ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರುವರೆ ಲಕ್ಷ ಸಸಿ ಮಾರಾಟ ಗುರಿ

Last Updated 22 ಜುಲೈ 2017, 5:39 IST
ಅಕ್ಷರ ಗಾತ್ರ

ಕಲಬುರ್ಗಿ: ಜಿಲ್ಲೆಯಾದ್ಯಂತ 3.50 ಲಕ್ಷ ಸಸಿ ಮಾರಾಟ ಮಾಡುವ ಗುರಿ ಹೊಂದಿರುವ ಅರಣ್ಯ ಇಲಾಖೆಯು ನಗರದ ವಿವಿಧ ಬಡಾವಣೆಗಳಲ್ಲಿ ಮತ್ತು ಗ್ರಾಮೀಣ ಪ್ರದೇಶದಲ್ಲಿ ವಿನೂತನ ಅಭಿಯಾನ ಕೈಗೊಳ್ಳಲು ಉದ್ದೇಶಿಸಿದೆ.

ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ತಲುಪುವ ಮತ್ತು ಸಸಿಗಳನ್ನು ಖರೀದಿಸುವಂತೆ ಪ್ರೇರೇಪಿಸುವ ಉದ್ದೇಶದಿಂದ ಇಲಾಖೆ ಸಿಬ್ಬಂದಿಯಿಂದ ಈಗಾಗಲೇ ಸಸಿಗಳ ಮಾರಾಟ ನಡೆದಿದೆ. ಕಣ್ಣಿ ಮಾರುಕಟ್ಟೆ ಪ್ರದೇಶದಲ್ಲಿ ಪ್ರತಿದಿನ 250ಕ್ಕೂ ಹೆಚ್ಚು ಸಸಿಗಳು ಮಾರಾಟವಾಗುತ್ತಿದೆ. ಮಾವು, ಬೇವು ಮತ್ತು ಪೇರು ಸಸಿಗಳಿಗೆ ಜನರಿಂದ ಹೆಚ್ಚಿನ ಬೇಡಿಕೆ ವ್ಯಕ್ತವಾಗಿದೆ. 

₹ 5ರೊಳಗೆ ಸಸಿ ಲಭ್ಯ: ‘ಸಸಿಗಳನ್ನು ಬೆಳೆಸಲು ಹೆಚ್ಚಿನ ಜನರು ಮುಂದಾಗಲಿ ಎಂಬ ಉದ್ದೇಶದಿಂದ ಅರಣ್ಯ ಇಲಾಖೆಯು ₹ 40 ರಿಂದ ₹ 60ರಷ್ಟು ಇದ್ದ ಸಸಿಗಳ ದರವನ್ನು ₹ 3 ರಿಂದ ₹ 5ಕ್ಕೆ ಇಳಿಸಿದೆ. ಎಷ್ಟೇ ಸಣ್ಣ, ದೊಡ್ಡ ಅಥವಾ ಬೇರೆ ಜಾತಿಯ ಸಸಿಗಳಿದ್ದರೂ ಕೇವಲ ₹ 5ಕ್ಕೆ ಸಸಿ ಕೊಂಡುಕೊಳ್ಳಬಹುದು’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್‌.ಶಿವಶಂಕರ್‌ ತಿಳಿಸಿದರು. 

‘ಬಹುತೇಕ ಮಂದಿ ಅರಣ್ಯ ಇಲಾಖೆ ಕಚೇರಿಗೆ ಬಂದು ಸಸಿಗಳನ್ನು ಖರೀದಿಸುವುದಿಲ್ಲ. ಆದ್ದರಿಂದ ನಾವೇ ವಾಹನ ಮಾಡಿಕೊಂಡು ದಿನಕ್ಕೊಂದು ಬಡಾವಣೆಗೆ ತೆರಳಲು ಯೋಜನೆ ರೂಪಿಸಿದ್ದೇವೆ. ಪ್ರಮುಖ ಸ್ಥಳಗಳಲ್ಲಿ ಸುತ್ತಾಡಿ, ಸಸಿಗಳನ್ನು ಮಾರಲು ಸಿದ್ಧತೆ ನಡೆಸಿದ್ದೇವೆ’ ಎಂದು ಕಲಬುರ್ಗಿ ವಲಯ ಅರಣ್ಯಾಧಿಕಾರಿ ಮಹಮ್ಮದ್‌ ಮುನೀರ್‌ ಅಹಮದ್‌ ತಿಳಿಸಿದರು.

ಬಡಾವಣೆಗಳ ಸುತ್ತಾಟ ಪೂರ್ಣಗೊಂಡ ಬಳಿಕ ಇಲಾಖೆ ಸಿಬ್ಬಂದಿ ಗ್ರಾಮೀಣ ಪ್ರದೇಶಕ್ಕೆ ತೆರಳಲಿದ್ದಾರೆ. ಜೂನ್‌ ತಿಂಗಳಲ್ಲಿ ಕಲಬುರ್ಗಿ ಅರಣ್ಯ ವಲಯ ವ್ಯಾಪ್ತಿಯಲ್ಲಿ 30 ಸಾವಿರಕ್ಕೂ ಹೆಚ್ಚು ಸಸಿಗಳು ಮಾರಾಟವಾಗಿದ್ದು, ಆಗಸ್ಟ್‌ ಅಂತ್ಯದ ವೇಳೆಗೆ 1 ಲಕ್ಷ ಸಸಿ ಮಾರುವ  ಗುರಿ ಇಲಾಖೆ ಹೊಂದಿದೆ.

ವಿವಿಧೆಡೆ ಸಸಿ ನೆಡುವ ಕಾರ್ಯ: ಸಸಿಗಳ ಮಾರಾಟವಲ್ಲದೇ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ನಗರದ ಹೊರವಲಯದಲ್ಲಿ, ಕೈಗಾರಿಕಾ ಪ್ರದೇಶದಲ್ಲಿ ಮತ್ತು ವಿಶ್ವವಿದ್ಯಾಲಯದ ಆವರಣದಲ್ಲಿ ಸಸಿ ನೆಡುವ ಕಾರ್ಯ ಕೈಗೊಂಡಿದ್ದಾರೆ.

ಕೈಗಾರಿಕಾ ಪ್ರದೇಶದಲ್ಲಿ  3,160, ಕೆಎಚ್‌ಬಿ ಲೇಔಟ್‌ನಲ್ಲಿ 3,600 ಮತ್ತು ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ 1,000 ಸಸಿಗಳನ್ನು ವಿವಿಧ ಸಂಘಸಂಸ್ಥೆಗಳ ನೆರವಿನಿಂದ ಅವರು ನೆಟ್ಟಿದ್ದಾರೆ. ಸಸಿಗಳು ಜಾನುವಾರುಗಳ ಪಾಲು ಆಗದಂತೆ ನಿಯಂತ್ರಿಸಲು ಅವುಗಳ ಸುತ್ತಲೂ ರಕ್ಷಣಾ ವ್ಯವಸ್ಥೆ ಮಾಡಿದ್ದಾರೆ.

* * 

ಆಗಸ್ಟ್‌ ಅಂತ್ಯದ ವೇಳೆಗೆ ಕಲಬುರ್ಗಿ ಅರಣ್ಯ ವಲಯ ವ್ಯಾಪ್ತಿಯಲ್ಲಿ 1 ಲಕ್ಷ ಸಸಿ ಮಾರುವ ಗುರಿಯಿದೆ. ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಗುರಿ ತಲುಪುವ ವಿಶ್ವಾಸವಿದೆ.
–ಮಹಮ್ಮದ್‌ ಮುನೀರ್‌ ಅಹಮದ್‌
ಕಲಬುರ್ಗಿ ವಲಯ ಅರಣ್ಯಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT