ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುಡ್ಡಿನ ಅಮಲಿನೊಳಗೆ ಸಿಲುಕಿದ ಕಥನ

Last Updated 21 ಜುಲೈ 2017, 12:58 IST
ಅಕ್ಷರ ಗಾತ್ರ

ಚಿತ್ರ: ಧೈರ್ಯಂ
ನಿರ್ದೇಶನ: ಶಿವತೇಜಸ್‌
ನಿರ್ಮಾಪಕರು: ಡಾ.ಕೆ. ರಾಜು
ತಾರಾಬಳಗ: ಅಜಯ್‌ರಾವ್‌, ಅದಿತಿ ಪ್ರಭುದೇವ, ಸಾಧುಕೋಕಿಲ, ರವಿಶಂಕರ್‌, ಜೈಜಗದೀಶ್‌

ಜಗತ್ತಿನಲ್ಲಿ ಜನರು ಅತಿಹೆಚ್ಚು ಇಷ್ಟಪಡುವ ವಸ್ತುವೆಂದರೆ ‘ದುಡ್ಡು’. ಜೀವನದಲ್ಲಿ ಸಾಕಷ್ಟು ಹಣ ಸಂಪಾದಿಸಬೇಕು ಎಂಬುದು ಕೋಟ್ಯಂತರ ಜನರ ಹಂಬಲ. ಹಾಸಿಗೆ ಇದ್ದಷ್ಟು ಕಾಲು ಚಾಚು; ಹಗಲುಗನಸು ಕಾಣಬೇಡ ಎಂದು ಉಪದೇಶಿಸುವವರಿಗೆ ಕೊರತೆಯಿಲ್ಲ. ದುಡ್ಡಿನ ಹಿಂದೆ ಬಿದ್ದು ನೆಮ್ಮದಿ ಕಳೆದುಕೊಂಡವರು ಸಮಾಜದಲ್ಲಿ ಸಾಕಷ್ಟಿದ್ದಾರೆ. ಬದುಕಿನಲ್ಲಿ ದುಡ್ಡು ಅಂತಿಮವಲ್ಲ. ‘ಸತ್ಯ’ವೇ ಶಾಶ್ವತ ಎಂದು ‘ಧೈರ್ಯಂ’ ಚಿತ್ರದ ಮೂಲಕ ಹೇಳುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ಶಿವತೇಜಸ್‌.

ಅಜಯ್‌ರಾವ್‌ ಅವರಿಗೆ ಆ್ಯಕ್ಷನ್‌ ಹೀರೊ ಇಮೇಜ್‌ ನೀಡಲು ಮಾಡಿದ ಸಿನಿಮಾ ‘ಧೈರ್ಯಂ’. ‘ಲವರ್‌ಬಾಯ್‌’ ಪಾತ್ರಗಳಲ್ಲಿಯೇ ಮಿಂಚುತ್ತಿದ್ದ ಅವರನ್ನು ಆ್ಯಕ್ಷನ್‌ ಹೀರೊ ಆಗಿ ಪ್ರೇಕ್ಷಕರಿಗೆ ತೋರಿಸುವ ನಿರ್ದೇಶಕರ ಹೆಬ್ಬಯಕೆ ಸಿನಿಮಾದುದ್ದಕ್ಕೂ ದಾಳವಾಗಿ ಕಾಣಿಸುತ್ತದೆ.

ಬಡ ಕುಟುಂಬವೊಂದರ ಸಂವೇದನೆಯನ್ನು ಭಿನ್ನವಾಗಿ ಕಟ್ಟಿಕೊಡಲು ನಿರ್ದೇಶಕರು ಯತ್ನಿಸಿದ್ದಾರೆ. ಆದರೆ, ಸಾಮಾಜಿಕ ಸಮಸ್ಯೆಯೊಂದನ್ನು ಅದರ ಸಂಕೀರ್ಣತೆಯೊಳಗೆ ನೋಡುವ ಪ್ರಯತ್ನ ಚಿತ್ರದಲ್ಲಿ ಕಾಣುವುದಿಲ್ಲ. ಬಡತನದ ಬೇಗೆಯಲ್ಲಿ ಬೆಂದ ತರುಣನೊಬ್ಬ ವಾಮಮಾರ್ಗದಲ್ಲಿ ಹಣ ಸಂಪಾದಿಸಿ ಕೊನೆಗೆ ಶತ್ರುಗಳನ್ನು ಸೆದೆಬಡಿಯುವ ಕಥೆಯಷ್ಟೇ ಆಗಿ ಸಿನಿಮಾ ಮುಗಿದುಹೋಗುತ್ತದೆ.

ಕಿಲಾಡಿ ತರುಣನೊಬ್ಬ ಭ್ರಷ್ಟ ರಾಜಕಾರಣಿ, ಪೊಲೀಸ್‌ ಅಧಿಕಾರಿ ವಿರುದ್ಧ ತನ್ನ ಬುದ್ಧಿಶಕ್ತಿಯಿಂದ ಗೆಲುವು ಸಾಧಿಸುವ ಕಥೆ ‘ಧೈರ್ಯಂ’ ಚಿತ್ರದ್ದು. ಅಜೇಯ್‌ ಕೃಷ್ಣ (ಅಜಯ್‌ರಾವ್‌) ಬುದ್ಧಿವಂತ ವಿದ್ಯಾರ್ಥಿ. ಬಡತನ ಅವನಿಗೆ ಅಂಟಿದ ಶಾಪ. ತಂದೆಗೆ ಅನಾರೋಗ್ಯ. ಆಗ ಅವನಿಗೆ ಹಣ ಅನಿವಾರ್ಯವಾಗುತ್ತದೆ.

ಇನ್ನೊಂದೆಡೆ ಭ್ರಷ್ಟಾಚಾರ ಬಯಲಿಗೆಳೆಯಲು ಮುಂದಾದ ಸಮಾಜ ಸೇವಕನ ಕೊಲೆ. ನಗರಾಭಿವೃದ್ಧಿ ಸಚಿವ ಮತ್ತು ಪೊಲೀಸ್‌ ಅಧಿಕಾರಿಯೇ ಈ ಕೊಲೆಯ ರೂವಾರಿಗಳು. ಸಿ.ಸಿ. ಟಿವಿಯಲ್ಲಿ ದಾಖಲಾದ ಕೊಲೆಯ ವಿಡಿಯೋ ದೃಶ್ಯಗಳು ಅಜೇಯ್‌ನ ಕೈಸೇರುತ್ತವೆ. ಅಲ್ಲಿಂದ ಕಥೆ ಹೊಸದಿಕ್ಕು ಪಡೆಯುತ್ತದೆ. ಈ ವಿಡಿಯೋ ದೃಶ್ಯಗಳನ್ನು ಬಳಸಿಕೊಂಡೇ ಹಣ ಸಂಪಾದಿಸುವುದು ಅವನ ತಂತ್ರ. ಇದರಲ್ಲಿ ಆತ ಯಶಸ್ವಿಯೂ ಆಗುತ್ತಾನೆ.
ಮೊದಲಾರ್ಧದಲ್ಲಿ ಅಜಯ್‌ರಾವ್‌ ‘ಲವರ್‌ಬಾಯ್‌’ ಇಮೇಜ್‌ಗೆ ಸೀಮಿತ. ಈ ನೆರಳಿನಿಂದ ಅವರು ಹೊರಬಂದಂತೆ ಕಾಣುವುದಿಲ್ಲ.

ದ್ವಿತೀಯಾರ್ಧದಲ್ಲಿ ಅವರದು ಪಕ್ಕಾ ಆ್ಯಕ್ಷನ್‌ ಹೀರೊನ ಅವತಾರ. ಪಂಚಿಂಗ್‌ ಡೈಲಾಗ್‌ಗಳ ಮೂಲಕ ಅಭಿಮಾನಿಗಳಿಂದ ಚಪ್ಪಾಳೆ ಗಿಟ್ಟಿಸುತ್ತಾರೆ.
ನಾಯಕಿ ಅದಿತಿ ಪ್ರಭುದೇವ ತಮಗೆ ಸಿಕ್ಕ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಸಾಧುಕೋಕಿಲ ಅವರು ಅರೆಬೆತ್ತಲೆಯಾಗಿ ಸ್ಲೇಟ್‌ ಹಿಡಿದು ಪ್ರತಿಭಟಿಸುವ ಶೈಲಿ ನಗೆ ಉಕ್ಕಿಸುತ್ತದೆ. ರವಿಶಂಕರ್‌, ಜೈಜಗದೀಶ್‌, ಹೊನ್ನವಳ್ಳಿ ಕೃಷ್ಣ ಅವರದು ಅಚ್ಚುಕಟ್ಟಾದ ಅಭಿನಯ.

ಶೇಖರ್‌ಚಂದ್ರ ಅವರ ಛಾಯಾಗ್ರಹಣ ಕೆಲವು ದೃಶ್ಯಗಳಿಗಷ್ಟೇ ಸಹನೀಯವಾಗಿದೆ. ಎಮಿಲ್‌ ಸಂಗೀತ ಸಂಯೋಜನೆಯ ‘ನಮ್ದುಕೆ ಹಿಂಗಿದೆ...’ ಹಾಡು ಮಾತ್ರ ಕೇಳಲು ಹಿತವಾಗಿದೆ. ಉಳಿದ ಹಾಡುಗಳು ನೆನಪಿನಲ್ಲಿ  ಉಳಿಯುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT