ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂದಾಯ ಭವನಕ್ಕೆ ಕಾಲಿಟ್ಟ ಆರೋಗ್ಯ ವಿ.ವಿ.

Last Updated 22 ಜುಲೈ 2017, 10:46 IST
ಅಕ್ಷರ ಗಾತ್ರ

ರಾಮನಗರ: ಇಲ್ಲಿನ ಕಂದಾಯ ಭವನದಲ್ಲಿ ತಾತ್ಕಾಲಿಕ ಕ್ಯಾಂಪಸ್ ಮೂಲಕ ಜಿಲ್ಲೆಯಲ್ಲಿ ಕಾರ್ಯಾರಂಭ ಮಾಡಲು ರಾಜೀವ್‌ಗಾಂಧಿ ಆರೋಗ್ಯ ವಿಶ್ವವಿದ್ಯಾಲಯವು ಸಿದ್ಧತೆ ಆರಂಭಿಸಿದೆ. ಕಳೆದ ಜೂನ್‌ 15ರ ಒಳಗೆ ರಾಮನಗರಕ್ಕೆ ಸ್ಥಳಾಂತರಗೊಳ್ಳುವಂತೆ ಆರೋಗ್ಯ ಮತ್ತು ಉನ್ನತ ಶಿಕ್ಷಣ ಸಚಿವರು ವಿಶ್ವವಿದ್ಯಾಲಯದ ಅಧಿಕಾರಿ ಗಳಿಗೆ ಗಡುವು ನೀಡಿದ್ದರು. ಗಡುವು ಮುಗಿದ ಒಂದು ತಿಂಗಳ ಬಳಿಕ ಕಂದಾಯ ಭವನಕ್ಕೆ ವಿಶ್ವವಿದ್ಯಾಲಯದ ಸಿಬ್ಬಂದಿ ಕಾಲಿರಿಸಿದ್ದಾರೆ.

ಮೊದಲಿಗೆ ಎಂಜಿನಿಯರಿಂಗ್ ವಿಭಾಗದ ಸಿಬ್ಬಂದಿ ಬಂದಿದ್ದು, ಇಲ್ಲಿನ ತಳಮಹಡಿ ಯಲ್ಲಿರುವ ಸಭಾಂಗಣ ಹಾಗೂ ಒಂದು ಕೊಠಡಿಯನ್ನು ಸ್ವಚ್ಛಗೊಳಿಸಿಕೊಂಡು ಅವಶ್ಯವಾದ ಸೌಕರ್ಯ ಕಲ್ಪಿಸಿಕೊಳ್ಳಲು ಮುಂದಾಗಿದ್ದಾರೆ.

ಭವನವನ್ನು ಸ್ವಚ್ಛಗೊಳಿಸಿ ಸುಣ್ಣಬಣ್ಣ ಬಳಿಯುವುದರ ಜೊತೆಗೆ ವಿಶ್ವವಿ ದ್ಯಾಲಯದ ಬೋಧಕೇತರ ಸಿಬ್ಬಂದಿ ಕಾರ್ಯನಿರ್ವಹಿಸಲು ಅವಶ್ಯವಾದ ಕೊಠಡಿಗಳ ವಿನ್ಯಾಸ ಕಾರ್ಯವು ಶೀಘ್ರ ಆರಂಭಗೊಳ್ಳಲಿದೆ. ‘ಒಳಾಂಗಣ ವಿನ್ಯಾಸ, ಕಚೇರಿಗಳ ಕಡತಗಳನ್ನು ಇಡಲು ಬೇಕಾದ ರ್‍ಯಾಕ್‌ಗಳು, ಮೇಜು ಮೊದಲಾದವುಗಳನ್ನು ಸಿದ್ಧಪಡಿಸಲು ಟೆಂಡರ್‌ ನೀಡಲಾಗಿದೆ. ಒಂದು ತಿಂಗಳ ಒಳಗೆ ಈ ಕಾಮಗಾರಿಗಳನ್ನು ಮುಗಿಸು ವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ನಂತರದಲ್ಲಿ ಸಿಬ್ಬಂದಿ ಈ ಕಟ್ಟಡಕ್ಕೆ ಸ್ಥಳಾಂತರಗೊಳ್ಳಲಿದ್ದಾರೆ’ ಎಂದು ವಿಶ್ವವಿದ್ಯಾಲಯದ ಕುಲಸಚಿವ ನೂರ್‌ಮನ್ಸೂರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಪಾಳುಬಿದ್ದ ಕಂದಾಯ ಭವನ: ಆರೋಗ್ಯ ವಿ.ವಿ. ಕ್ಯಾಂಪಸ್‌ಗೆ ಜಾಗ ಮಾಡಿ ಕೊಡುವ ಸಲುವಾಗಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ್ ಅವರು ಕಂದಾಯ ಭವನದಲ್ಲಿರುವ ಸರ್ಕಾರಿ ಕಚೇರಿ  ತ್ವರಿತವಾಗಿ ಖಾಲಿ ಮಾಡಿಸಿದ್ದರು. ಇದಕ್ಕಾಗಿ ಹಲವು ವರ್ಷದಿಂದ ನನೆಗುದಿಗೆ ಬಿದ್ದಿದ್ದ ಜಿಲ್ಲಾ ಕಚೇರಿಗಳ ಸಂಕೀರ್ಣದ ಕಾಮಗಾರಿ ಯನ್ನು ತ್ವರಿತವಾಗಿ ಮುಗಿಸಿ, ಅಲ್ಲಿಗೆ ಜಿಲ್ಲಾಡಳಿತ ಮತ್ತು ಅದರ ಅಧೀನದ ಕಚೇರಿ ಸ್ಥಳಾಂತರ ಮಾಡಲಾಗಿತ್ತು.

ಇದಾಗಿ ನಾಲ್ಕಾರು ತಿಂಗಳೇ ಕಳೆದಿದೆ. ಕಂದಾಯ ಭವನದಲ್ಲಿಯೇ ಉಳಿದುಕೊಂಡಿದ್ದ ವಾಣಿಜ್ಯ ತೆರಿಗೆ ಇಲಾಖೆಯ ಕಚೇರಿ ಸಹ ಹದಿನೈದು ದಿನದ ಹಿಂದೆ ಸ್ಥಳಾಂತರಗೊಂಡಿದೆ. ಸದ್ಯ ಈ ಭವನದಲ್ಲಿ ಜಿಲ್ಲಾ ಉದ್ಯೋಯ ವಿನಿಮಯ ಕೇಂದ್ರ ಹಾಗೂ ಮತ್ತೆರಡು ಸಣ್ಣ ಕಚೇರಿಗಳು ಮಾತ್ರ ಕಾರ್ಯ ನಿರ್ವಹಿಸುತ್ತಿವೆ.

ಒಂದು ಕಾಲದಲ್ಲಿ ಸರ್ಕಾರಿ ಸಿಬ್ಬಂದಿ ಮತ್ತು ಜನರಿಂದ ಗಿಜಿಗುಡುತ್ತಿದ್ದ ಭವನವು ಇದೀಗ ನಿರ್ವಹಣೆಯೇ ಇಲ್ಲದ ಕಾರಣ ಪಾಳು ಕೊಂಪೆ ಯಾಗುತ್ತಿದೆ. ಇಡೀ ಕಟ್ಟಡದ ಅಂಗಳದ ತುಂಬ ಹಕ್ಕಿಗಳ ಹಿಕ್ಕೆಗಳು ರಾಶಿ ಬಿದ್ದಿವೆ. ಅಲ್ಲಲ್ಲಿ ದೂಳು ಕಟ್ಟಿಕೊಂಡಿದ್ದು, ಮೇಲಿನ ಅಂತಸ್ತುಗಳಲ್ಲಿ ಓಡಾಡಲು ಜನರು ಭಯ ಪಡುವಂತಾಗಿದೆ.
ಜನರ ಓಡಾಟವೇ ಇಲ್ಲದ ಕಾರಣ ಕಟ್ಟಡದ ಮುಖ್ಯ ಪ್ರವೇಶ ದ್ವಾರವನ್ನು ಮುಚ್ಚಲಾಗಿತ್ತು. ಇದೀಗ ಅದನ್ನೂ ತೆರೆಯಲಾಗಿದೆ.

ನಿರ್ವಹಣೆ ಇಲ್ಲದ ಕಾರಣ ಕಟ್ಟಡದ ಸುತ್ತಲಿನ ಕೈತೋಟ ಸಂಪೂರ್ಣ ಒಣಗಿದ್ದು, ಸುತ್ತ ಕಳೆ ಬೆಳೆದುಕೊಂಡಿವೆ. ಮರಗಳ ಅಡಿಯಲ್ಲೂ ಕೂರಲು ಹೆದರುವಂತಾಗಿದೆ. ಸದ್ಯ ವಾಹನಗಳ ನಿಲುಗಡೆಗೆ ಮಾತ್ರ ಇಲ್ಲಿನ ಜಾಗ ಬಳಕೆ ಆಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT