ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸ್‌ನಲ್ಲಿ ಪಯಣಿಸಿದ ಮುಖ್ಯಮಂತ್ರಿ!

Last Updated 21 ಜುಲೈ 2017, 6:39 IST
ಅಕ್ಷರ ಗಾತ್ರ

ಹುಬ್ಬಳ್ಳಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಹುಬ್ಬಳ್ಳಿ–ಧಾರವಾಡ ಅವಳಿ ನಗರದಲ್ಲಿ ಪ್ರಥಮ ಬಾರಿಗೆ ಆಯೋಜಿಸಿದ್ದ ‘ಬಸ್‌ ದಿನ’ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ಚಾಲನೆ ನೀಡಿದರು. ಬೆಂಗಳೂರಿನಿಂದ ವಿಶೇಷ ವಿಮಾನ­ದಲ್ಲಿ ಹುಬ್ಬಳ್ಳಿಗೆ ಬಂದ ಮುಖ್ಯಮಂತ್ರಿ, ಇಲ್ಲಿನ ವಿಮಾನ ನಿಲ್ದಾಣದಲ್ಲಿ ‘ಬಸ್‌ ದಿನ’ಕ್ಕೆ ಚಾಲನೆ ನೀಡಿದರು.

ಬಳಿಕ ಬಸ್‌ನ ನಿರ್ವಾಹಕ ವಿಜಯಕುಮಾರ ಡಿ.ನಾಯ್ಕ್‌ ಅವರಿಗೆ ₹ 22 ನೀಡಿ ಟಿಕೆಟ್‌ ಖರೀದಿಸಿ, ಧಾರವಾಡಕ್ಕೆ ಪ್ರಯಾಣಿಸಿದರು. ಚಾಲಕ ಶಂಕರ ಅರಳಿಕಟ್ಟಿ ಅವರು ಬಸ್ಸನ್ನು ಸುರಕ್ಷಿತವಾಗಿ ಚಲಾಯಿಸಿದರು. ಮುಖ್ಯಮಂತ್ರಿ, ಸಚಿವರು, ಶಾಸಕರು ಮತ್ತು ಅಧಿಕಾರಿಗಳು, ಪತ್ರಕರ್ತರು ಸೇರಿದಂತೆ ಒಟ್ಟು 70 ಪ್ರಯಾಣಿಕರಿಂದ ತುಂಬಿದ್ದ ನಗರ ಸಾರಿಗೆ ಬಸ್‌ ಬೈಪಾಸ್‌ ಮೂಲಕ ಧಾರವಾಡಕ್ಕೆ ತೆರಳಿತು.

ಮಧ್ಯಾಹ್ನ 12.35ಕ್ಕೆ ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಹೊರಟ ಬಸ್‌ (ಕೆ.ಎ. 25. ಎಫ್‌  3052) ಮಧ್ಯಾಹ್ನ 1.15ಕ್ಕೆ ಧಾರವಾಡ ತಲುಪಿತು. ಮುಖ್ಯಮಂತ್ರಿ ಅವರಿದ್ದ ಬಸ್‌ ಸಾಗುವ ಮಾರ್ಗದಲ್ಲಿ ಕೆಲ ಸಮಯ ಇತರೆ ವಾಹನಗಳು ಸಂಚರಿಸದಂತೆ (ಜಿರೋ ಟ್ರಾಫಿಕ್‌)ತಡೆಹಿಡಿಯಲಾಗಿತ್ತು. ಬಸ್ಸಿನಲ್ಲಿ ಇದ್ದ ಪ್ರಯಾಣಿಕರಲ್ಲಿ 40 ಜನ ಟಿಕೆಟ್‌ ಖರೀದಿಸಿ ಪ್ರಯಾಣಿಸಿದರು. ₹ 880 ಟಿಕೆಟ್‌ ಹಣ ಸಂಗ್ರಹವಾಯಿತು.

ಪ್ರಯಾಣದ ವೇಳೆ ಸುದ್ದಿ ಮಾಧ್ಯಮ­ಗಳ ಕ್ಯಾಮರಾಮನ್‌ಗಳು ಮುಗಿಬಿದ್ದ ಮುಖ್ಯಮಂತ್ರಿ ಅವರ ಛಾಯಾಚಿತ್ರ ಸೆರೆಹಿಡಿದರು. ಪ್ರಸ್ತುತ ರಾಜಕೀಯ ವಿಷಯಗಳ ಕುರಿತು ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗಳಿಗೆ ಸಿದ್ದರಾಮಯ್ಯ ಅವರು ಪ್ರತಿಕ್ರಿಯೆ ನೀಡಿದರು. ಬಳಿಕ ಸಚಿವ ವಿನಯ ಕುಲಕರ್ಣಿ ಮತ್ತು ಶಾಸಕ ಪ್ರಸಾದ ಅಬ್ಬಯ್ಯ ಅವರೊಂದಿಗೆ ಮಾತನಾಡುತ್ತಾ ಪ್ರಯಾಣ ಮುಂದುವರಿಸಿದರು.

ಕೂರಲು ಸೀಟು ಸಿಗದ ಕಾರಣ ಶಾಸಕ ಪ್ರಸಾದ ಅಬ್ಬಯ್ಯ ಮತ್ತು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ಸದಾನಂದ ಡಂಗನವರ ಅವರು ಹುಬ್ಬಳ್ಳಿಯಿಂದ ಧಾರವಾಡದ ವರೆಗೆ ಬಸ್ಸಿನಲ್ಲಿ ನಿಂತುಕೊಂಡೇ ಪಯಣಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಸ್ಸಿನಲ್ಲಿ ಸಾಗುವ ಮಾರ್ಗದುದ್ದಕ್ಕೂ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು.

ಸಂವಿಧಾನ ಓದಿ: ಸಿದ್ದರಾಮಯ್ಯ
ಹುಬ್ಬಳ್ಳಿ: ‘ರಾಜ್ಯಗಳು ಪ್ರತ್ಯೇಕ ಬಾವುಟ ಹೊಂದಬಾರದು ಎಂದು ಸಂವಿಧಾನದಲ್ಲಿ ಎಲ್ಲಿಯೂ ಹೇಳಿಲ್ಲ. ನಾನೊಬ್ಬ ವಕೀಲನಾಗಿ ಇದನ್ನು ಹೇಳುತ್ತಿದ್ದೇನೆ. ಬಾವುಟ ಹೊಂದುವುರಿಂದ ದೇಶದ ಸಮಗ್ರತೆ ಮತ್ತು ಸಾರ್ವಭೌಮತೆಗೆ ಎಲ್ಲಿಯೂ ಧಕ್ಕೆಯಾಗುವುದಿಲ್ಲ. ಈ ಬಗ್ಗೆ ಅರಿವಿಲ್ಲದಿದ್ದರೆ ಸಂವಿಧಾನ ಓದಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರೋಧಿಗಳಿಗೆ ತಿರುಗೇಟು ನೀಡಿದರು.

ಇಲ್ಲಿನ ವಿಮಾನ ನಿಲ್ದಾಣದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಮ್ಮಲ್ಲಿ ಬಹಳ ವರ್ಷಗಳಿಂದ ನಾಡಧ್ವಜ ಬಳಕೆಯಲ್ಲಿದೆ. ಆದರೆ, ಅದು ಅಧಿಕೃತವಾಗಿಲ್ಲ. ಈ ಕುರಿತು ಅಧ್ಯಯನಕ್ಕೆ ತಜ್ಞರ ಸಮಿತಿ ರಚಿಸಲಾಗಿದೆ.  ಸಮಿತಿ ವರದಿ ನೀಡಿದ ಬಳಿಕ ಸಾಧಕ–ಬಾಧಕ ಪರಿಶೀಲಿಸಿ ಅಂತಿಮ ತೀರ್ಮಾನಕೈಗೊಳ್ಳಲಾಗುವುದು’ ಎಂದು ಹೇಳಿದರು.

‘ಬಿಜೆಪಿ ಮತ್ತು ಜೆಡಿಎಸ್‌ನವರಿಗೆ ಕನ್ನಡದ ಬಗ್ಗೆ ಅಭಿಮಾನ ಇಲ್ಲ. ಕನ್ನಡಕ್ಕಾಗಿ ಅವರು ಏನೂ ಮಾಡಿಲ್ಲ. ನಾಡಧ್ವಜ ವಿಷಯವನ್ನು ರಾಜಕೀಯವಾಗಿ ನೋಡುವುದು ಬಿಡಬೇಕು’ ಎಂದರು. ರಾಜ್ಯದಲ್ಲಿ ಉತ್ತಮ ಮಳೆ ಆಗುತ್ತಿರುವುದು ಸಂತಸದ ವಿಷಯ. ಮಳೆ ಆಗದಿರುವ ಪ್ರದೇಶಗಳಲ್ಲಿ ಅಗತ್ಯ ಬಿದ್ದರೆ ಮೋಡ ಬಿತ್ತನೆ ಮಾಡಲಾಗುವುದು ಎಂದರು.

ಬಸ್ಸಿನ ಹಿಂದೆ ವಾಹನ ಸಾಲು!
ಹುಬ್ಬಳ್ಳಿಯಿಂದ ಧಾರವಾಡಕ್ಕೆ ಹೋಗುತ್ತಿದ್ದ ಮುಖ್ಯಮಂತ್ರಿ ಅವರಿದ್ದ ಬಸ್‌ ಅನ್ನು ಪೊಲೀಸರು, ಅಧಿಕಾರಿ­ಗಳು ಹಾಗೂ ಜನಪ್ರತಿನಿಧಿಗಳಿಗೆ ಸೇರಿದ ಹತ್ತಾರು ಕಾರು ಮತ್ತು ಜೀಪ್‌ಗಳು ಹಿಂಬಾಲಿಸಿರುವುದಕ್ಕೆ ಸಾರ್ವಜನಿಕ ವಲಯಿಂದ ಟೀಕೆ ವ್ಯಕ್ತವಾಗಿದೆ. ಖಾಸಗಿ ವಾಹನಗಳ ಬದಲಿಗೆ ಬಸ್ಸಿನಲ್ಲಿ ಸಂಚರಿಸ­ಬೇಕು ಎಂಬ ಉದ್ದೇಶದಿಂದ ‘ಬಸ್‌ ದಿನ’ ಆಯೋ­ಜಿಸಿ­ದ್ದರೂ ಕಾರು, ಜೀಪು ಬಳಸುವ ಅಗತ್ಯ­ವೇನಿತ್ತು ಎಂದು ಪ್ರಶ್ನಿಸಿದ್ದಾರೆ.

ವಿಮಾನ ಟೇಕಾಫ್‌ಗೆ ಮಳೆ ಅಡ್ಡಿ
ಹುಬ್ಬಳ್ಳಿ–ಧಾರವಾಡದಲ್ಲಿ ಗುರುವಾರ ನಡೆದ ವಿವಿಧ ಕಾರ್ಯಕ್ರಮಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿದ ಬಳಿಕ ಸಂಜೆ ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ಹೊರಡುವಾಗ ಧಾರಕಾರ ಮಳೆ ಸುರಿಯಲಾರಂಭಿಸಿದ ಕಾರಣ ಪೈಲೆಟ್‌ 10 ನಿಮಿಷ ವಿಮಾನವನ್ನು ರನ್‌ವೇನಲ್ಲೇ ನಿಲ್ಲಿಸಿದರು. ಮಳೆ ಕಡಿಮೆಯಾದ ಬಳಿಕ ವಿಮಾನ ಟೇಕಾಫ್‌ ಆಯಿತು.

* * 

ಬಸ್‌ನಲ್ಲಿ ಸಂಚರಿಸುವುದು ನನಗೇನು ಹೊಸದಲ್ಲ, ಈ ಹಿಂದೆ ಮೈಸೂರಿನಲ್ಲಿ ಬಸ್ಸು, ಸ್ಕೂಟರ್‌­ನಲ್ಲಿ ಅಡ್ಡಾಡಿದ್ದೇನೆ. ಇಂಧನ ಉಳಿಸಲು ಬಸ್ಸುಗಳಲ್ಲಿ ಸಂಚರಿಸುವುದು ಉತ್ತಮ
ಸಿದ್ದರಾಮಯ್ಯ
ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT