ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ಕೊರತೆ ಇದ್ದರೂ ಶೇ 86ರಷ್ಟು ಬಿತ್ತನೆ

Last Updated 21 ಜುಲೈ 2017, 6:28 IST
ಅಕ್ಷರ ಗಾತ್ರ

ವಿಜಯಪುರ: ಮಳೆಯ ತೀವ್ರ ಕೊರತೆಯ ನಡುವೆಯೂ ಜಿಲ್ಲೆಯಲ್ಲಿ ಮುಂಗಾರು ಬಿತ್ತನೆ ನಡೆದಿದೆ. ಈವರೆಗೂ ಶೇ 86 ಬಿತ್ತನೆ ಪೂರ್ಣಗೊಂಡಿದೆ. 4.30 ಲಕ್ಷ ಹೆಕ್ಟೇರ್‌ನಲ್ಲಿ ಮುಂಗಾರು ಬಿತ್ತನೆ ಗುರಿಯನ್ನು ಜಿಲ್ಲಾ ಕೃಷಿ ಇಲಾಖೆ ನಿರ್ಧರಿಸಿಕೊಂಡಿದ್ದು, ಜುಲೈ 20 ರವರೆಗೂ 3.68 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಪೂರ್ಣಗೊಂಡಿದೆ.

ಜುಲೈ 9, 10, 11, 12ರಂದು ಜಿಲ್ಲೆಯ ವಿವಿಧೆಡೆ ಚೆದುರಿದಂತೆ ಪುನರ್ವಸು ಮಳೆಯಾಗಿದ್ದು, ಈ ಹದಕ್ಕೆ ಹಲವೆಡೆ ಬಿರುಸಿನ ಬಿತ್ತನೆ ನಡೆದಿದೆ. ಆರಂಭದಲ್ಲಷ್ಟೇ ಕೃಪೆ ತೋರಿದ್ದ ಪುನರ್ವಸು, ಮತ್ತೆ ಕರುಣೆ ತೋರಲಿಲ್ಲ. ವಾರದ ಹಿಂದೆ ಸುರಿದ ಮಳೆಗೆ ಈಗಲೂ ಅಲ್ಲಲ್ಲಿ ಬಿತ್ತನೆ ಮುಂದುವರೆದಿದೆ.

ಇದೇ 19ರ ಬುಧವಾರದಿಂದ ‘ಪುಷ್ಯ’ ಮಳೆ ಆರಂಭಗೊಂಡಿದೆ. ಇದರ ಬೆನ್ನಿಗೆ ರಾಜ್ಯದ ವಿವಿಧೆಡೆ ವಾಯುಭಾರ ಕುಸಿತದಿಂದ ಭರ್ಜರಿ ಮಳೆ ಸುರಿಯುತ್ತಿದ್ದರೆ, ಜಿಲ್ಲೆಯ ವ್ಯಾಪ್ತಿಯಲ್ಲಿ ಮಾತ್ರ ಬಿರುಗಾಳಿಯ ಅಬ್ಬರವೇ ಹೆಚ್ಚಿದೆ.

ದಿನದಿಂದ ದಿನಕ್ಕೆ ಗಾಳಿ ಬೀಸುವಿಕೆ ಹೆಚ್ಚುತ್ತಿದೆ. ಗುರುವಾರ 30ರಿಂದ 50 ಕಿ.ಮೀ. ವೇಗದಲ್ಲಿ ಗಾಳಿ ಬೀಸಿದರೆ, ಶುಕ್ರವಾರ ಇದರ ವೇಗ 40ರಿಂದ 65 ಕಿ.ಮೀ.ಗೆ ಹೆಚ್ಚಲಿದೆ ಎಂದು ಹವಾಮಾನ ಇಲಾಖೆಯ ಮುನ್ಸೂಚನೆ ವೆಬ್‌ಸೈಟ್‌ನಲ್ಲಿ ಪ್ರಕಟಗೊಂಡಿದೆ. ಇದು ರೈತರನ್ನು ಆತಂಕಕ್ಕೆ ದೂಡಿದೆ.

ಬಿತ್ತನೆ: ‘ಏಕದಳ ಧಾನ್ಯಗಳಾದ ಮೆಕ್ಕೆಜೋಳ 38,000 ಹೆಕ್ಟೇರ್‌ನಲ್ಲಿ, ಸಜ್ಜೆ 26,000 ಹೆಕ್ಟೇರ್‌ನಲ್ಲಿ ಬಿತ್ತನೆ ಯಾಗಿದ್ದರೆ, ಪ್ರಮುಖ ದ್ವಿದಳ ಧಾನ್ಯಗಳಾದ ತೊಗರಿ 2.10 ಲಕ್ಷ ಹೆಕ್ಟೇರ್‌ನಲ್ಲಿ, ಉದ್ದು 15,000 ಹೆಕ್ಟೇರ್‌ ನಲ್ಲಿ, ಹೆಸರು 8300 ಹೆಕ್ಟೇರ್‌ನಲ್ಲಿ ಬಿತ್ತನೆ ಯಾಗಿದೆ’ ಎಂದು ಕೃಷಿ ಇಲಾಖೆಯ ತಾಂತ್ರಿಕ ವಿಭಾಗದ ಅಧಿಕಾರಿ ಎ.ಪಿ.ಬಿರಾದಾರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಎಣ್ಣೆಕಾಳು ಬೆಳೆಗಳಾದ ಶೇಂಗಾ 21,000 ಹೆಕ್ಟೇರ್‌ನಲ್ಲಿ, ಸೂರ್ಯಕಾಂತಿ 18,000 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿವೆ. ಮುಂಗಾರು ಬೆಳೆಗಳು ಮೊಳಕೆಯಿಂದ ಬೆಳವಣಿಗೆ ಹಂತಕ್ಕೆ ಬಂದಿದ್ದು, ಮಳೆ ಕೊರತೆಯಿಂದ ಫಸಲು ಸದೃಢ ಬೆಳವಣಿಗೆಯಲ್ಲಿದೆ ಸೊರಗುತ್ತಿವೆ.

ಸಾಧಾರಣ ಹಂತದಲ್ಲಿರುವ ಬೆಳೆಗೆ, ಲಭ್ಯ ತೇವಾಂಶಕ್ಕೆ ಬೆಳೆಗೆ ಮೇಲು ರಸಗೊಬ್ಬರ, ಕಳೆ ತೆಗೆಯುವ ಕೆಲಸ ಇದೀಗ ರೈತ ಸಮೂಹದಲ್ಲಿ ಬಿರುಸಿ ನಿಂದ ನಡೆದಿವೆ. ಎತ್ತ ನೋಡಿದರೂ ಹೊಲಗಳಲ್ಲಿ ಕೃಷಿ ಚಟುವಟಿಕೆ ಗೋಚರಿಸುತ್ತಿವೆ’ ಎಂದು ಹೇಳಿದರು.

‘ಮುಂಗಾರು ಬಿತ್ತನೆಯ ಅವಧಿ ಜುಲೈ 15ಕ್ಕೆ ಪೂರ್ಣಗೊಂಡಿದೆ. ಸಜ್ಜೆ ಬಿತ್ತನೆ ಅಸಾಧ್ಯ. ತೊಗರಿ ಬಿತ್ತನೆಯನ್ನೂ ನಡೆಸುವಂತಿಲ್ಲ. ಆದರೆ ರೈತರು ಇದೀಗ ಮಳೆ ಸುರಿದರೂ ಹೆಚ್ಚಿನ ಪ್ರಮಾಣದಲ್ಲಿ ತೊಗರಿ, ಸೂರ್ಯಕಾಂತಿ, ಮೆಕ್ಕೆಜೋಳ ಬಿತ್ತುತ್ತಾರೆ. ಇದರಿಂದ ಮಾಸಾಂತ್ಯ ದೊಳಗೆ ಮುಂಗಾರು ಬಿತ್ತನೆಯ ಗುರಿ ಪೂರ್ಣಗೊಳ್ಳಲಿದೆ’ ಎಂದು ಬಿರಾದಾರ ಮಾಹಿತಿ ನೀಡಿದರು.

ಮಳೆ ಕೊರತೆ: ಜೂನ್‌ನಲ್ಲಿ ವಾಡಿಕೆ ಮಳೆ 8.92 ಸೆಂ.ಮೀ. ಬದಲು 12.09 ಸೆಂ.ಮೀ. ಸುರಿದಿದ್ದು, ರೈತಾಪಿ ಸಮೂಹ ದಲ್ಲಿ ಉತ್ಸಾಹ ಇಮ್ಮಡಿಗೊಳಿಸಿತ್ತು. ಆಷಾಢ ಮಾಸದ ಆರಂಭದಿಂದಲೂ ವರುಣನ ಕೃಪೆ ಜಿಲ್ಲೆಯಲ್ಲಿ ಅಷ್ಟಿಲ್ಲ. ಜುಲೈ ವಾಡಿಕೆ ಮಳೆ 8.66 ಸೆಂ.ಮೀ. ಇದ್ದರೆ, ಇದುವರೆಗೂ ಕೇವಲ 1.5 ಸೆಂ.ಮೀ. ಸುರಿದಿದೆ. ಅದೂ ಎಲ್ಲೆಡೆ ಚೆದುರಿದಂತೆ ಆಗಿಲ್ಲ.

* * 

ಮಳೆ ಕೊರತೆ ನಡುವೆಯೂ ಬಿತ್ತನೆ ನಡೆದಿದೆ. ಚೋಟುದ್ದದ ಪೈರಿಗೆ ಮೇಲು ಗೊಬ್ಬರ ಹಾಕುವುದು, ಬೆಳೆಯೊಳಗಿನ ಕಳೆ ತೆಗೆಯುವ ಕೆಲಸ ಎಲ್ಲೆಡೆ ಬಿರುಸಿನಿಂದ ನಡೆದಿದೆ
ಎ.ಪಿ.ಬಿರಾದಾರ
ಕೃಷಿ ಇಲಾಖೆ ತಾಂತ್ರಿಕ ವಿಭಾಗದ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT