ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗದಗ ಬಂದ್ ಯಶಸ್ವಿ: ನರಗುಂದದಲ್ಲಿ ಹೆದ್ದಾರಿ ತಡೆ

ಉಪವಾಸ ಕೈಬಿಟ್ಟ ವೀರೇಶ ಸೊಬರದಮಠ
Last Updated 21 ಜುಲೈ 2017, 20:40 IST
ಅಕ್ಷರ ಗಾತ್ರ

ನರಗುಂದ/ನವಲಗುಂದ: ಮಹದಾಯಿ ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಹಾಗೂ ರೈತ ಹುತಾತ್ಮ ದಿನಾಚರಣೆ ಅಂಗವಾಗಿ ಶುಕ್ರವಾರ ನಡೆದ ಗದಗ ಬಂದ್‌ ಯಶಸ್ವಿಯಾಗಿದ್ದು, ನರಗುಂದದಲ್ಲಿಯೂ ಅಘೋಷಿತ ಬಂದ್‌ ವಾತಾವರಣ ಇತ್ತು.

ನರಗುಂದದಲ್ಲಿ ಮಹಿಳೆಯರೂ ಸೇರಿದಂತೆ ರೈತ ಹೋರಾಟಗಾರರು ಪ್ರತಿಭಟನಾರ್ಥವಾಗಿ ಉರುಳುಸೇವೆ ಮಾಡಿದರೆ, ಗದುಗಿನಲ್ಲಿ ಇಬ್ಬರು ಕೇಶಮುಂಡನ ಮಾಡಿಸಿಕೊಂಡರು. ನರಗುಂದದಲ್ಲಿ ಐದು ಗಂಟೆಗಳ ಕಾಲ ಹುಬ್ಬಳ್ಳಿ–ವಿಜಯಪುರ ಹೆದ್ದಾರಿ ತಡೆದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ವ್ಯಾಪಾರಸ್ಥರು ವಹಿವಾಟು ನಡೆಸದೇ ರೈತರ ಹೋರಾಟಕ್ಕೆ ಬೆಂಬಲ ನೀಡಿದರೆ, ಜಿಲ್ಲೆಯ ವಿವಿಧೆಡೆಯಿಂದ ತಂಡವಾಗಿ ಬಂದಿದ್ದ ರೈತರು, ವಿದ್ಯಾರ್ಥಿಗಳು ಬೆಂಬಲಕ್ಕೆ ನಿಂತರು. ಬೆಳಿಗ್ಗೆ 11ರಿಂದ ಸಂಜೆವರೆಗೆ ಬಸ್‌ ಸಂಚಾರ ಸ್ಥಗಿತಗೊಂಡಿತ್ತು.

ಸರ್ಕಾರದ ಪ್ರತಿನಿಧಿಯಾಗಿ ನರಗುಂದದ ಧರಣಿ ವೇದಿಕೆಗೆ ಬಂದಿದ್ದ ಸಚಿವ ವಿನಯ ಕುಲಕರ್ಣಿ, ‘ಆಗಸ್ಟ್‌ ಮೊದಲ ವಾರದಲ್ಲಿ ಸರ್ವಪಕ್ಷಗಳ ಹಾಗೂ ಸಂಸದರ ಸಭೆ ಕರೆಯಲಾಗುವುದು’ ಎಂದು  ಭರವಸೆ ನೀಡಿದ್ದರಿಂದ ಕಳೆದ ಆರು ದಿನಗಳಿಂದ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದ ರೈತ ಸೇನೆ ರಾಜ್ಯ ಘಟಕದ ಅಧ್ಯಕ್ಷ ವೀರೇಶ ಸೊಬರದಮಠ ಶುಕ್ರವಾರ ರಾತ್ರಿ ಉಪವಾಸವನ್ನು ಅಂತ್ಯಗೊಳಿಸಿದರು.

ನವಲಗುಂದದಲ್ಲಿ ಆಯೋಜಿಸಿದ್ದ ರೈತ ಹುತಾತ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಹುತಾತ್ಮ ರೈತರ ಸ್ಮಾರಕಕ್ಕೆ ಮಾಲಾರ್ಪಣೆ ಮಾಡಲು  ಶಾಸಕ ಎನ್‌.ಎಚ್‌ ಕೋನರಡ್ಡಿ ಸೇರಿದಂತೆ ಯಾವುದೇ ಜನಪ್ರತಿನಿಧಿಗಳಿಗೂ ರೈತ ಹೋರಾಟಗಾರರು ಅವಕಾಶ ನೀಡಲಿಲ್ಲ.

ಶಾಸಕರಾದ ಎನ್.ಎಚ್.ಕೋನರಡ್ಡಿ, ಬಸವರಾಜ ಹೊರಟ್ಟಿ ಹಾಗೂ ಮಧು ಬಂಗಾರಪ್ಪ ಅವರಿಗೆ ಮಾಲಾರ್ಪಣೆ ಮಾಡಲು ಅವಕಾಶ ಕಲ್ಪಿಸಬೇಕೆಂದು ವೇದಿಕೆ ಕಡೆಗೆ ನುಗ್ಗುತ್ತಿದ್ದ ಜೆಡಿಎಸ್‌ ಕಾರ್ಯಕರ್ತರನ್ನು ರೈತ ಹೋರಾಟ ಸಮಿತಿ ಸದಸ್ಯರು ತಡೆದಿದ್ದರಿಂದ ಕೆಲ ಹೊತ್ತು ಅವರ ನಡುವೆ ಮಾತಿನ ಚಕಮಕಿ ನಡೆಯಿತು. ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ಈ ಘಟನೆಯಿಂದಾಗಿ ಎರಡು ಪ್ರತ್ಯೇಕ ವೇದಿಕೆಗಳಲ್ಲಿ ಸಮಾವೇಶ ನಡೆದವು. ಎರಡು ವರ್ಷಗಳಿಂದ ನಿರಂತರವಾಗಿ ಹೋರಾಟ ನಡೆಸುತ್ತಿರುವ ಇಲ್ಲಿನ ಪಕ್ಷಾತೀತ ಹೋರಾಟ ಸಮಿತಿ ಸದಸ್ಯರು ಒಂದು ವೇದಿಕೆಯಲ್ಲಿ ಕಾರ್ಯಕ್ರಮ ನಡೆಸಿದರೆ, ಅದರ ಎದುರಿನಲ್ಲಿಯೇ ಪ್ರತ್ಯೇಕ ವೇದಿಕೆಯಲ್ಲಿ ಜೆಡಿಎಸ್‌ ವತಿಯಿಂದ ರೈತ ಸಮಾವೇಶ ನಡೆಯಿತು. ಇದರಿಂದ ಕೆರಳಿದ ರೈತ ಹೋರಾಟಗಾರರು, ಶಾಸಕ ಕೋನರಡ್ಡಿ ವಿರುದ್ಧ ವಾಗ್ದಾಳಿ ನಡೆಸಿದರು.

‘ರೈತರ ಪರ ಎಂದು ಹೇಳುತ್ತಲೇ ಶಾಸಕ ಕೋನರಡ್ಡಿ ಅವರು ಜೆಡಿಎಸ್‌ ಸಮಾವೇಶ ಮಾಡುವ ಮೂಲಕ ರೈತ ವಿರೋಧಿ ನೀತಿ ಅನುಸರಿಸಿದ್ದಾರೆ’ ಎಂದು ಸಮಿತಿಯ ಮುಖಂಡ ಸಿದ್ದು ತೇಜಿ ಆಕ್ರೋಶ ವ್ಯಕ್ತಪಡಿಸಿದರು.

ಬಿಗಿ ಪೊಲೀಸ್‌ ಬಂದೋಬಸ್ತ್‌ ಜೊತೆಗೆ, ನವಲಗುಂದದಲ್ಲಿ ಪ್ರತಿಭಟನಾಕಾರರ ಚಟುವಟಿಕೆಗಳ ಮೇಲೆ ನಿಗಾ ಇಡಲು ಮೂರು ‘ದ್ರೋಣ್‌’ ಕ್ಯಾಮೆರಾಗಳ ಕಣ್ಗಾವಲು ಇತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT