ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾರಂಗಿ ಜಲಾಶಯ ಭರ್ತಿಗೆ ಐದೇ ಅಡಿ ಬಾಕಿ

Last Updated 22 ಜುಲೈ 2017, 9:20 IST
ಅಕ್ಷರ ಗಾತ್ರ

ಕುಶಾಲನಗರ: ಕೊಡಗು ಜಿಲ್ಲೆಯಲ್ಲಿ ಉತ್ತಮ ಮಳೆ ಸುರಿಯುತ್ತಿರುವುದ ರಿಂದ ಕಾವೇರಿ ಕಣಿವೆಯ ಪ್ರಮುಖ ಜಲಾಶಯಗಳಲ್ಲಿ ಒಂದಾಗಿರುವ ಹಾರಂಗಿ ಜಲಾಶಯಕ್ಕೆ ನೀರಿನ ಒಳಹರಿವು ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ಜಲಾಶಯ ಭರ್ತಿಗೆ 5.32 ಅಡಿ ಮಾತ್ರ ಬಾಕಿಯಿದೆ.

ಅಣೆಕಟ್ಟೆಯ ಜಲಾನಯನ ಪ್ರದೇಶದಲ್ಲಿ ಜುಲೈ ಎರಡನೇ ವಾರದ ಬಳಿಕ ವಾಡಿಕೆಯಂತೆ ಮಳೆ ಆಗುತ್ತಿದ್ದು,  ನೀರಿನ ಒಳಹರಿವಿನ ಪ್ರಮಾಣದಲ್ಲಿ ದಿನದಿಂದ ದಿನಕ್ಕೆ ಏರಿಕೆ ಕಾಣಿಸುತ್ತಿದೆ. ಗರಿಷ್ಠ 2,859 ಅಡಿ ಸಾಮರ್ಥ್ಯದ ಜಲಾಶಯದಲ್ಲಿ ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ವೇಳೆಗೆ 2853.68 ಅಡಿಗಳಷ್ಟು ನೀರು ಸಂಗ್ರಹವಾಗಿತ್ತು. ಜಲಾಶಯದಲ್ಲಿ 6.25 ಟಿಎಂಸಿ ಅಡಿ ನೀರು ಸಂಗ್ರಹಗೊಂಡಿದೆ.

ಹಾರಂಗಿ ವ್ಯಾಪ್ತಿಯಲ್ಲಿ 10.2 ಮಿ.ಮೀ. ಮಳೆಯ ಪ್ರಮಾಣ ದಾಖಲಾಗಿದೆ. ಅಣೆಕಟ್ಟೆಗೆ ನೀರಿನ ಒಳಹರಿವಿನ ಪ್ರಮಾಣ ಬೆಳಿಗ್ಗೆ 6ಕ್ಕೆ 8,137 ಕ್ಯುಸೆಕ್‌ ಇತ್ತು. ನಂತರ, ಮಳೆಯ ಬಿರುಸಿನ ಪ್ರಮಾಣ ಸ್ವಲ್ಪ ಕಡಿಮೆಯಾದ ಹಿನ್ನೆಲೆಯಲ್ಲಿ ಮಧ್ಯಾಹ್ನ 3 ಗಂಟೆಗೆ 6,180 ಕ್ಯುಸೆಕ್‌ ಆಗಿತ್ತು ಎಂದು ಸಹಾಯಕ ಎಂಜಿನಿಯರ್ ನಾಗರಾಜು ತಿಳಿಸಿದ್ದಾರೆ.

ಈ ವರ್ಷ ಜೂನ್ ತಿಂಗಳಿನಲ್ಲಿಯೇ ಮುಂಗಾರು ಆರಂಭಗೊಂಡರೂ ವಾಡಿಕೆ ಮಳೆ ಬೀಳದ ಹಿನ್ನೆಲೆಯಲ್ಲಿ ಜಲಾಶಯ ಇನ್ನೂ ಭರ್ತಿಯಾಗಿಲ್ಲ. ಆದರೆ, ಜುಲೈ ಎರಡನೇ ವಾರ ಕಳೆದ ನಂತರ ಮಳೆರಾಯ ಕೃಪೆ ತೋರಿದ್ದು, ಉತ್ತಮ ಮಳೆ ಸುರಿಯುತ್ತಿದೆ.

ಇದೇ ರೀತಿ ಮಳೆ ಬಂದರೆ ಜಲಾಶಯ ಬಹುಬೇಗ ಸಂಪೂರ್ಣ ಭರ್ತಿಯಾಗುವ ಮುನ್ಸೂಚನೆ ನೀಡಿದೆ. ಕಳೆದ ವರ್ಷ ಜೂನ್ ತಿಂಗಳಿನಲ್ಲಿ ಮುಂಗಾರು ಮಳೆ ವೈಫಲ್ಯದಿಂದ ವಾಡಿಕೆ ಮಳೆ ಆಗಿರಲಿಲ್ಲ. ಆದರೆ, ಜುಲೈ ಮೊದಲವಾರ ಉತ್ತಮ ಮಳೆ ಬಂದ ಹಿನ್ನೆಲೆಯಲ್ಲಿ ಜಲಾಶಯ ಜುಲೈ 10ರಂದು ಬಹುತೇಕ ಭರ್ತಿಯಾಗಿ ನದಿಗೆ ನೀರು    ಹರಿಬಿಡಲಾಗಿತ್ತು.

ರೈತರ ಹರ್ಷ: ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಉತ್ತಮ ಮಳೆ ಆಗುತ್ತಿರುವುದರಿಂದ ರೈತರು ಸಂತೋಷಗೊಂಡಿದ್ದು   ಕೃಷಿ ಚಟುವಟಿಕೆ ಕೈಗೊಂಡಿದ್ದಾರೆ.

ತಗ್ಗದ ಪ್ರವಾಹ: ಸಂಚಾರಕ್ಕೆ ತೊಡಕು

ನಾಪೋಕ್ಲು: ಹೋಬಳಿ ವ್ಯಾಪ್ತಿಯಲ್ಲಿ ಶುಕ್ರವಾರ ಸಾಧಾರಣ ಮಳೆಯಾಗಿದೆ.ನಾಪೋಕ್ಲು–ಮೂರ್ನಾಡು ಸಂಪರ್ಕ ರಸ್ತೆಯಲ್ಲಿ ಕಾವೇರಿ ನದಿ ಪ್ರವಾಹ  ಸಂಪೂರ್ಣವಾಗಿ ಇಳಿಮುಖವಾಗದೇ ಇರುವುದರಿಂದ ವಾಹನಗಳ ಸಂಚಾರಕ್ಕೆ ತೊಡಕುಂಟಾಗಿದೆ. ಇಲ್ಲಿನ ಚೆರಿಯಪರಂಬುವಿನ ಸಂಪರ್ಕ ರಸ್ತೆಯಲ್ಲಿ ನೀರುತುಂಬಿ ಹರಿಯುತ್ತಿರುವ ಕಾರಣ ಕಲ್ಲುಮೊಟ್ಟೆ ನಿವಾಸಿಗಳು ಕಕ್ಕುಂದಕಾಡುವಿನ ವೆಂಕಟೇಶ್ವರ ದೇವಾಲಯ ರಸ್ತೆಯಲ್ಲಿ  ತೆರಳುವಂತಾಗಿದೆ.

ಕಕ್ಕಬ್ಬೆ - ನಾಲಡಿ ವ್ಯಾಪ್ತಿಯಲ್ಲಿ ಮಳೆ ಅಧಿಕವಾಗಿದ್ದು ನಾಲಡಿಯಲ್ಲಿ ಎರಡು ಸೇತುವೆಗಳು ಜಲಾವೃತಗೊಂಡಿವೆ. ಕಕ್ಕಬ್ಬೆ ಗ್ರಾಮಪಂಚಾಯಿತಿಯ ಮರಂದೋಡ ಗ್ರಾಮದ ನಿವಾಸಿ ಇಲ್ಲಿನ ಚೋಯಮಾಡಂಡ  ಕರುಂಬಯ್ಯ ಅವರ ಮನೆಮೇಲೆ ಭಾರಿ ಗಾತ್ರದ ಮರಬಿದ್ದು ಹಾನಿ ಸಂಭವಿಸಿದೆ.

ಸ್ಥಳಕ್ಕೆ ಕಕ್ಕಬ್ಬೆ ಗ್ರಾ.ಪಂ.ಅಧ್ಯಕ್ಷೆ ಕರ್ತಂಡ ಶೈಲಾಕುಟ್ಟಪ್ಪ, ಆರ್.ಐ ರಾಮಯ್ಯ, ತೆರಳಿ ಪರಿಶೀಲನೆ ನಡೆಸಿದರು.  ಕೋಕೇರಿ ಗ್ರಾಮದ ನಿವಾಸಿ ಮಚ್ಚಂಡ ಬೊಳ್ಳವ್ವ ಎಂಬವರು ವಾಸವಾಗಿದ್ದ ಮನೆಯ ಗೋಡೆ ಕುಸಿದಿದ್ದು, ಅಂದಾಜು ₹80 ಸಾವಿರ ನಷ್ಟ ಸಂಭವಿಸಿದೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT