ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹದಗೆಟ್ಟ ಸಂಚಾರ ವ್ಯವಸ್ಥೆ: ಜನ ಹೈರಾಣು

Last Updated 21 ಜುಲೈ 2017, 8:36 IST
ಅಕ್ಷರ ಗಾತ್ರ

ಬಳ್ಳಾರಿ: ನಗರದಲ್ಲಿ ಸಂಚಾರ ವ್ಯವಸ್ಥೆಯು ಹದಗೆಟ್ಟಿದ್ದು ಪಾದಚಾರಿಗಳು ಮತ್ತು ವಾಹನ ಸವಾರರು ದಿನವೂ ಹೈರಾಣಾಗುತ್ತಿದ್ದಾರೆ. ನಗರದ ಪ್ರಮುಖ ವೃತ್ತ ಮತ್ತು ರಸ್ತೆಗಳಲ್ಲಿ ಪಾದಚಾರಿ ರಸ್ತೆಗಳನ್ನು ವರ್ತಕರು ಮತ್ತು ತಳ್ಳುಗಾಡಿ ಹೋಟೆಲ್‌ ಮಾಲೀಕರು ಒತ್ತುವರಿ ಮಾಡಿಕೊಂಡಿದ್ದಾರೆ, ಸಂಚಾರ ನಿಯಂತ್ರಣ ಪೊಲೀಸರ ಮೂಗಿನ ಕೆಳಗೇ ಈ ಅಕ್ರಮ ನಡೆಯುತ್ತಿರುವುದರಿಂದ ಜನ ಅಸಹಾಯಕರಾಗಿದ್ದಾರೆ ಎಂಬ ಆರೋಪ ನಿತ್ಯವೂ ಕೇಳಿ ಬರುತ್ತಿದೆ.

ಗಡಿಗಿ ಚೆನ್ನಪ್ಪ ವೃತ್ತ: ನಗರದ ಗಡಿಗಿ ಚೆನ್ನಪ್ಪ ವೃತ್ತಕ್ಕೆ ಸಂಪರ್ಕ ಕಲ್ಪಿಸುವ ಹಳೇ ಬಸ್‌ ನಿಲ್ದಾಣದ ರಸ್ತೆಯ ಎರಡೂ ಬದಿಯಲ್ಲಿ ಪಾದಚಾರಿ ರಸ್ತೆಯನ್ನು ಹಣ್ಣಿನ ವ್ಯಾಪಾರಿಗಳು ಮತ್ತು ತಳ್ಳು ಗಾಡಿ ಹೋಟೆಲ್‌ನವರು ಸಂಪೂರ್ಣವಾಗಿ ಒತ್ತುವರಿ ಮಾಡಿಕೊಂಡಿದ್ದಾರೆ.

ಪಾದಚಾರಿಗಳು ಅನಿವಾರ್ಯವಾಗಿ ಮುಖ್ಯ ರಸ್ತೆ ಯಲ್ಲಿ ಜೀವ ಹಿಡಿದುಕೊಂಡು ಓಡಾಡುತ್ತಿದ್ದಾರೆ. ಪರಿಸ್ಥಿತಿ ಸುಧಾರಿಸುವುದು ಯಾವಾಗ ಎನ್ನುತ್ತಾರೆ ನಗರದ ನಿವಾಸಿ ರಾಜಣ್ಣ.ಇದು ಇದೊಂದೇ ವೃತ್ತ–ರಸ್ತೆಯ ಪರಿಸ್ಥಿತಿ ಅಲ್ಲ. ಮೀನಾಕ್ಷಿ ವೃತ್ತ, ಬೆಂಗಳೂರು ರಸ್ತೆಯ ಉದ್ದಕ್ಕೂ ಪಾದಚಾರಿ ರಸ್ತೆಯನ್ನು ಅಂಗಡಿಗಳ ಮಾಲೀಕರು ಮತ್ತು ರಸ್ತೆ ಬದಿ ವ್ಯಾಪಾರಿಗಳು ಒತ್ತುವರಿ ಮಾಡಿದ್ದಾರೆ.

‘ಬೆಂಗಳೂರು ರಸ್ತೆ ಕಿರಿದಾಗಿದ್ದು ಎರಡೂ ಬದಿಯ ಪಾದಚಾರಿ ರಸ್ತೆಗಳು ಒತ್ತುವರಿ ಯಾಗಿರುವುದರಿಂದ ಪಾದಚಾರಿಗಳು ಮತ್ತು ದ್ವಿಚಕ್ರ ವಾಹನ ಸವಾರರು ಪರದಾಡುತ್ತಿದ್ದಾರೆ ಎಂಬುದು ಹೂವಿನ ಮಾರುಕಟ್ಟೆ ರಸ್ತೆ ನಿವಾಸಿ ಶೇಖರ ಅವರ ಅಸಮಾಧಾನ.

ಕನಕದುರ್ಗಮ್ಮ ವೃತ್ತ: ಕನಕ ದುರ್ಗಮ್ಮ ವೃತ್ತದ ಪಾದಚಾರಿ ರಸ್ತೆಗಳನ್ನೂ ಇತ್ತೀಚೆಗೆ ರಸ್ತೆಬದಿ ವ್ಯಾಪಾರಿಗಳು ಒತ್ತುವರಿ ಮಾಡಿದ್ದಾರೆ. ಎಸ್ಪಿ ವೃತ್ತದಲ್ಲಿಯೂ ಇದೇ ಪರಿಸ್ಥಿತಿ ಇದೆ. ಇಲ್ಲಿ, ಪಾದಚಾರಿ ರಸ್ತೆಯಲ್ಲಿ ನಿಲುಗಡೆ ಮಾಡುವಂತೆ ಬೈಕ್‌ ಸವಾರರಿಗೆ ಪೊಲೀಸರೇ ಸೂಚನೆ ನೀಡುತ್ತಾರೆ! ಒತ್ತುವರಿದಾರರನ್ನು ಪ್ರಶ್ನಿಸುವವರೇ ಇಲ್ಲದ ಸನ್ನಿವೇಶ ನಗರದಲ್ಲಿದೆ. ಪಾದಚಾರಿಗಳು ಮತ್ತು ವಾಹನ ಸವಾರರು ಉತ್ತಮ ಗುಣಮಟ್ಟದ ಸಂಚಾರ ವ್ಯವಸ್ಥೆಯ ಕೊರತೆಯಲ್ಲೇ ದಿನದೂಡುತ್ತಿದ್ದಾರೆ.

ನಮ್ಮದಲ್ಲ, ನಮ್ಮದಲ್ಲ: ಸುಗಮ ಸಂಚಾರ– ಪಾದಚಾರಿ ರಸ್ತೆ ಒತ್ತುವರಿ ಕುರಿತು ಪ್ರಶ್ನಿಸಿದರೆ ಪಾಲಿಕೆ ಅಧಿಕಾರಿಗಳು ಮತ್ತು ಪೊಲೀಸರು ‘ಅದು ನಮ್ಮ ಜವಾಬ್ದಾರಿಯಲ್ಲ ಅವರದು’ ಎಂದು ಪರಸ್ಪರರ ಕಡೆಗೆ ಬೆರಳು ತೋರಿಸುವ ಪರಿಪಾಠವೂ ಮುಂದುವರಿದಿದೆ. ಪಾಲಿಕೆ ಮತ್ತು ಪೊಲೀಸರ ನಿರಾಸಕ್ತಿ–ನಿರುತ್ಸಾಹವೂ ಸನ್ನಿವೇಶಕ್ಕೆ ತನ್ನ ಕೊಡುಗೆಯನ್ನು ನೀಡಿದೆ.

ಆಟೋರಿಕ್ಷಾಗಳ ಹಾವಳಿ: ಇತ್ತೀಚಿನ ದಿನಗಳಲ್ಲಿ ನಗರದ ಪ್ರಮುಖ ವೃತ್ತ ಮತ್ತು ರಸ್ತೆಗಳಲ್ಲಿ ಆಟೋರಿಕ್ಷಾಗಳ ಹಾವಳಿ ಹೆಚ್ಚಿದೆ.ಪ್ರಯಾಣಿಕರನ್ನು ಹತ್ತಿಸಿಕೊಳ್ಳುವ ಸಲುವಾಗಿ ಆಟೋರಿಕ್ಷಾಗಳು ನಿಯಮ ಮೀರಿ ರಸ್ತೆಯಲ್ಲಿ ಅಡ್ಡಾದಿಡ್ಡಿ ಸಂಚರಿಸುತ್ತವೆ. ಪ್ರಯಾಣಿಕರ ಹುಡುಕಾಟದಲ್ಲಿ ನಿಧಾನವಾಗಿ ಸಂಚರಿಸುವುದರಿಂದ ವಾಹನಗಳ ಸರಾಗ ಸಂಚಾರಕ್ಕೂ ಅಡಚಣೆ ಉಂಟಾಗುತ್ತಿದೆ.

ರಸ್ತೆಯಲ್ಲಿ ಎರಡು ಆಟೋಗಳು ಅಕ್ಕ–ಪಕ್ಕ ನಿಂತು ಪೈಪೋಟಿ ನೀಡುವುದರಿಂದ ಸಂಚಾರ ಇನ್ನಷ್ಟು ಇಕ್ಕಟ್ಟಿಗೆ ಸಿಲುಕುವ ಸನ್ನಿವೇಶಗಳು ದಿನವೂ ಕಂಡುಬರುತ್ತವೆ. ಇದನ್ನು ಪ್ರಶ್ನಿಸುವ ಬೈಕ್‌ ಸವಾರರಿಗೆ ಆಟೋರಿಕ್ಷಾ ಚಾಲಕರು ಧಮಕಿ ಹಾಕುವ ಪ್ರಸಂಗಗಳೂ ನಡೆದಿವೆ. ಆಟೋರಿಕ್ಷಾ  ನಿಲ್ದಾಣವಿದ್ದರೂ ಪ್ರಯೋಜನ ಇಲ್ಲದಂತಾಗಿದೆ.

ಸುಗಮ ಸಂಚಾರ: ಇಂದು ಸಭೆ
ನಗರದಲ್ಲಿ ಸುಗಮ ಸಂಚಾರ ವ್ಯವಸ್ಥೆ ಕುರಿತು ಚರ್ಚಿಸಲು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆರ್‌.ಚೇತನ್‌ ಅವರು ಬಿಡಿಎಎ ಸಭಾಂಗಣದಲ್ಲಿ ಸಾರ್ವಜನಿಕರ, ಸಂಘ–ಸಂಸ್ಥೆ ಪ್ರತಿನಿಧಿಗಳ ಸಭೆಯನ್ನು ಜುಲೈ 21ರಂದು ಸಂಜೆ 4ಕ್ಕೆ ಏರ್ಪಡಿಸಿದ್ದಾರೆ.

ಮೇಯರ್‌, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು, ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು, ವಿವಿಧ ಕಾಲೇಜುಗಳ ಪ್ರಾಂಶುಪಾಲರು, ಲಾರಿ, ಚಿತ್ರಮಂದಿರ, ಹೋಟೆಲ್‌, ಕಿರಾಣಿ ಅಂಗಡಿಗಳ ಮಾಲೀಕರು, ಆಭರಣ, ಬಟ್ಟೆ ವ್ಯಾಪಾರಿಗಳು ಮತ್ತು ಆಟೋರಿಕ್ಷಾ ಚಾಲಕರ ಸಂಘಗಳ ಸದಸ್ಯರನ್ನು ಸಭೆಗೆ ಆಹ್ವಾನಿಸಲಾಗಿದೆ.

* * 

ರಸ್ತೆ ಒತ್ತುವರಿ, ಆಟೋರಿಕ್ಷಾ ಚಾಲಕರ ಅಡ್ಡಾದಿಡ್ಡಿ ಸಂಚಾರ ಸೇರಿದಂತೆ ಹಲವು ವಿಷಯಗಳ ಕುರಿತು ಸಭೆಯಲ್ಲಿ ಅಭಿಪ್ರಾಯ ಸಂಗ್ರಹಿಸಿ ಕ್ರಮ ಕೈಗೊಳ್ಳಲಾಗುವುದು
ಆರ್‌.ಚೇತನ್‌
ಎಸ್ಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT