ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಮಿಫೈನಲ್‌ಗೆ ರಾಹುಲ್‌ ಯಾದವ್

ರಷ್ಯಾ ಓಪನ್‌ ಬ್ಯಾಡ್ಮಿಂಟನ್‌: ರಾಮಚಂದ್ರನ್‌ ಮಿಂಚು
Last Updated 21 ಜುಲೈ 2017, 19:30 IST
ಅಕ್ಷರ ಗಾತ್ರ

ವ್ಲಾಡಿವೊಸ್ತೊಕ: ಅಮೋಘ ಆಟ ಆಡಿದ ಭಾರತದ ರಾಹುಲ್‌ ಯಾದವ್‌ ಚಿತ್ತಾಬೊಯಿನಾ ಅವರು ರಷ್ಯಾ ಓಪನ್‌ ಗ್ರ್ಯಾನ್‌ ಪ್ರಿ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಸೆಮಿಫೈನಲ್‌ ಪ್ರವೇಶಿಸಿದ್ದಾರೆ.

ಪುರುಷರ ಡಬಲ್ಸ್‌ ವಿಭಾಗದಲ್ಲಿ ಭಾರತದ ಸವಾಲು ಎತ್ತಿ ಹಿಡಿದಿರುವ ಎಂ.ಆರ್‌.ಅರ್ಜುನ್‌ ಮತ್ತು ರಾಮಚಂದ್ರನ್‌ ಶ್ಲೋಕ್‌ ಅವರೂ ನಾಲ್ಕರ ಘಟ್ಟಕ್ಕೆ ಲಗ್ಗೆ ಇಟ್ಟಿದ್ದಾರೆ.

ಶುಕ್ರವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಕ್ವಾರ್ಟರ್‌ ಫೈನಲ್‌ ಹಣಾಹಣಿಯಲ್ಲಿ ರಾಹುಲ್‌ 13–11, 11–5, 11–6ರಲ್ಲಿ ಇಂಗ್ಲೆಂಡ್‌ನ ವಾಂಗ್‌ ಯುಯೆಹಾಂಗ್‌ ಅವರನ್ನು ಪರಾಭವಗೊಳಿಸಿದರು.

ಹಿಂದಿನ ಪಂದ್ಯಗಳಲ್ಲಿ ಬಲಿಷ್ಠ ಎದುರಾಳಿಗಳನ್ನು ಮಣಿಸಿ ವಿಶ್ವಾಸ ಹೆಚ್ಚಿಸಿಕೊಂಡಿದ್ದ ರಾಹುಲ್‌ ಅವರು ವಾಂಗ್‌ ಎದುರಿನ ಹೋರಾಟದಲ್ಲಿ ದಿಟ್ಟ ಆರಂಭ ಪಡೆಯಲು ವಿಫಲರಾದರು.

ಚುರುಕಿನ ಸರ್ವ್‌ ಮತ್ತು ಆಕರ್ಷಕ ಕ್ರಾಸ್‌ಕೋರ್ಟ್‌ ಹೊಡೆತಗಳ ಮೂಲಕ ಭಾರತದ ಆಟಗಾರನನ್ನು ಕಂಗೆಡಿಸಿದ ವಾಂಗ್‌  ಸುಲಭವಾಗಿ ಮೊದಲ ಗೇಮ್‌ ಜಯಿಸಿದರು.

ಆರಂಭಿಕ ನಿರಾಸೆಯಿಂದ ರಾಹುಲ್‌ ಎದೆಗುಂದಲಿಲ್ಲ. ಎರಡು ಮತ್ತು ಮೂರನೇ ಗೇಮ್‌ಗಳಲ್ಲಿ ಮಿಂಚಿನ ಸಾಮರ್ಥ್ಯ ತೋರಿದ ಅವರು 22ನೇ ನಿಮಿಷದಲ್ಲಿ ಎದುರಾಳಿಯ ಸವಾಲು ಮೀರಿ ನಿಂತು ಗೆಲುವು ತಮ್ಮದಾಗಿಸಿಕೊಂಡರು.

ಸೆಮಿಫೈನಲ್‌ ಹಣಾಹಣಿಯಲ್ಲಿ 19 ವರ್ಷದ ರಾಹುಲ್‌ ಅವರು ಎರಡನೇ ಶ್ರೇಯಾಂಕಿತ ಆಟಗಾರ ವ್ಲಾದಿಮಿರ್‌ ಮಾಲ್ಕೊವಾ ವಿರುದ್ಧ ಸೆಣಸಲಿದ್ದಾರೆ.

ಪುರುಷರ ಡಬಲ್ಸ್‌ ವಿಭಾಗದ ಎಂಟರ ಘಟ್ಟದ ಹೋರಾಟದಲ್ಲಿ ನಾಲ್ಕನೇ ಶ್ರೇಯಾಂಕಿತ ಜೋಡಿ ಅರ್ಜುನ್‌ ಮತ್ತು ಶ್ಲೋಕ್‌ 7–11, 11–9, 11–8, 11–9ರಲ್ಲಿ ಜಪಾನ್‌ನ ಮಸಾಟೊ ಟಕಾನೊ ಮತ್ತು ಯೊಶಿಕಿ ಸುಕಮಾಟೊ ಅವರನ್ನು ಸೋಲಿಸಿತು. ಮುಂದಿನ ಸುತ್ತಿನಲ್ಲಿ ಅರ್ಜುನ್‌ ಮತ್ತು ಶ್ಲೋಕ್‌  ಅವರು ವ್ಲಾದಿಮಿರ್‌ ಇವಾನೊವ್‌ ಮತ್ತು ಇವಾನ್‌ ಸೊಜೊನೊವ್‌ ವಿರುದ್ಧ ಸೆಣಸಲಿದ್ದಾರೆ.

ಪವಾರ್‌ಗೆ ನಿರಾಸೆ: ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಕಣದಲ್ಲಿದ್ದ ಎಂಟನೇ ಶ್ರೇಯಾಂಕಿತ ಆಟಗಾರ ಆನಂದ್‌ ಪವಾರ್‌ ಅವರು ಕ್ವಾರ್ಟರ್ ಫೈನಲ್‌ನಲ್ಲಿ ನಿರಾಸೆ ಕಂಡರು. ಆನಂದ್‌ 4–11, 11–7, 8–11, 3–11ರಲ್ಲಿ ವ್ಲಾದಿಮಿರ್‌ಗೆ ಶರಣಾದರು. ಮಹಿಳೆಯರ ಸಿಂಗಲ್ಸ್‌ ವಿಭಾಗದಲ್ಲಿ  ಭಾರತದ ಸವಾಲು ಎತ್ತಿ ಹಿಡಿದಿದ್ದ ರಸಿಕಾ ರಾಜೆ ಕೂಡ ಟೂರ್ನಿಯಿಂದ ಹೊರ ಬಿದ್ದರು.

ಆರನೇ ಶ್ರೇಯಾಂಕ ಹೊಂದಿದ್ದ ರಿಸಿಕಾ 2–11, 4–11, 7–11ರಲ್ಲಿ ಜಪಾನ್‌ನ ನಾಲ್ಕನೇ ಶ್ರೇಯಾಂಕಿತ ಆಟಗಾರ್ತಿ ನಟ್ಸುಕಿ ನಿದೈರಾ ವಿರುದ್ಧ ಆಘಾತ ಅನುಭವಿಸಿದರು.

ಇನ್ನೊಂದು ಪಂದ್ಯದಲ್ಲಿ ವೃಶಾಲಿ ಗುಮ್ಮಾಂಡಿ 11–8, 8–11, 12–10, 9–11, 9–11ರಲ್ಲಿ ರಷ್ಯಾದ ಮೂರನೇ ಶ್ರೇಯಾಂಕಿತೆ ನತಾಲಿಯಾ ಪೆರ್ಮಿನೊವಾ ವಿರುದ್ಧ ಪರಾಭವಗೊಂಡರು.

ಮಿಶ್ರ ಡಬಲ್ಸ್‌ ವಿಭಾಗದ ಪಂದ್ಯದಲ್ಲಿ ಭಾರತದ ಸೌರಭ್‌ ಶರ್ಮಾ ಮತ್ತು ಅನುಷ್ಕಾ ಪಾರಿಕ್‌ 12–10, 8–11, 7–11, 8–11ರಲ್ಲಿ ಮಲೇಷ್ಯಾದ ಚಾನ್‌ ಪೆಂಗ್‌ ಶೂನ್‌ ಮತ್ತು ಚೆಹಿ ಯೀ ಸೀ ವಿರುದ್ಧ ಸೋತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT