ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಎದುರಾದ ತಡೆಯಾಜ್ಞೆಯ ವಿಘ್ನ

Last Updated 21 ಜುಲೈ 2017, 8:51 IST
ಅಕ್ಷರ ಗಾತ್ರ

ವಿಜಯಪುರ: ಪುರಸಭೆಯ 2 ಅವಧಿಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಜುಲೈ 24 ರಂದು ನಿಗದಿಯಾಗಿದ್ದ ಚುನಾವಣೆಗೆ ಮತ್ತೆ ತಡೆಯಾಜ್ಞೆಯ ವಿಘ್ನ ಎದುರಾಗಿದೆ.
ಹೆಚ್ಚಿನ ಸ್ಥಾನಗಳಲ್ಲಿ ಆಯ್ಕೆಯಾಗಿರುವ ಕಾಂಗ್ರೆಸ್ ಸದಸ್ಯರಿಗೆ ಅಭಿವೃದ್ಧಿಗಿಂತ ಸ್ವಾರ್ಥ ಚಿಂತನೆ ಹೆಚ್ಚಾಗಿದೆ ಎಂದು ಬಿಜೆಪಿ ನಗರ ಘಟಕದ ಅಧ್ಯಕ್ಷ ವಿಜಯಬಾಬು ಆರೋಪಿಸಿದರು.

ಪುರಸಭೆಯ 23 ವಾರ್ಡುಗಳ ಪೈಕಿ 16 ವಾರ್ಡುಗಳಲ್ಲಿ ಕಾಂಗ್ರೆಸ್ ಸದಸ್ಯರುಗಳನ್ನು ಜನರು ಆಯ್ಕೆ ಮಾಡಿದ್ದಾರೆ. ಜೆಡಿಎಸ್ ಪಕ್ಷದಿಂದ ಆಯ್ಕೆಯಾಗಿರುವ ಸದಸ್ಯರುಗಳು ಅವರೊಂದಿಗೆ ಸೇರಿಕೊಂಡಿದ್ದಾರೆ. ಎಲ್ಲಾ ವಾರ್ಡುಗಳಲ್ಲಿ ಕುಡಿಯುವ ನೀರಿನ ಸಮಸ್ಯೆ, ಕಸವಿಲೇವಾರಿ ಸಮಸ್ಯೆ, ಸರ್ಕಾರದಿಂದ ಬಿಡುಗಡೆಯಾಗುತ್ತಿರುವ ಅನುದಾನಗಳ ಬಳಕೆ, ಸೇರಿದಂತೆ ಹಲವಾರು ಗಂಭೀರವಾದ ಸಮಸ್ಯೆಗಳಿದ್ದರೂ ಅಧ್ಯಕ್ಷಸ್ಥಾನಕ್ಕೆ ನ್ಯಾಯಾಲಯದ ಮೊರೆ ಹೋಗಿರುವ ಸದಸ್ಯರ ಸ್ವಾರ್ಥ ಚಿಂತನೆಯಿಂದಾಗಿ ಇಲ್ಲಿನ ಜನರು ಸಂಕಷ್ಟಗಳನ್ನು ಅನುಭವಿಸುತ್ತಿದ್ದಾರೆ ಎಂದು ದೂರಲಾಗಿದೆ.

2016 ರ ಸೆಪ್ಟೆಂಬರ್ 12 ರಿಂದಲೂ ಅಧ್ಯಕ್ಷರಿಲ್ಲದ ಕಾರಣ ಆಡಳಿತಾಧಿಕಾರಿಗಳನ್ನು ಸರ್ಕಾರ ನೇಮಕ ಮಾಡಿದ್ದರು ಜನರ ನಿರೀಕ್ಷೆಗೆ ತಕ್ಕಂತೆ ಅಭಿವೃದ್ಧಿಯಾಗದೆ ಇರುವುದು ಇಲ್ಲಿನ ಜನರ ದುರಾದೃಷ್ಟವೇ ಸರಿ.

‘ಇಲ್ಲಿನ ಜನರು ಕಾಂಗ್ರೆಸ್ ಪಕ್ಷದ ಸದಸ್ಯರುಗಳನ್ನು ಹೆಚ್ಚಿನ ಮತಗಳಿಂದ ಆಯ್ಕೆ ಮಾಡಿ ಕಳುಹಿಸಿದರೂ ಜನರು ಕೊಟ್ಟಿರುವ ಅಧಿಕಾರವನ್ನು ಸದ್ಭಳಕೆ ಮಾಡಿಕೊಂಡು ತಾವು ಸೇವೆ ಮಾಡಲು ಆಯ್ಕೆಯಾಗಿದ್ದೇವೆ ಎಂಬುದನ್ನು ಮರೆತಿರುವ  ಸದಸ್ಯರು, ಕೇವಲ ಅಧಿಕಾರದ ದಾಹಕ್ಕಾಗಿ ಮತ ನೀಡಿದ ಜನರ ಅಶೋತ್ತರಗಳನ್ನು ಬಲಿಕೊಡುತ್ತಿದ್ದು ಮುಂದಿನ ದಿನಗಳಲ್ಲಿ ಹೋರಾಟದ ಹಾದಿ ಅನಿವಾರ್ಯವಾಗಲಿದೆ’ ಎಂದರು.

ಬಿಎಸ್ಎನ್ಎಲ್ ನಿರ್ದೇಶಕ ಕನಕರಾಜು ಮಾತನಾಡಿ, ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಸ್ಥಳೀಯ ಕಾಂಗ್ರೆಸ್ ನಲ್ಲಿನ ಗುಂಪುಗಾರಿಕೆಯನ್ನು ಸರಿಪಡಿಸಿ, ಜನರಿಗೆ ಆಗುತ್ತಿರುವ ಅನ್ಯಾಯವನ್ನು ತಡೆಯಬೇಕು ಎಂದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾರಾಯಣಸ್ವಾಮಿ ಮಾತನಾಡಿ, ‘ಜನರು ನೀಡಿರುವಂತಹ ಅಧಿಕಾರವನ್ನು ಅವರ ಸೇವೆಗಾಗಿ ಉಪಯೋಗ ಮಾಡಬೇಕಾಗಿರುವುದು ಪ್ರತಿಯೊಬ್ಬ ಜನಪ್ರತಿನಿಧಿಗಳ ಕರ್ತವ್ಯ. ಇಲ್ಲಿನ ಪುರಸಭಾ ಸದಸ್ಯರುಗಳು ಅದನ್ನು ಮಾಡಿಲ್ಲ ಎಂದರು. ನಗರ ಘಟಕದ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT