ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋನು ಕೈಚೀಲದಲ್ಲಿ ಏನೇನಿರುತ್ತದೆ?

Last Updated 21 ಜುಲೈ 2017, 19:30 IST
ಅಕ್ಷರ ಗಾತ್ರ

‘ಇಂತಿ ನಿನ್ನ ಪ್ರೀತಿಯ’ ಸಿನಿಮಾ ಮೂಲಕ ಸಿನಿಪ್ರಿಯರ ಗಮನ ಸೆಳೆದವರು ನಟಿ ಸೋನು ಗೌಡ. ಕನ್ನಡವಷ್ಟೇ ಅಲ್ಲ ದಕ್ಷಿಣ ಭಾರತದ ಇನ್ನಿತರ ಭಾಷೆಗಳಲ್ಲೂ ಅಭಿನಯದ ಛಾಪು ಮೂಡಿಸಿದ ಪ್ರತಿಭಾವಂತೆ ಅವರು. ’ಗುಲ್ಟು’, ’ಚಂಬಲ್’ ಮತ್ತು ’ಶಾಲಿನಿ ಐಎಎಸ್‌’ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಸೋನು ‘ಮೆಟ್ರೊ’ ಜತೆ ಏನು ಮಾತನಾಡಿದ್ದಾರೆ ಓದಿ ನೋಡಿ...

ಸಂದರ್ಶನ: ಟಿನಿ ಸಾರಾ ಅನಿಯನ್

* ನಿಮ್ಮ ಹೊಸ ಸಿನಿಮಾ ಪ್ರಾಜೆಕ್ಟ್‌ಗಳ ಬಗ್ಗೆ ಹೇಳಿ...
ನಿರ್ದೇಶಕ ಪನ್ನಗ ಭರಣ ನಿರ್ದೇಶನದ ‘ಹ್ಯಾಪಿ ನ್ಯೂ ಇಯರ್’ ಚಿತ್ರದಲ್ಲಿ ಸುಮಾ ಎನ್ನುವ ಪಾತ್ರ ಮಾಡಿದ್ದೆ. ಅದಾದ ನಂತರ ‘ಗುಲ್ಟು’, ‘ಚಂಬಲ್’ ಸಿನಿಮಾಗಳನ್ನು ಒಪ್ಪಿಕೊಂಡಿದ್ದೇನೆ. ಈ ಎರಡೂ ಚಿತ್ರಗಳ ಪಾತ್ರಗಳ ಬಗ್ಗೆ ತುಂಬಾ ಖುಷಿ ಇದೆ. ‘ಗುಲ್ಟು’ನಲ್ಲಿ ಕಂಪ್ಯೂಟರ್ ಟ್ರೇನರ್ ಮತ್ತು ‘ಶಾಲಿನಿ ಐಎಎಸ್‌’ನಲ್ಲಿ ಐಎಎಫ್ ಅಧಿಕಾರಿಯಾಗಿ ನಟಿಸುತ್ತಿದ್ದೇನೆ. ಇನ್ನು ‘ಚಂಬಲ್’ ಸಿನಿಮಾದ ಬಗ್ಗೆ ಈಗಲೇ ಏನೂ ಹೇಳೋದಿಲ್ಲ. ಆ ಚಿತ್ರದಲ್ಲಿ ನನ್ನ ಪಾತ್ರ ಹೇಗಿರುತ್ತದೆ ಎಂಬುದನ್ನು ನೀವೇ ಕಾದು ನೋಡಿ (ನಗು)

* ಇತರ ಸಿನಿಮಾಗಳಿಗಿಂತ ’ಗುಲ್ಟು’ ಹೇಗೆ ಭಿನ್ನ?
ನಮ್ಮ ಸಿನಿಮಾಗಳು ಸಾಮಾನ್ಯವಾಗಿ ನಾಯಕ ಕೇಂದ್ರೀತವಾಗಿರುತ್ತವೆ. ಆದರೆ, ‘ಗುಲ್ಟು’ ವಿಷಯಕ್ಕೆ ಬಂದರೆ ನಟಿಯಾಗಿ ನನಗೆ ತೃಪ್ತಿ ನೀಡಿದ ಸಿನಿಮಾವಿದು. ಅಭಿನಯ ಮತ್ತು ಕಥೆ ಎರಡೂ ಇಷ್ಟವಾಯಿತು.

* ಸಿನಿಮಾವೊಂದನ್ನು ಒಪ್ಪಿಕೊಳ್ಳಲು ಯಾವ ಅಂಶಗಳಿಗೆ ಒತ್ತು ಕೊಡುತ್ತೀರಿ?
ಸಿನಿಮಾವೊಂದರಲ್ಲಿ ನಟಿಸಲು ಅನೇಕ ಅಂಶಗಳು ಕಾರಣವಾಗುತ್ತವೆ. ನನ್ನ ಮಟ್ಟಿಗೆ ಮುಖ್ಯವಾಗಿ ಕಥೆ ಚೆನ್ನಾಗಿರಬೇಕು. ನಾನು ಅಭಿನಯಿಸುವ ಪಾತ್ರದ ಬಗ್ಗೆ ಹೆಚ್ಚು ಕೇಂದ್ರೀಕರಿಸುವ ಸ್ವಭಾವ ನನ್ನದು. ನನ್ನ ಪಾತ್ರ ಹೇಗಿದೆ ಅನ್ನೋದನ್ನು ಗಮನದಲ್ಲಿಟ್ಟುಕೊಂಡು ಸಿನಿಮಾವನ್ನು ಒಪ್ಪಿಕೊಳ್ಳುತ್ತೇನೆ.

* ಯಾವ ಸಿನಿಮಾದಿಂದ ಜನರು ಗುರುತಿಸುವಂತಾಯಿತು?
ನಾನು ಹಲವಾರು ಸಿನಿಮಾಗಳಲ್ಲಿ ಅಭಿನಯಿಸಿದ್ದೇನೆ. ಆದರೆ, ನನ್ನನ್ನು ಜನ ಗುರುತಿಸುವಂತೆ ಮಾಡಿದ್ದು ‘ಇಂತಿ ನಿನ್ನ ಪ್ರೀತಿಯ’ ಸಿನಿಮಾ. ಅದಾದ ನಂತರ ‘ಪೋಲಿಸ್ ಕ್ವಾರ್ಟ್ರಸ್‌’ ಮತ್ತು ‘ಕಿರಗೂರಿನ ಗಯ್ಯಾಳಿಗಳು’ ನನಗೆ ಜನಪ್ರಿಯತೆ ಕೊಟ್ಟ ಸಿನಿಮಾಗಳು.

* ಎಂಥ ಸಿನಿಮಾಗಳಲ್ಲಿ ನಟಿಸಲು ಇಷ್ಟಪಡುತ್ತೀರಿ?
ಹಿಂದಿಯಲ್ಲಿ ‘ಕ್ವೀನ್‌’ ಮತ್ತು ‘ನೀರಜಾ’ದಅಂಥ ಸಿನಿಮಾಗಳು ನನಗೆ ಇಷ್ಟವಾದವು. ಅಂಥ ಸಿನಿಮಾಗಳಲ್ಲಿ ನಟಿಸಬೇಕೆಂಬ ಆಸೆ ನನ್ನದು. ಸದ್ಯ ಕನ್ನಡದಲ್ಲಿ ‘ಗುಲ್ಟು’ ಸಿನಿಮಾದಲ್ಲಿ ಅಂಥದೊಂದ್ದು ಪಾತ್ರ ಸಿಕ್ಕಿರುವುದು ಖುಷಿ ತಂದಿದೆ.

* ನಟಿಯಾಗಿ ನೀವು ಎದುರಿಸಿದ ಸವಾಲುಗಳೇನು?
ಸಾಮಾನ್ಯವಾಗಿ ಸಿನಿಮಾದ ಸ್ಕ್ರಿಪ್ಟ್‌ ಕೇಳಿಕೊಂಡು ಅಭಿನಯಿಸಲು ಒಪ್ಪಿಕೊಂಡಿರುತ್ತೇನೆ. ಆದರೆ, ಶೂಟಿಂಗ್ ಸಮಯದಲ್ಲಿ‌ ಅಭಿನಯದ ಕೆಲ ಭಾಗಗಳನ್ನು ತೆಗೆದುಹಾಕಿರುತ್ತಾರೆ. ಅದು ನಮಗೇ ಗೊತ್ತೇ ಆಗಿರುವುದಿಲ್ಲ. ಇದರ ಬಗ್ಗೆ ನಿಜಕ್ಕೂ ನನಗೆ ಅಚ್ಚರಿಯಾಗುತ್ತೆ. ಇನ್ನು ಮಾರ್ಕೆಟಿಂಗ್ ವಿಷಯದಲ್ಲಿ ಕೆಲವು ಬಾರಿ ಗೊಂದಲಕ್ಕೀಡಾಗಿದ್ದೇನೆ. ನಟಿಯಾಗಿ ಈ ಎಲ್ಲ ಸವಾಲುಗಳ ನಡುವೆಯೇ ನಮ್ಮತನ ಕಾಪಾಡಿಕೊಳ್ಳಬೇಕಿದೆ.

* ಕೆಲಸದ ಒತ್ತಡವನ್ನು ಹೇಗೆ ನಿಭಾಯಿಸುತ್ತೀರಿ?
ನಾವಿರುವ ಸಂದರ್ಭದಲ್ಲಿ ನಮಗೇನು ಬೇಕು ಅನ್ನೋದರ ಬಗ್ಗೆ ಸ್ಪಷ್ಟತೆ ನಮಗಿರಬೇಕು. ಎಲ್ಲವನ್ನೂ ಹೇಗೆ ನಿಭಾಯಿಸಬಲ್ಲೆ ಎಂಬುದರ ಅರಿವೂ ಇರಬೇಕು. ಆಗ ಒತ್ತಡ ಅನಿಸುವುದಿಲ್ಲ. ನನಗೆ ಪ್ರಯಾಣದಲ್ಲಿ ಹೆಚ್ಚಿನ ಆರಾಮ ದೊರೆಯುತ್ತದೆ.

* ನಿಮ್ಮ ನೆಚ್ಚಿನ ಪ್ರವಾಸಿ ತಾಣ ಯಾವುದು?
ಗೋವಾ, ಕೊಡಗು ಮತ್ತು ಚಿಕ್ಕಮಗಳೂರು... ಇವು ನನ್ನ ನೆಚ್ಚಿನ ಪ್ರವಾಸಿ ತಾಣಗಳು. ನನ್ನ ಪಾಲಿಗೆ ಪ್ರತಿ ಪ್ರವಾಸವೂ ಒಂದು ಹೊಸ ಅನುಭವ. ಪ್ರವಾಸದಲ್ಲಿಯೇ ನನ್ನನ್ನು ಮತ್ತು ಜಗತ್ತನ್ನು ಅರಿಯಲು ಸಾಧ್ಯವಾಗಿದೆ.

* ಚಿತ್ರೀಕರಣದ ಸಮಯದಲ್ಲಿ ಮರೆಯಲಾಗದ ಅಥವಾ ನಗು ತರಿಸುವ ಘಟನೆಗಳ ಬಗ್ಗೆ ಹೇಳಿ...
ಭಯ ತರಿಸುವ ಕೆಲ ಘಟನೆಗಳು ನಗುವಿನಲ್ಲಿ ಅಂತ್ಯವಾಗಿದ್ದೂ ಇದೆ. ಒಮ್ಮೆಯಂತೂ ಬೆಂಕಿ ಅನಾಹುತದಲ್ಲಿ ಸಿಕ್ಕಿಹಾಕಿಕೊಂಡಿದ್ದು, ಆ ಸಮಯದಲ್ಲಿ ಮೊಬೈಲ್ ನೆಟ್‌ವರ್ಕ್ ಸಿಗದೇ ಪರದಾಡಿದ್ದು... ಹೀಗೆ ಅನೇಕ ಅನುಭವಗಳು ಚಿತ್ರೀಕರಣ ಸಮಯದಲ್ಲಿ ಆಗಿವೆ.

* ನಿಮ್ಮ ಹ್ಯಾಂಡ್‌ಬ್ಯಾಗ್‌ನಲ್ಲಿ ಸದಾ ಇರುವ ವಸ್ತುಗಳು?
ನಾನಂತೂ ವೆಟ್‌ ಟಿಷ್ಯೂ ಇಲ್ಲದೇ ಹೊರಗೆ ಹೋಗುವುದೇ ಇಲ್ಲ. ನನ್ನ ಹ್ಯಾಂಡ್ ಬ್ಯಾಗ್‌ನಲ್ಲಿ ಲಿಪ್‌ಸ್ಟಿಕ್, ಲಿಪ್‌ ಬಾಮ್ ಮತ್ತು ಸುಗಂಧದ್ರವ್ಯವಂತೂ ಇದ್ದೇ ಇರುತ್ತದೆ. ಇವಿಲ್ಲದೇ ನಾನು ಹೊರಗೆ ಹೋಗುವುದೇ ಇಲ್ಲ.

* ನಟಿಯಾಗಿರದಿದ್ದರೆ ಏನಾಗಿರುತ್ತಿದ್ದೀರಿ?
ಲೇಖಕಿಯಾಗಿರುತ್ತಿದ್ದೆ. ನನ್ನ ಆಲೋಚನೆಗಳಿಗೆ ಅಕ್ಷರ ರೂಪ ಕೊಡುವುದೆಂದರೆ ನನಗೆ ತುಂಬಾ ಇಷ್ಟ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT