ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲಾಶಯಗಳ ಒಳ ಹರಿವು ಹೆಚ್ಚಳ

Last Updated 21 ಜುಲೈ 2017, 21:02 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಎಲ್ಲ ಕಡೆಗಳಲ್ಲೂ ಮಳೆಯ ಆರ್ಭಟ ಕಡಿಮೆಯಾಗಿದೆ. ಆದರೆ, ಪ್ರಮುಖ ಜಲಾಶಯಗಳ ಒಳಹರಿವಿನ ಪ್ರಮಾಣ ಹೆಚ್ಚಾಗಿದೆ.

ಹಾರಂಗಿ ಹಾಗೂ ಕಬಿನಿ ಜಲಾಶಯಗಳು ಭರ್ತಿಯಾಗುವ ಹಂತಕ್ಕೆ ತಲುಪಿವೆ. ಆಲಮಟ್ಟಿ ಜಲಾಶಯದ ಒಳಹರಿವು 86 ಸಾವಿರ ಕ್ಯುಸೆಕ್‌ ದಾಟಿದೆ.
ಮಹಾರಾಷ್ಟ್ರದ ಘಟ್ಟ ಪ್ರದೇಶಗಳಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ಕೃಷ್ಣಾ ಹಾಗೂ ಅದರ ಉಪನದಿಗಳ ಒಳಹರಿವು ಹೆಚ್ಚಾಗಿದೆ. ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ ಬಳಿ 1.19 ಲಕ್ಷ (10.9 ಟಿಎಂಸಿ ಅಡಿ) ಕ್ಯುಸೆಕ್‌ ನೀರು ನದಿಯಲ್ಲಿ ಹರಿಯುತ್ತಿದೆ.

ಧಾರಾಕಾರ ಮಳೆ: ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕಿನಾದ್ಯಂತ ಶುಕ್ರವಾರವೂ ಧಾರಾಕಾರ ಮಳೆ ಸುರಿಯಿತು.

ಹೇಮಾವತಿ ನದಿಯ ನೀರಿನ ಮಟ್ಟ ಏರಿಕೆಯಾಗಿದೆ. ಉಗ್ಗೆಹಳ್ಳಿ ಗದ್ದೆ ಬಯಲಿನ ಮಟ್ಟದಲ್ಲಿ ನೀರು ಹರಿಯುತ್ತಿದೆ.

ಮನೆಗಳಿಗೆ ಹಾನಿ: ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಸಮೀಪದ ಪೆರುವಾಯಿಯಲ್ಲಿ ಗುರುವಾರ ಸುರಿದ ವ್ಯಾಪಕ ಮಳೆ ಹಾಗೂ ಗಾಳಿಗೆ ಮರಗಳು ಬಿದ್ದು 7ಕ್ಕಿಂತ ಅಧಿಕ ಮನೆಗಳಿಗೆ ಹಾನಿಯಾಗಿದೆ. 300 ಕ್ಕಿಂತಲೂ ಅಧಿಕ ಅಡಿಕೆ ಮರಗಳು ಹಾಗೂ ತೆಂಗು ಮರಗಳು ನೆಲಕಚ್ಚಿವೆ.

ತಗ್ಗಿದ ಮಳೆ ಆರ್ಭಟ:  ಶಿವಮೊಗ್ಗ ಜಿಲ್ಲೆಯ ಎಲ್ಲೆಡೆ ಶುಕ್ರವಾರ ಮಳೆ ಆರ್ಭಟ ಸ್ವಲ್ಪ ಕಡಿಮೆಯಾಗಿದೆ.  ಸಾಗರ, ತೀರ್ಥಹಳ್ಳಿ, ಹೊಸನಗರ ತಾಲ್ಲೂಕಿನ ಭಾಗಗಳಲ್ಲಿ ಉತ್ತಮ ಮಳೆಯಾಗಿದೆ. ಶಿವಮೊಗ್ಗ ನಗರ, ಭದ್ರಾವತಿ, ಸೊರಬ ತಾಲ್ಲೂಕಿನ ವ್ಯಾಪ್ತಿಯಲ್ಲಿ ಸಾಧಾರಣ ಮಳೆ ಸುರಿದಿದೆ.

ಕೊಡಗು ಜಿಲ್ಲೆಯ ಭಾಗಮಂಡಲ, ತಲಕಾವೇರಿ ಹಾಗೂ ನಾಪೋಕ್ಲು ವ್ಯಾಪ್ತಿಯಲ್ಲಿ ಆಗಾಗ್ಗೆ ಬಿಡುವು ಕೊಟ್ಟು ಉತ್ತಮ ಮಳೆ ಸುರಿಯುತ್ತಿದೆ. ತ್ರಿವೇಣಿ ಸಂಗಮದಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದು ಮಡಿಕೇರಿ– ಭಾಗಮಂಡಲ– ನಾಪೋಕ್ಲು ಹಾಗೂ ಬಿ.ಶೆಟ್ಟಿಗೇರಿ– ಕುಂದ ಮಾರ್ಗದಲ್ಲಿ ವಾಹನ ಸಂಚಾರ ಆರಂಭವಾಗಿದೆ.

ಮುಳುಗಡೆ ಸ್ಥಿತಿಯಲ್ಲಿ ಆರು ಸೇತುವೆ:  ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್‌ನಿಂದ 95,296 ಕ್ಯುಸೆಕ್‌ ಹಾಗೂ ದೂಧ್‌ಗಂಗಾ ನದಿಯಿಂದ 24,540 ಕ್ಯುಸೆಕ್‌ ನೀರು ಕೃಷ್ಣಾ ನದಿಗೆ ಹರಿದು ಬರುತ್ತಿದೆ. ಚಿಕ್ಕೋಡಿ ತಾಲ್ಲೂಕಿನ ಆರೂ ಸೇತುವೆಗಳು ಮುಳುಗಡೆ ಸ್ಥಿತಿಯಲ್ಲಿಯೇ ಇವೆ. ಕೃಷ್ಣಾ ನದಿ ಹಿನ್ನೀರಿನಿಂದಾಗಿ ಕಲ್ಲೋಳದಿಂದ ಗಣಪತಿ ಗುಡಿ ಮಾರ್ಗವಾಗಿ ಅಂಕಲಿಗೆ ತೆರಳುವ ರಸ್ತೆ ಸಂಪರ್ಕ ಕಡಿತಗೊಂಡಿದೆ.

ಸೇತುವೆಗಳ ಮುಳುಗಡೆಯಾಗಿರುವುದರಿಂದ ಚಿಕ್ಕೋಡಿ ತಾಲ್ಲೂಕಿನ ಗಡಿ ಗ್ರಾಮಗಳ ಜನರು ಮಹಾರಾಷ್ಟ್ರದ ಇಚಲಕರಂಜಿ, ಶಿರೋಳ, ಮಿರಜ್ ಮೊದಲಾದ ಪಟ್ಟಣಗಳಿಗೆ ತೆರಳಲು ಸುತ್ತುಬಳಸಿ ಪ್ರಯಾಣಿಸಬೇಕಾಗಿದೆ.

ಗೋಕಾಕ ಹೊರವಲಯದ ಸಿಂಗಳಾಪೂರ ಸೇತುವೆ ಈಗಲೂ ಮುಳುಗಡೆ ಸ್ಥಿತಿಯಲ್ಲಿಯೇ ಇದೆ. ಬೆಳಗವಿ ಜಿಲ್ಲೆಯಲ್ಲಿ 33  ಮನೆಗಳಿಗೆ ಹಾನಿಯಾಗಿದೆ.

ಉತ್ತರ ಕನ್ನಡ ಜಿಲ್ಲೆಯ ವರದಾ ನದಿ ತುಂಬಿ ಹರಿಯುತ್ತಿದೆ. ನೂರಾರು ಎಕರೆ ಭತ್ತದ ಗದ್ದೆಗಳಿಗೆ ನೀರು ನುಗ್ಗಿದೆ.

ಮೂರು ಮೃತದೇಹ ಪತ್ತೆ

ದೂಧ್‌ಗಂಗಾ ನದಿ ನೀರಿನಲ್ಲಿ ಎರಡು ಮೃತದೇಹಗಳು ಚಿಕ್ಕೋಡಿ ತಾಲ್ಲೂಕಿನ ಗಳತಗಾ ಮತ್ತು ಮಹಮ್ಮದಾಪುರ ಗ್ರಾಮದ ಬಳಿ ಗುರುವಾರ ಪತ್ತೆಯಾಗಿವೆ. ಕಾಲುವೆ ನೀರಿನಲ್ಲಿ ಕೊಚ್ಚಿಹೋಗಿದ್ದ ಮಹಿಳೆಯೊಬ್ಬರ ಶವ  ಶುಕ್ರವಾರ ಅಥಣಿ  ತಾಲ್ಲೂಕಿನ ನಂದಗಾವ ಬಳಿ ಪತ್ತೆಯಾಗಿದೆ.

ನದಿ ನೀರಿನಲ್ಲಿ ತೇಲಿ ಬಂದಿರುವ ಒಂದು ಮೃತದೇಹದ ಗುರುತು ಪತ್ತೆಯಾಗಿದ್ದು, ಮಹಾರಾಷ್ಟ್ರದ ಕಾಗಲ ತಾಲ್ಲೂಕಿನ ಕುರನಿ ಗ್ರಾಮದ ಶ್ವೇತಾ ಪಾಟೀಲ(16) ಎಂದು ಗುರುತಿಸಲಾಗಿದೆ. ಇನ್ನೊಬ್ಬ ಪುರುಷನ ಗುರುತು ಪತ್ತೆಯಾಗಿಲ್ಲ.

ಅಥಣಿ ತಾಲ್ಲೂಕಿನ ಘಟನಟ್ಟಿ ಗ್ರಾಮದ ಭಾರತಿ ಪ್ರಕಾಶ ಬೊಳಗಿಂಡಿ (26) ಮೃತಪಟ್ಟವರು.  ಗ್ರಾಮದ ಸಮೀಪದ ಕರಿ ಮಸೂತಿ ಏತ ನೀರಾವರಿ ಕಾಲುವೆಯಲ್ಲಿ ಗುರುವಾರ ಬಟ್ಟೆ ತೊಳೆಯಲು ಹೋಗಿದ್ದಾಗ ಅವರು ನೀರಿನ ಸೆಳವಿನಲ್ಲಿ ಕೊಚ್ಚಿಕೊಂಡು ಹೋಗಿದ್ದರು.

ಕುಶಾಲನಗರ ಸಮೀಪದ ಹಾರಂಗಿ ಜಲಾಶಯದಲ್ಲಿ ಸಂಗ್ರಹಗೊಂಡಿರುವ ನೀರು

ಹಾರಂಗಿ ಜಲಾಶಯ ಬಹುತೇಕ ಭರ್ತಿ

ಕಾವೇರಿ ಕಣಿವೆಯ ಹಾರಂಗಿ ಜಲಾಶಯ ಭರ್ತಿಗೆ ಕೇವಲ 5 ಅಡಿ ಬಾಕಿಯಿದೆ. ಗರಿಷ್ಠ 2,859 ಅಡಿ ಸಾಮರ್ಥ್ಯದ ಜಲಾಶಯದಲ್ಲಿ ಶುಕ್ರವಾರ ಸಂಜೆ 2,853.68 ಅಡಿಗಳಷ್ಟು ನೀರು ಸಂಗ್ರಹವಾಗಿತ್ತು. 8,137 ಕ್ಯುಸೆಕ್‌ ಒಳಹರಿವು ಇತ್ತು.

ಕಬಿನಿ ಜಲಾನಯನ ಪ್ರದೇಶದಲ್ಲೂ ಮಳೆ ಮುಂದುವರಿದಿದ್ದು, ಒಳಹರಿವಿನ ಪ್ರಮಾಣ ಹೆಚ್ಚಿದೆ. ಜಲಾಶಯದ ಗರಿಷ್ಠ ಮಟ್ಟ 2284 ಅಡಿಗಳಾಗಿದ್ದು, ನೀರಿನಮಟ್ಟ 2,272.5 ಅಡಿಗಳಿಗೆ ಏರಿಕೆಯಾಗಿದೆ.

ಹೇಮಾವತಿ ಜಲಾಶಯಕ್ಕೆ ನಾಲ್ಕು ಅಡಿ ನೀರು ಬಂದಿದೆ. ಗುರುವಾರ ನೀರಿನಮಟ್ಟ 2,879 ಅಡಿಗಳಷ್ಟಿತ್ತು. ಶುಕ್ರವಾರ ಸಂಜೆ ವೇಳೆಗೆ 2883 ಅಡಿಗಳಿಗೆ ಹೆಚ್ಚಿದೆ. ಗರಿಷ್ಠ ಮಟ್ಟ ತಲುಪಲು 9 ಅಡಿಗಳು ಬಾಕಿಯಿವೆ.

ಕೆಆರ್‌ಎಸ್‌ಗೆ ಮೂರು ಅಡಿ ನೀರು ಬಂದಿದ್ದು, ಒಳಹರಿವಿನ ಪ್ರಮಾಣ 10 ಸಾವಿರ ಕ್ಯುಸೆಕ್‌ನಷ್ಟು ಹೆಚ್ಚಿದೆ. ಶುಕ್ರವಾರ ಸಂಜೆ ವೇಳೆಗೆ ಜಲಾಶಯದ ನೀರಿನ ಮಟ್ಟ 83 ಅಡಿಗಳಷ್ಟಿತ್ತು.

ಆಲಮಟ್ಟಿಯ ಜಲಾಶಯಕ್ಕೆ ಹರಿದು ಬರುವ ಒಳಹರಿವಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ‘ಗುರುವಾರ 513.90 ಮೀ ನಷ್ಟಿದ್ದ ಜಲಾಶಯದ ಮಟ್ಟ ಶುಕ್ರವಾರ 514.80 ಮೀ ತಲುಪಿದೆ. ನೀರಿನ ಸಂಗ್ರಹ 57.065 ಟಿಎಂಸಿ ಅಡಿಯಿಂದ, 61.304 ಟಿಎಂಸಿ ಅಡಿಗೇರಿದೆ.

ತುಂಗಭದ್ರಾ ಜಲಾಶಯದ ನೀರಿನ ಮಟ್ಟ ಶುಕ್ರವಾರ 18.305 ಟಿ.ಎಂ.ಸಿ. ಅಡಿಗೆ ಏರಿಕೆಯಾಗಿದೆ. ಗುರುವಾರ 16.941 ಟಿ.ಎಂ.ಸಿ. ಅಡಿ ನೀರಿನ ಸಂಗ್ರಹವಿತ್ತು.

ಉತ್ತರ ಕನ್ನಡ ಜಿಲ್ಲೆಯ ಸೂಪಾ ಜಲಾಶಯದ ಮಟ್ಟ ಶುಕ್ರವಾರ 540 ಮೀ. ತಲುಪಿದ್ದು, ಭರ್ತಿಯಾಗಲು ಇನ್ನೂ 24 ಮೀ. ಬಾಕಿಯಿದೆ. ಬೆಳಗಾವಿ ಜಿಲ್ಲೆಯ ಘಟಪ್ರಭಾ ಜಲಾಶಯಕ್ಕೆ 26,461 (2.3 ಟಿಎಂಸಿ ಅಡಿ) ಕ್ಯುಸೆಕ್‌ ಅಡಿ ನೀರು ಹರಿದುಬಂದಿದ್ದು, 19.96 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಮಲಪ್ರಭಾ ಜಲಾಶಯಕ್ಕೆ 11,132 (1 ಟಿಎಂಸಿ ಅಡಿ) ಕ್ಯುಸೆಕ್‌ ಅಡಿ ನೀರು ಹರಿದುಬಂದಿದ್ದು, 7.9 ಟಿಎಂಸಿ ಅಡಿಯಷ್ಟು ನೀರು ಸಂಗ್ರಹವಾಗಿದೆ. 

ಯಾದಗಿರಿ ಜಿಲ್ಲೆಯ ನಾರಾಯಣಪುರ ಬಸವಸಾಗರ ಜಲಾಶಯಕ್ಕೆ  ಒಂದೇ ದಿನ 1.5 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ.  ಜಲಾಶಯದ ಮಟ್ಟ 492.252 ಮೀಟರ್‌ ಇದ್ದು, ಶುಕ್ರವಾರ 487.66 ಮೀಟರ್‌ ಇದೆ.

ವಿದ್ಯುತ್‌ ಉತ್ಪಾದನೆ
ಆಲಮಟ್ಟಿ:
ಆಲಮಟ್ಟಿ ಜಲಾಶಯದ ವಿದ್ಯುತ್‌ ಕೇಂದ್ರದಲ್ಲಿ ಶುಕ್ರವಾರ 39 ಲಕ್ಷ ಯೂನಿಟ್‌ ವಿದ್ಯುತ್‌ ಉತ್ಪಾದಿಸಲಾಗಿದೆ.
‘ಜುಲೈನಲ್ಲಿ 66 ದಶಲಕ್ಷ ಯೂನಿಟ್‌ ವಿದ್ಯುತ್ ಉತ್ಪಾದನೆ ಗುರಿ ಹೊಂದಲಾಗಿದೆ. ಈ ಅವಧಿಯಲ್ಲಿಯೇ 300 ದಶಲಕ್ಷ ಯೂನಿಟ್‌ ಉತ್ಪಾದನೆ ನಿರೀಕ್ಷೆ  ಇದೆ’ ಎಂದು ಸೂಪರಿಟೆಂಡಿಂಗ್‌ ಎಂಜಿನಿಯರ್‌ ಶಿವಶಂಕರ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT