ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಕುಮಾರ್‌ ಕುಕನೂರು ಮನೆಯಲ್ಲಿ ಖೋಟಾನೋಟು, ಮುದ್ರಣ ಯಂತ್ರ ಪತ್ತೆ: ‘ಬೀಗರ ಜಗಳ’ವೇ ಆರೋಪಿಯನ್ನಾಗಿಸಿತೇ?

Last Updated 22 ಜುಲೈ 2017, 8:40 IST
ಅಕ್ಷರ ಗಾತ್ರ

ಕೊಪ್ಪಳ: ‘ಬೀಗರ ಜಗಳ’ವೇ ಆರೋಪಿಯನ್ನಾಗಿಸಿತೇ? – ಖೋಟಾ ನೋಟು ಮುದ್ರಣ ಯಂತ್ರ ಪತ್ತೆ ಪ್ರಕರಣದಲ್ಲಿ ಆರೋಪಿಯಾಗಿ ಸಿಲುಕಿರುವ ಉಪನ್ಯಾಸಕ ಶಿವಕುಮಾರ ಕುಕನೂರು ಅವರ ವಿಚಾರದಲ್ಲಿ ಇಂಥದ್ದೊಂದು ಪ್ರಶ್ನೆ ಜನರಲ್ಲಿ ಉದ್ಭವಿಸಿದೆ.

ಶುಕ್ರವಾರ ತಡರಾತ್ರಿವರೆಗೆ ನಡೆದ ವಿದ್ಯಮಾನಗಳು, ಶಿವಕುಮಾರ್‌ಗೆ ಸಿಕ್ಕ ಎಲ್ಲ ವರ್ಗಗಳ ಜನಬೆಂಬಲ, ಠಾಣೆಯ ಮುಂದೆ ನಡೆದ ಘಟನಾವಳಿಗಳು ಇಡೀ ಪ್ರಕರಣದ ಸುತ್ತ ಹಲವು ಅನುಮಾನಗಳನ್ನು ಹುಟ್ಟುಹಾಕಿವೆ. ಇವು ಪೊಲೀಸರ ದಾಳಿಯ ಅಸಲಿತನ ಮತ್ತು ಪ್ರಾಮಾಣಿಕತೆಯನ್ನೇ ಪ್ರಶ್ನಿಸುವ ಮಟ್ಟಿಗೆ ಬೆಳೆದಿವೆ.

ಶಿವಕುಮಾರ್‌ ಪ್ರತಿಪಾದನೆ

‘ನನ್ನ ಮನೆಗೆ ಪ್ರಿಂಟರ್‌ ಮತ್ತು ಖೋಟಾ ನೋಟುಗಳ ಮಾದರಿಯನ್ನು ತಂದಿಟ್ಟವರು ಯಾರು ಅನ್ನುವುದು ಗೊತ್ತಿಲ್ಲ. ನನ್ನ ವಿರುದ್ಧ ಷಡ್ಯಂತ್ರ ನಡೆಸಲಾಗಿದೆ. ಅದರ ಬಗ್ಗೆ ತನಿಖೆಯಾಗಲಿ’ ಎಂಬುದು ಶಿವಕುಮಾರ್‌ ವಾದ.
‘ತಂದಿಟ್ಟವರು ಯಾರು ಎಂದು ಗೊತ್ತಿಲ್ಲದ ಮೇಲೆ ಆ ಬಾಕ್ಸ್‌ ನಿಮ್ಮ ಮನೆಗೆ ಬಂದದ್ದು ಹೇಗೆ?’ ಎಂಬುದು ಪೊಲೀಸರ ಬಲವಾದ ಪ್ರಶ್ನೆ.

ಪೊಲೀಸರ ಭೇಟಿ; ಫೇಸ್‌ ಬುಕ್‌ನಲ್ಲಿ ನೇರ ಪ್ರಸಾರ

ಎಲೆಕ್ಟ್ರಾನಿಕ್‌ ವಸ್ತು ಮಾರಾಟ ಕ್ಷೇತ್ರದ ಪರಿಣತರು ಹಾಗೂ ಠಾಣೆಯ ಮುಂದೆ ಸೇರಿದ್ದ ಜನರು ಹೇಳುವ ಪ್ರಕಾರ 

ಆರು ಮಂದಿ ಪೊಲೀಸರು ಮನೆಗೆ ಭೇಟಿ ನೀಡಿ, ಪ್ರಿಂಟರ್‌ ಹೊಂದಿದ್ದ ಬಾಕ್ಸ್‌ ಬಗ್ಗೆ ಪ್ರಶ್ನಿಸಿ ಪೂರ್ವನಿರ್ಧರಿತ ಸ್ಥಳದಿಂದಲೇ ಪತ್ತೆ ಹಚ್ಚಿದ್ದಾರೆ. ಬಾಕ್ಸ್‌ ತೆರೆಯಲು ಮುಂದಾದಾಗ, ಶಿವಕುಮಾರ್‌ ತಮ್ಮ ಆಪ್ತರು ಮತ್ತು ನೆರೆಹೊರೆಯವರನ್ನು ಕರೆಸಿ ಅವರ ಸಮ್ಮುಖದಲ್ಲೇ ಬಾಕ್ಸ್‌ ತೆರೆಯುವಂತೆ ಪೊಲೀಸರನ್ನು ಕೋರಿದ್ದಾರೆ. ಎಲ್ಲರೂ ಬಂದು ಸೇರಿದ ಮೇಲೆ ಪೊಲೀಸರು ಬಾಕ್ಸ್‌ ತೆರೆದರು. ಇಡೀ ಘಟನಾವಳಿಯನ್ನು ಶಿವಕುಮಾರ್‌ ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದು ಫೇಸ್‌ಬುಕ್‌ ಮೂಲಕ ನೇರ ಪ್ರಸಾರ ಮಾಡಿದರು.

ಬಾಕ್ಸ್‌ನಲ್ಲಿ ಇದ್ದದ್ದು ಒಂದು ಸಾಮಾನ್ಯ ಕಲರ್‌ಪ್ರಿಂಟರ್‌ ಮತ್ತು ಒಂದಿಷ್ಟು ಖೋಟಾ ನೋಟುಗಳ ಕಂತೆ. ಕೆಲವು ಎ4 ಅಳತೆಯ ಖಾಲಿ ಕಾಗದ. ಜನರ ಸಮ್ಮುಖದಲ್ಲೇ ಎಲ್ಲವೂ ನಡೆದಿರುವುದರಿಂದ ಶಿವಕುಮಾರ್‌ ಅವರನ್ನು ಅಕ್ಷರಶಃ ಬಂಧಿಸಿ ಕರೆದೊಯ್ಯಬೇಕು ಎಂದು ಬಂದಿದ್ದ ಪೊಲೀಸರ ಯೋಜನೆ ವಿಫಲವಾಯಿತು.

ಫೇಸ್‌ಬುಕ್‌ ವಾಟ್ಸ್‌ ಆ್ಯಪ್‌ ಮೂಲಕ ಸುದ್ದಿ ಹಬ್ಬುತ್ತಿದ್ದಂತೆಯೇ ನಗರದ  ಗಣ್ಯರು, ಜನಪ್ರತಿನಿಧಿಗಳ ಸಹಿತ ಶಿವಕುಮಾರ್‌ ಅವರ ನೂರಾರು ಒಡನಾಡಿಗಳು ನಗರ ಠಾಣೆಯ ಆವರಣದಲ್ಲಿ ಜಮಾಯಿಸಿದರು. ಮಧ್ಯರಾತ್ರಿ 12 ಗಂಟೆವರೆಗೆ ವಿಚಾರಣೆ ನಡೆಯಿತು. ಇತ್ತ ಠಾಣೆಯ ಮುಂದೆ ಜನರ ಪ್ರತಿಭಟನೆ ನಡೆಯಿತು.


ಸಂದೇಹಕ್ಕೆಡೆ ಮಾಡಿದ ಪೊಲೀಸರ ನಡೆ

* ಪಾರ್ಸೆಲ್‌ ರೂಪದಲ್ಲಿ ಬಂದ ಯಂತ್ರದ ಮಾದರಿ ಸಂಖ್ಯೆಯನ್ನು ಆ ಕಂಪೆನಿಯ ಜಾಲತಾಣದಲ್ಲಿ ಅಥವಾ ಗ್ರಾಹಕ ಸೇವಾ ಕೇಂದ್ರದಲ್ಲಿ ಕೊಟ್ಟು ವಿಚಾರಿಸಿದ್ದರೆ ಅದು ಖರೀದಿಯಾದ ಮೂಲ ತಿಳಿಯುತ್ತದೆ. ಪೊಲೀಸರು ಅದ್ಯಾವುದನ್ನೂ ಮಾಡದೇ ನೇರವಾಗಿ ‘ದಾಳಿ’ ನಡೆಸಿದ ಹಿನ್ನೆಲೆ ಏನು?

* ನಿಮ್ಮ ಮನೆಯಲ್ಲಿ ಇಂಥದ್ದೊಂದು ಬಾಕ್ಸ್‌ ಇದೆ. ಅದು ನಮಗೆ ಬೇಕು ಎಂದು ಕೇಳಿದ ಪೊಲೀಸರು, ನೇರವಾಗಿ ಹೋಗಿ ನಿರ್ದಿಷ್ಟ ಸ್ಥಳದಿಂದಲೇ ಪಡೆದರು. ಸಾಮಾನ್ಯವಾಗಿ ಸಂದೇಹದ ಮೇಲೆ ನಡೆಸುವ ದಾಳಿಗಳಲ್ಲಿ ಇಡೀ ಮನೆಯನ್ನು ಜಾಲಾಡಿದ ಉದಾಹರಣೆ ಇದೆ. ಇಲ್ಲಿ ಅಂಥದ್ದೇನೂ ನಡೆದಿಲ್ಲ. ಅಂದರೆ ಬಾಕ್ಸ್‌ ಇಂಥ ಸ್ಥಳದಲ್ಲೇ ಇದೆ ಎಂಬುದು ಮೊದಲೇ ಪೊಲೀಸರ ‘ಬುದ್ಧಿವಂತಿಕೆ’ಗೆ ಗೊತ್ತಾಗಿದೆ.

* ಶಿವಕುಮಾರ್‌ ಸ್ನೇಹಿತರು ಹೇಳುವ ಪ್ರಕಾರ, ಅವರು ತಂತ್ರಜ್ಞಾನ ಮತ್ತು ಹಣಕಾಸು ವಿಚಾರಗಳಲ್ಲಿ ಅವಿದ್ಯಾವಂತರು. ಅವರ ಮನೆಯಲ್ಲಿ ಕಂಪ್ಯೂಟರ್‌ ಇಲ್ಲ. ಅವರಿಗೆ ಅದರ ಜ್ಞಾನ ಇಲ್ಲ. ಕಂಪ್ಯೂಟರ್‌ ನೆರವು ಇಲ್ಲದೇ ನೇರ ನೋಟು ಮುದ್ರಿಸುವ ಯಂತ್ರ ಇದೆಯೇ? ಅದು ಸಾಧ್ಯವೇ? ಸಾಮಾನ್ಯ ಗುರುತಿನ ಚೀಟಿ ಮಾಡಬೇಕಾದರೂ ಕನಿಷ್ಠ ಫೋಟೋಷಾಪ್‌, ಕೊರೆಲ್‌ ಡ್ರಾದಂಥ ವಿನ್ಯಾಸ ತಂತ್ರಾಂಶಗಳು ಬೇಕಾಗುತ್ತವೆ. ಇದರಲ್ಲಿ ವಿಶೇಷ ಪರಿಣತಿಯೂ ಬೇಕು. ಅದ್ಯಾವುದರ ನೆರವೂ ಇಲ್ಲದ ‘ಅದ್ಭುತ ಯಂತ್ರ’ ನೋಟುಗಳನ್ನು ಮುದ್ರಿಸುತ್ತಿದೆಯೇ ಎಂದು ಪ್ರಶ್ನಿಸುತ್ತಾರೆ ಅವರು.

* ಶಿವಕುಮಾರ್‌ ನೋಟುಗಳನ್ನು ಮುದ್ರಿಸಿದ್ದು ಅಥವಾ ಆ ಜಾಲದಲ್ಲಿದ್ದದ್ದೇ ಆದರೆ ಅವರೇಕೆ ಇನ್ನೂ ಆರ್ಥಿಕ ಸಂಕಷ್ಟದಿಂದ ಹೊರಬಂದಿಲ್ಲ. ಕನಿಷ್ಠ ವೇತನಕ್ಕೆ ಅತಿಥಿ ಉಪನ್ಯಾಸಕರಾಗಿ ಏಕೆ ದುಡಿಯುತ್ತಿದ್ದಾರೆ? ಶಿಕ್ಷಣ ಸಂಸ್ಥೆ ಸ್ಥಾಪನೆ, ಅದರ ಕಟ್ಟಡ ನಿರ್ಮಾಣ, ಆಡಳಿತ ನಿರ್ವಹಣೆ, ಆ ಸಂಬಂಧಿತ ಹೋರಾಟಗಳಲ್ಲೇ ಅವರ ಸಂಪಾದನೆ ಕಳೆದುಹೋಗಿದೆ. ಮಾತ್ರವಲ್ಲ, ಸಾಕಷ್ಟು ಸಾಲಗಳೂ ಅವರ ಮೇಲಿವೆ ಎಂಬುದು ಶಿವಕುಮಾರ್‌ ಅವರ ಸಹೋದ್ಯೋಗಿ ಉಪನ್ಯಾಸಕರ ವಿವರಣೆ.

ಘಟನೆಯ ಮೂಲ ‘ಬೀಗರ ಜಗಳ’?
ನಗರದ ಒಬ್ಬ ಕನ್ನಡಪರ ‘ಹೋರಾಟಗಾರ’ ಮತ್ತು ಶಿವಕುಮಾರ್‌ ನಡುವೆ ಹಲವಾರು ವರ್ಷಗಳಿಂದ ಜಗಳ ನಡೆಯುತ್ತಿದೆ. ಹಾಗೆ ನೋಡಿದರೆ ಅವರಿಬ್ಬರೂ ಸಹಪಾಠಿಗಳು, ಒಂದು ಕಾಲದ ಆಪ್ತ ಸ್ನೇಹಿತರು. ಕಾಲಾನಂತರದಲ್ಲಿ ಅವರ ಕನ್ನಡಪರ ಹೋರಾಟ ‘ಕವಲು’ದಾರಿಯಲ್ಲಿ ಹೋಯಿತು. ಶಿವಕುಮಾರ್‌ ಅವರ ಬದುಕು ಹೈದರಾಬಾದ್‌ – ಕರ್ನಾಟಕ 371 (ಜೆ) ಮೀಸಲಾತಿ ಹೋರಾಟ ಸಮಿತಿ, ಬಸವ ಚಿಂತನೆಗಳ ಕಾರ್ಯಕ್ರಮಗಳು, ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರ, ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಘಟನೆ, ಶಿಕ್ಷಣ ಕ್ಷೇತ್ರದಲ್ಲಿ ಮುಂದುವರಿಯಿತು.
ಕ್ಷುಲ್ಲಕ ಕಾರಣದಿಂದ ಆರಂಭವಾದ ಗೆಳೆಯರ ಜಗಳ ಹಲವು ಪ್ರಕರಣಗಳಲ್ಲಿ ನ್ಯಾಯಾಲಯದ ಕಟ್ಟೆ ಹತ್ತುವವರೆಗೂ ಮುಂದುವರಿಯಿತು. ಸಾಮಾಜಿಕ ಜಾಲತಾಣಗಳಲ್ಲಿ ಒಬ್ಬರಿಗೊಬ್ಬರು ಕೆಸರು ಎರಚಿಕೊಳ್ಳುವುದು ನಡೆದೇ ಇದೆ. ಇದಕ್ಕೆ ಶಿವಕುಮಾರ್‌ ಸ್ನೇಹಿತರು ‘ಬೀಗರ ಜಗಳ’ ಎಂದೇ ಹೆಸರಿಟ್ಟು ಕರೆದು ತಮಾಷೆ ಮಾಡುತ್ತಾರೆ. ಶಿವಕುಮಾರ್‌ರದ್ದು ನೇರದಾರಿಯಾದರೆ. ಅವರದ್ದು ‘ಕವಲು’ ದಾರಿ. ಇಬ್ಬರ ನಡುವೆ ‘ವಿಜಯ’ ಯಾರದ್ದು ಎಂಬುದಕ್ಕೆ ಕಾಲವೇ ಉತ್ತರಿಸಬೇಕು ಎನ್ನುತ್ತಾರೆ ಶಿವಕುಮಾರ್‌ ಸಹೋದ್ಯೋಗಿಗಳು.
ಒಟ್ಟಿನಲ್ಲಿ ನಿಖರ ತನಿಖೆ ನಡೆಯಲಿ. ಶಿವಕುಮಾರ್‌ ನಿಜವಾಗಿಯೂ ತಪ್ಪು ಮಾಡಿದ್ದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಿ. ಆದರೆ, ತನಿಖೆಯ ದಾರಿ ಪೊಲೀಸರ ಆತ್ಮಸಾಕ್ಷಿಗನುಗುಣವಾಗಿ ಪ್ರಾಮಾಣಿಕವಾಗಿರಲಿ ಎಂದು ಕುಂಬಾರರ ಓಣಿಯ ನಿವಾಸಿಗಳು ಆಶಯ ವ್ಯಕ್ತಪಡಿಸಿದರು.

ಶಿವಕುಮಾರ್‌ ಹೇಳಿಕೆ
ಶುಕ್ರವಾರ ನಡುರಾತ್ರಿ ಪೊಲೀಸರ ವಶದಲ್ಲಿದ್ದ ಶಿವಕುಮಾರ್‌ ಪ್ರತಿಭಟನಾ ನಿರತ ತಮ್ಮ ಬೆಂಬಲಿಗರನ್ನುದ್ದೇಶಿಸಿ ಮಾತನಾಡಿ, ‘ನಾನು ತಪ್ಪು ಮಾಡಿಲ್ಲ ಎಂಬ ವಿಶ್ವಾಸ ನಿಮಗಿದೆಯಲ್ಲವೇ? ಇದೂ ಒಂದು ಷಡ್ಯಂತ್ರ. ನನ್ನ ಒಂದು ಕೂದಲೂ ಕೊಂಕದಂತೆ  ಇಲ್ಲಿನ ಹಿರಿಯರು ನೈತಿಕ ಬೆಂಬಲಕ್ಕಿದ್ದಾರೆ. ಇಡೀ ಪ್ರಕರಣದಲ್ಲಿ ಗೆದ್ದು ಬರುತ್ತೇನೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

(ಚಿತ್ರ: ಶಿವಕುಮಾರ್‌ ಕುಕನೂರು ಅವರ ಮನೆಯಲ್ಲಿ ಖೋಟಾನೋಟು ಮತ್ತು ಮುದ್ರಣ ಯಂತ್ರ ಪತ್ತೆ ಪ್ರಕರಣವನ್ನು ಪ್ರಾಮಾಣಿಕವಾಗಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಖಾಸಗಿ ಶಾಲೆಗಳ ಆಡಳಿತದ ಒಕ್ಕೂಟ ಹಾಗೂ ವಿವಿಧ ಸಂಘಟನೆಗಳ ಮುಖಂಡರು ಶನಿವಾರ ಕೊಪ್ಪಳದಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಅನೂಪ್‌ ಎ.ಶೆಟ್ಟಿ ಅವರಿಗೆ ಮನವಿ ಸಲ್ಲಿಸಿದರು)


ಇಡೀ ಘಟನೆಯ ಸತ್ಯಾಸತ್ಯತೆಯನ್ನು ಪರಿಶೀಲಿಸುತ್ತೇವೆ. ಶಿವಕುಮಾರ್‌ ಅಮಾಯಕರಾಗಿದ್ದರೆ ಅವರ ವಿರುದ್ಧ ಪ್ರಕರಣ ದಾಖಲಿಸಿ ನಮಗೇನೂ ಆಗಬೇಕಾಗಿಲ್ಲ. ತನಿಖೆ ನಡೆಯಲಿ.
–ಶ್ರೀಕಾಂತ ಕಟ್ಟಿಮನಿ, ಡಿವೈಎಸ್‌ಪಿ ಕೊಪ್ಪಳ


ವಿಚಾರಣೆ ಮುಂದುವರಿದಿದೆ. ಇನ್ನಷ್ಟು ವಿವರಗಳು ತಿಳಿಯಬೇಕಿದೆ. ಬಳಿಕ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳುತ್ತೇವೆ.
ರವಿ ಉಕ್ಕುಂದ, ಇನ್ಸ್‌ಪೆಕ್ಟರ್‌ ನಗರಠಾಣೆ, ಕೊಪ್ಪಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT