆ ತುಲನಾತ್ಮಕವಾಗಿ ನೋಡ ಬೇಕು. ಆಯುರ್ವೇದದ ಪ್ರಕಾರ ಪ್ರತಿ ರೋಗಿಯ ವ್ಯಕ್ತಿಗತ ಸಮಸ್ಯೆಗಳು, ಸ್ಥಿತಿಗತಿ ಭಿನ್ನವೇ ಆಗಿರುತ್ತದೆ. ಅದನ್ನು ಅಧ್ಯಯನ ಮಾಡಿ ಅದಕ್ಕೆ ಬೇಕಾದಂತೆ ಔಷಧಿ ಚಿಕಿತ್ಸೆಯ ಯೋಜನೆ ರೂಪಿಸ ಬೇಕು’ ಎಂದರು.

‘ಒತ್ತಡ ನಿವಾರಣೆಗೆ ಔಷಧೇತರ ಚಿಕಿತ್ಸೆಗಳೂ ಸಾಕಷ್ಟು ಇವೆ. ತಕ್ರಧಾರ (ಮಜ್ಜಿಗೆ ಧಾರೆ), ಸಂಗೀತ ಚಿಕಿತ್ಸೆ, ಧ್ಯಾನ ಇತ್ಯಾದಿ ಇವೆ. ಇವುಗಳತ್ತ ಆದ್ಯತೆ ನೀಡಬೇಕು’ ಎಂದರು.  ಕಾಲೇಜಿನ ಎಸ್‌ಡಿಎಂ ಆಯು ರ್ವೇದ ವೈದ್ಯಕೀಯ ಕಾಲೇಜಿನ ಕಾಯ ಚಿಕಿತ್ಸಾ ಮತ್ತು ಮಾನಸರೋಗ ವಿಭಾಗದ ಮುಖ್ಯಸ್ಥ ಡಾ.ಜಿ.ಶ್ರೀನಿವಾಸ ಆಚಾರ್ಯ ಆಶಯ ಭಾಷಣ ಮಾಡಿದರು.

ಹುಬ್ಬಳ್ಳಿಯ ಎ.ಎಂ.ವಿ. ಕಾಲೇಜಿನ ಪ್ರಾಧ್ಯಾಪಕ ಡಾ.ಎಸ್‌.ಕೆ.ಬನ್ನಿಗೋಳ, ಬೆಳಗಾವಿ ಕೆಎಲ್‌ಇ ಬಿಎಂಕೆ ಆಯುರ್ವೇದ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಎಸ್‌.ಪ್ರಸಾದ್‌, ಉಡುಪಿ ಎಸ್‌ಡಿಎಂ ಆಯುರ್ವೇದ ವೈದ್ಯಕೀಯ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ.ಕೆ.ಆರ್‌. ರಾಮಚಂದ್ರ ರಾವ್‌ ಇದ್ದರು. ಕಾಲೇಜಿನ ಅಧ್ಯಕ್ಷ ಎಸ್‌.ಆರ್‌.ನವಲಿ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ಡಾ.ಬಿ.ಎಸ್‌. ಸವಡಿ, ಡಾ.ಕೆ.ಬಿ. ಹಿರೇಮಠ ಇದ್ದರು.

ತಂಪೆರೆದ ಮಜ್ಜಿಗೆ: ‘ಮಜ್ಜಿಗೆ ಅಮೃತ ಸಮಾನ. ಊಟದ ನಂತರ ಸೇವಿಸುವ ಮಜ್ಜಿಗೆಯಲ್ಲಿರುವ ಲ್ಯಾಕ್ಟೋಬೆಸಿಲಿ ಬ್ಯಾಕ್ಟೀರಿಯಾ ಜಠರ ಸಂಬಂಧಿ ಸಮಸ್ಯೆ ಗಳನ್ನು, ಬೇಧಿ, ನಿವಾರಿಸುತ್ತದೆ. ಜೀರ್ಣ ಕಾರಿಯೂ ಹೌದು. ಅಸಹನೆಯೂ ಕಡಿಮೆಯಾಗುತ್ತದೆ.  ಎಲ್ಲ ಈ ಬಗ್ಗೆ ಮಾತನಾಡುವ ನಾವು ನಿತ್ಯ ಆಹಾರದಲ್ಲಿ ಬಳಸುವುದೇ ಇಲ್ಲ’ ಎಂದು ಉದ್ಘಾಟಕ ಡಾ.ಎನ್‌.ಪ್ರಸನ್ನರಾವ್‌ ಹೇಳಿದರು.

‘ಶಸ್ತ್ರಚಿಕಿತ್ಸೆಯ ಅಗತ್ಯವನ್ನು ಮುಂದೂಡುವವನೇ ಒಬ್ಬ ಒಳ್ಳೆಯ ಶಸ್ತ್ರಚಿಕಿತ್ಸಕ. ಶಸ್ತ್ರಚಿಕಿತ್ಸೆ ಅಗತ್ಯವುಳ್ಳ ರೋಗಗಳನ್ನು ಔಷಧಿ ಮೂಲಕವೇ ನಿರ್ವಹಿಸುವ ಕ್ಷೇತ್ರ (ಮೆಡಿಕಲ್‌ ಮ್ಯಾನೇಜ್‌ಮೆಂಟ್‌) ಇಂದು ಹೆಚ್ಚು ಮಹತ್ವ ಪಡೆದಿದೆ. ಗೋ ಅರ್ಕ ಉತ್ಪಾದನಾ ಒಕ್ಕೂಟಗಳು ಹಾಲು ಒಕ್ಕೂಟಗಳಿಗಿಂತ ಹೆಚ್ಚು ಪ್ರಬಲವಾಗುತ್ತಿವೆ. ಅಂಥ ಬೇಡಿಕೆ ಆಯುರ್ವೇದದಲ್ಲಿ ಇದೆ. ಇಂಥ ಕ್ಷೇತ್ರಗಳನ್ನು ನಾವು ವಿಸ್ತರಿಸಬೇಕು’ ಎಂದು ಡಾ.ರಾವ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT