ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸ್ತವ್ಯಸ್ತ ತೊರವಿ ಹಕ್ಕಲ–ಸವಾರರಿಗೆ ಗೊಂದಲ

Last Updated 21 ಜುಲೈ 2017, 6:35 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ವಾಹನದಲ್ಲಿ ಗರ್ಭಿಣಿಯರು ಈ ರಸ್ತೆಯಲ್ಲೇನಾದರೂ ಬಂದರೆ, ಸರಾಗವಾಗಿ ಹೆರಿಗೆಯಾಗುತ್ತದೆ’ ಎಂದು ವ್ಯಂಗ್ಯಭರಿತ ಆಕ್ರೋಶದಲ್ಲಿ ಮಾತ­ನಾಡು­ತ್ತಾರೆ ನಗರದ ತೊರವಿಹಕ್ಕಲಿನ ನಿವಾಸಿಗಳು. ‘ವಾರ್ಡ್‌ ಸಂಖ್ಯೆ 44ರ ವ್ಯಾಪ್ತಿಯಲ್ಲಿ­ರುವ ತೊರವಿಹಕ್ಕಲ–ಚನ್ನಪೇಟೆ ರಸ್ತೆ­ಯಲ್ಲಿ, ಪಾಲಿಕೆಯವರು ಬಂದು ದೊಡ್ಡ ದೊಡ್ಡ ಉಬ್ಬುಗಳನ್ನು ನಿರ್ಮಿಸಿ ಹೋಗುತ್ತಾರೆ.

ಅದರ ನಂತರ, ಜಲಮಂಡಳಿಯವರು ಬಂದು ಗುಂಡಿ ತೋಡಿ ಹೋಗುತ್ತಾರೆ. ರಸ್ತೆಉಬ್ಬು­ಗಳು, ಆಳವಾದ ಗುಂಡಿಗಳಿಂದ ಈ ರಸ್ತೆಯಲ್ಲಿ ಸಂಚರಿಸುವುದಕ್ಕೆ ಹರ­ಸಾಹಸ ಮಾಡಿದಂತಾಗುತ್ತದೆ’ ಎಂದು ಚನ್ನಬಸಪ್ಪ ಸಂಗಣ್ಣವರ ಅಸಮಾಧಾನ ವ್ಯಕ್ತಪಡಿಸುತ್ತಾರೆ.

‘ಹಳೇ ಹುಬ್ಬಳ್ಳಿಯಿಂದ ದುರ್ಗದ ಬೈಲ್‌ ಅಥವಾ ಮಾರುಕಟ್ಟೆಗೆ ಹೋಗ­ಬೇಕೆಂದರೆ ಇದೇ ಪ್ರಮುಖ ರಸ್ತೆ. ಇದೇ ರಸ್ತೆಯಲ್ಲಿ ಮುಂದೆ ಹೋದರೆ, ಎಸ್.ಎಸ್.ಕೆ. ಕಾಲೇಜು ಹಾಗೂ ವಿವೇಕಾನಂದ ಪ್ರೌಢಶಾಲೆ ಇದೆ. ಇಷ್ಟು ಜನಸಂಚಾರವಿರುವ ರಸ್ತೆಯ ನಿರ್ವ­ಹಣೆಯೇ ಉತ್ತಮವಾಗಿಲ್ಲ’ ಎಂದು ಶಿವಲೀಲಾ ಹುಣಸೀಕಟ್ಟಿ ಹೇಳಿದರು.

ರಸ್ತೆ ಅಗೆತದ ಕಿರಿಕಿರಿ: ‘24X7 ನೀರು ಪೂರೈಸುವ ಕಾರ್ಯಕ್ಕಾಗಿ ಜಲಮಂಡಳಿಯ ಸಿಬ್ಬಂದಿ ರಸ್ತೆ ಅಗೆಯುತ್ತಿದ್ದಾರೆ. ಈ ವೇಳೆ, ರಸ್ತೆ ತಗ್ಗು ಉಂಟಾಗಿ ರಸ್ತೆ ಉಬ್ಬುಗಳು ಇನ್ನೂ ಎತ್ತರವಾಗುತ್ತವೆ. ತೊರವಿಹಕ್ಕಲಿನಲ್ಲಿ ಹೀಗೆ, ರಸ್ತೆ ಅಗೆದು ಎರಡು ವರ್ಷವಾಯಿತು. ಇನ್ನೂ ಅದನ್ನು ಸಮತಟ್ಟಾಗಿ ಮಾಡಿಲ್ಲ’ ಎಂದು ನಿವಾಸಿ ಮಂಜುನಾಥ ಭಾಂಡಗೆ ಹೇಳಿದರು.

‘ತೊರವಿಹಕ್ಕಲಿನ ರಸ್ತೆಗಳು ಮೊದಲೇ ಚಿಕ್ಕದಾಗಿವೆ. ಪಾದಚಾರಿ ಮಾರ್ಗಕ್ಕೆ ಜಾಗವನ್ನೂ ಬಿಟ್ಟಿಲ್ಲ. ಇಂಥದ್ದರಲ್ಲಿ ಎಲ್ಲಿ ಬೇಕೆಂದರಲ್ಲಿ ರಸ್ತೆ ಉಬ್ಬು ನಿರ್ಮಿಸಿದರೆ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತದೆ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

‘ಉಬ್ಬುಗಳಿಂದ ಸಂಚಾರ ನಿಧಾನವಾಗುತ್ತದೆ. ನಿಧಾನಗತಿಯ ಸಂಚಾರದಿಂದ ಸಂಚಾರ ದಟ್ಟಣೆ ಉಂಟಾಗುತ್ತದೆ. ಈ ಮಳೆಗಾಲದಲ್ಲಿ ರಸ್ತೆಯಲ್ಲಿಯೇ ನಿಂತುಕೊಳ್ಳಬೇಕೆಂದರೆ ಹಿಂಸೆಯಾಗುತ್ತದೆ’ ಎಂದು ಮಂಜುನಾಥ ಹೇಳಿದರು.

ಕತ್ತಲಿನಲ್ಲಿ ಸಮಸ್ಯೆ: ‘ತೊರವಿ ಹಕ್ಕಲಿನ ಕೆಳಸೇತುವೆ ಬಳಿ ಬೀದಿ ದೀಪಗಳು ಹೊತ್ತಿಕೊಳ್ಳುವುದಿಲ್ಲ. ರಾತ್ರಿಯ ವೇಳೆ ಸಮಸ್ಯೆಯಾಗುತ್ತಿದೆ. ಗುಂಡಿ ಬಿದ್ದ ರಸ್ತೆ­ಗಳು, ರಸ್ತೆ ಉಬ್ಬುಗಳಿಂದ ಸಂಚಾರಕ್ಕೆ ತೊಂದರೆಯಾಗುತ್ತದೆ’ ಎಂದು ಮಂಜುನಾಥ ಬೋಜಗಾರ ಹೇಳಿದರು.

‘ಹೊಸ ಹುಬ್ಬಳ್ಳಿಗೆ ಬರಲು, ಹಳೇ ಹುಬ್ಬಳ್ಳಿಯ ಜನರಿಗೆ ಇದೇ ಪ್ರಮುಖ ಮಾರ್ಗ. ಸಹಜವಾಗಿ ವಾಹನ ಮತ್ತು ಜನಸಂಚಾರ ಹೆಚ್ಚಾಗಿರುತ್ತದೆ. ವೇಗವಾಗಿ ವಾಹನಗಳು ಬಂದು ಮಕ್ಕಳು ಗಾಯಗೊಂಡ ಉದಾಹರಣೆಗಳು ಸಾಕಷ್ಟಿವೆ. ಹಾಗಾಗಿ, ಸ್ಥಳೀಯರೇ ರಸ್ತೆ ಉಬ್ಬುಗಳನ್ನು ನಿರ್ಮಿಸಿಕೊಂಡಿದ್ದಾರೆ’ ಎಂದು ಸ್ಥಳೀಯರು ಹೇಳುತ್ತಾರೆ.

* * 

ಸಾರ್ವಜನಿಕರು ರಸ್ತೆ ಉಬ್ಬು ಬೇಡ ಎಂದರೆ, ಸ್ಥಳೀಯರು ರಸ್ತೆ ಉಬ್ಬುಗಳು ಇರಲಿ ಎನ್ನುತ್ತಾರೆ. ಅವೈ­ಜ್ಞಾ­ನಿಕ ರಸ್ತೆ ಉಬ್ಬುಗಳನ್ನು ಸರಿಪಡಿ­ಸಲು ಅಧಿಕಾರಿಗಳಿಗೆ ಹೇಳುತ್ತೇನೆ
ಅಬ್ದುಲ್‌ ವಹಾಬ್‌ ಮುಲ್ಲಾ
ಪಾಲಿಕೆ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT