ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಕಾಶ ಬಳಸಿಕೊಂಡಿದ್ದೇನೆ: ಕೌರ್

Last Updated 21 ಜುಲೈ 2017, 19:30 IST
ಅಕ್ಷರ ಗಾತ್ರ

ಡರ್ಬಿ: ‘ಸೆಮಿಫೈನಲ್ ಪಂದ್ಯದಲ್ಲಿ ತಂಡಕ್ಕಾಗಿ ಆಡುವ ಮೂಲಕ ನನ್ನ ಸಾಮರ್ಥ್ಯ ಸಾಬೀತು ಮಾಡಲು ಉತ್ತಮ ಅವಕಾಶ ಸಿಕ್ಕಿತು. ಇದರಿಂದ ಅತೀವ ಸಂತಸವಾಗಿದೆ’ ಎಂದು ಭಾರತ ತಂಡದ ಬ್ಯಾಟ್ಸ್‌ವುಮನ್ ಹರ್ಮನ್‌ಪ್ರೀತ್ ಕೌರ್ ಹೇಳಿದ್ದಾರೆ.

ಹರ್ಮನ್‌ಪ್ರೀತ್ ಗುರುವಾರ ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ 115ಎಸೆತಗಳಲ್ಲಿ 171 ರನ್ ಕಲೆಹಾಕಿದ್ದರು. ಇವರ ಆಟದ ಬಲದಿಂದ ಭಾರತ ತಂಡ 36 ರನ್‌ಗಳ ಗೆಲುವು ದಾಖಲಿಸಿ ಫೈನಲ್ ಪ್ರವೇಶಿಸಿದೆ.

‘ನಾಲ್ಕನೇ ಕ್ರಮಾಂಕದಲ್ಲಿ ಆಡುವ ಅವಕಾಶ ಹಿಂದಿನ ಪಂದ್ಯಗಳಲ್ಲಿ ಸಿಕ್ಕಿರಲಿಲ್ಲ. ಆದರೆ ಆಸ್ಟ್ರೇಲಿಯಾದ ವಿರುದ್ಧ ಸಿಕ್ಕ ಅವಕಾಶವನ್ನು ನಾನು ಉತ್ತಮವಾಗಿ ಬಳಸಿಕೊಂಡೆ. ಇದರಿಂದ ನನ್ನ ಸಾಮರ್ಥ್ಯ ಸಾಬೀತುಪಡಿಸಿದ್ದೇನೆ’ಎಂದು ಅವರು ಹೇಳಿದ್ದಾರೆ.

‘ಮಿಥಾಲಿ ರಾಜ್‌ ಹಾಗೂ ದೀಪ್ತಿ ಶರ್ಮಾ ಕೂಡ ಉತ್ತಮವಾಗಿ ಆಡಿದರು. ವೇದಾ ಕೃಷ್ಣಮೂರ್ತಿ ಬೆಂಬಲ ನೀಡಿದರು. ಇದರಿಂದ ಇಲ್ಲಿ ನನ್ನ ಶತಕದ ಕನಸು ನನಸಾಯಿತು’ ಎಂದು ಅವರು ಹೇಳಿದ್ದಾರೆ.

28 ವರ್ಷದ ಹರ್ಮನ್‌ಪ್ರೀತ್‌ ಬಿಗ್‌ಬಾಷ್‌ ಲೀಗ್‌ನಲ್ಲಿ ಆಡಿರುವ ಭಾರತದ ಏಕೈಕ ಮಹಿಳಾ ಕ್ರಿಕೆಟ್ ಆಟಗಾರ್ತಿ.

ಮನೆಯಲ್ಲಿ ಸಂಭ್ರಮ: ಹರ್ಮನ್‌ಪ್ರೀತ್‌ ಶತಕ ದಾಖಲಿಸುತ್ತಿದ್ದಂತೆ ಪಂಜಾಬ್‌ನ ಮೋಗಾದಲ್ಲಿರುವ ಅವರ ಮನೆಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಕುಟುಂಬದವರು ಬಂಧುಗಳಿಗೆ ಸಿಹಿ ಹಂಚಿ ಸಂಭ್ರಮಿಸಿದರು.

ಸ್ನೇಹಿತರು, ಬಂಧುಗಳು ಮನೆಗೆ ಬಂದು ಹರ್ಮನ್‌ಪ್ರೀತ್ ಕುಟುಂಬದವರಿಗೆ ಅಭಿನಂದನೆ ಹೇಳಿದರು. ಅಕ್ಕಪಕ್ಕದ ಮನೆಯವರು ಕುಣಿದು ಕುಪ್ಪಳಿಸಿದರು.

‘ಹರ್ಮನ್‌ಪ್ರೀತ್ ಭಾರತ ತಂಡದ ಮಾಜಿ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್ ರೀತಿಯಲ್ಲಿ ಸ್ಪೋಟಕವಾಗಿ ಹಾಗೂ  ವಿರಾಟ್ ಕೊಹ್ಲಿ ಮಾದರಿಯಲ್ಲಿ ಆಕ್ರಮಣಕಾರಿಯಾಗಿ ಆಡಿದ್ದಾರೆ’ ಎಂದು ಹರ್ಮನ್‌ಪ್ರೀತ್‌ ಅವರ ಸಹೋದರಿ ಹೇಮ್‌ಜಿತ್ ಹೇಳಿದ್ದಾರೆ. ‘ಸಣ್ಣವಳಿದ್ದಾಗಿನಿಂದ ಹುಡುಗರ ಜತೆ ಕ್ರಿಕೆಟ್ ಆಡುವುದು ಹರ್ಮನ್ ಅಭ್ಯಾಸವಾಗಿತ್ತು’ ಎಂದು ಹೇಮಜಿತ್ ಸಂತಸ ಹಂಚಿಕೊಂಡಿದ್ದಾರೆ.

ಬಿಸಿಸಿಐ ಅಭಿನಂದನೆ: ವಿಶ್ವಕಪ್ ಫೈನಲ್‌ ತಲುಪಿರುವ ಭಾರತ ತಂಡಕ್ಕೆ ಬಿಸಿಸಿಐ ಅಭಿನಂದನೆ ಸಲ್ಲಿಸಿದೆ. ‘ಹರ್ಮನ್‌ಪ್ರೀತ್ ಸಾಧನೆ ನಮಗೆಲ್ಲ ಹೆಮ್ಮೆ ತಂದಿದೆ. ತಂಡದ ಎಲ್ಲಾ ಆಟಗಾರ್ತಿಯರಿಗೂ ಅಭಿನಂದನೆಗಳು. ಫೈನಲ್‌ನಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡುವ ವಿಶ್ವಾಸ ನಮಗಿದೆ’ ಎಂದು ಬಿಸಿಸಿಐ ಹಂಗಾಮಿ ಅಧ್ಯಕ್ಷ ಸಿ.ಕೆ ಖನ್ನಾ ಹೇಳಿದ್ದಾರೆ.

‘ತಂಡವನ್ನು ವಿಶ್ವಕಪ್‌ನೊಂದಿಗೆ ಸ್ವಾಗತಿಸಲು ನಾವು ಉತ್ಸುಕರಾಗಿದ್ದೇವೆ’ ಎಂದು ಅವರು ಹೇಳಿದ್ದಾರೆ. ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್‌ ರಾವ್‌ ಭಾರತ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ‘ಫೈನಲ್‌ನಲ್ಲಿಯೂ ಭಾರತ ಇದೇ ಉತ್ಸಾಹದಿಂದ ಆಡಲಿ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT