ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರು ಪೂರೈಕೆ ಯೋಜನೆಗೆ ಪ್ರಸ್ತಾವ ಸಲ್ಲಿಸಿ

Last Updated 21 ಜುಲೈ 2017, 9:11 IST
ಅಕ್ಷರ ಗಾತ್ರ

ಬಿಡದಿ (ರಾಮನಗರ): ಪಟ್ಟಣದ ಜನರಿಗೆ ಅವಶ್ಯವಾದ ಕುಡಿಯುವ ನೀರು ಯೋಜನೆ, ಘನತ್ಯಾಜ್ಯ ನಿರ್ವಹಣೆ ಮತ್ತು ಪುರಸಭೆಗೆ ಹೊಸ ಆಡಳಿತ ಕಚೇರಿಯ ನಿರ್ಮಾಣಕ್ಕೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸುವಂತೆ ಪೌರಾಡಳಿತ ಸಚಿವ ಈಶ್ವರ ಖಂಡ್ರೆ ಅಧಿಕಾರಿಗಳಿಗೆ ಸೂಚಿಸಿದರು.

ಇಲ್ಲಿನ ಪುರಸಭೆಯ ಸಭಾಂಗಣದಲ್ಲಿ ಗುರುವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಜನಸಂಖ್ಯೆ ಹೆಚ್ಚಿದಂತೆಲ್ಲ ಅವರಿಗೆ ಅವಶ್ಯವಾದ ಮೂಲ ಸೌಕರ್ಯ ಒದಗಿ ಸುವುದು ನಗರ ಸ್ಥಳೀಯ ಸಂಸ್ಥೆಗಳಿಗೆ ಸವಾಲಿನ ಕೆಲಸ.

ಅದರಲ್ಲೂ ಗ್ರಾಮ ಪಂಚಾಯಿತಿಯಿಂದ ಮೇಲ್ದರ್ಜೆಗೆ ಏರಿರುವ ಬಿಡದಿಗೆ ಇದು ಕಷ್ಟದ ಮಾತೇ ಸರಿ. ಶಾಶ್ವತ ನೀರು ಪೂರೈಕೆ ಯೋಜನೆ  ಸಿದ್ಧಪಡಿಸಿ ಇಲಾಖೆಗೆ ಪ್ರಸ್ತಾವ ಕಳುಹಿಸಿದರೆ ಅದಕ್ಕೆ ಶೀಘ್ರ ಅನುಮತಿ ನೀಡಲಾಗುವುದು. ನಗರೋತ್ಥಾನ–3 ಯೋಜನೆಯ ಅಡಿ ಈಗಾಗಲೇ ಪಟ್ಟಣಕ್ಕೆ ₹10 ಕೋಟಿ ನೀಡಲಾಗಿದ್ದು, ಅಗತ್ಯ ಯೋಜನೆಗಳಿಗೆ ನೆರವು ಒದಗಿಸಲಾಗುವುದು ಎಂದು ಭರವಸೆ ನೀಡಿದರು.

ಪುರಸಭೆ ಆಯುಕ್ತ ಶಿವಕುಮಾರ್ ಹಾಗೂ ರಾಮನಗರ ನಗರಸಭೆ ಆಯುಕ್ತ ಕೆ. ಮಾಯಣ್ಣಗೌಡ ಸಭೆಗೆ ಮಾಹಿತಿ ನೀಡಿ ‘ಬಿಡದಿ ಪಟ್ಟಣಕ್ಕೆ ಸದ್ಯ ನದಿ ನೀರು ಲಭ್ಯ ಇಲ್ಲದಿರುವ ಕಾರಣ ಹೆಚ್ಚಾಗಿ ಕೊಳವೆಬಾವಿಗಳನ್ನೇ ಅವಲಂಬಿಸಿದ್ದೇವೆ.

ಮಂಚನಬೆಲೆ ಜಲಾಶಯದಿಂದ ನೆಲ್ಲಿ ಗುಡ್ಡ ಕೆರೆಗೆ ನೀರು ತುಂಬಿಸಿ ಅಲ್ಲಿಂದ ನೀರು ಪೂರೈಕೆ ಮಾಡುವ ಯೋಜನೆಯ ಸರ್ವೆ ಕಾರ್ಯವು ಈಗಾಗಲೇ ನಡೆದಿದೆ. ಇದಲ್ಲದೆ ಕಾವೇರಿ ಕಣಿವೆಯಿಂದ ಬಿಡದಿ, ರಾಮನಗರ ಹಾಗೂ ಚನ್ನಪಟ್ಟಣಕ್ಕೆ ಸುಮಾರು ₨650 ಕೋಟಿ ವೆಚ್ಚದಲ್ಲಿ ನಿತ್ಯ 40 ಎಂಎಲ್‌ಡಿಯಷ್ಟು ನೀರು ಪೂರೈಸುವ ಯೋಜನೆಯನ್ನು ಸರ್ಕಾರದ ಮುಂದೆ ಇಡಲಾಗಿದೆ’ ಎಂದು ವಿವರಿಸಿದರು.

ತ್ಯಾಜ್ಯ ನಿರ್ವಹಣೆ: ಬಿಡದಿ ಪಟ್ಟಣಕ್ಕೆ ಒಳಚರಂಡಿ ವ್ಯವಸ್ಥೆ ಇಲ್ಲದಿರುವ ಬಗ್ಗೆ ಹಾಗೂ ಘನತ್ಯಾಜ್ಯವನ್ನು ವೈಜ್ಞಾನಿಕವಾಗಿ ನಿರ್ವಹಿಸದೇ ಇರುವ ಬಗ್ಗೆ ಸಚಿವರು ಅಸಮಾಧಾನ ವ್ಯಕ್ತಪಡಿಸಿದರು. ‘ಕಲ್ಲುಗೋಪನಹಳ್ಳಿಯ ಗಣಿ ಬಾಧಿತ ಪ್ರದೇಶದ ಹಳ್ಳದಲ್ಲಿ ತ್ಯಾಜ್ಯ ಸಂಸ್ಕರಣೆಗೆ ಯೋಜಿಸಲಾಗಿದೆ. ಆದರೆ ಇದಕ್ಕೆ ಸ್ಥಳೀಯರ ವಿರೋಧ ಇದೆ’ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಸೂಕ್ತ ಜಾಗ ಗುರುತಿಸಿ, ಯೋಜನೆ ಬಗ್ಗೆ ಪ್ರಸ್ತಾವ ಸಲ್ಲಿಸುವಂತೆ ಸಚಿವರು ಜಿಲ್ಲಾಧಿಕಾರಿ ಬಿ.ಆರ್‌.ಮಮತಾ ಅವರಿಗೆ ಸೂಚಿಸಿದರು.

ವಸತಿರಹಿತರಿಗೆ ಸೂರು: ಪುರಸಭೆ ವ್ಯಾಪ್ತಿಯಲ್ಲಿ ವಸತಿರಹಿತರನ್ನು ಗುರುತಿಸಿ ಅವರಿಗೆ ಸರ್ಕಾರದ ಯೋಜನೆಗಳ ಅಡಿ ಮನೆ ನಿರ್ಮಿಸಿಕೊಡಲು ಕ್ರಮ ಕೈಗೊಳ್ಳು ವಂತೆ ಸಚಿವರು ಸಲಹೆ ನೀಡಿದರು. ‘ಬಿಡದಿ ವ್ಯಾಪ್ತಿಯಲ್ಲಿ ಮನೆ ನಿರ್ಮಾಣಕ್ಕೆ ಸಹಾಯಧನ ಕೋರಿ 3703 ಅರ್ಜಿಗಳು ಬಂದಿವೆ. ಅಂತೆಯೇ ನಿವೇಶನ ರಹಿತರನ್ನು ಗುರುತಿಸಿ ಅವರಿಗೆ ಸೂರು ಕಲ್ಪಿಸಲು ಕ್ರಮ ಕೈಗೊಳ್ಳ ಲಾಗು ತ್ತಿದೆ’ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಪೌರಕಾರ್ಮಿಕರಿಗೆ ನೆರವು: ಪುರಸಭೆ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ 60 ಪೌರ ಕಾರ್ಮಿಕರಿಗೆ ಕನಿಷ್ಠ ವೇತನ ಮತ್ತು ಮೂಲ ಸೌಕರ್ಯಗಳು ತಲುಪುತ್ತಿ ರುವ ಬಗ್ಗೆ ಖಾತ್ರಿ ಮಾಡಿಕೊಳ್ಳುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು. ‘ಗ್ರಾಮ ಪಂಚಾಯಿತಿಗಳಿಂದ ಪುರ ಸಭೆಗೆ ಬಂದಿರುವ ನೌಕರರ ವೇತನ ಹೆಚ್ಚಿಸಬೇಕು. ಅವರ ಸೇವಾ ಅವಧಿ ಯನ್ನು ಪರಿಗಣಿಸಿ ಕಾಯಂ ಮಾಡ ಬೇಕು’ ಎಂದು ಪುರಸಭೆ ಸದಸ್ಯ ರಮೇಶ್‌ಕುಮಾರ್ ಮನವಿ ಮಾಡಿದರು.

‘ಗ್ರಾಮ ಪಂಚಾಯಿತಿಗಳಾಗಿದ್ದ ಸಂದರ್ಭ ಹಲವರು ಪಂಚಾಯಿ ತಿಗಳಿಂದ ಪರವಾನಗಿ ಪಡೆಯದೇ, ಕಂದಾಯ ಕಟ್ಟದೆಯೇ ಮನೆ ನಿರ್ಮಿಸಿ ಕೊಂಡಿದ್ದಾರೆ. ಅಂತಹ ಆಸ್ತಿಗಳು ಈಗ ಪುರಸಭೆ ವ್ಯಾಪ್ತಿಗೆ ಬಂದಿವೆ. ಇವು ಗಳನ್ನು ಸಕ್ರಮ ಎಂದು ಪರಿಗಣಿಸಬೇಕು’ ಎಂದು ಅವರು ಕೋರಿದರು. ಆಸ್ತಿತೆರಿಗೆ ಸಂಗ್ರಹಕ್ಕೆ ಸೂಚನೆ:ಆಸ್ತಿ ತೆರಿಗೆಯನ್ನು ಕಡ್ಡಾಯವಾಗಿ ಸಂಗ್ರಹಿಸ ಬೇಕು ಮತ್ತು ಅದನ್ನು ಜನೋಪಯೋಗಿ ಕಾರ್ಯಗಳಿಗೆ ಬಳಸಬೇಕು ಎಂದು ಸಚಿವರು ಸೂಚಿಸಿದರು.

‘ಪುರಸಭೆ ವ್ಯಾಪ್ತಿಯಲ್ಲಿ ಒಟ್ಟು 11ಸಾವಿರದಷ್ಟು ಸ್ಥಿರಾಸ್ತಿಗಳಿವೆ. 6 ಸಾವಿರದಷ್ಟು ಸಕ್ರಮವಾಗಿವೆ. ಅಕ್ರಮ ಸ್ಥಿರಾಸ್ತಿಗಳ ಮಾಲೀಕರಿಂದಲೂ ಷರತ್ತಿನ ಮೇರೆಗೆ ಕರ ಪಡೆಯಲಾಗುತ್ತಿದೆ. ಈ ವರ್ಷ ಈಗಾಗಲೇ ಶೇ 73ರಷ್ಟು ಆಸ್ತಿ ತೆರಿಗೆ ಸಂಗ್ರಹವಾಗಿದೆ’ ಎಂದು ಆಯುಕ್ತ ಶಿವಕುಮಾರ್ ಮಾಹಿತಿ ನೀಡಿದರು. ವಿಧಾನ ಪರಿಷತ್‌ ಸದಸ್ಯ ಸಿ.ಎಂ, ಲಿಂಗಪ್ಪ, ಪುರಸಭೆ ಅಧ್ಯಕ್ಷೆ ವೆಂಕಟೇಶಮ್ಮ, ಉಪಾಧ್ಯಕ್ಷೆ ವೈಶಾಲಿ, ಸ್ಥಾಯಿಸಮಿತಿ ಅಧ್ಯಕ್ಷ ಉಮೇಶ್‌ ಇತರರು ಇದ್ದರು.

₹4 ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಾಣ
‘ಬಿಡದಿಯು ವೇಗವಾಗಿ ಬೆಳೆಯತ್ತಿರುವ ಪಟ್ಟಣವಾದ ಕಾರಣ ಪುರಸಭೆಯ ಕಚೇರಿಯನ್ನೂ ನಗರಸಭೆಯ ಮಾದರಿಯಲ್ಲಿಯೇ ದೊಡ್ಡದಾಗಿ ನಿರ್ಮಿಸಿ’ ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

‘ಈಗಾಗಲೇ ಇದಕ್ಕಾಗಿ ಗುರುತಿಸುವ ಎರಡು ಎಕರೆ ಜಾಗವನ್ನು ಸಮರ್ಪಕವಾಗಿ ಬಳಸಿಕೊಳ್ಳಿ. ಒಟ್ಟು ಎರಡು ಹಂತದಲ್ಲಿ ಭವನ ನಿರ್ಮಾಣಕ್ಕೆ ನೀಲನಕ್ಷೆ ಹಾಕಿಕೊಳ್ಳಿ. ಮೊದಲ ಹಂತದಲ್ಲಿ ₹4–5 ಕೋಟಿ ವೆಚ್ಚದಲ್ಲಿ ಕಟ್ಟಡ ಕಟ್ಟಿ. ಇದಕ್ಕೆ ಇಲಾಖೆ ವತಿಯಿಂದ ಅವಶ್ಯವಾದ ನೆರವು ನೀಡುತ್ತೇನೆ’ ಎಂದರು.

ಸ್ಮಶಾನ ನಿರ್ಮಾಣಕ್ಕೆ ಒತ್ತಾಯ
ಬಿಡದಿ ಪಟ್ಟಣದ ವ್ಯಾಪ್ತಿಯಲ್ಲಿ ಹಿಂದೂ ರುದ್ರಭೂಮಿಯ ಕೊರತೆ ಇದ್ದು, ಇದರಿಂದ ಶವಸಂಸ್ಕಾರಕ್ಕೆ ಅನನುಕೂಲವಾಗಿದೆ ಎಂದು ಸ್ಥಳೀಯರೊಬ್ಬರು ದೂರಿದರು. ಕೂಡಲೇ ಈ ಬಗ್ಗೆ ಪರಿಶೀಲಿಸಿ, ಸ್ಥಳ ಗುರುತು ಮಾಡಿ, ಮೂಲ ಸೌಕರ್ಯಗಳನ್ನೂ ಒದಗಿಸುವಂತೆ ಸಚಿವರು ಸೂಚನೆ ನೀಡಿದರು.

* * 

ಜನರಿಗೆ ವಸತಿ, ನೀರು, ವಿದ್ಯುತ್‌ ಮೊದಲಾದ ಮೂಲ ಸೌಕರ್ಯ ಕಲ್ಪಿಸುವುದು ನಮ್ಮ ಕರ್ತವ್ಯ. ತೆರಿಗೆ ಹಣವನ್ನು ಸದುಪಯೋಗಪಡಿಸಿಕೊಳ್ಳಿ
ಈಶ್ವರ ಖಂಡ್ರೆ
ಪೌರಾಡಳಿತ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT