ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕಲಿ ದಾಖಲೆ ನೀಡಿ ವಂಚನೆಯ ಆರೋಪ

Last Updated 21 ಜುಲೈ 2017, 6:52 IST
ಅಕ್ಷರ ಗಾತ್ರ

ಕಾಸರಗೋಡು: ಸಾಲ ಪಡೆಯಲು ಬ್ಯಾಂಕ್‌ಗೆ ನಕಲಿ ದಾಖಲೆ ಸಲ್ಲಿಸಿ ವಂಚಿಸಿದ ಆರೋಪದ ಮೇಲೆ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೇಶವ  ಪ್ರಸಾದ್ ನಾಣಿತ್ತಿಲು ಅವರ ಪತ್ನಿ ಅಶ್ವಿನಿ ನಾಣಿತ್ತಿಲು ಅವರ ವಿರುದ್ಧ ಕುಂಬಳೆ ಸೇವಾ ಸಹಕಾರಿ ಬ್ಯಾಂಕ್ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿದ್ದಾರೆ.

ಅಶ್ವಿನಿಯವರು  2009ರಂದು ಮನೆ ನಿರ್ಮಾಣಕ್ಕಾಗಿ ಕುಂಬಳೆ ಸಹಕಾರಿ ಬ್ಯಾಂಕ್‌ನಿಂದ ₹8 ಲಕ್ಷ ಸಾಲ ಪಡೆದಿದ್ದರು. ಆದರೆ ಸಾಲ ಪಡೆಯಲು ಅವರು ಸಲ್ಲಿಸಿದ ದಾಖಲೆಗಳು ನಕಲಿ ಎಂದು ಬ್ಯಾಂಕ್ ಅಧ್ಯಕ್ಷ ಶಂಕರ ಆಳ್ವ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

ಸಾಲ ಮರುಪಾವತಿ ಬಾಕಿ ಉಳಿದಾಗ ಬ್ಯಾಂಕ್ ಅಧಿಕಾರಿಗಳು ಮನೆಗೆ ಹೋಗಿ ಪರಿಶೀಲಿಸಿದಾಗ, ಅದು  ಐತಪ್ಪಪೂಜಾರಿ ಅವರಿಗೆ ಸೇರಿದ್ದು ಎಂದು ಖಚಿತಪಡಿಸಿದರು ಎಂದು ದೂರಿನಲ್ಲಿ ತಿಳಿಸಲಾಗಿದೆ. ನಕಲಿ ದಾಖಲೆ ನೀಡಿ ಮನೆ ನಿರ್ಮಿಸದೆಯೇ ಸಾಲ ಪಡೆದಿದ್ದು, ಮರುಪಾವತಿ ಮಾಡದೆ ಬ್ಯಾಂಕ್‌ಗೆ ವಂಚಿಸಲಾಗಿದೆ ಎಂದು ಆರೋಪಿಸಲಾಗಿದೆ.  

ಸಾಲ ಮಂಜೂರು ಮಾಡಿದ್ದ ಬ್ಯಾಂಕ್  ಕಾರ್ಯದರ್ಶಿ ಜಗದೀಶ್ ರೈ ಅವರು ಬೇರೊಂದು ಅಕ್ರಮ ವ್ಯವಹಾರದಲ್ಲಿ ಸೇವೆಯಿಂದ ವಜಾಗೊಂಡಿದ್ದರು.
‘ಬ್ಯಾಂಕ್ ಅಧಿಕಾರಿಗಳ ಆರೋಪ ನಿರಾಧಾರ. ನನ್ನ ಮಾನ ಹಾನಿ ಮಾಡಲು ಇಂತಹ ಆರೋಪ ಹೊರಿಸಲಾಗಿದ್ದು, ಪಡೆದ ಸಾಲದಲ್ಲಿ ₹6 ಲಕ್ಷ ಮೊದಲೇ ಪಾವತಿಸಲಾಗಿದ್ದು, ಉಳಿದ ಸಾಲ ಹಾಗೂ ಬಡ್ಡಿ ಸಹಿತ ಇರುವ ₹9 ಲಕ್ಷವನ್ನು ಬುಧವಾರ ಪಾವತಿಸಲಾಗಿದೆ ಎಂದು’ ಕೇಶವ ಪ್ರಸಾದ್ ನಾಣಿತ್ತಿಲು ತಿಳಿಸಿದ್ದಾರೆ.

ವಿದೇಶೀ ಮದ್ಯ ವಶಕ್ಕೆ,ಇಬ್ಬರ ಬಂಧನ 

ಕಾಸರಗೋಡು: ಇಲ್ಲಿನ ಮೆರ್ಮುದೆ ಚೆನ್ನೆಗುಡಿ ಸಮೀಪ ವಿದೇಶಿ ಮದ್ಯವನ್ನು ವಶಪಡಿಸಿಕೊಂಡಿರುವ ಅಬಕಾರಿ ದಳ ಈ ಸಂಬಂಧ  ಇಬ್ಬರನ್ನು ಬಂಧಿಸಿದೆ.
 ಪೆರ್ಮುದೆ  ಚೆನ್ನೆಗುಡಿ ನಿವಾಸಿ ರೋಶನ್ ಸಂತೋಷ್ ಸೋಜಾ ಬಂಧಿತ. ಆತನಿಂದ 8 ಬಾಟಲಿ ವಿದೇಶಿ ಮದ್ಯ ಹಾಗೂ ತೊಟ್ಟೆ ಸಾರಾಯಿಯನ್ನು ವಶಪಡಿಸಿಕೊಳ್ಳಲಾಗಿದೆ.

ಪೆರ್ಮುದೆಯಲ್ಲಿ ಬಸ್‌ ಇಳಿದು ಹೋಗುತ್ತಿದ್ದ ವೇಳೆ ಆತನನ್ನು ಬಂಧಿಸಿದ್ದು, ಮತ್ತೊಂದು ಪ್ರಕರಣದಲ್ಲಿ ಕುಂಬಳೆಯ ಅನಿಲ್ ಕುಂಬ್ಳೆ ರಸ್ತೆ ಬಳಿಯ ನಿವಾಸಿ ಗಿರೀಶ್ ಭಟ್‌ನನ್ನು ಬಂಧಿಸಿ ಆತನಿಂದ 48 ಬಾಟಲಿ ವಿದೇಶಿ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ.

ಎರಡು ಬೈಕ್ ಕಳವು
ಕಾಸರಗೋಡು: ಉಪ್ಪಳ ಹಾಗೂ ಪತ್ವಾಡಿಯಿಂದ ಗುರುವಾರ ಮುಂಜಾನೆ ಎರಡು ಬೈಕ್‌ಗಳನ್ನು ಕಳ್ಳತನ ಮಾಡಲಾಗಿದೆ. ಉಪ್ಪಳದ ಅಂಗಡಿ ಮಾಲೀಕ ವಹಾಬ್ ಎಂಬವರ ಹೀರೋ ಹೋಂಡಾ ಮತ್ತು ಉಪ್ಪಳ ರೆಡ್ ಕ್ಲಬ್ ಅಂಗಡಿ ಮಾಲಕ ಅಷ್ಫಾನ್ ಎಂಬವರ ಪಲ್ಸರ್ ಬೈಕನ್ನು ಕಳ್ಳತನ ಮಾಡಲಾಗಿದೆ.  ಮಂಜೇಶ್ವರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಕಾರು ಕಳವು
ಕಾಸರಗೋಡು:  ಕಾಸರಗೋಡು ರೈಲು ನಿಲ್ದಾಣದ ಬಳಿಯಲ್ಲಿ ಚರ್ಚ್‌ ಮುಂದೆ ನಿಲ್ಲಿಸಿದ್ದ ಸ್ವಿಫ್ಟ್ ಕಾರನ್ನು ಕಳ್ಳತನ ಮಾಡಲಾಗಿದೆ.
ಇದೇ 19ರಂದು ಬೆಳಿಗ್ಗೆ ನಿಲ್ಲಿಸಲಾಗಿದ್ದ ಕಾರು ಸಂಜೆಯ ವೇಳೆಗೆ ಕಾಣೆಯಾಗಿತ್ತು.ಕಾರು ಮಾಲಕ ಕೂಡ್ಲು ಆರ್.ಡಿ. ನಗರ ನಿವಾಸಿ

ನೆಲ್ಯಾಟ್ ಸತ್ಯಜಿತ್ ಎಂಬವರು ಈ ಬಗ್ಗೆ ಕಾಸರಗೋಡು ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.

ಅಕ್ರಮ ಮರಳು ವಶ
ಮೂಡುಬಿದಿರೆ: ಮಾರೂರು ಗ್ರಾಮದ ನೆತ್ತೋಡಿ ಬಳಿ ಖಾಸಗಿ ಜಾಗದಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ್ದ ಸುಮಾರು 30 ಲೋಡ್‌ ಮರಳನ್ನು ಮೂಡುಬಿದಿರೆ ತಹಶೀಲ್ದಾರ್ ಅವರು ಗುರುವಾರ ವಶಪಡಿಸಿಸಿಕೊಂಡಿದ್ದಾರೆ.

ಮರಳು ದಾಸ್ತಾನು ಮಾಡಿ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ ಎಂಬ ಮಾಹಿತಿ ಆಧರಿಸಿ ತಹಶೀಲ್ದಾರ್ ಮುಹ್ಮದ್ ಇಸಾಕ್ ನೇತ್ರತ್ವದ ಕಂದಾಯ ಅಧಿಕಾರಿಗಳ ತಂಡ ದಾಳಿ ನಡೆಸಿ  ಮರಳನ್ನು ವಶಪಡಿಸಿಕೊಂಡಿದೆ.

ಬಾಲಕಿ ಸಾವು
ಬೆಳ್ತಂಗಡಿ: ಇಲ್ಲಿನ ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಮನೋಹರ ಬಳೆಂಜ ಅವರ ಪುತ್ರಿ ದಿತಿ(4) ಅಸೌಖ್ಯದಿಂದ ಗುರುವಾರ ಮೃತಪಟ್ಟಿದ್ದಾಳೆ.
ಕಳೆದ 2 ವರ್ಷಗಳಿಂದ ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದ ಈಕೆಗೆ ಬೆಂಗಳೂರಿನಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು.  ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿ ಗುರುವಾರ ದಾಖಲಿಸಿದಾಗ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾಳೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT