ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಗಸ್ಟ್‌, ಸೆಪ್ಟೆಂಬರ್‌ನಲ್ಲಿ ಮೋಡ ಬಿತ್ತನೆ: ಪಾಟೀಲ

Last Updated 21 ಜುಲೈ 2017, 19:43 IST
ಅಕ್ಷರ ಗಾತ್ರ

ಬೆಂಗಳೂರು: ಆಗಸ್ಟ್‌ ಮತ್ತು ಸೆಪ್ಟೆಂಬರ್‌ನಲ್ಲಿ ಮಳೆ ಕೊರತೆ ಆಗಿರುವ ಕಡೆ ಮೋಡ ಬಿತ್ತನೆ ಮಾಡಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಎಚ್‌.ಕೆ. ಪಾಟೀಲ ಹೇಳಿದರು.

ಬೆಂಗಳೂರು, ಗದಗ ಮತ್ತು ಸುರಪುರದಲ್ಲಿ ರೆಡಾರ್‌ಗಳನ್ನು ಸ್ಥಾಪಿಸಲಾಗುವುದು.  ಮೋಡ ಬಿತ್ತನೆಗಾಗಿ ವಿಶೇಷ ತಂತ್ರಜ್ಞಾನ ಹೊಂದಿರುವ ಎರಡು ವಿಮಾನಗಳು ಅಮೆರಿಕಾದಿಂದ ಬರಲಿವೆ ಎಂದು ಅವರು ಶುಕ್ರವಾರ ಮಾಧ್ಯಮ ಗೋಷ್ಠಿಯಲ್ಲಿ ವಿವರಿಸಿದರು.

‘ಆಗಸ್ಟ್‌ ಮೊದಲ ವಾರದಿಂದ ಮೋಡ ಬಿತ್ತನೆ ಆರಂಭವಾಗುತ್ತದೆ. ಎಲ್ಲೆಲ್ಲಿ ದಟ್ಟ ಮೋಡಗಳು ಇರುತ್ತವೋ ಅಲ್ಲಿ ವಿಮಾನಗಳು ಸಂಚರಿಸಿ ರಾಸಾಯನಿಕ ಸಿಂಪಡಿಸುತ್ತವೆ. ಇದು ಮಳೆ ಬರಿಸುವ ಸಾಮರ್ಥ್ಯ ಇರುವ ಮೋಡಗಳನ್ನು ಪ್ರೇರೇಪಿಸಿ ಶೇ10ರಿಂದ 15ರಷ್ಟು ಮಳೆಯ ಪ್ರಮಾಣ ಹೆಚ್ಚಿಸುತ್ತದೆ. ಮೋಡ ಬಿತ್ತನೆ ಪೂರ್ಣಗೊಂಡ 30 ನಿಮಿಷದೊಳಗೆ ಅದರ ಫಲಿತಾಂಶ ತಿಳಿಯಲಿದೆ’ ಎಂದು ಅವರು ವಿವರಿಸಿದರು.

ಕಾವೇರಿ, ಮಲಪ್ರಭಾ, ತುಂಗಭದ್ರಾ ಕಣಿವೆಗಳನ್ನು ಮುಖ್ಯವಾಗಿ ಗಮನದಲ್ಲಿಟ್ಟುಕೊಂಡು ಯೋಜನೆ ರೂಪಿಸಲಾಗಿದೆ.

ವಿಮಾನಗಳ ಕಾರ್ಯಾಚರಣೆಗೆ ಬೆಂಗಳೂರು, ಹುಬ್ಬಳ್ಳಿ ಜೊತೆಗೆ ಬೀದರ್‌ ವಾಯುನೆಲೆ ಬಳಸಿಕೊಳ್ಳುವ ಉದ್ದೇಶವೂ ಇದೆ. ಇದಕ್ಕೆ ಪೂರಕವಾಗಿ ಕೆಲವೊಂದು ಅನುಮತಿಗಳನ್ನು ಪಡೆಯಬೇಕಿದ್ದು, ಕೇಂದ್ರ ಗೃಹ ಸಚಿವರಿಗೆ ಪತ್ರ ಬರೆಯಲಾಗಿದೆ ಎಂದರು.

35 ಕೋಟಿ ವೆಚ್ಚ: ರಾಜ್ಯದಲ್ಲಿ ಮೂರು ವರ್ಷಗಳಿಂದ ಬರಗಾಲ ಇರುವುದರಿಂದ ಮೋಡ ಬಿತ್ತನೆ ನಿರ್ಣಯ ಕೈಗೊಳ್ಳಲಾಗಿದೆ. ಇದಕ್ಕಾಗಿ ₹ 30 ಕೋಟಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿತ್ತು. ಆದರೆ, ಟೆಂಡರ್‌ 35.11 ಕೋಟಿಗೆ ಅಂತಿಮಗೊಳಿಸಲಾಗಿದೆ ಎಂದರು.

ಹಿಂದೆ ಯಶಸ್ವಿಯಾಗಿದೆ: ‘ರಾಜ್ಯದಲ್ಲಿ ಈ ಹಿಂದೆ ಕೈಗೊಂಡ ಮೋಡ ಬಿತ್ತನೆ ಯಶಸ್ವಿಯಾಗಿದೆ. ಅನೇಕ ಕಡೆ ರೈತರು ಸಂತಸ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳಲ್ಲೂ ವರದಿ ಬಂದಿವೆ’ ಎಂದು ಸಚಿವರು  ಸಮರ್ಥಿಸಿಕೊಂಡರು.

‘ಕರ್ನಾಟಕದಲ್ಲಿ ಮೋಡ ಬಿತ್ತನೆ ಮಾಡಿದರೆ ಆಂಧ್ರದಲ್ಲಿ ಮಳೆ ಆಯಿತು ಎಂದು ವೈಜ್ಞಾನಿಕ ಜ್ಞಾನ ಇಲ್ಲದವರು ಹೇಳಿಕೆ ಕೊಡುತ್ತಾರೆ. ಮೋಡ ಬಿತ್ತನೆಯಾದ ಜಾಗದಲ್ಲಿ ಅಥವಾ 15 ಕಿ.ಮೀ. ವ್ಯಾಪ್ತಿಯೊಳಗೆ ಮಳೆ ಆಗುತ್ತದೆ’ ಎಂದೂ ಅವರು ತಿಳಿಸಿದರು.

ನಾಲ್ವರು ತಜ್ಞರ ತಂಡ: ಮೋಡ ಬಿತ್ತನೆ ಉಸ್ತುವಾರಿಗಾಗಿ ಹವಾಮಾನ ಇಲಾಖೆ ನಿವೃತ್ತ ಅಧಿಕಾರಿಗಳಾದ ಮುಂಬೈನ ಡಾ.ಆರ್.ವಿ. ಶರ್ಮ, ಡಿ.ವಿ. ಮಿಶ್ರಾ ಹಾಗೂ ಬೆಂಗಳೂರಿನ ಎನ್‌.ಎಚ್‌.ವಿ ರಾಘವನ್‌ ಮತ್ತು ವೈ.ಕೆ. ನರಸಿಂಹ ಮೂರ್ತಿ ಅವರ ನೇತೃತ್ವದಲ್ಲಿ ತಜ್ಞರ ತಂಡ ರಚಿಸಲಾಗಿದೆ ಎಂದು ಪಾಟೀಲರು ಹೇಳಿದರು.

ಇದಕ್ಕೂ ಮೊದಲು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ), ಐಐಟಿ ಪುಣೆ, ಐಐಟಿ ಮದ್ರಾಸ್‌ ಹವಾಮಾನ ವಿಷಯದ ತಜ್ಞರೊಂದಿಗೆ ಚರ್ಚಿಸಿ, ಮೋಡ ಬಿತ್ತನೆಗೆ ತೀರ್ಮಾನಿಸಲಾಯಿತು ಎಂದು ಮೂಲಗಳು ತಿಳಿಸಿವೆ

‘ಟೆಂಡರ್ ಪಡೆದ ಕಂಪೆನಿ ಬಗ್ಗೆ ಗೊತ್ತಿಲ್ಲ’
‘ಹೊಯ್ಸಳ ಪ್ರಾಜೆಕ್ಟ್ಸ್‌ ಪ್ರೈ.ಲಿ. ಎಂಬ ಬೆಂಗಳೂರಿನ ಕಂಪೆನಿಗೆ ಮೋಡ ಬಿತ್ತನೆ ಗುತ್ತಿಗೆ ನೀಡಲಾಗಿದೆ. ಆದರೆ, ಇದು ಯಾರ ಕಂಪೆನಿ ಎಂಬುದು ಗೊತ್ತಿಲ್ಲ. ನಮ್ಮ ಅಧಿಕಾರಿಗಳ ತಂಡ ಎಲ್ಲ ಅಂಶಗಳನ್ನು ಸಮಗ್ರವಾಗಿ ಪರಿಶೀಲಿಸಿ ಟೆಂಡರ್‌ ನೀಡಿದೆ’ ಎಂದು ಎಚ್‌.ಕೆ. ಪಾಟೀಲ ಹೇಳಿದರು.

ಟೆಂಡರ್‌ ಪಡೆಯುವ ಕಂಪೆನಿಗೆ ರಾಡಾರ್‌ಗಳನ್ನು ಸ್ಥಾಪಿಸುವ ಸಾಮರ್ಥ್ಯ ಮತ್ತು ವಿಮಾನಗಳ ಬಾಡಿಗೆ ಕಟ್ಟುವ ಸಾಮರ್ಥ್ಯ ಇರಬೇಕು. ಅವರ ಬಳಿ ತಂತ್ರಜ್ಞಾನವೂ ಇರಬೇಕು. ಇದೆಲ್ಲವನ್ನೂ ಪರಿಶೀಲಿಸಿಯೇ ಕಂಪೆನಿ ಆಯ್ಕೆ ಮಾಡಲಾಗಿದೆ ಎಂದರು.

ಟೆಂಡರ್‌ ಪೂರ್ವ ಸಮಾಲೋಚನಾ ಸಭೆಯಲ್ಲಿ ಮೂರು ಕಂಪೆನಿಗಳು ಪಾಲ್ಗೊಂಡಿದ್ದವು. ಆದರೆ, ಹೊಯ್ಸಳ ಪ್ರಾಜೆಕ್ಟ್ಸ್‌ ಮತ್ತು ಖ್ಯಾತಿ ವೆದರ್‌ ಮಾಡಿಫಿಕೇಷನ್‌ ಕನ್ಸಲ್ಟೆಂಟ್ಸ್‌ ಮಾತ್ರ ಟೆಂಡರ್ ಅರ್ಜಿ ಹಾಕಿದ್ದವು. ಹೊಯ್ಸಳ ಪ್ರಾಜೆಕ್ಟ್ಸ್‌ 44.53 ಕೋಟಿ ನಮೂದಿಸಿತ್ತು. ನಂತರ ಸಂಧಾನ ನಡೆಸಿ 35.11 ಕೋಟಿಗೆ ಒಪ್ಪಿಗೆ ಕೊಡಲಾಯಿತು.

ಹೊಯ್ಸಳ ಪ್ರಾಜೆಕ್ಟ್ಸ್‌ ಅಮೆರಿಕಾದ ವೆದರ್ ಮಾಡಿಫಿಕೇಷನ್‌ ಇಂಟರ್‌ನ್ಯಾಷನಲ್‌ (ಡಬ್ಲ್ಯೂಎಂಐ) ಸಂಸ್ಥೆ ಸಹಯೋಗದೊಂದಿಗೆ ಮೋಡ ಬಿತ್ತನೆ ಮಾಡಲಿದೆ. 2003ರಲ್ಲಿ ಕೈಗೊಂಡಿದ್ದ ಮೋಡ ಬಿತ್ತನೆ ‘ಪ್ರಾಜೆಕ್ಟ್‌ ವರುಣ’ದಲ್ಲೂ ಡಬ್ಲ್ಯೂಎಂಐ ಕಾರ್ಯನಿರ್ವಹಿಸಿತ್ತು.

ಕರ್ನಾಟಕದಲ್ಲಿ ಮೋಡ  ಬಿತ್ತನೆ
* 1982: ಲಿಂಗನಮಕ್ಕಿ ಜಲಾನಯನ ಪ್ರದೇಶದಲ್ಲಿ ಮೋಡ ಬಿತ್ತನೆ
* 2003: ‘ಪ್ರಾಜೆಕ್ಟ್‌ ವರುಣ’ ಹೆಸರಿನಲ್ಲಿ ಮೋಡ ಬಿತ್ತನೆ
* 2008: ಹುಲಕೋಟಿಯ ಕೆ.ಎಚ್. ಪಾಟೀಲ ಕೃಷಿ ವಿಜ್ಞಾನ ಕೇಂದ್ರದಿಂದ ಮೋಡ ಬಿತ್ತನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT