ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಚಮಿ ಜೀವನದ ಜೋಕಾಲಿ

Last Updated 21 ಜುಲೈ 2017, 19:30 IST
ಅಕ್ಷರ ಗಾತ್ರ

ವಣ ಬಂತು ಕಾಡಿಗೆ ಬಂತು ನಾಡಿಗೆ ಬಂತು ಬೀಡಿಗೆ ಬಂತು ಶ್ರಾವಣ ಓ! ಬಂತು ಶ್ರಾವಣ|’ – ಎಂದು ನಮ್ಮ ಶ್ರಾವಣದ ಸಂಭ್ರಮದ ಸಿರಿಯನ್ನು ತಮ್ಮದೇ ಜನಪದದ ಸವಿಯಲ್ಲಿ ಬೇಂದ್ರೆಯವರು ಹಾಡಿದ್ದಾರೆ. ಅದೂ ಈಗಲೂ ಧಾರವಾಡದ ಪೇಡಾದಷ್ಟೇ ಸವಿಯಾಗಿದೆ.

ಹಬ್ಬಗಳ ಆಚರಣೆಯಲ್ಲಿ ಭಾರತ ತನ್ನತನವನ್ನು ಅಳವಡಿಸಿಕೊಂಡಿದೆ. ಅಂತಹ ಹಬ್ಬಗಳ ಸರಮಾಲೆಯನ್ನು ಹೊತ್ತು ತರುವುದೇ ಈ ಶ್ರಾವಣ ಮಾಸ. ಎಲ್ಲಿ ನೋಡಿದಲ್ಲಿ  ಹಬ್ಬಗಳ ಸಡಗರವೇ ಕಾಣಸಿಗುವುದು. ಹೌದು, ಶ್ರಾವಣದ ಸೊಬಗೇ ಅಂತಹುದು. ಸಂಭ್ರಮವೇ ಓಡೋಡಿ ಬಂದು ನಮ್ಮನ್ನು ಅಪ್ಪಿದಂತೆ ಭಾಸವಾಗುವುದು. ಈ ಹಬ್ಬಗಳ ಮುನ್ನುಡಿಯಾಗಿ ಪಂಚಮಿ ಹಬ್ಬ. ಪುರಾಣಗಳ ಪ್ರಕಾರ ಭೂಮಿಯನ್ನು ರಕ್ಷಿಸುವವನೇ ಆದಿಶೇಷ; ಆ ನಾಗದೇವತೆಯನ್ನು ಪೂಜಿಸುವ ಹಬ್ಬವೇ ನಾಗರಪಂಚಮಿ.

‘ನಾಗಪಂಚಿಮೆ ನಾಡಿಗೇ ದೊಡ್ಡದು’ ಎನ್ನುವ ಮಾತಿದೆ. ವಿವಿಧ ಪ್ರಾಂತ್ಯಗಳಲ್ಲಿ ವಿವಿಧ ರೀತಿಯಲ್ಲಿ ಆಚರಿಸಲಾಗುತ್ತಿದೆ. ಉತ್ತರ ಕರ್ನಾಟಕದಲ್ಲಿ ಅಣ್ಣ-ತಂಗಿಯರ ಹಬ್ಬ, ಉಂಡಿ ಹಬ್ಬ, ಜೋಕಾಲಿ ಹಬ್ಬ ಎಂದೇ ಪ್ರಸಿದ್ದ. ‘ಪಂಚಮಿ ಹಬ್ಬ ಬಂದೈತಿ ಸನಿಯಾಕ, ಅಣ್ಣ ಇನ್ನೂ ಯಾಕ ಬರಲಿಲ್ಲ ಕರಿಯಾಕ’.

ಹೌದು, ಹೊಸದಾಗಿ ಮದುವೆಯಾದ ಮನೆಮಗಳು ಆಷಾಢಕ್ಕಾಗಿ ತವರಿಗೆ ಬಂದು ಅಣ್ಣ–ತಂಗಿಯರ ಪ್ರೀತಿಯ ಸಂಕೇತವಾಗಿ ತನಿ ಎರೆಯುವ ಮೂಲಕ ಆಚರಿಸುತ್ತಾರೆ. ಇದು ಸಹೋದರತ್ವದ ಸಂಕೇತವಾಗಿ, ತನ್ನ ತವರಿಗೆ ಒಳ್ಳೆಯದನ್ನು ಬಯಸುತ್ತಾಳೆ – ಆ ಮಗಳು.

ಮೂರು ದಿನ ಆಚರಣೆಯ ಈ ಹಬ್ಬದಲ್ಲಿ ಮೊದಲನೇ ದಿನ ರೊಟ್ಟಿ ಪಂಚಮಿ; ಉತ್ತರ ಕರ್ನಾಟಕದ ವಿಶೇಷ ಎಳ್ಳು ಹಚ್ಚಿದ ರೊಟ್ಟಿ, ಮಡಕೆ-ಹೆಸರು ಕಾಳು, ಹಿಟ್ಟನ ಜುಣುಕ, ಎಣ್ಣೆಬದನೆಕಾಯಿ, ಶೇಂಗಾ ಚಟ್ನಿ, ಅಗಸೆ ಚಟ್ನಿ, ಗುರೆಳ್ಳು(ಹಚ್ಚೆಳ್ಳು)ಚಟ್ನಿ, ಗಟ್ಟಿ ಮೊಸರುಹಸಿ ತರಕಾರಿಗಳ ಪಚಡಿ – ಹೀಗೆ ತಾವು ಬೆಳೆದ ವಸ್ತುಗಳನ್ನು ನಾಗದೇವತಗೆ ಎಡೆ ಇಡುವರು.

ಎರಡನೆ ದಿನ ಕಲ್ಲು ನಾಗದೇವತೆಗೆ ಹಾಲು ಹಾಕುವ ಮೂಲಕ ಮತ್ತು ವಿವಿಧ ರೀತಿಯ ಉಂಡಿಗಳನ್ನು (ಶೇಂಗಾ, ಎಳ್ಳು, ಅಳ್ಳಿಟ್ಟು, ತಂಬಿಟ್ಟು, ಗುಳ್ಳಡಿಕೆ, ಬುಂದಿ, ಸೇವಿನ, ರವೆ, ಹೆಸರಿನ, ಕರದಂಟು...) ಅರ್ಪಿಸುತ್ತಾರೆ. ಮೂರನೇ ದಿನ ನೀರಿನಲ್ಲಿ ಕುದಿಸಿದ ಕಡಬು, ಎಳೆಯ ಹುಣಸೆ ಚಿಗುರು, ಹಸಿಕಡ್ಲಿ – ಈ ಎಲ್ಲವನ್ನೂ ಅರ್ಪಿಸಲಾಗುವುದು.

ಪಂಚಮಿಹಬ್ಬದ ಮತ್ತೊಂದು ಸಂಭ್ರಮ ಜೋಕಾಲಿಯದು. ಮರ-ಮರಗಳಲ್ಲಿ ಜೋಕಾಲಿಯದೇ ಕಾರು-ಬಾರು. ಯಾರು ಹೆಚ್ಚು ಜೀಕುವರೆಂಬ ಸ್ಪರ್ಧೆ. ಮರದ ತುದಿಗೆ ಉಂಡಿ ಕಟ್ಟಿ ಅದನ್ನು ಪಡೆಯುವ ಸ್ಪರ್ಧೆ. ಆದರೆ ಅವು ಹಳ್ಳಿಗಳಿಗೆ ಮಾತ್ರ ಸೀಮಿತವಾಗಿದೆ. ನಮ್ಮ ನಗರಗಳಲ್ಲಿ ಅವುಗಳ ಸಂಭ್ರಮ ಎಲ್ಲಿ ಕಾಣಬೇಕು? ನಗರಗಳಲ್ಲಿ ಮರವೂ ಇಲ್ಲ, ಜೋಕಾಲಿಯೂ ಇಲ್ಲ. ಈಗ ಹಳ್ಳಿಗಳಲ್ಲೂ ಜೋಕಾಲಿಯ ಸಂಭ್ರಮ ಕಡಿಮೆಯಾಗುತ್ತಿದೆ ಎನಿಸುತ್ತಿದೆ.

ಎಲ್ಲಿ ಹೋದವು ಆ ಸಂಭ್ರಮ, ಎಲ್ಲಿ ಹೋದವು ಆ ಉಲ್ಲಾಸ, ಜೀಕುತ ಜೀಕುತ ಜೋಕಾಲಿ ಮರೆತೆವು ಜೀವನ ದುಖಖಾಲಿ, ನವ ಉಲ್ಲಾಸ, ನವ ಖುಷಿ, ತರುವ ಗಿಡಗಂಟೆಯ ಜೋಕಾಲಿ ಎಲ್ಲಿ ಹೋದೆಯೆ ನೀನು, ಚಿಕ್ಕವರಿಂದ, ದೊಡ್ಡವರಿಂದ ಆಡಿಸಿಕೊಳ್ಳುತ ಖುಷಿಯ ತರುವ ಜೋಕಾಲಿ – ಎನ್ನುವಂತಾಗಿದೆ.

ಭಾಗ್ಯಜ್ಯೋತಿ ಕೋಟಿಮಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT