ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಣದ ಕಡಲಿಗೆ ಹಂಬಲಿಸಿದೆ ಮನ...

Last Updated 21 ಜುಲೈ 2017, 19:30 IST
ಅಕ್ಷರ ಗಾತ್ರ

ಯಾಕೆಂದು ಗೊತ್ತಿಲ್ಲ. ಇದ್ದಕ್ಕಿದ್ದಂತೆ ಜಿ.ಎಸ್. ಶಿವರುದ್ರಪ್ಪನವರ ಕವಿತೆಯ ಸಾಲೊಂದು ತಲೆತುಂಬ ಅನುರಣಿಸುತ್ತಿದೆ– ‘ಕಾಣದ ಕಡಲಿಗೆ ಹಂಬಲಿಸಿದೆ ಮನ...’ ಹೌದಲ್ಲವಾ? ಎಂಥಾ ಸತ್ಯ ಇದು. ನಿಜವಾಗಿಯೂ ಕಾಣದ ಕಡಲಿಗೆ ಹಂಬಲಿಸುತ್ತಿದೆ ಮನ. ಕಡಲು ಕೈಗೆಟುಕಿತೋ ಇಲ್ಲವೋ ಗೊತ್ತಿಲ್ಲ. ಕಡಲಲ್ಲಿ ಮನ ಮುಳುಗಿತೋ ಇಲ್ಲವೋ ಗೊತ್ತಿಲ್ಲ. ಅದು ಆ ಮನಸ್ಸಿಗಷ್ಟೇ ಗೊತ್ತು.

ಆದರೆ ನಮ್ಮ ಪಕ್ಕದೂರು ತಮಿಳುನಾಡಿನ ಅರಸಿಯಾಗುವ ಹಂಬಲದಿಂದ ಕಾಣದ ಕಡಲಿನೊಳಗೆ ಧುಮುಕಿ ಮುಳುಗಿದ ‘ಚಿನ್ನಮ್ಮ’ ಉರುಫ್ ಶಶಿಕಲಾ ಮತ್ತು ಅವರ ಗ್ಯಾಂಗ್ ಮುಳುಗಿ ಮುಳುಗಿ ಎದ್ದದ್ದು ಕರ್ನಾಟಕದ ಕಾರಾಗೃಹದಲ್ಲಿ. ಕೈದಿ ಎಂಬ ಹಣೆಪಟ್ಟಿ ಕಟ್ಟಿಸಿಕೊಂಡು. ಚಿನ್ನಮ್ಮನ ಹಂಬಲ, ಕನಸು ಎಲ್ಲವೂ ಒಣಗಿ ಒಣಗಿ ತರಗೆಲೆಯಂತಾಯ್ತು. ತರಗೆಲೆ ಹುಡಿ ಹುಡಿಯಾಯ್ತು. ಮೋಸ, ವಂಚನೆ, ದಗಲ್‌ಬಾಜಿ ಇತ್ಯಾದಿಗಳಿಂದಾಗಿ ಸೆರೆಮನೆ ಸೇರುವಂತಾಯ್ತು. ಸದ್ಯ, ಇವರ ಸಾಕುತಾಯಿ, ತಮಿಳುನಾಡಿನ ‘ಅಮ್ಮ’ ಜಯಲಲಿತಾ ಸತ್ತು ಬಚಾವಾದರು. ಇದನ್ನು ವಿಧಿಯಾಟವೆನ್ನಿ, ವಿಪರ್ಯಾಸವೆನ್ನಿ, ಏನಾದರೂ ಹೆಸರಿಡಿ. ವ್ಯತ್ಯಾಸವೇನೂ ಇಲ್ಲ. ಇದೆಯಲ್ಲ ದಾಸರ ಪದವೊಂದು ‘ನಾ ಮಾಡಿದಾ ಕರ್ಮ ಬಲವಂತವಾದರೆ ನೀ ಮಾಡುವುದೇನೋ ನರಹರಿಯೆ’ ಅಂತ.

ಈಗೊಂದು ಗೊಂದಲ. ತಮಿಳುನಾಡಿನಲ್ಲಿ ಅಪರಾಧ ಮಾಡಿದ ಈ ತಮಿಳು ಗ್ಯಾಂಗ್‌ಗೆ ಮದ್ರಾಸಿನ ಕಾರಾಗೃಹದಲ್ಲಿ ಜಾಗವಿರಲಿಲ್ಲವೇ? ಬೆಂಗಳೂರಿನ ಪರಪ್ಪನ ಅಗ್ರಹಾರ ಸೆರೆಮನೆ ಯಾಕೆ ಬೇಕಾಯ್ತು? ಉತ್ತರ ಹುಡುಕುವ ಕಷ್ಟ ಬೇಡ, ಬಿಡಿ. ಇದೆಲ್ಲಾ ಇತಿಹಾಸವಾಗಿಬಿಟ್ಟಿದೆ. ಸಜೆಯ ಅವಧಿ ಪೂರಾ ಕೈದಿಗಳು ಕಾರಾಗೃಹದಲ್ಲಿರುತ್ತಾರೆ. ಸಜೆಯ ಅವಧಿ ಮುಗಿದ ನಂತರ ಹೊರಗೆ ಬರುತ್ತಾರೆ. ಇದು ಸೀದಾಸಾದಾ ವಿಷಯ. ಏನೂ ವಿಶೇಷವಿಲ್ಲ.
ಆದರೆ ವಿಶೇಷವಿರುವುದು ಕಳೆದ ಕೆಲವು ದಿನಗಳಿಂದ ಸೃಷ್ಟಿಯಾಗುತ್ತಿರುವ ಹೊಸ ಇತಿಹಾಸದ ತಿರುವು ಪುಟಗಳಲ್ಲಿ. ‘ಶಶಿಕಲಾ ಗ್ಯಾಂಗ್‌ಗೆ ಕಾರಾಗೃಹದಲ್ಲಿ ಪಂಚತಾರಾ ಸೌಲಭ್ಯ! ಈ ಸೌಲಭ್ಯಕ್ಕಾಗಿ ಎರಡು ಕೋಟಿ ಲಂಚ. ಶಶಿಕಲಾ ಗ್ಯಾಂಗ್‌ಗೆ ಪ್ರತ್ಯೇಕ ಮೂರ್ನಾಲ್ಕು ಕೋಣೆ... ಹಾಸಿಗೆ, ಸೊಳ್ಳೆಪರದೆ, ಕುಕ್ಕರ್, ಕುರ್ಚಿ...’ ಹೀಗೆ. ಕರ್ನಾಟಕವಷ್ಟೇ ಅಲ್ಲ, ರಾಷ್ಟ್ರವ್ಯಾಪಿ ಸಂಚಲನ ಮೂಡಿಸಿದ ಸುದ್ದಿ ಇದು.

ಇಷ್ಟೇ ಇಲ್ಲ. ಇನ್ನೂ ವಿಶೇಷವೆಂದರೆ ತೆರೆಮರೆಯಲ್ಲಿ ಗುಟ್ಟು ಗುಟ್ಟಾಗಿ ನಡೆಯುತ್ತಿದ್ದ ಈ ಫೈವ್‌ಸ್ಟಾರ್ ಶಶಿಕಲಾ ಸೌಲಭ್ಯ ಮತ್ತು ಎರಡು ಕೋಟಿ ರೂಪಾಯಿಗಳ ಲಂಚಾವತಾರದ ರಹಸ್ಯವನ್ನು ಭೇದಿಸಿದ್ದು– ಕಳೆದ ವಾರವಷ್ಟೇ ಕಾರಾಗೃಹ ಡಿಐಜಿಯಾಗಿ ಅಧಿಕಾರ ಸ್ವೀಕರಿಸಿದ ರೂಪಾ ಅವರು ಎಂಬುದು ಹಾಗೂ ಈ ಆರೋಪಕ್ಕೆ ನೇರವಾಗಿ ಗುರಿಯಾಗಿಸಿದ್ದು ಕಾರಾಗೃಹಗಳ ಸರ್ವೋಚ್ಚ ಅಧಿಕಾರಿ ಸತ್ಯನಾರಾಯಣ ರಾವ್ ಅವರನ್ನು ಎಂಬುದು. ಇಂಥಾ ಅವಕಾಶಗಳನ್ನು ಬಳಸಿಕೊಳ್ಳುವ ಪ್ರತಿಪಕ್ಷದ ರಾಜಕಾರಣಿಗಳು ಸರ್ಕಾರದ ಮೇಲೆ ಯದ್ವಾತದ್ವಾ ಹರಿಹಾಯ್ದಿದ್ದಾರೆ. ಇದು ಸಹಜವೇ ಸರಿ. ಮತ್ತೆ ಅಷ್ಟೇ ತ್ವರಿತವಾಗಿ ಸರ್ಕಾರವೂ  ಕ್ರಮ ಕೈಗೊಂಡಿದೆ.  ಆಳವಾದ ತನಿಖೆ ನಡೆಸಲು ನಿವೃತ್ತ ಐಎಎಸ್ ಅಧಿಕಾರಿಯನ್ನು ನೇಮಿಸಿದ್ದಾರೆ. ಉರಿಯುವ ಬೆಂಕಿಯನ್ನು ನಂದಿಸಲು ಒಂದಷ್ಟು ತಣ್ಣೀರು ಎರಚಿದ್ದಾರೆ. ಇದೂನೂ ಸಹಜವೇ ಸರಿ. ಯಾವ ಪಕ್ಷದ ಸರ್ಕಾರವಿದ್ದರೂ ಮಾಡುತ್ತಿದ್ದದ್ದು ಇದನ್ನೇ.

ಈ ಹಿನ್ನೆಲೆಯಲ್ಲಿ ನಾನು ನನ್ನ ಕೆಲವೊಂದು ಅನಿಸಿಕೆಗಳನ್ನು ಇಲ್ಲಿ ಹಂಚಿಕೊಳ್ಳಲು ಬಯಸುತ್ತೇನೆ. ಕಾರಣ ಇಷ್ಟೇ. ಕಳೆದ ನಾಲ್ಕು ವರ್ಷಗಳಿಂದ ನಾನು ಮೈಸೂರು ಕೇಂದ್ರ ಕಾರಾಗೃಹದ ಸಲಹಾ ಸಮಿತಿಯ ಸದಸ್ಯನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಇದಲ್ಲದೆ ಹದಿನೈದು ವರ್ಷಗಳಿಂದ ಕೈದಿಗಳ ಪುನಶ್ಚೇತನ, ಮನಃಪರಿವರ್ತನೆ, ಸುಧಾರಣೆಯಲ್ಲಿ ನನ್ನನ್ನು ತೊಡಗಿಸಿಕೊಂಡಿದ್ದೇನೆ. ಕೈದಿಗಳ ದುಃಖದುಮ್ಮಾನಗಳಿಗೆ ಸ್ವಂದಿಸುತ್ತಿದ್ದೇನೆ. ನನ್ನ ‘ಅಂತಃಕರಣ’ ಟ್ರಸ್ಟ್ ಮೂಲಕ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರಗಳನ್ನು ಮೈಸೂರು ಕೇಂದ್ರ ಕಾರಾಗೃಹದಲ್ಲಿ ತೆರೆದಿದ್ದೇನೆ. ಇದರಿಂದಾಗಿ ಸುಮಾರು ಒಂದು ನೂರರಷ್ಟು ಮಂದಿ ಕೈದಿಗಳು ಡಿಗ್ರಿ ಪಡೆದಿದ್ದಾರೆ. ದೀರ್ಘಾವಧಿ ಸಜೆ ಮುಗಿಸಿ ಹೊರಬಂದ ಕೆಲವೊಂದು ಕೈದಿಗಳು ಮರುಜೀವನ ನಡೆಸಲು ಸೌಲಭ್ಯ ಒದಗಿಸಿದ್ದೇನೆ. ನಕ್ಸಲರೆಂಬ ಆರೋಪದಿಂದ ಮುಕ್ತರಾಗಿ ಹೊರ ಬಂದಿರುವವರು ಮುಖ್ಯವಾಹಿನಿಯಲ್ಲಿ ನೆಮ್ಮದಿಯಿಂದ ನಡೆಯಲು ನೆರವಾಗಿದ್ದೇನೆ. ಹಾಗೆಯೇ ಕಾರಾಗೃಹದೊಳಗಿನ ವಾತಾವರಣ  ಗಮನಿಸಿದ್ದೇನೆ. ಜೈಲು ಕಾನೂನು, ಅಧಿಕಾರಿಗಳ ಚೌಕಟ್ಟು, ಕೈದಿಗಳ ಮನಸ್ಥಿತಿ ಒಂದಷ್ಟು ಅರ್ಥವಾಗಿದೆ ನನಗೆ ಅಂತ ಭಾವಿಸಿದ್ದೇನೆ. ಈ ಕಾರಣದಿಂದಾಗಿ ನನ್ನ ಈ ಮುಂದಿನ ಮಾತುಗಳು.
ಮೇಲ್ನೋಟಕ್ಕೆ ಕಾರಾಗೃಹದಲ್ಲಿ ಎರಡು ರೀತಿಯ ಕೈದಿಗಳಿರುತ್ತಾರೆ. ಇನ್ನೂ ವಿಚಾರಣೆಯ ಹಂತದಲ್ಲಿರುವ ವಿಚಾರಣಾಧೀನ ಕೈದಿಗಳು. ಇನ್ನೊಂದು ವಿಚಾರಣೆ ಮುಗಿದು ಶಿಕ್ಷೆಗೆ ಒಳಗಾಗಿರುವ  ಸಜಾಬಂದಿಗಳು. ಸಜಾಬಂದಿಗಳಿಗೆ ಜೈಲಿನ ಬಿಳಿ ಉಡುಗೆ ಕಡ್ಡಾಯ. ಸಾಮಾನ್ಯವಾಗಿ ಎಲ್ಲರೂ ಅವರವರ ನಿಗದಿತ ಕೋಣೆಗಳಲ್ಲಿರಬೇಕು. ಇವರಿಗೆ ಜೈಲಿನ ಆಹಾರ. ಬೆಳಗ್ಗೆ 7 ಗಂಟೆಗೆ ತಿಂಡಿ, ಟೀ, 11 ಗಂಟೆಗೆ ಊಟ. ರಾಗಿ ಮುದ್ದೆ ಅಥವಾ ಚಪಾತಿ ಮತ್ತು ಅನ್ನ, ಬೇಳೆ ಸಾರು, ಸೊಪ್ಪು ತರಕಾರಿ, ಮಜ್ಜಿಗೆ. ರಾತ್ರಿಯ ಊಟ ಸಂಜೆ ಐದೂವರೆ ಗಂಟೆಗೆ. ಮಂಗಳವಾರ ಮೊಟ್ಟೆ. ಒಂದು, ಮೂರು ಮತ್ತು ಐದನೇ ಶುಕ್ರವಾರ ಮಟನ್, ಎರಡು ಮತ್ತು ನಾಲ್ಕನೇ ಶುಕ್ರವಾರ ಚಿಕನ್.

ಬೆಳಗ್ಗೆ ಆರೂವರೆ ಗಂಟೆಗೆ ಕೋಣೆಯ ಬಾಗಿಲು ತೆರೆದರೆ ಸಂಜೆ ಆರೂವರೆ ಗಂಟೆಗೆ ಎಲ್ಲರ ತಲೆ ಎಣಿಸಿ, ಹಾಜರಿ ತಕೊಂಡು ಕೋಣೆಗೆ ಬೀಗ ಹಾಕಲಾಗುತ್ತೆ. ಸಜಾಬಂದಿ ಕೈದಿಗಳು ಏನಾದರೊಂದು  ಕುಶಲ ಕಾಮಗಾರಿಯಲ್ಲಿ ತೊಡಗಿಕೊಳ್ಳಬಹುದು. ಉದಾಹರಣೆಗೆ ಹೊಲಿಗೆ, ಮರಗೆಲಸ, ನೇಯ್ಗೆ, ಬೇಕರಿ... ಹೀಗೆ. ಇಂಥವರಿಗೆ ಅವರವರ ಕಾರ್ಯಕುಶಲತೆಯನ್ನು ಗಮನಿಸಿ ದಿನಕ್ಕೆ 30, 40 ಅಥವಾ 50 ರೂಪಾಯಿ ಕೂಲಿ ಅಥವಾ ವೇತನ ನೀಡಲಾಗುತ್ತೆ.

ತೀರಾ ಆತಂಕಕಾರಿ ಸಮಾಜಘಾತುಕ ರೌಡಿ ಕೈದಿಗಳನ್ನು ಒಂಟಿಯಾಗಿ ಪ್ರತ್ಯೇಕ ಕೋಣೆಯಲ್ಲಿಡಲಾಗುತ್ತದೆ. ಕೋಣೆಗೆ ಬೀಗ, ಪೊಲೀಸು ಕಾವಲು. ಇದೇ ರೀತಿ ಯಾರಾದರೂ ಕೈದಿಗೆ ಇತರರಿಂದ ಪ್ರಾಣಭಯವಿದ್ದರೆ, ಅಡುಗೇಲಿ ವಿಷ ಹಾಕುತ್ತಾರೆ ಎಂಬ ಆತಂಕವಿದ್ದರೆ ಅಂಥವರನ್ನು ವಿಶೇಷ ಕೋಣೆಯಲ್ಲಿ ವಿಶೇಷ ಪೊಲೀಸು ರಕ್ಷಣೆಯಲ್ಲಿ ಪ್ರತ್ಯೇಕವಾಗಿ ಇರಿಸಲಾಗುತ್ತದೆ. ಕೆಲವೊಂದು ವರ್ಗದ ರಾಜಕೀಯ ಬಂದಿಗಳಿಗೂ ಇಂಥಾ ಪ್ರತ್ಯೇಕ ಕೋಣೆಯ, ಪ್ರತ್ಯೇಕ ಅಡುಗೆಯ ವ್ಯವಸ್ಥೆ ಇರುತ್ತದೆ. ಹಾಗೆಯೇ ದೇಹಾರೋಗ್ಯದಲ್ಲಿ ತುಂಬಾ ಗಂಭೀರ ಸಮಸ್ಯೆಯಿರುವ ಕೈದಿಗಳಿಗೂ ಪ್ರತ್ಯೇಕ ವ್ಯವಸ್ಥೆ ಇರುತ್ತದೆ. ಇನ್ನಿತರೆ ಸಾಮಗ್ರಿಗಳೆಂದರೆ ಕೈದಿಗಳು ಹೊದೆಯಲು ಜೈಲಿನ ಕೈಮಗ್ಗದಲ್ಲಿ ನೇಯ್ದಿರುವ ಒಂದು ಶಾಲು, ಮಲಗಲು ಮ್ಯಾಟ್ ರೀತಿಯ ಒಂದು ಮಿನಿ ಹಾಸುಗೆ ರೀತಿಯ ಹಾಸು, ಒಂದು ತಲೆದಿಂಬು. ವಿಚಾರಣಾಧೀನ ಕೈದಿಗಳು ಸಾಮಾನ್ಯವಾಗಿ ತಮ್ಮ ಕೋಣೆಯ ಒಳಗೇ ಇರಬೇಕಾಗುತ್ತದೆ. ನ್ಯಾಯಾಲಯಗಳಿಗೆ ಹೋಗಬೇಕಾದಾಗ ಪೊಲೀಸ್ ಪಹರೆಯೊಂದಿಗೆ ಕರೆದೊಯ್ಯಲಾಗುತ್ತದೆ. ಸಜಾಬಂದಿಗಳಿಗೆ ಸದಾಕಾಲ ಕೋಣೆಯೊಳಗಿರಬೇಕು ಎಂಬ ನಿರ್ಬಂಧವಿಲ್ಲ. ಹೇಗೂ ಯಾವುದಾದರೊಂದು ಕುಶಲ ಕೆಲಸದಲ್ಲಿ ತೊಡಗಿಸಿಕೊಂಡಿರಬೇಕಲ್ಲವಾ? ಇಂತಹವರಲ್ಲಿ ಕೆಲವರು ಜೈಲು ಕಚೇರಿಯಲ್ಲಿ ಕಂಪ್ಯೂಟರ್ ಆಪರೇಟರ್ ಕೆಲಸದಲ್ಲಿ ತೊಡಗಿರುತ್ತಾರೆ. ಮೈಸೂರು ಕೇಂದ್ರ ಕಾರಾಗೃಹದ ಕಚೇರಿಯ ಬಹುತೇಕ ಎಲ್ಲಾ ಕೆಲಸ  ಕಾರ್ಯಗಳ ನಿರ್ವಹಣೆ ಮಾಡುತ್ತಿರುವವರು ಸುಧಾರಣೆ ಹೊಂದಿರುವ ದೀರ್ಘಾವಧಿ ಸಜೆಯ ಕೈದಿಗಳು ಎಂಬುದು ಗಮನಾರ್ಹ. ಇದಂತೂ ನಿಜಕ್ಕೂ ಮೆಚ್ಚಲೇಬೇಕಾದಂಥ ವಿಷಯ. ಬಿಡುಗಡೆಯ ನಂತರ ಕಂಪ್ಯೂಟರ್ ಶಾಲೆ,  ಶಾಖೆ ತೆರೆದು ಬದುಕು ಸಾಗಿಸುತ್ತೇವೆ ಎನ್ನುತ್ತಾರೆ ಈ ಸುಧಾರಿತ ಕೈದಿಗಳು!

ಅಂದ್ಹಾಗೆ ಕಾರಾಗೃಹದಲ್ಲಿ ಗುತ್ತಿಗೆ ರೀತಿಯಲ್ಲಿ ಕೆಲಸ ಮಾಡುವ ವೈದ್ಯರಿರುತ್ತಾರೆ. ಕೈದಿಗಳ ಆರೋಗ್ಯ ತಪಾಸಣೆ ಮಾಡುತ್ತಾರೆ. ಔಷಧಿ ನೀಡುತ್ತಾರೆ. ಅಂಟು ರೋಗ ಅಥವಾ ಆರೋಗ್ಯದಲ್ಲಿ ನಾಜೂಕು ಸ್ಥಿತಿ ಉಂಟಾದರೆ ಕಾರಾಗೃಹದೊಳಗಿರುವ ವಿಶೇಷ ವಾರ್ಡಲ್ಲಿ ರೋಗಿ ಕೈದಿಯನ್ನು ಪ್ರತ್ಯೇಕವಾಗಿ ಇರಿಸಲಾಗುತ್ತದೆ. ಹೆಚ್ಚಿನ ಚಿಕಿತ್ಸೆ ಬೇಕಾದರೆ ಹೊರಗಿನ ಆಸ್ಪತ್ರೆಗೆ ಪೊಲೀಸ್ ಪಹರೆಯೊಂದಿಗೆ ಸೇರಿಸಲಾಗುತ್ತದೆ.

ಸ್ಥೂಲವಾಗಿ ಹೇಳುವುದಾದರೆ ಕಾರಾಗೃಹದೊಳಗಿದ್ದರೂ  ಯಾವ್ಯಾವುದೋ ಅನಿರೀಕ್ಷಿತ ಕಾರಣಗಳಿಂದ ಪ್ರಾಣಾಪಾಯದ ಆತಂಕವಿರುವ ಕೈದಿಗಳಿಗೆ ಅಥವಾ ನಾಜೂಕು ಸ್ವಾಸ್ಥ್ಯದ ಕೈದಿಗಳಿಗೆ ವಿಶೇಷ ರಕ್ಷಣೆ ನೀಡಿ ಪ್ರತ್ಯೇಕವಾಗಿರಿಸುವುದು ವಿಶೇಷ ಸೌಲಭ್ಯವಲ್ಲ. Segregation and Security is not a Facility. ಕಾರಾಗೃಹದ ನಿಯಮಾವಳಿಯಲ್ಲಿ ಹೀಗೆ ಇದೆ. ಇದನ್ನೇ ಫೈವ್‌ಸ್ಟಾರ್ ಸೌಲಭ್ಯ ಎನ್ನುವುದಾದರೆ ಇಂಥಾ ಫೈವ್‌ಸ್ಟಾರ್ ಸೌಲಭ್ಯವನ್ನು ಕೇವಲ ಫೈವ್‌ಸ್ಟಾರ್ ಕೈದಿಗಳಿಗೆ ಮಾತ್ರವಲ್ಲ, ಸಾಮಾನ್ಯ ಕೈದಿಗೂ ನೀಡಲಾಗುತ್ತದೆ ನಿಯಮಾನುಸಾರ. ಜೊತೆಗೆ ಈ ಸೌಲಭ್ಯವನ್ನೂ ಗಮನಿಸಬೇಕು. ಐದು ಜನ ಕೈದಿಗಳಿರುವ ಕೋಣೆಯಾಗಲಿ, ಇಪ್ಪತ್ತು ಜನರಿರುವ ಕೋಣೆಯಾಗಲಿ ಅಥವಾ ಮೂವತ್ತು ಕೈದಿಗಳಿರುವ ಕೋಣೆಯಾಗಲಿ, ಪ್ರತಿ ಕೋಣೆಯಲ್ಲೂ ಫ್ಯಾನ್ ಇರುತ್ತದೆ. ಟಿ.ವಿ. ಇರುತ್ತದೆ.

ಯಾಕೋ ಏನೋ ಇತಿಹಾಸದ ಹಳೆಯ ಪುಟವೊಂದು ತೆರೆದುಕೊಳ್ಳುತ್ತಿದೆ. ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು ತುರ್ತುಪರಿಸ್ಥಿತಿ ಹೇರಿದ್ದ ಕಾಲ. ಗಣ್ಯ ಮಾನ್ಯ ವಿಪಕ್ಷ ನಾಯಕರೆಲ್ಲಾ ಬಹುತೇಕ– ಬೆಂಗಳೂರಿನ ಸೆಂಟ್ರಲ್‌ ಜೈಲಲ್ಲಿದ್ದರು. ಅಡ್ವಾಣಿ, ಪವಾರ್‌, ಚಂದ್ರಶೇಖರ್‌, ನಮ್ಮ ದೇವೇಗೌಡ್ರು,  ನಾಗಪ್ಪ ಆಳ್ವ ಮುಂತಾದವರು. ಅಂದು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದವರು ದೇವರಾಜ ಅರಸರು. ಎಮರ್ಜೆನ್ಸಿ ಸುಗ್ರೀವಾಜ್ಞೆಯ ಆದೇಶವಿದ್ದದ್ದು– ಈ ರಾಜಕೀಯ ಕೈದಿಗಳಿಗೆ ನಿರ್ದಯ ಜೈಲುವಾಸವಿರಬೇಕು ಅಂತ. ಆದರೆ ಅರಸರು ಅವರನ್ನು ಹೇಗೆ ನೋಡಿಕೊಂಡರು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಾದರೆ ಅರಸರ ಬಗ್ಗೆ ಆ ನಾಯಕರು ಹೇಳಿರುವುದನ್ನು, ಬರೆದಿರುವುದನ್ನು ಗಮನಿಸಬೇಕು. ನಾಗಪ್ಪ ಆಳ್ವರ ಹೆಸರಿನಲ್ಲಿ ಎಲ್ಲರಿಗೂ ಊಟ ಕೊಂಡೊಯ್ಯುತ್ತಿದ್ದ ಜೀವರಾಜ ಆಳ್ವ ಜೊತೆಯಲ್ಲಿ ನಾನೂ ಹೋಗುತ್ತಿದ್ದೆ. ಲೈಬ್ರರಿಯಲ್ಲಿ ಎಲ್ಲರೂ ಒಟ್ಟಿಗೆ ಕುಳಿತು ಊಟ ಮಾಡುವುದನ್ನು ನೋಡಿದ್ದೀನಿ. ಸಾಧ್ಯವಾದಷ್ಟು ಒಬ್ಬರಿರುವ ಸೆಲ್‌, ಫ್ಯಾನ್‌, ಬಿಸಿನೀರು, ಹಾಸಿಗೆ, ವಿಶೇಷ ಡಾಕ್ಟರ್‌ ಮುಂತಾದ ವಿಶೇಷ ಸೌಕರ್ಯವನ್ನು ಅರಸರು ಆ ‘ಎಮರ್ಜೆನ್ಸಿ ಬಂದಿ’ಗಳಿಗೆ ಒದಗಿಸಿದ್ದರು. ಅದು ಅವರ ಹೃದಯವಂತಿಕೆ. ಇದು ಗೊತ್ತಾದಾಗ ಇಂದಿರಾಜಿ, ಅರಸರ ಮೇಲೆ ಗರಂ ಆಗಿದ್ದರು. ಅರಸರು ಅದನ್ನು ತಲೆಗೆ ಹಾಕಿಕೊಳ್ಳಲಿಲ್ಲ. ಇದೂನೂ ಇತಿಹಾಸ. ಶಶಿಕಲಾ ಗ್ಯಾಂಗನ್ನು ನಾನು ಈ ನಾಯಕರೊಂದಿಗೆ ತಾಳೆ ಹಾಕುತ್ತಿಲ್ಲ. ಅರಸರ ಸೌಜನ್ಯ ಮತ್ತು ಗೌರವ ಪ್ರಜ್ಞೆಯನ್ನಷ್ಟೇ ಹೇಳುತ್ತಿರುವುದು.

ಕೊನೇ ಮಾತು. ಕಾರಾಗೃಹದೊಳಗೆ ಆಗಬೇಕಾಗಿರುವ ಕೆಲಸಗಳು ಬೇಕಾದಷ್ಟಿವೆ. ಮುಖ್ಯವಾಗಿ ಸ್ಥಳದ ಕೊರತೆ,  ಸಿಬ್ಬಂದಿಯ ಕೊರತೆ ಮತ್ತು ಮೂಲ ಸೌಕರ್ಯದ ಕೊರತೆ. ಸಾಮಾನ್ಯವಾಗಿ 6 ಕೈದಿಗಳಿಗೆ ಒಬ್ಬ ಮೇಲ್ವಿಚಾರಕ ಇರಬೇಕೆಂಬ ನಿಯಮವಿದೆ. ಆದರೆ ವಾಸ್ತವವಾಗಿ 60 ಕೈದಿಗಳಿಗೂ ಒಬ್ಬ ಮೇಲ್ವಿಚಾರಕ ಇರೋದಿಲ್ಲ. ಉದಾಹರಣೆಗೆ ಮೈಸೂರು ಕಾರಾಗೃಹದಲ್ಲಿ ನಿಯಮದಂತೆ 562 ಕೈದಿಗಳಿಗೆ ಮಾತ್ರ ಅವಕಾಶವಿದೆ. ಆದರೆ ನೆನ್ನೆ ಇದ್ದ ಸಂಖ್ಯೆ 915 ಮಂದಿ. ಇದು ಸಾವಿರ ಸಂಖ್ಯೆಯನ್ನು ದಾಟುತ್ತದೆ. ಮೂವರು ಜೈಲರ್‌ಗಳು ಇಷ್ಟೊಂದು ಮಂದಿಯನ್ನು ಗಮನಿಸುವುದು ಹೇಗೆ ಸಾಧ್ಯ? 40 ಸೆಲ್‌ಗಳನ್ನು, ಬ್ಯಾರಕ್‌ಗಳನ್ನು ಹದ್ದಿನ ಕಣ್ಣಿಂದ ಪರಿವೀಕ್ಷಿಸಲು ಸಾಕೇ ಇಷ್ಟು ರಕ್ಷಕರು? ರಾತ್ರಿಯಲ್ಲೂ  ಗಸ್ತು ಕಾಯುತ್ತಲೇ ಇರಬೇಕಾದ್ದು ತುಂಬಾ ಅವಶ್ಯಕ. ಗುತ್ತಿಗೆ ಆಧಾರದ ಮೇಲೆ ಇಬ್ಬರು ಡಾಕ್ಟರುಗಳಿರುತ್ತಾರೆ. ಸಂಜೆ ಇವರು ಹೊರಟುಹೋಗುತ್ತಾರೆ. ರಾತ್ರಿವೇಳೆ ಕೈದಿಯ ಆರೋಗ್ಯ ಕೆಟ್ಟು ನಾಜೂಕಾದರೆ ಏನು ಸ್ಥಿತಿ?  ಸ್ಥಳಾಭಾವವನ್ನು ನೀಗಿಸಲು ವಿಚಾರಣಾಧೀನ ಕೈದಿಗಳಿಗೆಂದೇ ಪ್ರತ್ಯೇಕ ಕಾರಾಗೃಹವನ್ನು ತೆರೆಯುವುದು ಉಚಿತ. ಇಂದು ಬಂದು ನಾಳೆ ಹೋಗುವ, ನಾಳೆ ಬಂದು ನಾಳಿದ್ದು ಹೋಗುವ ಇಂಥ ಕೈದಿಗಳಿಂದ ಕಾರಾಗೃಹದೊಳಗಿನ ವಾತಾವರಣ ಹೆಚ್ಚು ಕೆಡುತ್ತದೆ.

ಸರ್ಕಾರ, ಅಧಿಕಾರಿಗಳು, ಮಂತ್ರಿಗಳು, ಸೇವಾ ಸಂಸ್ಥೆಗಳು ಅತ್ಯಂತ ಪ್ರಮುಖವಾಗಿ ಗಮನಿಸಬೇಕಾದ ಅಂಶವೊಂದಿದೆ. ಯಾವುದೋ ದುರ್ಬಲ ಗಳಿಗೆಯಲ್ಲಿ ಕೊಲೆಯೋ  ಇನ್ನೆಂಥದ್ದೋ ಗಂಭೀರ ಅಪರಾಧ ಮಾಡಿ ಜೀವಾವಧಿ,  ದೀರ್ಘಾವಧಿ ಸಜೆ ಅನುಭವಿಸುತ್ತಿರುವ ಕೈದಿಗಳೂ  ನಮ್ಮ ಹಾಗೆ ಮನುಷ್ಯರೇ. ಕಾಲ ಕಳೆದಂತೆ ಅವರಿಗೆ ತಮ್ಮ ತಪ್ಪಿನ ಅರಿವಾಗಿರುತ್ತದೆ. ಪಶ್ಚಾತ್ತಾಪ ಪಡುತ್ತಾರೆ. ಹೊರಗಿನ ತಮ್ಮ ಮನೆಯವರ, ಮಕ್ಕಳ ಕುರಿತು ಚಿಂತಿಸುತ್ತಾರೆ, ಮರುಗುತ್ತಾರೆ,  ಅಳುತ್ತಾರೆ. ಅವರ ಸುಧಾರಣೆಯಾಗಬೇಕು. ಅವರ ಮನಃಪರಿವರ್ತನೆಯಾಗಬೇಕು. ನಿಜ. ಆದರೆ ಕೇವಲ ರಾಜಕೀಯ ಭಾಷಣಗಳಿಂದ ಇದು ಸಾಧ್ಯವಿಲ್ಲ. ವಿಧಾನಸೌಧದ ಮೂರನೇ ಮಹಡಿಯ ಹವಾನಿಯಂತ್ರಿತ ಕಲ್ಲುಕೋಣೆಯಲ್ಲಿ ಕುಳಿತವರು ಕಾನೂನಿನ ಅಕ್ಷರಗಳ ಚೌಕಟ್ಟಿನಲ್ಲಿ ಈ ನೊಂದ ಮಾನವರ ಹಣೆಬರಹವನ್ನು ನಿರ್ಧರಿಸುತ್ತಿರುವುದು ಬದಲಾಗಬೇಕು. ಕೈದಿಗಳ ನೋವಿಗೆ ಸ್ಪಂದಿಸುವಂತಾಗಬೇಕು. ತಮ್ಮ ಕಷ್ಟವನ್ನು ಆಲಿಸುವ, ಒಂದಷ್ಟು ಪರಿಹರಿಸುವ ಜನರೂ ಇದ್ದಾರೆ ಎನ್ನುವಂತಾಗಬೇಕು. ಆಗಲೀಗ ಅವರೂ ಮನುಷ್ಯರಂತಾಗುತ್ತಾರೆ. ಇಲ್ಲವಾದರೆ ಹುಚ್ಚು ಹಿಡಿಯುತ್ತದೆ. ನೋವಿನ ಸೇಡು ತೀರಿಸುವ ಕ್ರಿಮಿನಲ್‌ಗಳಾಗುತ್ತಾರೆ. ಹಾಗೆಯೇ ತಮಾಷೆಗೆ ಹೇಳುವುದಾದರೆ ಕೈದಿಗಳ ಹಣೆಬರಹ ಬರೆಯುವ ಇಂಥಾ ಅಧಿಕಾರಿ ಮಂತ್ರಿಗಳು ಒಂದೆರಡು ವಾರ ಅಥವಾ ತಿಂಗಳಕಾಲ ಜೈಲಿನಲ್ಲಿದ್ದರೆ ಆಗ ಅವರಿಗೆ ಕೈದಿಗಳ ಮನಸ್ಥಿತಿ ಅರ್ಥವಾಗಬಹುದೇನೋ.
ಕಾರಾಗೃಹ ಎಂಬುದು ಶಿಕ್ಷೆಯ ಕೇಂದ್ರವಾಗಬಾರದು. ಪರಿವರ್ತನೆಯ ಶಿಬಿರವಾಗಬೇಕು. ಗೊತ್ತಿದ್ದೋ ಗೊತ್ತಿಲ್ಲದೆಯೋ ಅಪರಾಧವೆಸಗಿ ಕಾರಾಗೃಹದೊಳಗೆ ಬಂದ ಅಪರಾಧಿ ಹೊಸ ಮನುಷ್ಯನಾಗಿ ಹೊರಗೆ ಬರುವಂತಾಗಬೇಕು.  ಸ್ವತಂತ್ರವಾಗಿ ಹೊಸ ಜೀವನ ಸಾಗಿಸಲು ಸರ್ಕಾರ ಅವನಿಗೆ ನೆರವಾಗಬೇಕು. ಆದರೆ ನಮ್ಮ ಸರ್ಕಾರಕ್ಕೆ ಅದರತ್ತ ಗಮನವೇ ಇಲ್ಲ. ಕಾರಾಗೃಹದಿಂದ ಆಚೆಗೆ ಹೆಜ್ಜೆಯಿಟ್ಟನೆಂದರೆ ಸರ್ಕಾರಕ್ಕೂ ಆತನಿಗೂ ಏನೇನೂ ಸಂಬಂಧವಿರುವುದಿಲ್ಲ. ಆದರೆ ಆತನ ಮುಂದಿನ ಬದುಕಿನ ಬಗ್ಗೆ ಕಾಳಜಿಯಂತೂ ಇರಬೇಕು. ಕೈದಿಗಳ ಹಕ್ಕಾಗಿರುವ ‘ಪೆರೋಲ್‌’ ರಜೆಯನ್ನು ನೀಡುವಾಗ ಅಧಿಕಾರಿಗಳು, ಪೊಲೀಸ್‌ ಅಧಿಕಾರಿಗಳು ತೋರುವ ಅಮಾನವೀಯ ಭ್ರಷ್ಟ ರೀತಿನೀತಿಗಳು ಬದಲಾಗಬೇಕು.

ಕೊನೇಲೊಂದು ಪ್ರಶ್ನೆ. ನಮ್ಮ ಸರ್ಕಾರ ಕೆಲವು ಚಳವಳಿಗಾರರನ್ನು ನಕ್ಸಲರೆಂದು ಬಂಧಿಸುತ್ತದೆ. ಏಳೆಂಟು ವರ್ಷಗಳ ನಂತರ ಅವರನ್ನು ಆರೋಪಮುಕ್ತಗೊಳಿಸಿ ನ್ಯಾಯಾಲಯ ಬಿಡುಗಡೆ ಮಾಡುತ್ತದೆ ಎನ್ನಿ. ಮುಕ್ತರಾಗಿ ಹೊರಗೆ ಹೋದ ನಂತರವೂ ಆ ಆರೋಪದ ಮಸಿಯನ್ನೇ ನಮ್ಮ ಸಮಾಜ ಗುರುತಿಸುತ್ತದೆ. ಅವರು ನೆಮ್ಮದಿಯಿಂದ ಬದುಕಲು ಬಿಡುವುದಿಲ್ಲ. ವಿನಾಕಾರಣ ಜೈಲಲ್ಲಿದ್ದ ಆ ಏಳೆಂಟು ವರ್ಷಗಳಿಗೆ ಪರಿಹಾರ ಯಾರು ಕೊಡುತ್ತಾರೆ? ಉದಾಹರಣೆಗೆ– ಯಾರಾದರೂ ತಾನು ನಕ್ಸಲನಾಗಿದ್ದೆ, ಶರಣಾಗಿದ್ದೇನೆ ಎಂದು ಶರಣಾದರೆ ಸರ್ಕಾರ ಅಂಥವರಿಗೆ ‘ಪ್ಯಾಕೇಜ್‌’ ಅಡಿಯಲ್ಲಿ ಐದು ಲಕ್ಷ ರೂಪಾಯಿಗಳನ್ನು ನೀಡುತ್ತದೆ. ಅವರಿಗೊಂದು ಉದ್ಯಮ ಸ್ಥಾಪಿಸಲು ನೆರವಾಗುತ್ತದೆ. ಆದರೆ ಆರೋಪ ಮುಕ್ತರಾದವರತ್ತ ಯಾಕೆ ಗಮನ ಹರಿಸೋದಿಲ್ಲ?

ಹೋಗಲಿ ಬಿಡಿ. ಒಂದು ಸಂತೋಷದ ಸಂಗತಿ. ಅಖಿಲ ಭಾರತ ಸರ್ವೇಕ್ಷಣ ವರದಿಯ ಪ್ರಕಾರ  ಬಿಹಾರ್‌, ಉತ್ತರ ಪ್ರದೇಶದ ಕಾರಾಗೃಹಗಳೊಂದಿಗೆ ತುಲನೆ ಮಾಡಿದಾಗ ನಮ್ಮ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ತುಂಬಾ ಶಿಸ್ತು ಸಂಯಮ ಇದೆಯಂತೆ. ನನ್ನ ದೃಷ್ಟಿಯಲ್ಲಿ ನಮ್ಮ ಮೈಸೂರಿನ ಕಾರಾಗೃಹ ನಿಜಕ್ಕೂ ಪರಿವರ್ತನಾ ಕೇಂದ್ರದಂತಿದೆ.  ಇದಕ್ಕೆ ಕಾರಣ ನಾಲ್ಕಾರು: ಕೈದಿಗಳನ್ನು ಸೋದರರಂತೆ, ಸೋದರಿಯರಂತೆ ಪರಿಗಣಿಸಿ ಎಲ್ಲ ರೀತಿಯಲ್ಲೂ ಸ್ಪಂದಿಸುವ, ಅವರ ಕಣ್ಣೀರು ಒರೆಸುವ ಕಾರ್‍ಯದಲ್ಲಿ ಹಾಗೂ ಅವರ ಭವಿಷ್ಯದ ಬದುಕಲ್ಲಿ ಬೆಳಕು ಇದೆ, ಜೀವಂತಿಕೆಯೂ ಇದೆ ಎಂಬ ಆತ್ಮವಿಶ್ವಾಸವನ್ನು ತುಂಬುವ ಹಲವಾರು ಸೇವಾ ಮನೋಭಾವಾದ ಸಂಸ್ಥೆಗಳು, ವ್ಯಕ್ತಿಗಳು ನಿರತರಾಗಿದ್ದಾರೆ. ಆದರೆ ವಾಸ್ತವವಾಗಿ ಸರ್ಕಾರವೇ ಈ ಕಾರ್ಯವನ್ನು ಮಾಡಬೇಕು. ಆದರೆ ಇಲ್ಲಿ ಮಾಡುತ್ತಿಲ್ಲ. ‘ಪರಿವರ್ತನಾ’ ಮೆಲೊಡಿ ತಂಡದವರ ಗೀತಗಾಯನದ ಇಂಪು,  ಕೈದಿಗಳ ನಾಟಕದ ತಂಡವನ್ನು ರೂಪಿಸಿ ರಾಜ್ಯದಾದ್ಯಂತ ಹಾಗೂ ದೂರದ ದೆಹಲಿಯಲ್ಲೂ ನಾಟಕ ಪ್ರದರ್ಶಿಸಿ, ಕೈದಿಗಳಲ್ಲಿ ಹೊಸ ಚಿಂತನೆಯನ್ನು ಹೊತ್ತಿಸುವ ‘ಸಂಕಲ್ಪ’ದ ಹುಲಿಗಪ್ಪ ಕಟ್ಟೀಮನಿ  ಅವರ ಯತ್ನ, ‘ಅಂತಃಕರಣ’ ಟ್ರಸ್‌್ಟ ವತಿಯಿಂದ ವಿ.ವಿ. ಅಧ್ಯಯನ ಕೇಂದ್ರದಲ್ಲಿ ಶಿಕ್ಷಣ, ರೇಷ್ಮೆ ಗೂಡಿನಿಂದ ಕುಶಲ ವಸ್ತು  ತಯಾರಿಕಾ ಶಿಬಿರಗಳು, ಕೈದಿಗಳ ಮನೆಯ ಹಿರಿಯರ, ಮಕ್ಕಳ ಮೇಲ್ವಿಚಾರಣೆ... ಹೀಗೆ ಹೃದಯ ಮುಟ್ಟುವ ಕಾರ್ಯಗಳು. ಇದೆಲ್ಲದರ ಜೊತೆಗೆ ಹಿರಿ ಅಣ್ಣನ ಸ್ನೇಹ ಮತ್ತು ಹಿರಿ ಅಕ್ಕ ಮತ್ತು ತಾಯಿಯ ಮಮತೆಯನ್ನು ತೋರುವ ಸದ್ಯ ಮೈಸೂರು ಕಾರಾಗೃಹದ ಅಧಿಕಾರಿಗಳು...

ನನಗನಿಸುತ್ತೆ– ಮೈಸೂರು ಕೇಂದ್ರ ಕಾರಾಗೃಹದಲ್ಲಿರುವ ಇಂಥ ವಾತಾವರಣ ಎಲ್ಲ ಕಾರಾಗೃಹಗಳಲ್ಲೂ ಇರುವಂತಾದರೆ... ಎಷ್ಟೊಂದು ಚಂದ. ಇದೂನೂ ಒಂದು ಕಾಣದ ಕಡಲು. ಈ ಕಾಣದ ಕಡಲಿಗೆ ಹಂಬಲಿಸಿದೆ ನನ್ನ ಮನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT