ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನ ಖಾಸಗಿ ಸಂಸ್ಥೆ ‘ಟೀಮ್‌ ಇಂಡಸ್‌’ನ ಮಹತ್ವದ ಚಂದ್ರಯಾನ ಯೋಜನೆ

Last Updated 22 ಜುಲೈ 2017, 12:18 IST
ಅಕ್ಷರ ಗಾತ್ರ

ಚೆನ್ನೈ: ಬೆಂಗಳೂರಿನ ಖಾಸಗಿ ಸಂಸ್ಥೆ ‘ಟೀಮ್‌ ಇಂಡಸ್‌’ ಚಂದ್ರನಲ್ಲಿ  ರೋವರ್‌ ಇಳಿಸುವ ಪ್ರಯತ್ನಕ್ಕೆ ಮುಂದಾಗಿದ್ದು ಈಗಾಗಲೇ  ಬಾಹ್ಯಾಕಾಶ ನೌಕೆಯ ಮಾದರಿ ಸಿದ್ಧಪಡಿಸಿದೆ. ಆಗಸ್ಟ್‌ನಲ್ಲಿ ಇಸ್ರೊ ಈ ಮಾದರಿಯ ಪರೀಕ್ಷೆ ನಡೆಸಲಿದೆ.

ಚೆನ್ನೈ ಇಂಟರ್‌ನ್ಯಾಷನಲ್‌ ಸೆಂಟರ್‌ ಶುಕ್ರವಾರ ಆಯೋಜಿಸಿದ್ದ ‘ಮಿಷನ್‌ ಟು ದಿ ಮೂನ್‌’ ಕಾರ್ಯಕ್ರಮದಲ್ಲಿ ಟೀಮ್‌ ಇಂಡಸ್‌ ಸಂಸ್ಥೆಯ ಸಂಸ್ಥಾಪಕ, ದೆಹಲಿ ಐಐಟಿಯ ಹಿರಿಯ ವಿದ್ಯಾರ್ಥಿ ರಾಹುಲ್‌ ನಾರಾಯಣ್‌ ಯೋಜನೆ ಕುರಿತು ಪ್ರಸ್ತುತ ಪಡಿಸಿರುವುದಾಗಿ ಟೈಮ್ಸ್‌ ಆಫ್‌ ಇಂಡಿಯಾ ವರದಿ ಮಾಡಿದೆ.

ಯಾವುದೇ ಸ್ವರೂಪದಲ್ಲಿ ಸರ್ಕಾರದ ನೆರವು ಪಡೆಯದ ಸಂಪೂರ್ಣ ಖಾಸಗಿ ಪ್ರಯತ್ನ ಆಗಿರುವುದು ಈ ಯೋಜನೆಯ ವಿಶೇಷತೆಯಾಗಿದೆ.

ಸಿದ್ಧಗೊಂಡಿರುವ ಮಾದರಿಯು ಇಸ್ರೊ ಪರೀಕ್ಷೆಯಲ್ಲಿ ಅರ್ಹಗೊಂಡ ನಂತರ ಚಂದ್ರನಲ್ಲಿಗೆ ಸಾಗುವ ಬಾಹ್ಯಾಕಾಶ ನೌಕೆಯ ಅಂತಿಮ ತಯಾರಿ ನಡೆಯಲಿದೆ ಎಂದು ಟೀಮ್‌ ಇಂಡಸ್‌ನ ಸಹ ಸ್ಥಾಪಕದಲ್ಲಿ ಒಬ್ಬರಾಗಿರುವ  ಶೀಲಿಕಾ ರವಿಶಂಕರ್‌ ತಿಳಿಸಿಳಿದ್ದಾರೆ.

ಗೂಗಲ್‌ ಲೂನಾರ್‌ ಎಕ್ಸ್‌ ಸ್ಪರ್ಧೆಯಲ್ಲಿ ಅಂತಿಮಗೊಂಡ ಐದು ತಂಡಗಳಲ್ಲಿ ಟೀಮ್‌ ಇಂಡಸ್‌ ಕೂಡ ಒಂದು. ಉಳಿದಂತೆ ಅಮೆರಿಕದ ಎರಡು, ಇಸ್ರೇಲ್‌ ಹಾಗೂ ಜಪಾನ್‌ನ ಒಂದೊಂದು ತಂಡಗಳು ಟಾಪ್‌ ಐದರಲ್ಲಿವೆ.

ಒಂದು ಸಣ್ಣ ಆಸೆ!
ಇಸ್ರೊದ ಹನ್ನೆರಡು ಮಂದಿ ಮಾಜಿ ವಿಜ್ಞಾನಿಗಳೂ ಸೇರಿದಂತೆ 100ಕ್ಕೂ ಹೆಚ್ಚು ಜನರನ್ನು ಒಳಗೊಂಡ ತಂಡ 600 ಕೆ.ಜಿ. ತೂಕದ ಬಾಹ್ಯಾಕಾಶ ನೌಕೆ ಹಾಗೂ 6 ಕೆ.ಜಿ. ತೂಕದ ರೋವರ್‌ ವಿನ್ಯಾಸ ಮತ್ತು ಅಭಿವೃದ್ಧಿ ಮಾಡಿದೆ.

ಒಂದು ಸಣ್ಣ ಆಸೆ ಎನ್ನುವ ಅರ್ಥ ನೀಡುವ ‘ಏಕ್‌ ಚೋಟಿ ಸಿ ಆಶಾ(ಇಸಿಎ)’ ರೋವರ್‌ನೊಂದಿದೆ ಜಪಾನ್‌ನ ತಂಡದ ರೂಪಿಸಿರುವ ರೋವರ್‌ ಹಾಗೂ ಫ್ರೆಂಚ್‌ ಬಾಹ್ಯಾಕಾಶ ಸಂಸ್ಥೆಯ ಕ್ಯಾಮೆರಾ ಅನ್ನು ಬಾಹ್ಯಾಕಾಶ ನೌಕೆ ಹೊತ್ತು ಸಾಗಲಿದೆ.

ಕಾರ್ಯಾಚರಣೆ:
ಚಂದ್ರನ ಕಕ್ಷೆಗೆ ಬಾಹ್ಯಾಕಾಶ ನೌಕೆ ಕಳಿಸಿ, ಅದರ ನೆಲದ ಮೇಲೆ ಇಳಿಯುವ ರೋವರ್‌  500 ಮೀಟರ್‌ವರೆಗೆ ಚಲಿಸಿ ಮಾಹಿತಿ ರವಾನಿಸಲಿದೆ. ಈ ವರೆಗೆ ಚಂದ್ರನಲ್ಲಿಗೆ ಅಮೆರಿಕ, ರಷ್ಯಾ ಮತ್ತು ಚೀನಾ ದೇಶಗಳು ಮಾತ್ರ ಬಾಹ್ಯಾಕಾಶ ನೌಕೆ ಕಳಿಸಿವೆ. ಈಗ ಖಾಸಗಿ ಸಂಸ್ಥೆ ಪ್ರಯತ್ನದೊಂದಿಗೆ ಚಂದ್ರನಲ್ಲಿ ನೌಕೆ ಇಳಿಸುವ ನಾಲ್ಕನೇ ದೇಶ ಭಾರತವಾಗಲಿದೆ.

ರೋವರ್‌ ಒಳಗೊಂಡ ಬಾಹ್ಯಾಕಾಶ ನೌಕೆಯನ್ನು ‘ಪಿಎಸ್‌ಎಲ್‌ವಿ’ಯ  ತುದಿಯಲ್ಲಿ ಜೋಡಿಸಲಾಗುತ್ತಿದೆ. ಉಡಾವಣೆಗೊಂಡು ಬಾಹ್ಯಾಕಾಶದತ್ತ 15 ನಿಮಿಷಗಳವರೆಗೆ ಸಾಗಿದ ನಂತರ ನೌಕೆಯು ಬೇರ್ಪಡಲಿದೆ. ಭೂಮಿಗೆ ಎರಡು ಸುತ್ತು ಹಾಕಿ ಚಂದ್ರನತ್ತ ಐದು ದಿನಗಳ ಪಯಣ ಬೆಳೆಸಲಿದೆ.

ಕೊನೆಯ ಹಂತ:
ಪ್ರತಿ ಸೆಕೆಂಡ್‌ಗೆ 1.3 ಕಿ. ಮೀಟರ್‌ ವೇಗದಲ್ಲಿ ಸಾಗುವ ನೌಕೆ ಶೂನ್ಯ ವೇಗಕ್ಕೆ ತಲುಪಿ ಚಂದ್ರನ ಮೇಲ್ಮೈ ಸ್ಪರ್ಶಿಸುವ  ಹಂತವೇ ಅತ್ಯಂತ ಸೂಕ್ಷ್ಮ ಹಂತವಾಗಿದೆ.

ಯೋಜನೆಯ ಒಟ್ಟು ವೆಚ್ಚ ₹485 ಕೋಟಿ. ಸ್ಪರ್ಧೆಯಲ್ಲಿ ಗಳಿಸಿರುವ ಹಣ ₹193 ಕೋಟಿ(30 ಮಿಲಿಯನ್‌ ಡಾಲರ್).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT