ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂದುವರಿದ ಮಳೆ: ಜನಜೀವನ ಅಸ್ತವ್ಯಸ್ತ

Last Updated 21 ಜುಲೈ 2017, 7:37 IST
ಅಕ್ಷರ ಗಾತ್ರ

ಶಿರಸಿ: ನಿರಂತರ ಮೂರು ದಿನಗಳಿಂದ ತಾಲ್ಲೂಕಿನಲ್ಲಿ ಸುರಿಯುತ್ತಿರುವ ಮಳೆ ಯಿಂದಾಗಿ ಜನಜೀವನ ಅಸ್ತವ್ಯಸ್ತ ಗೊಂಡಿದೆ. ಗುರುವಾರ ಬೆಳಿಗ್ಗೆ ಮಳೆಯ ಜೊತೆ ಬೀಸಿದ ಗಾಳಿಗೆ ಅನೇಕ ಹಳ್ಳಿಗ ಳಲ್ಲಿ ವಿದ್ಯುತ್ ಮಾರ್ಗಗಳ ಮೇಲೆ ಮರ ಮುರಿದು ಬಿದ್ದು ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿದೆ. ಬನವಾಸಿಯಲ್ಲಿ ವರದಾ ನದಿಗೆ ಪ್ರವಾಹ ಬರುವ ಆತಂಕ ಎದುರಾಗಿದೆ. ಬನವಾಸಿಯಲ್ಲಿ ಮೂರು ಮನೆಗಳು ಭಾಗಶಃ ಕುಸಿದಿದ್ದು ಒಟ್ಟು ₹ 43,000 ನಷ್ಟವಾಗಿದೆ.

ಬುಧವಾರ ರಾತ್ರಿ ಧಾರಾಕಾರ ಮಳೆ ಸುರಿದಿದೆ. ಗುರುವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡಂತೆ ಕಳೆದ 24 ತಾಸುಗಳಲ್ಲಿ ನಗರದಲ್ಲಿ 135 ಮಿ.ಮೀ ಮಳೆಯಾಗಿದೆ. ಈವರೆಗೆ ಒಟ್ಟು 1211 ಮಿ.ಮೀ ಮಳೆಯಾದಂತಾಗಿದೆ.

ಗುರುವಾರ ಬೆಳಿಗ್ಗೆಯಿಂದ ಗಾಳಿಯ ಆರ್ಭಟ ಜೋರಾಗಿ ಮರಗಳು ವಿದ್ಯುತ್ ಲೈನ್ ಮೇಲೆರಗಿ ಕಂಬಗಳು ಧರೆಗುರು ಳಿವೆ. ಬಿಸಲಕೊಪ್ಪ, ಮಳಲಗಾಂವ, ಬನ­ವಾಸಿ, ಹಳ್ಳಿಕೊಪ್ಪ, ಕುಪ್ಪಳ್ಳಿ, ಹುಡೇಲ­ಕೊಪ್ಪ, ಬೀಳೂರು, ಭಾಶಿ, ಸೋಂದಾ, ಮತ್ತಿಘಟ್ಟಾ, ಸಾಲ್ಕಣಿ, ಕುಮಟಾ ರಸ್ತೆಯ ಆಸುಪಾಸಿನಲ್ಲಿ 40ಕ್ಕೂ ಹೆಚ್ಚು ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ. ಎರಡು ದಿನಗಳಿಂದ ಈ ಹಳ್ಳಿಗಳಿಗೆ ವಿದ್ಯುತ್ ಪೂರೈಕೆ ಇಲ್ಲದೇ ಜನರು ಕತ್ತಲಲ್ಲಿ ದಿನದೂಡುತ್ತಿದ್ದಾರೆ. ‘ಸಿಲಿಂಡರ್ ಗ್ಯಾಸ್ ಇರುವವರಿಗೆ ಸೀಮೆಎಣ್ಣೆ ಸಿಗುವುದಿಲ್ಲ. ಚಿಮಣಿ ದೀಪ ಉರಿಸಲು ಸಹ ಸೀಮೆಎಣ್ಣೆ ಇರುವುದಿಲ್ಲ’ ಎಂದು ಕೆಲವು ಹಳ್ಳಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬನವಾಸಿಯಲ್ಲಿ ನಿಂಗ ಬೆನಕ ಮೇತ್ರಿ, ಜಯಮ್ಮ ಮಾದರ, ಅಬ್ದುಲ್ ಖಾದರ್ ದಾದೆಚಾನ್ ಅವರಿಗೆ ಸೇರಿದ ಒಟ್ಟು ಮೂರು ಮನೆಗಳಿಗೆ ಭಾಗಶಃ ಹಾನಿಯಾಗಿದೆ. ತಾಲ್ಲೂಕಿನ ಸೋಂದಾ ಹೊಳೆ, ಕೆಂಗ್ರೆ ಹೊಳೆ, ಸರಕುಳಿ ಹೊಳೆಗಳು ತುಂಬಿ ಹರಿಯುತ್ತಿವೆ.

‘ವರದಾ ನದಿಯ ನೀರಿನ ಮಟ್ಟ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಇದೇ ರೀತಿ ಮಳೆಯಾದಲ್ಲಿ ನದಿಯ ಹರಿವಿನ ಮಟ್ಟ ಹೆಚ್ಚಿ ಸುತ್ತಲಿನ ಭತ್ತದ ಗದ್ದೆಗಳು ಜಲಾವೃತವಾಗುವ ಸಾಧ್ಯತೆಯಿವೆ. ಪ್ರವಾಹ ಪರಿಸ್ಥಿತಿ ಎದುರಿಸಲು ಎಲ್ಲ ಸಿದ್ಧತೆ ಮಾಡಿಕೊಳ್ಳ ಲಾಗಿದೆ’ ಎಂದು ಬನವಾಸಿಯ ಉಪ ತಹಶೀ­ಲ್ದಾರ್ ಶ್ರೀಕೃಷ್ಣ ಕಾಮಕರ್ ತಿಳಿಸಿದ್ದಾರೆ.

ಕೆರೆ ನೋಡುವ ಸಂಭ್ರಮ: ಈ ಬಾರಿಯ ಬೇಸಿಗೆಯಲ್ಲಿ ಶಿರಸಿ ಜೀವಜಲ ಕಾರ್ಯ ಪಡೆ ನೇತೃತ್ವದಲ್ಲಿ ಹೂಳೆತ್ತುವ ಕಾರ್ಯ ನಡೆದಿರುವ ಆನೆಹೊಂಡ, ರಾಯರ ಕೆರೆಗಳಲ್ಲಿ ನೀರು ಭರ್ತಿಯಾಗಿದೆ. ರಾಯರಕೆರೆ ಭರ್ತಿಯಾಗಿದೆ. ಕಾರ್ಯ ಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್ ಮೇಲುಸ್ತುವಾರಿಯಲ್ಲಿ ಕೆರೆಯ ಪಕ್ಕದಲ್ಲಿ ಕೋಡಿ ಮಾಡಿಕೊಡಲಾಯಿತು.

ಬೇಸಿಗೆಯಲ್ಲಿ ಹೂಳೆತ್ತಿರುವ ಸಂಪಿನಕೆರೆ, ದೇವಿಕೆರೆ, ಹಂಚಿನಕೇರಿ, ಹಳದೋಟ, ಬಶೆಟ್ಟಿಕೆರೆಗಳಲ್ಲೂ ನೀರು ತುಂಬಿದೆ. ನಗರದ ಜನರಿಗೆ ಈಗ ಕೆರೆ ನೋಡುವ ಸಂಭ್ರಮ. ಕೆರೆಯಲ್ಲಿ ನೀರಿನ ಮಟ್ಟ ಏರುತ್ತಿರುವುದು ಹೂಳೆತ್ತಲು ಶ್ರಮಪಟ್ಟವರಿಗೆ ಖುಷಿ ಕೊಟ್ಟಿದೆ. ವಾಟ್ಸ್‌ಆ್ಯಪ್‌ ಗ್ರೂಪ್‌ಗಳಲ್ಲಿ ಈಗ ಕೆರೆ­ಯಲ್ಲಿ ನೀರು ತುಂಬಿರುವ ಸಂಗತಿಗಳೇ ಚರ್ಚೆಯಾಗುತ್ತಿವೆ.

ನಿರಂತರ ಮಳೆಯಿಂದಾಗಿ ರೇವಣ­ಕಟ್ಟಾದ ಶಹಿದಾಬಿ ಶುಕೂರ್ (₹ 50 ಸಾವಿರ), ಅಜ್ಜೀಬಳದ ವೆಂಕಟರಮಣ ಹೆಗಡೆ (₹ 4000), ಮಠದೇವಳದ ಸುಬ್ರಾಯ ಕೊಡಿಯಾ (₹ 20ಸಾವಿರ) ಅವರ ಮನೆ ಹಾಗೂ ತೆರಕನಳ್ಳಿಯ ನಾರಾಯಣ ಹೆಗಡೆ ಅವರ ಕೊಟ್ಟಿಗೆ (₹ 4000) ಗೆ ಹಾನಿಯಾಗಿದೆ.

ಧರೆಗುಳಿದ ಮರಗಳು: ಹಲವೆಡೆ ಮನೆಗಳಿಗೆ ಹಾನಿ
ಕಾರವಾರ: ಗಾಳಿ ಮಳೆಗೆ ಗುರುವಾರ ಜಿಲ್ಲೆಯ ಹಲವೆಡೆ ಮರಗಳು ಬಿದ್ದು ಸುಮಾರು ನಾಲ್ಕೈದು ಮನೆಗಳಿಗೆ ಹಾನಿಯಾಗಿದೆ. ಇನ್ನು ಕೆಲವೆಡೆ ರಸ್ತೆಗೆ ಅಡ್ಡಲಾಗಿದ್ದ ಬಿದ್ದ ಪರಿಣಾಮ ಸಂಚಾರ ಸ್ಥಗಿತಗೊಂಡಿತ್ತು.

ಅಂಕೋಲಾ ತಾಲ್ಲೂಕಿನ ಹಲಗೇರಿ ಯಲ್ಲಿ ಅಶೋಕ ಲೋಕಪ್ಪ ನಾಯ್ಕ ಎಂಬುವರ ಮನೆ ಮೇಲೆ ಮಾವಿನ ಮರ ಬಿದ್ದು, ಅಂದಾಜು ₹ 25 ಸಾವಿರ ಹಾನಿಯಾಗಿದೆ. ಸಗಡಗೇರಿ ಗ್ರಾಮ ಪಂಚಾಯ್ತಿಯ ಅಂಬಿಗರಕೊಪ್ಪದಲ್ಲಿ ಸುಕ್ರು ಮಾಣಿ ಆಗೇರ ಅವರ ಮನೆ ಮೇಲೆ ಮರ ಬಿದ್ದು ₹ 40 ಸಾವಿರ ಹಾನಿ, ಅಚವೆ ಗ್ರಾಮ ಪಂಚಾಯ್ತಿಯ ಅಚವ ವಡ್ಡಿಯ ಸುರೇಶ ಪುಟ್ಟು ಗೌಡ ಅವರ ಮನೆ ಮೇಲೆ ಮರ ಬಿದ್ದು ₹ 35 ಸಾವಿರ ಹಾನಿ ಹಾಗೂ ಶಡಗೇರಿಯಲ್ಲಿ ಪಾಂಡುರಂಗ ವೆಂಕಟ್‌ ಐಗಳ ಅವರ ಮನೆ ಮೇಲೆ ಮರ ಉರುಳಿ ₹ 1.50 ಲಕ್ಷ ಹಾನಿಯಾಗಿದೆ. 

ಸಂಚಾರ ಸ್ಥಗಿತ: ಕುಮಟಾ ತಾಲ್ಲೂಕಿನ ಹೆಗಡೆ ಗ್ರಾಮದಲ್ಲಿ ಬೆಳಿಗ್ಗೆ ಬೃಹತ್‌ ಆಲದ ಮರ ನೆಲಕ್ಕುರುಳಿದ ಪರಿಣಾಮ ರಸ್ತೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಜೊಯಿಡಾ ತಾಲ್ಲೂಕಿನ ಉಡಸಾ ರಸ್ತೆಯಲ್ಲಿ ಮರ ಬಿದ್ದಿದ್ದು, ವಿದ್ಯುತ್‌ ಕಂಬ ಕೂಡ ರಸ್ತೆಗೆ ಅಡ್ಡಲಾಗಿ ಬಿದ್ದಿದೆ.

ಗುಡ್ಡಕ್ಕೆ ಶಾಲಾ ಬಸ್‌ ಡಿಕ್ಕಿ: ಕಾರವಾರ ತಾಲ್ಲೂಕಿನ ಮುದಗಾ ಬಳಿ ಶಾಲಾ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಗುಡ್ಡಕ್ಕೆ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಆಗಿಲ್ಲ.

ಲೈನ್‌ಮನ್‌ಗೆ ವಿದ್ಯುತ್‌ ಸ್ಪರ್ಶ: ನಗರದ ಸರ್ಕಾರಿ ಪಿಯು ಕಾಲೇಜು ಬಳಿಯ ವಿದ್ಯುತ್‌ ಕಂಬದಲ್ಲಿ ದುರಸ್ತಿ ಕೆಲಸ ಮಾಡುತ್ತಿದ್ದ ಲೈನ್‌ಮನ್‌ ಶಿವಲಿಂಗಯ್ಯ ಅವರಿಗೆ ವಿದ್ಯುತ್‌ ಸ್ಪರ್ಶವಾಗಿ ಗಾಯಗೊಂಡಿದ್ದು, ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಹಗಲಿರುಳು ಮಳೆ
ಹಳಿಯಾಳ: ಕಳೆದ ಮೂರು ವರ್ಷಗಳಿಂದ ಭೀಕರ ಬರಗಾಲ ಬಿದ್ದ ಪರಿಣಾಮ ಹನಿಯೂ ನೀರು ಹರಿಯದೇ ಇದ್ದ ತಾಲ್ಲೂಕಿನ ಮಂಗಳವಾಡ ಗ್ರಾಮದ ಹಳ್ಳಕ್ಕೆ ನಿರಂತರ ಮಳೆ ಬಿದ್ದ ಪರಿಣಾಮ ಗುರುವಾರದಂದು ನೀರು ಹರಿಯಲಾರಂಭಿಸಿದೆ.

ಕಳೆದ ಮೂರು ದಿನಗಳಿಂದ ತಾಲ್ಲೂಕಿನಾದ್ಯಂತ ಮಳೆ ಚುರುಕು ಗೊಂಡಿದ್ದು, ಹಗಲಿರುಳು ಮಳೆ ಸುರಿ ಯುತ್ತಿದೆ. ಕಬ್ಬು, ಹತ್ತಿ, ಭತ್ತ, ಗೋವಿನ ಜೋಳ ತಾಲ್ಲೂಕಿನಲ್ಲಿ ಬೆಳೆದಿದ್ದು, ಹತ್ತಿ, ಕಬ್ಬು, ಗೋವಿನ ಜೋಳ ಫಸಲು ಈವರೆಗೂ ಉತ್ತಮವಾಗಿ ಬೆಳೆದಿದೆ. ಭತ್ತಕ್ಕೆ ಇನ್ನೂ ಮಳೆಯ ಪ್ರಮಾಣ ಹೆಚ್ಚು ಬೇಕಾಗಿದೆ.

ಪಟ್ಟಣದ ಬಹುತೇಕ ಕೆರೆಗಳಲ್ಲಿ ನೀರು ಶೇಖರಣೆಯಾಗಿದೆ. ಗ್ರಾಮೀಣ ಭಾಗದಲ್ಲಿ ವಿಆರ್ ಡಿಎಂ ಟ್ರಸ್ಟ್‌ ಹಾಗೂ ಉದ್ಯಮಿಗಳ ಸಹಕಾರದಿಂದ ಕೆರೆಗಳ ಹೂಳೆತ್ತುವ ಕಾಮಗಾರಿ ಕೈಗೊಂಡಿದ್ದ ಕೆರೆಗಳಲ್ಲಿಯೂ ಅಲ್ಪ ಪ್ರಮಾಣದಲ್ಲಿ ನೀರು ಶೇಖರಣೆಯಾಗಿದೆ. ಕ್ಯಾತನಗೇರಾ ಗ್ರಾಮದಲ್ಲಿ ಗ್ರಾಮಸ್ಥರೇ ನಾಲಾಗಳಿಗೆ ಪೈಪಲೈನ್‌ ಜೋಡಿಸುವ ಮೂಲಕ ಕೆರೆಗೆ ನೀರು ತುಂಬಿಸಿದ್ದಾರೆ.ಗುರುವಾರ 32 ಮಿ.ಮೀ ಮಳೆಯಾಗಿದ್ದು, ಈವರೆಗೂ 544.9 ಮಿ.ಮೀ ಮಳೆಯಾಗಿದೆ. ಕಳೆದ ವರ್ಷ ಈ ದಿನದ ವರೆಗೆ ಒಟ್ಟೂ 563.7 ಮಿ. ಮೀ ಮಳೆಯಾಗಿತ್ತು.

ವಿದ್ಯುತ್, ದೂರವಾಣಿ ಸಂಪರ್ಕದಲ್ಲಿ ವ್ಯತ್ಯಯ
ಯಲ್ಲಾಪುರ: ತಾಲ್ಲೂಕಿನಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆ ಗುರುವಾರವೂ ಮುಂದುವರಿದಿದ್ದು, ಪಟ್ಟಣವೂ ಸೇರಿದಂತೆ ತಾಲ್ಲೂಕಿ ನಾದ್ಯಂತ ವಿದ್ಯುತ್, ದೂರವಾಣಿ ಸಂಪರ್ಕದಲ್ಲಿ ವ್ಯತ್ಯಯ ಉಂಟಾಗಿದೆ.  ಗುರುವಾರ ಬೆಳಿಗ್ಗೆ ಮಳೆ ಮಾಪನ 77.6 ಮಿ.ಮೀ. ಆಗಿದ್ದು ಇದುವರೆಗೆ 1043.4 ಮಿ.ಮೀ ಆಗಿದೆ ಇದು ಕಳೆದ ಬಾರಿಗಿಂತ 114.2 ಮಿ.ಮೀ. ಹೆಚ್ಚಾಗಿದೆ.

ಪಟ್ಟಣದಲ್ಲಿ ಜೋರಾದ ಮಳೆಯಿಂದಾಗಿ ಗಟಾರದ ನೀರು ರಸ್ತೆಯ ಮೇಲೇ ಹರಿಯುವಂತಾಗಿದ್ದು, ಶಿವಾಜಿ ಸರ್ಕಲ್, ಪೊಲೀಸ್ ಠಾಣೆ ಎದುರು, ತಹಶೀಲ್ದಾರ್ ಕಚೇರಿ ಬಳಿ ಸೇರಿದಂತೆ ವಿವಿಧೆಡೆ ರಸ್ತೆಯ ಮೇಲೆ ನೀರು ತುಂಬಿ ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಪಾದಚಾರಿಗಳಿಗೆ ಸಂಚರಿಸಲು ಸ್ಥಳವಿಲ್ಲದೇ ಪರದಾಡುವಂತಾಗಿದೆ.  ತಾಲ್ಲೂಕಿನ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿದ್ದು, ಗಾಳಿ ಮಳೆಗೆ ಅಲ್ಲಲ್ಲಿ ಮರಗಳು ಧರೆಗುರುಳಿವೆ.

ವ್ಯಾಪಕ ಮಳೆ-ಗಾಳಿಯಿಂದಾಗಿ ತಾಲ್ಲೂಕಿನ ಉಮ್ಮಚಗಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ತಾರೆಹಳ್ಳಿಯ ರಾಮ ವೆಂಕಟ ಪೂಜಾರಿ ಅವರ ಮನೆಯ ಮೇಲೆ ಮರ ಬಿದ್ದು ₹ 40,000 ಹಾನಿಯಾಗಿದೆ. ಉಮ್ಮಚಗಿ ಕೋಟೆಮನೆಯ ಕಮಲಾ ನಾಯ್ಕ ಅವರಿಗೆ ಸೇರಿದ ಕೊಟ್ಟಿಗೆಯ ಮೇಲೆ ಮರ ಬಿದ್ದು, ₹ 15000 ಹಾನಿಯಾಗಿದೆ. ಉಮ್ಮಚಗಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಗ. ರಾ. ಭಟ್ಟ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಉಕ್ಕೇರಿದ ಅಘನಾಶಿನಿ : ಗದ್ದೆಗಳು ಜಲಾವೃತ
ಕುಮಟಾ: ಕಳೆದ ಎರಡು ದಿನಗಳಿಂದ ಕುಮಟಾ ಹಾಗೂ ಘಟ್ಟದ ಮೇಲಿನ ತಾಲ್ಲೂಕುಗಳಲ್ಲಿ ಸುರಿದ ಮಳೆಯಿಂದಾಗಿ ಗುರುವಾರ ಇಲ್ಲಿಯ ಅಘನಾಶಿನಿ ನದಿ ಉಕ್ಕಿ ಹರಿಯಿತು. ತಾಲ್ಲೂಕಿನ ಬೊಗರಿಬೈಲ, ಕರ್ಕಿಮಕ್ಕಿ,ಮುಸುಗುಪ್ಪಾ ಮುಂತಾದಡೆ ಭತ್ತದ ನಾಟಿ ಮಾಡಿದ ಗದ್ದೆಗಳು ಜಲಾವೃತಗೊಂಡವು.

‘ಸಿದ್ದಾಪುರದಲ್ಲಿ ಗುರುವಾರ ಮಳೆ ಪ್ರಮಾಣ ಕಡಿಮೆಯಾಗಿದ್ದರಿಂದ ಸಂಜೆ ಹೊತ್ತು ಅಘನಾಶಿನಿ ನದಿಯ ಪ್ರವಾಹದಲ್ಲಿ ಇಳಿಮುಖವಾಗಿದೆ. ಆದರೂ ಮುನ್ನೆಚ್ಚರಿಕೆ ಕ್ರಮವಾಗಿ ತಾಲ್ಲೂಕಿನ ದೀವಗಿ, ಮಿರ್ಜಾನ, ಕೊಡಕಣಿ ಮುಂತಾಡೆ ಗಂಜಿ ಕೇಂದ್ರಕ್ಕಾಗಿ ಸ್ಥಳ ಗುರುತು ಮಾಡಲಾಗಿದೆ.  ಅಘನಾಶಿನಿ ನದಿಯಲ್ಲಿ ಪ್ರವಾಹ ಉಂಟಾದರೆ ಮೊದಲು ತೊಂದರೆ ಉಂಟಾಗುವುದು ದ್ವೀಪ ಗ್ರಾಮವಾದ ಐಗಳಕುರ್ವೆ ಜನರಿಗೆ.

ಅವರನ್ನು ತಕ್ಷಣ ಪಕ್ಕದ ಕೊಡಕಣಿ ಗ್ರಾಮಕ್ಕೆ ಸ್ಥಳಾಂತರ ಮಾಡಲು ದೋಣಿ ಸೌಲಭ್ಯ ತಯಾರಿಯಲ್ಲಿರವಂತೆ ನೋಡಿಕೊಳ್ಳಲಾಗಿದೆ. ನೆರೆ ಪ್ರದೇಶದಿಂದ ಜನರನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸಲು ಖಾಗಿ ದೋಣಿಗಳವರ ಯಾದಿ ತಯಾರಿಸಿಟ್ಟುಕೊಳ್ಳಲಾಗಿದೆ. ತಾಲ್ಲೂಕಿನ ಯಾವುದೇ ಪ್ರದೇಶದಲ್ಲಿ ನೆರೆ ಬಂದರೂ ಸಂಪರ್ಕದಲ್ಲಿರುವಂತೆ ಸ್ಥಳೀಯ ಗ್ರಾಮ ಲೆಕ್ಕಾಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದರು.

ಒಂದು ವಾರದಿಂದ ಸಮುದ್ರದಲ್ಲಿ  ಅಬ್ಬರದ ಅಲೆಗಳು ಏಳುತ್ತಿರುವುದರಿಂದ ಇಲ್ಲಿಯ ಮೀನುಗಾರರು  ನೀರಿಗಿಳಿಯದೆ ಸಮುದ್ರ ಶಾಂತವಾಗುವುದನ್ನೇ ಕಾಯುತ್ತಿದ್ದಾರೆ. ಗುರುವಾರ ಕುಮಟಾದಲ್ಲಿ 52.3 ಮಿಲಿ ಮೀಟರ್ ಮಳೆ ಬಿದ್ದಿದ್ದು, ಇಲ್ಲಿವರೆಗೆ 1,866.1 ಮಿಲಿ ಮೀಟರ್ ಮಳೆ ದಾಖಲಾಗಿದೆ. ಕಳೆದ ವರ್ಷ ಈ ದಿವಸ ಒಟ್ಟೂ 2,038.6 ಮಿಲಿ ಮೀಟರ್ ಮಳೆ ಬಿದ್ದಿತ್ತು.

* * 

ವರದಾ ನದಿಯ ನೀರಿನ ಮಟ್ಟದಲ್ಲಿ ಏರಿಕೆ ಕಂಡುಬಂದಿದೆ. ಇದೇ ರೀತಿ ಮಳೆ ಮುಂದುವರಿದಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಬಹುದು
ಶ್ರೀಕೃಷ್ಣ ಕಾಮಕರ್
ಬನವಾಸಿ ಉಪತಹಶೀಲ್ದಾರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT