ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದೇ ವಾರ್ಡ್‌ಗೆ ₹ 75 ಲಕ್ಷ ಅನುದಾನ

Last Updated 21 ಜುಲೈ 2017, 6:15 IST
ಅಕ್ಷರ ಗಾತ್ರ

ಕುಷ್ಟಗಿ: ಪಟ್ಟಣ ವಿವಿಧ ವಾರ್ಡ್‌ಗಳ ಅಭಿವೃದ್ಧಿಗೆ ಮೀಸಲಾಗಿದ್ದ ₹ 75 ಲಕ್ಷ ಅನುದಾನವನ್ನು ಕೇವಲ 4ನೇ ವಾರ್ಡ್‌ಗೆ ನೀಡಿರುವುದಕ್ಕೆ ಸಂಬಂಧಿಸಿದಂತೆ ಪುರಸಭೆ ಸದಸ್ಯರು ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ  ಆಕ್ರೋಶ ವ್ಯಕ್ತಪಡಿಸಿದರು.

ಹಿಂದಿನ ಅಧ್ಯಕ್ಷರ ಅವಧಿಯಲ್ಲಿ ಈ ಬದಲಾವಣೆ ಮಾಡಲಾಗಿದೆ ಎಂಬುದನ್ನು ಸಭೆಗೆ ವಿವರಿಸಿದಾಗ ಸದಸ್ಯರು ಅಸಮಾಧಾನ ಹೊರ ಹಾಕಿದರು. ಪಟ್ಟಣದ ಸಮಗ್ರ ಅಭಿವೃದ್ಧಿ ಯನ್ನು ಗಮನದಲ್ಲಿರಿಸಿಕೊಂಡು ಅನುದಾನ ಬಿಡುಗಡೆಯಾಗಿತ್ತು. ಆದರೆ, ಹಿಂದಿನ ಅಧ್ಯಕ್ಷರ (ಕಲ್ಲೇಶ ತಾಳದ) ಅವಧಿಯಲ್ಲಿ ಉಳಿದ ಎಲ್ಲ ವಾರ್ಡ್‌ಗಳ ಅಭಿವೃದ್ಧಿಯನ್ನು ಕಡೆಗಣಿಸಿ ಅಧ್ಯಕ್ಷರು ಪ್ರತಿನಿಧಿಸುವ ವಾರ್ಡ್‌ಗೆ ಎಲ್ಲ ಹಣ ವರ್ಗಾಯಿಸಲಾಗಿದೆ ಎಂದು ದೂರಿದರು.

‘ಮೇಲಧಿಕಾರಿಗಳ ಗಮನಕ್ಕೆ ತಂದು ಪುನಃ ಅದನ್ನು ಬದಲಾಯಿಸಲಾಗಿದೆ. ಮೊದಲು ನಿಗದಿಪಡಿಸಿದ ವಾರ್ಡ್‌ಗಳಲ್ಲಿಯೇ ಕೆಲಸಗಳು ನಡೆಯಲಿವೆ’ ಎಂದು ಅಧ್ಯಕ್ಷ ಖಾಜಾ ಮೈನುದ್ದೀನ್‌ ಮುಲ್ಲಾ ಸಭೆಗೆ ಸ್ಪಷ್ಟಪಡಿಸಿದರು.

‘ವಾರದ ಏಳೂ ದಿನ ಕುಡಿಯುವ ನೀರು ಪೂರೈಸುವ ಕೆಲಸ ಪೂರ್ಣಗೊಂಡು ಪ್ರಾಯೋಗಿಕ ಪರೀಕ್ಷೆಯನ್ನೂ ನಡೆಸಲಾಗಿದ್ದು, ಆಗಸ್ಟ್‌ 15ರ ಒಳಗೆ ಯೋಜನೆಗೆ ಅಧಿಕೃತ ಚಾಲನೆ ನೀಡಲಾಗುತ್ತದೆ. ಅದೇ ರೀತಿ ಪಟ್ಟಣದ ಎಲ್ಲೆಡೆ ಬೀದಿ ದೀಪಗಳನ್ನು ಅಳವಡಿಸಲಾಗುತ್ತದೆ. ಮತ್ತು ಪುರಸಭೆ ಮುಂದಿನ ಹಾಗೂ ಪ್ರವಾಸಿಮಂದಿರದ ಬಳಿ ಇರುವ ನೂತನ ವಾಣಿಜ್ಯ ಮಳಿಗೆಗಳನ್ನು ಶೀಘ್ರ ಉದ್ಘಾಟಿಸಲಾಗುತ್ತದೆ’ ಎಂದು ಅಧ್ಯಕ್ಷ ಹೇಳಿದರು.

‘ಸಾರ್ವಜನಿಕ ಸ್ಥಳಗಳಲ್ಲಿ ಸಂಚಾರಿ ಮೂತ್ರಾಲಯಗಳನ್ನು ಅಳವಡಿಸುವ ಸಂಬಂಧ ಟೆಂಡರ್‌ ಪ್ರಕ್ರಿಯೆ ನಡೆದಿದೆ. ಎಲ್ಲ ವಾರ್ಡ್‌ಗಳಲ್ಲಿ ಬ್ಲೀಚಿಂಗ್‌ ಪುಡಿ ದೂಳೀಕರಿಸಲಾಗಿದೆ. ಪಟ್ಟಣದಲ್ಲಿ ಹಸಿ ಮತ್ತು ಒಣ ತ್ಯಾಜ್ಯವನ್ನು ಬೇರ್ಪಡಿಸುವ ಸಲುವಾಗಿ 5,200 ಮನೆಗಳಿಗೆ ಕಸದ ಬುಟ್ಟಿಗಳನ್ನು ವಿತರಿಸುವುದಕ್ಕೆ ಟೆಂಡರ್‌ ಪ್ರಕ್ರಿಯೆ ನಡೆದಿದೆ’ ಎಂದು ವಿವರಿಸಿದರು.

ಗುಜರಿಗೆ ಹೈಮಾಸ್ಟ್‌: ‘ವೀರಯೋಧ ಮಲ್ಲಯ್ಯ ವೃತ್ತದಲ್ಲಿ ಕಳಚಿ ಬಿದ್ದಿದ್ದ ಹೈಮಾಸ್ಟ್‌ ದೀಪದ ಸಲಕರಣೆಗಳನ್ನು  ಗುಜರಿ ಅಂಗಡಿಗೆ ಹಾಕಲಾಗಿದೆ. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು’ ಅಧ್ಯಕ್ಷ ಮುಲ್ಲಾ ಹೇಳಿದರು.

ಜೆಸ್ಕಾಂ ಬಳಿ ಇರುವ ವಾಣಿಜ್ಯ ಮಳಿಗೆಗಳ ಬಾಡಿಗೆ ನಿಗದಿಪಡಿಸಬೇಕಿದ್ದು, ಕೆಳಗಿನ ಮಳಿಗೆಗಳಿಗೆ ಶೇ 75ರಷ್ಟು ಠೇವಣಿ ಮೊತ್ತ (₹ 5,490 ಕನಿಷ್ಠ ಬಾಡಿಗೆ) ಮತ್ತು ಮೊದಲ ಅಂತಸ್ತಿನ ಮಳಿಗೆಗಳಿಗೆ ಶೇ 75 (ಕನಿಷ್ಟ ಬಾಡಿಗೆ ₹ 2250)ಕ್ಕೆ ನಿಗದಿಪಡಿಸಲು ಸಭೆ ಒಪ್ಪಿಗೆ ನೀಡಿತು. ಸದ್ಯ ಇರುವ ಬಾಡಿಗೆದಾರರೂ ಹರಾಜಿನಲ್ಲಿ ಭಾಗವಹಿಸಬಹುದು ಎಂದು ಮುಖ್ಯಾಧಿಕಾರಿ ತಿಳಿಸಿದರು.

‘ಐಬಿ ಮುಂದಿರುವ ಒಂದು ವಾಣಿಜ್ಯ ಮಳಿಗೆ ಬಾಡಿಗೆ ಪುರಸಭೆಗೆ ಬರುತ್ತಿಲ್ಲ ಯಾರಿಗೆ ಹೋಗುತ್ತಿದೆ ಎಂಬುದೂ ಗೊತ್ತಿಲ್ಲ’ ಎಂದು ಸದಸ್ಯರು ಆಕ್ಷೇಪಿಸಿದಾಗ ಹಿಂದಿನ ಮುಖ್ಯಾಧಿಕಾರಿ ಮತ್ತು ಅಧ್ಯಕ್ಷರೇ ವ್ಯಕ್ತಿಯೊಬ್ಬರಿಗೆ ಮಳಿಗೆ ವಹಿಸಿಕೊಟ್ಟಿದ್ದಾರೆ ಎಂದು ಸಿಬ್ಬಂದಿ ಹೇಳಿದರು.

ನೀರಿನ ಕರ: ಪಟ್ಟಣದಲ್ಲಿ ಗೃಹಬಳಕೆ ನೀರಿಗೆ ₹ 20 ಹಾಗೂ ವಾಣಿಜ್ಯ ಬಳಕೆ ನೀರಿಗೆ ₹ 250 ರಂತೆ ಮಾಸಿಕ ಶುಲ್ಕ ವಿಧಿಸಲು ಸಭೆ ನಿರ್ಣಯಿಸಿತು. ಆಸ್ಪತ್ರೆ ಮುಂದಿನ ಅಂಗಡಿ, ಮೂತ್ರಾಲಯಗಳ ತೆರವು, ವರ್ತುಲ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸರ್ಕಾರಕ್ಕೆ ಪತ್ರ ಬರೆಯಲು ಮತ್ತು ಡಾ.ರಾಜ್ ಕಲ್ಯಾಣ ಮಂಟಪದ ಪಕ್ಕದ ಖಾಸಗಿ ಶೆಡ್‌ ತೆರವುಗೊಳಿಸಲು ಸಭೆ ತೀರ್ಮಾನಿಸಿತು.

ಸಾರ್ವಜನಿಕ ಬಳಕೆಗೆ ಮೀಸಲಿರುವ ಜಾಗದಲ್ಲಿ ಪ.ಜಾ, ಪ.ಪಂ ಸಮುದಾಯ ಭವನ ಅಥವಾ ಅನಾಥಾಶ್ರಮ, ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಮಾತ್ರ ಮಂಜೂರು ಮಾಡಬಹುದು ಎಂಬುದನ್ನು ಮುಖ್ಯಾಧಿಕಾರಿ ತಿಳಿಸಿದರು. ಉಪಾಧ್ಯಕ್ಷೆ ಜ್ಯೋತಿ ಸೇಬಿನಕಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷ ಸಯ್ಯದ್‌ ಜಿಲಾನಿ ಮುಲ್ಲಾ, ಮುಖ್ಯಾಧಿಕಾರಿ ಸತೀಶ ಚವಡಿ ಇದ್ದರು.

* * 

ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ₹12 ಲಕ್ಷ ವೆಚ್ಚದಲ್ಲಿ ಸಿ.ಸಿ ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಲು ನಿರ್ಧರಿಸಲಾಗಿದೆ
ಖಾಜಾ ಮೈನುದ್ದೀನ್‌ ಮುಲ್ಲಾ
ಪುರಸಭೆ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT