ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆಟೊಗಳ ಕ್ರಮಸಂಖ್ಯೆ ಕಡ್ಡಾಯ’

Last Updated 21 ಜುಲೈ 2017, 8:59 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ‘ಸೂಕ್ತ ದಾಖಲಾತಿ ನೀಡಿ ಪೊಲೀಸ್‌ ಠಾಣೆಯಿಂದ ಕ್ರಮ ಸಂಖ್ಯೆಯನ್ನು ಪಡೆಯದಿದ್ದರೆ ನಗರ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಸಂಚರಿಸುವ ಆಟೊ ಮಾಲೀಕರ ವಿರುದ್ಧ ದೂರು ದಾಖಲಿಸಲಾಗುವುದು’ ಎಂದು ಸರ್ಕಲ್‌ ಇನ್‌ಸ್ಪೆಕ್ಟರ್‌ ಜಿ.ಸಿದ್ದರಾಜು ತಿಳಿಸಿದ್ದಾರೆ. ಗುರುವಾರ ನಗರದ ವೆಂಕಟೇಶ್ವರ ಕಲ್ಯಾಣ ಮಂದಿರದಲ್ಲಿ ಆಟೊ ಚಾಲಕರಿಗೆ ನಡೆದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಮಾನವೀಯ ದೃಷ್ಟಿಯಿಂದ ಆಟೊ ಚಾಲಕರ ವಿರುದ್ದ ಕೆಲ ದಾಖಲೆಗಳು ಸರಿಯಾಗಿ ಇಲ್ಲದಿದ್ದರು ಸಹ ಕಾನೂನು ಕ್ರಮ ಕೈಗೊಳ್ಳದೆ ಅವಕಾಶ ನೀಡಲಾಗಿತ್ತು. ಆದರೆ ಕಾನೂನು ಪ್ರಕಾರ ಚಾಲನಾ ಪರವಾನಿಗೆ ಸೇರಿದಂತೆ ಎಲ್ಲ ಅಗತ್ಯ ದಾಖಲಾತಿಗಳನ್ನು ಹೊಂದಿದ್ದರೆ ಮಾತ್ರ ಆಟೊಗಳಿಗೆ ಸಂಚರಿಸಲು ಅವಕಾಶ ನೀಡಲಾಗುವುದು’ ಎಂದರು.

ಆಟೊಗಳಲ್ಲಿ ಮಿತಿ ಮೀರಿ ಪ್ರಯಾಣಿಕರನ್ನು ತುಂಬುತ್ತಿರುವ ಬಗ್ಗೆ ಸಾರ್ವಜನಿಕರಿಂದ ವ್ಯಾಪಕ ದೂರುಗಳು ಬರುತ್ತಿವೆ ಎಂದರು. ಹೊರಗಿನವರು ಯಾರೇ ನಗರಕ್ಕೆ ಬಂದರೆ ಇಲ್ಲಿನ ಸಂಚಾರ ವ್ಯವಸ್ಥೆಯನ್ನು ನೋಡಿದರೆ ಅರ್ಥವಾಗುತ್ತದೆ. ಇಲ್ಲಿ ಎಷ್ಟರ ಮಟ್ಟಿಗೆ ಶಿಸ್ತು, ಕಾನೂನು ಇದೆ ಎನ್ನುವುದು. ಹೀಗಾಗಿ ಆಟೊ ಚಾಲಕರು ಕಾನೂನು ಪಾಲಿಸದಿದ್ದರೆ ಅನಿವಾರ್ಯವಾಗಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.

ದೇವನಹಳ್ಳಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಪವಿತ್ರ ಮಾತನಾಡಿ, ‘ನಗರದಲ್ಲಿನ ಶೇ 75ಕ್ಕೂ  ಹೆಚ್ಚಿನ ಆಟೊಗಳಿಗೆ ಸೂಕ್ತ ದಾಖಲಾತಿಗಳೆ ಇಲ್ಲದಾಗಿವೆ. ಪ್ರಯಾಣಿಕರ ಹಿತದೃಷ್ಟಿಯಿಂದ ಎಲ್ಲ ಆಟೊಗಳು ಕಡ್ಡಾಯವಾಗಿ ಮೀಟರ್‌ಗಳನ್ನು ಅಳವಡಿಸಿಕೊಳ್ಳಲೇ ಬೇಕು’ ಎಂದರು.

ಚಾಲನಾ ಪರವಾನಗಿಯನ್ನು ಹೊಂದಿಲ್ಲದಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ಚಾಲನಾ ಪರವಾನಗಿ ಸೇರಿದಂತೆ ಯಾವುದೇ ರೀತಿಯ ದಾಖಲೆಗಳನ್ನು ಹೊಂದಲು ಆರ್‌ಟಿಒ ಕಚೇರಿಗೆ ನೇರವಾಗಿ ಬನ್ನಿ, ಮಧ್ಯವರ್ತಿಗಳ ಮೂಲಕ ಬರಬೇಡಿ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಡಿಎಸ್‌ಪಿ ವೈ.ನಾಗರಾಜು ಮಾತನಾಡಿ, ‘ಚಾಲನ ಪರವಾನಗಿ (ಡಿಎಲ್‌) ಇಲ್ಲದೇ ಇದ್ದರೆ ಕಡ್ಡಾಯವಾಗಿ ದಂಡ ವಿಧಿಸಲಾಗುವುದು. ಆಟೊ ಚಾಲಕರ ಅನುಕೂಲಕ್ಕಾಗಿ ನಗರದಲ್ಲಿ ಚಾಲನ ಪರವಾನಗಿ ಶಿಬಿರ ನಡೆಸಲಾಗುವುದು. ಈ ಸಂದರ್ಭದಲ್ಲಿ 8ನೇ ತರಗತಿ ಉತ್ತೀರ್ಣರಾಗಿರುವ ಆಟೊ ಚಾಲಕರು ಸೂಕ್ತ ದಾಖಲಾತಿಗಳನ್ನು ಹಾಜರುಪಡಿಸಿ ಡಿಎಲ್‌ ಹೊಂದಲೇ ಬೇಕು. ಇಲ್ಲವಾದರೆ ನಗರದಲ್ಲಿ ಆಟೊಗಳನ್ನು ಸಂಚರಿಸಲು ಅವಕಾಶ ನೀಡುವುದಿಲ್ಲ ಎಂದು ಹೇಳಿದರು.

ಆಟೊ ಚಾಲಕರಿಗೆ ಸಮವಸ್ತ್ರ ಕಡ್ಡಾಯ
ಆಟೊರಿಕ್ಷಾ ಡ್ರೈವರ್ಸ್‌ ಯೂನಿಯನ್‌(ಎಆರ್‌ಡಿಯು) ಕಾರ್ಯದರ್ಶಿ ಶೇಖ್‌ ಮುಸ್ತಾಫ ಮಾತನಾಡಿ, ‘ಆಟೊ ಚಾಲಕರು ಸಮವಸ್ತ್ರಗಳನ್ನು ಹೊಂದಿದ್ದರೆ ಮಾತ್ರ ಆತನ ಬಳಿ ಎಲ್ಲ ದಾಖಲೆಗಳು ಇರುತ್ತವೆ ಎಂದು ನಂಬುತ್ತಾರೆ. ಹೀಗಾಗಿ ಮೊದಲು ಚಾಲಕರು ಸಮವಸ್ತ್ರಗಳನ್ನು ಕಡ್ಡಾಯವಾಗಿ ಧರಿಸುವುದನ್ನು ಕಲಿಯಬೇಕು’ ಎಂದರು.

ಮೊದಲು ನಾವು ಸಾಧ್ಯವಾದಷ್ಟು ಎಲ್ಲ ದಾಖಲೆಗಳನ್ನು ಹೊಂದುವುದರ ಕಡೆಗೆ ಪ್ರಥಮ ಆದ್ಯತೆ ನೀಡಬೇಕು. ಆ ನಂತರವು ಪೊಲೀಸರು, ಆರ್‌ಟಿಒ ಅಧಿಕಾರಿಗಳಿಂದ ತೊಂದರೆಯಾದರೆ ಆಗ ನಾವು ನ್ಯಾಯಕ್ಕಾಗಿ ಹೋರಾಟ ಮಾಡಬಹುದು.

ಸಾರಿಗೆ ಇಲಾಖೆಯಲ್ಲಿ ಈಗ ಇರುವ ಕಾನೂನಿಗಿಂತಲು ಕಠಿಣವಾದ ಕಾನೂನುಗಳು ಬರಲಿವೆ. ಹೀಗಾಗಿ ಚಾಲಕರು ಸಂಘಟಿತರಾಗಿ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡುವ ಕಡೆಗೆ ಶ್ರಮಿಸಬೇಕಿದೆ ಎಂದರು.

* * 

15 ದಿನಗಳ ಒಳಗೆ ನಗರದ ಎಲ್ಲ ಆಟೋ ಚಾಲಕರು ಸೂಕ್ತ ದಾಖಲಾತಿ ಠಾಣೆಗೆ ನೀಡಿ ಕ್ರಮ ಸಂಖ್ಯೆಗಳನ್ನು ಪಡೆಯಬೇಕು. ಇಲ್ಲವಾದರೆ ಕಾನೂನು  ಕ್ರಮ ಕೈಗೊಳ್ಳಲಾಗುವುದು
ಬಿ.ಎ. ಪಾಟೀಲ್‌, ನಗರ ಪೊಲೀಸ್‌ ಠಾಣೆ ಸಬ್‌ ಇನ್‌ಸ್ಪೆಕ್ಟರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT