ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರೈತ, ನೇಕಾರರದು ಆತ್ಮಹತ್ಯೆ ಅಲ್ಲ, ಕೊಲೆ’

Last Updated 22 ಜುಲೈ 2017, 9:07 IST
ಅಕ್ಷರ ಗಾತ್ರ

ರಬಕವಿ ಬನಹಟ್ಟಿ: ‘ರಾಜ್ಯದಲ್ಲಿ ನಡೆಯುತ್ತಿರುವ ರೈತರ ಮತ್ತು ನೇಕಾರರ ಆತ್ಮಹತ್ಯೆಗಳು ಆತ್ಮಹತ್ಯೆಗಳಲ್ಲ. ಅವು ರಾಜ್ಯ ಸರ್ಕಾರ ಮಾಡಿದ ಕೊಲೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಿದ ಕೊಲೆ ಎಂದು ತಿಳಿದುಕೊಳ್ಳಬೇಕು’ ಎಂದು ಹಂದಿಗುಂದದ ಶಿವಾನಂದ ಸ್ವಾಮೀಜಿ ಹೇಳಿದರು. ಅವರು ಶುಕ್ರವಾರ ರಬಕವಿಯ ಎಂ.ವಿ.ಪಟ್ಟಣ ಮೈದಾನದಲ್ಲಿ 37ನೇ ರೈತ ಹುತಾತ್ಮ ದಿನಾಚರಣೆ ಅಂಗವಾಗಿ ಹಮ್ಮಿಕೊಂಡ ಸಮಾವೇಶದಲ್ಲಿ ಮಾತನಾಡಿದರು.

‘ಈ ಭಾಗದ ರೈತರು ಸಸಾಲಟ್ಟಿ ಏತ ನೀರಾವರಿಯನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಿ ಮಹಾಲಿಂಗಪುರದಲ್ಲಿ ಧರಣಿ ಸತ್ಯಾಗ್ರಹ ನಡೆಸಿದರು. ಆ ಸಂದರ್ಭದಲ್ಲಿ ಭೇಟಿ ನೀಡಿದ ನೀರಾವರಿ ಸಚಿವ ಎಂ.ಬಿ.ಪಾಟೀಲ ಮತ್ತು ಜಿಲ್ಲಾ ಉಸ್ತುವಾರಿ ಸಚಿವೆ ಉಮಾಶ್ರೀ ಒಂದು ತಿಂಗಳ ಒಳಗಾಗಿ ಈ ಯೋಜನೆ ಕುರಿತು ಚರ್ಚೆ ಮಾಡಲು ಸಭೆಯನ್ನು ಕರೆಯಲಾಗುವುದು ಎಂದು ತಿಳಿಸಿದ್ದರು. ಆದರೆ ಈಗ ನಾಲ್ಕು ತಿಂಗಳು ಗತಿಸಿದರೂ ಇದುವರೆಗೆ ಯಾವುದೇ ರೀತಿಯ ಕ್ರಮವನ್ನು ತೆಗೆದುಕೊಂಡಿಲ್ಲ’ ಎಂದು ದೂರಿದರು.

‘ಸಸಾಲಟ್ಟಿ ಏತ ನೀರಾವರಿ ಯೋಜನೆ ಕುರಿತು ಒಂದು ವಾರದೊಳಗೆ ಸಚಿವರಿಬ್ಬರು ಸಭೆಯನ್ನು ನಿಗದಿ ಮಾಡಿ ಕರೆಯಬೇಕು. ಇಲ್ಲವೇ ಸ್ಪಷ್ಟ ಚಿತ್ರಣ ನೀಡದೆ ಇದ್ದರೆ ಮುಂಬರುವ ದಿನಗಳಲ್ಲಿ ಸಚಿವ ಎಂ.ಬಿ.ಪಾಟೀಲ ಮತ್ತು ಸಚಿವೆ ಉಮಾಶ್ರೀ ಅವರ ಮನೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಲಾಗುವುದು ಮತ್ತು ಉಪವಾಸ ಸತ್ಯಾಗ್ರಹ ಕೈಗೊಳ್ಳಲಾಗುವುದು’ ಎಂದು ಎಚ್ಚರಿಸಿದರು.

‘ಸಾರ್ವಜನಿಕರ ಜೊತೆಗೆ ಮತ್ತು ಸಭೆಗಳಲ್ಲಿ  ಮಾತನಾಡುವ ಸಂದರ್ಭದಲ್ಲಿ ಜವಾಬ್ದಾರಿಯಿಂದ ಮಾತನಾಡುವುದನ್ನು ರಾಜಕಾರಣಿಗಳು ಅರಿತುಕೊಳ್ಳಬೇಕು. ರೈತ ಮತ್ತು ನೇಕಾರರ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗದೆ ಇದ್ದರೆ ವಿಧಾನ ಸೌಧದಲ್ಲಿ ಕುಳಿತುಕೊಳ್ಳುವ ನೈತಿಕ ಹಕ್ಕು ರಾಜಕಾಣಿಗಳಿಗೆ ಇಲ್ಲ’ ಎಂದರು.

‘ರೈತರು ಮತ್ತು ನೇಕಾರರು ತಮ್ಮ ಹಕ್ಕುಗಳಿಗಾಗಿ ಸ್ವಾತಂತ್ರ್ಯದ ರೀತಿಯಲ್ಲಿ ಹೋರಾಟಕ್ಕೆ ಮುಂದಾಗಬೇಕು. ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿಯ ಎಲ್ಲ ರೀತಿಯ ಸಾಲವನ್ನು ಮನ್ನಾ ಮಾಡಬೇಕು. ಭಾಗ್ಯಗಳ ಮೂಲಕ ರಾಜ್ಯದಲ್ಲಿಯ ಕಾಂಗ್ರೆಸ್‌ ಸರ್ಕಾರ ಹಗಲು ದರೋಡೆ ಮಾಡುತ್ತಿದೆ. ಆದ್ದರಿಂದ ಎಲ್ಲ ಭಾಗ್ಯಗಳನ್ನು ನಿಲ್ಲಿಸಿ ಕರ್ನಾಟಕ ಕಲ್ಯಾಣ ಭಾಗ್ಯವನ್ನು ನೀಡುವ ಕಾರ್ಯಕ್ಕೆ ಮುಂದಾಗಬೇಕು’ ಎಂದು ಶಿವಾನಂದ ಸ್ವಾಮೀಜಿ ತಿಳಿಸಿದರು.

ನೇಕಾರ ಸಂಘದ ರಾಷ್ಟ್ರೀಯ ಅಧ್ಯಕ್ಷ ರಮೇಶ ಬಾಕರೆ ಮಾತನಾಡಿ, ‘ಕೇಂದ್ರ ಸರ್ಕಾರ ಈಗ ಜಿಎಸ್‌ಟಿ ಜಾರಿಗೆ ತರುವುದರ ಮೂಲಕ ನೇಕಾರರಿಗೆ ಸಾಕಷ್ಟು ತೊಂದರೆ ಮಾಡಿದೆ. ಸರ್ಕಾರ ನೇಕಾರರ ಬದುಕುವ ಹಕ್ಕನ್ನು ಕಸಿದುಕೊಂಡಿದೆ’ ಎಂದು ತಿಳಿಸಿದರು.

ರಾಜ್ಯ ಹಸಿರು ಸೇನೆ ಸಂಚಾಲಕ ಗಂಗಾಧರ ಮೇಟಿ ಮಾತನಾಡಿ, ‘ಸಸಾಲಟ್ಟಿ ಏತ ನೀರಾವರಿ ಯೋಜನೆಯಿಂದ ರಾಯಬಾಗ, ಜಮಖಂಡಿ ಮತ್ತು ಮುಧೋಳ ತಾಲ್ಲೂಕಿನ ಹತ್ತಾರು ಗ್ರಾಮಗಳ ಅಂದಾಜು 38 ಸಾವಿರ ಹೆಕ್ಟೇರ್‌ ಪ್ರದೇಶಗಳ ಭೂಮಿಗೆ ನೀರು ದೊರೆಯಲಿದೆ. ಈ ಯೋಜನೆಗಾಗಿ ಮಹಾಲಿಂಗಪುರ ಪಟ್ಟಣದಲ್ಲಿ 38 ದಿನ ಧರಣಿ ಸತ್ಯಾಗ್ರಹ ಕೈಗೊಳ್ಳಲಾಗಿತ್ತು. ಭರವಸೆ ನೀಡಿದಂತೆ ಈವರೆಗೆ ಯಾವುದೇ ಕ್ರಮವಾಗಿಲ್ಲ’ ಎಂದು ತಿಳಿಸಿದರು. 

ರಾಜ್ಯ ರೈತ ಸಂಘದ ಮತ್ತು ಹಸಿರು ಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ, ಬಾಗಲಕೋಟೆ ಜಿಲ್ಲಾ ರೈತ ಸಂಘದ ಅಧ್ಯಕ್ಷ ಬಸವಂತ ಕಾಂಬಳೆ,  ಬಾಗಲಕೋಟೆ ಜಿಲ್ಲೆ ನೇಕಾರ ಘಟಕದ ಅಧ್ಯಕ್ಷ ರಮೇಶ ಭಾವಿಕಟ್ಟಿ, ಜಿಲ್ಲಾ ಕಾರ್ಮಿಕ ಸಂಘದ ಅಧ್ಯಕ್ಷ ಅರ್ಜುನ ಬಂಡಿವಡ್ಡರ ಸೇರಿದಂತೆ ಅನೇಕರು ಮಾತನಾಡಿದರು.

ಸ್ಥಳೀಯ ಬ್ರಹ್ಮಾನಂದ ಆಶ್ರಮದ ಗುರುಸಿದ್ಧೇಶ್ವರ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು. ರಾಜ್ಯ ನೇಕಾರ ಸಂಘದ ಅಧ್ಯಕ್ಷ ಶಿವಲಿಂಗ ಟಿರಕಿ,  ಮಹಿಳಾ ಘಟಕದ ಅಧ್ಯಕ್ಷೆ ವಿಜಯಲಕ್ಷ್ಮಿ ಟಿರಕಿ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಪದಾಧಿಕಾರಿಗಳು ಇದ್ದರು. 

ಬೃಹತ್‌ ಮೆರವಣಿಗೆ:  ಬನಹಟ್ಟಿಯ ಈಶ್ವರಲಿಂಗ ಮೈದಾನದಿಂದ ಮತ್ತು ಮಹಾಲಿಂಗಪುರ ನಾಕಾದಿಂದ ಸಾವಿರಾರು ರೈತ ಮತ್ತು ನೇಕಾರರು ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತ ಬೃಹತ್‌ ಮೆರವಣಿಗೆ ನಡೆಸಿದರು. ನೂರಾರು ಜನ ಬೈಕ್‌ ರ್‍್ಯಾಲಿ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT