ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆಗಾಲದ ಜ್ವರ...ನಿರ್ಲಕ್ಷ್ಯ ಬೇಡ

Last Updated 21 ಜುಲೈ 2017, 19:30 IST
ಅಕ್ಷರ ಗಾತ್ರ

ಮಳೆಗಾಲದ ಆರಂಭದ ದಿನಗಳಲ್ಲಿ ಕಾಯಿಲೆ ಬೀಳುವ ಸಂಭವ ಹೆಚ್ಚು. ಮಳೆ ಶುರುವಾಗುತ್ತಿರುವಂತೆಯೇ ಕೆಮ್ಮು, ಶೀತ, ನೆಗಡಿ ಮುಂತಾದ ಅನೇಕ ಸೋಂಕಿನ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ. ಸೋಂಕಿನ ಕಾಯಿಲೆಗಳ ಮುಖ್ಯ ಲಕ್ಷಣವೇ ಜ್ವರ. ಶರೀರದ ಉಷ್ಣತೆಯು ಸಾಮಾನ್ಯಕ್ಕಿಂತಲೂ ಹೆಚ್ಚಾಗುವುದನ್ನೇ ನಾವು ‘ಜ್ವರ’ ಎನ್ನುತ್ತೇವೆ.

ವ್ಯಕ್ತಿಯು ಜ್ವರದಿಂದ ಬಳಲುತ್ತಿದ್ದಾನೆಂದರೆ ಹೆಚ್ಚಿನ ಸಂದರ್ಭಗಳಲ್ಲಿ ಆತ ಯಾವುದಾದರೊಂದು ಬಗೆಯ ಸೋಂಕಿನ ಕಾಯಿಲೆಯಿಂದ ಬಳಲುತ್ತಿದ್ದಾನೆಂದೇ ಅರ್ಥ. ಆದರೆ ಈ ಜ್ವರಕ್ಕೆ ಒಂದೇ ಬಗೆಯ ಸೋಂಕು ಕಾರಣವಾಗಿರುವುದಿಲ್ಲ. ಸೋಂಕಿಗೆ ಅನೇಕ ಮೂಲ ಕಾರಣಗಳಿರಬಹುದು. ವೈರಾಣು, ಸೂಕ್ಷ್ಮಾಣು, ಪರಾವಲಂಬಿ ಜೀವಿಗಳು – ಹೀಗೆ. ಕೆಲವೊಂದು ಬಗೆಯ ಸೋಂಕು ಒಮ್ಮೊಮ್ಮೆ ಗಂಭೀರ ಸ್ವರೂಪವನ್ನೂ ತಾಳಲೂಬಹುದು. ಹೆಚ್ಚಿನ ಸೋಂಕಿನ ಕಾಯಿಲೆಗಳಿಗೆ ಸೂಕ್ತ ಔಷಧವಿದೆ.

ಆದರೆ ಆ ಔಷಧೋಪಚಾರವು ಸೋಂಕಿನ ಮೂಲ ಕಾರಣವೇನು ಎಂಬುದರ ಮೇಲೆ ಅವಲಂಬಿಸುತ್ತದೆ. ಅಷ್ಟೇ ಅಲ್ಲ, ಆರಂಭಿಕ ಹಂತಗಳಲ್ಲಿಯೇ ಕಾಯಿಲೆಯ ಮೂಲ ಕಾರಣ ಕಂಡುಹಿಡಿದರೆ, ಚಿಕಿತ್ಸೆ ಸುಲಭ. ಆದರೆ ಅದೇ ಕಾಯಿಲೆ ಉಲ್ಬಣಗೊಂಡಾಗ ಚಿಕಿತ್ಸೆ ಕಷ್ಟವೆನಿಸಬಹುದು. ಅದ್ದರಿಂದಲೇ ಈ ದಿನಗಳಲ್ಲಿ ಜ್ವರ ಕಾಣಿಸಿಕೊಂಡಾಗ ತುಸು ಎಚ್ಚರಿಕೆಯಿಂದಿರುವುದು ಒಳಿತು.

ಮಳೆಗಾಲದಲ್ಲಿ ಹೆಚ್ಚಾಗಿ ಕಂಡುಬರುವ ಮಲೇರಿಯಾ, ಡೆಂಗಿ, ಇಲಿಜ್ವರ, ಟೈಫಾಯ್ಡ್, ವೈರಾಣುವಿನ ಜ್ವರ ಮುಂತಾದುವುಗಳ ಬಗ್ಗೆ ನಾವು ಸದಾ ಮುನ್ನೆಚ್ಚರಿಕೆವಹಿಸಬೇಕು. ಈ ಎಲ್ಲ ಕಾಯಿಲೆಗಳಲ್ಲಿಯೂ ಆರಂಭದಲ್ಲಿ ಜ್ವರವಷ್ಟೇ ಕಾಣಿಸಿಕೊಂಡರೂ, ಜೊತೆಯಲ್ಲಿಯೇ ಕೆಲವು ಇತರ ನಿರ್ದಿಷ್ಟ ಗುಣಲಕ್ಷಣಗಳೂ ಇರುತ್ತವೆ.

ಮಲೇರಿಯಾ ಕಾಯಿಲೆಯ ಮುಖ್ಯ ಗುಣಲಕ್ಷಣ ಚಳಿಜ್ವರ. ಜ್ವರದ ಜೊತೆಯಲ್ಲಿ ರೋಗಿಯು ವಿಪರೀತ ಚಳಿ ಎಂದು ನಡುಗುತ್ತಾನೆ. ಅಲ್ಲದೆ, ರೋಗಿಯು ತಲೆನೋವು, ದೇಹದಲ್ಲಿ ಆಯಾಸ, ವಾಂತಿ ಮುಂತಾದ ಸಮಸ್ಯೆಗಳಿಂದಲೂ ಬಳಲಬಹುದು. ಡೆಂಗಿಜ್ವರದಲ್ಲಿ ರೋಗಿಯ ದೇಹದ ಉಷ್ಣತೆ ಸಾಮಾನ್ಯಕ್ಕಿಂತಲೂ ಹೆಚ್ಚಾಗುವುದರ ಜೊತೆಗೆ ಕೀಲು ಹಾಗೂ ದೇಹದ ಮಾಂಸಖಂಡಗಳಲ್ಲಿ ವಿಪರೀತ ನೋವು ಕಾಣಿಸಿಕೊಳ್ಳಬಹುದು.

ಚರ್ಮದ ಮೇಲೆ ಕೆಂಪು-ಕಪ್ಪು ಮಚ್ಚೆಗಳು ಮತ್ತು ಒಮ್ಮೊಮ್ಮೆ ಮೂಗು-ಬಾಯಿಯಲ್ಲಿ ರಕ್ತಸ್ರಾವವೂ ಕಂಡುಬರಬಹುದು. ಟೈಫಾಯ್ಡ್ ಜ್ವರದಲ್ಲಿ ರೋಗಿಯು ಜ್ವರದ ಜೊತೆಯಲ್ಲಿಯೇ ತಲೆನೋವು, ಹೊಟ್ಟೆ ನೋವು, ವಾಂತಿ, ಕೆಲವೊಮ್ಮೆ ಅತಿಸಾರದಂತಹ ಸಮಸ್ಯೆಗಳಿಂದಲೂ ಬಳಲಬಹುದು. ಇಲಿಜ್ವರದಲ್ಲಿ ರೋಗಿಯು ಬಹಳವೇ ನಿತ್ರಾಣನಾಗಿ, ಆತನ ರಕ್ತದೊತ್ತಡವು ಕಡಿಮೆಯಾಗಬಹುದು. ಜೊತೆಯಲ್ಲಿ ರೋಗಿಯ ಮೂತ್ರದ ಪ್ರಮಾಣವು ಕಡಿಮೆಯಾಗಬಹುದು ಹಾಗೂ ಜಾಂಡೀಸ್ ಕೂಡ ಕಾಣಿಸಿಕೊಳ್ಳಬಹುದು. ಈ ಸೋಂಕಿನಲ್ಲಿ ಪಿತ್ತಜನಕಾಂಗ ಹಾಗೂ ಮೂತ್ರಪಿಂಡಕ್ಕೆ ಹಾನಿಯಾಗುವುದರಿಂದ ಈ ಬಗೆಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.

ಚಿಕುನ್ ಗುನ್ಯ ಕಾಯಿಲೆಯಲ್ಲಿ ರೋಗಿಯು ಜ್ವರದೊಂದಿಗೆ ಕಾಲುಗಳ ಅಥವಾ ಕೈಗಳ ವಿವಿಧ ಕೀಲುಗಳಲ್ಲಿ ಊತ ಹಾಗೂ ತೀವ್ರತರವಾದ ನೋವನ್ನು ಅನುಭವಿಸುತ್ತಾನೆ. ವೈರಾಣುವಿನ ಜ್ವರದಲ್ಲಿ ರೋಗಿಯು ಇಡೀ ದೇಹದಲ್ಲಿ ನೋವು ಮತ್ತು ಒಂದು ಬಗೆಯ ಆಯಾಸವನ್ನು ಅನುಭವಿಸುತ್ತಾನೆ. ಒಮ್ಮೊಮ್ಮೆ ಗಂಟಲುನೋವು, ಶೀತ ಮತ್ತು ಕೆಮ್ಮ ಕೂಡ ಇರಬಹುದು.

ಒಂದು ಸೋಂಕಿನ ಎಲ್ಲ ನಿರ್ದಿಷ್ಟ ಗುಣಲಕ್ಷಣಗಳೂ ಅದರಿಂದ ಬಳಲುವ ಎಲ್ಲ ರೋಗಿಗಳಲ್ಲಿ ಇರಬೇಕೆಂದೇನಿಲ್ಲ. ರೋಗಲಕ್ಷಣಗಳ ಬಗೆ ಹಾಗೂ ತೀವ್ರತೆಯಲ್ಲಿ ಒಂದು ರೋಗಿಯಿಂದ ಇನ್ನೊಂದು ರೋಗಿಗೆ ವ್ಯತ್ಯಾಸವಿರಬಹುದು. ಅಲ್ಲದೆ ಆರಂಭಿಕ ಹಂತಗಳಲ್ಲಿ ವ್ಯಕ್ತಿಯು ಆಯಾಸ ಹಾಗೂ ಜ್ವರದಿಂದ ಮಾತ್ರವೇ ಬಳಲಬಹುದು. ಹಾಗಾಗಿಯೇ ಜ್ವರ ಬಂದಾಗ ನಿರ್ಲಕ್ಷ್ಯಿಸದೇ ಅಥವಾ ಮನೆಮದ್ದು ಅಥವಾ ಸ್ವಯಂ ಚಿಕಿತ್ಸೆ ಮಾಡಿಕೊಳ್ಳುತ್ತ ಕಾಲಹರಣ ಮಾಡದೆಯೇ ಹತ್ತಿರದ ತಜ್ಞವೈದ್ಯರ ಬಳಿ ಸಲಹೆ ಪಡೆಯಬೇಕು.

ತಜ್ಞವೈದ್ಯರು ರೋಗಿಯನ್ನು ಪರೀಕ್ಷಿಸಿದಾಗ ಕೆಲವು ಅಂಶಗಳನ್ನು ಅವರು ಗಮನಿಸುತ್ತಾರೆ. ಸೋಂಕು ಯಾವುದೆಂದು ದೃಢಪಡಿಸಿಕೊಳ್ಳಲು ಕೆಲವು ಬಗೆಯ ರಕ್ತಪರೀಕ್ಷೆಯನ್ನು ಮಾಡುತ್ತಾರೆ. ತಪಾಸಣೆಯ ವರದಿಯಿಂದ ಸೋಂಕು ಇಂಥದ್ದು ಎಂದು ದೃಢಪಟ್ಟಾಗ ತಕ್ಷಣವೇ ಸೂಕ್ತ ಚಿಕಿತ್ಸೆಯನ್ನು ಆರಂಭಿಸುತ್ತಾರೆ. ಅಲ್ಲದೇ ಡೆಂಗಿ ಮತ್ತು ಇಲಿಜ್ವರದಲ್ಲಿ ರಕ್ತದ ಕಿರುಬಿಲ್ಲೆಗಳು ಕಡಿಮೆಯಾಗುವುದು ಸರ್ವೇಸಾಮಾನ್ಯ. ಕಿರುಬಿಲ್ಲೆಗಳ ಸಂಖ್ಯೆ ಕ್ಷೀಣಿಸುವುದು ಅಪಾಯದ ಸೂಚನೆ. ಇದರಿಂದ ದೇಹದ ವಿವಿಧ ಭಾಗಗಳಲ್ಲಿ ರಕ್ತಸ್ರಾವವಾಗಬಹುದು. ರಕ್ತಪರೀಕ್ಷೆಯ ಸಹಾಯದಿಂದ ಕಿರುಬಿಲ್ಲೆಗಳ ಸಂಖ್ಯೆಯ ಬಗ್ಗೆಯೂ ತಿಳಿದುಕೊಳ್ಳಬಹುದು.

ಒಂದು ವೇಳೆ ಅವುಗಳ ಸಂಖ್ಯೆಯು ಸಾಮಾನ್ಯಕ್ಕಿಂತಲೂ ತುಂಬಾ ಕಡಿಮೆಯಾಗಿದ್ದರೆ ಕೂಡಲೇ ರೋಗಿಗೆ ಕಿರುಬಿಲ್ಲೆಗಳ ವರ್ಗಾವಣೆ ಮಾಡಬಹುದು. ಮುಂದೆ ಆಗಬಹುದಾದ ಬಹು ಅಪಾಯದ ರಕ್ತಸ್ರಾವವನ್ನು ಆ ಮೂಲಕ ತಡೆಗಟ್ಟಬಹುದು. ಆದ್ದರಿಂದ ಜ್ವರ ಬಂದಾಗ, ಬರೀ ಜ್ವರ ಎಂದು ನಿರ್ಲಕ್ಷ್ಯಿಸಿ, ಅಪಾಯಕ್ಕೆ ಆಹ್ವಾನ ಮಾಡಿಕೊಡಬೇಡಿ. ವೈದ್ಯರಲ್ಲಿ ಸಲಹೆ ಪಡೆದು ಸೂಕ್ತ ಸಮಯದಲ್ಲಿ ಸೂಕ್ತ ಚಿಕಿತ್ಸೆಯನ್ನು ಪಡೆಯಿರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT