ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲ್ಪನಿಕ ಲೈಂಗಿಕ ಕ್ರಿಯೆಯೂ ಅಂತರ್ಜಾಲ ಪೀಡನೆಯೂ

Last Updated 22 ಜುಲೈ 2017, 19:30 IST
ಅಕ್ಷರ ಗಾತ್ರ

*ಹರೀಶ್ ಶೆಟ್ಟಿ ಬಂಡ್ಸಾಲೆ

ಮಾಂಡಟೋಡ್ ಎನ್ನುವ ಕೆನಡಿಯನ್‌ ಹುಡುಗಿ ತನ್ನ ಹದಿಮೂರನೇ ವಯಸ್ಸಿನಲ್ಲಿ ಅಂತರ್ಜಾಲದ ಮುಖಾಂತರ ಗುಂಪು ವಿಡಿಯೋ ಸಂವಾದ (ಚಾಟ್) ನಡೆಸಲು ಪ್ರಾರಂಭಿಸಿ ಅನೇಕರ ಸ್ನೇಹ ಹಾಗೂ ತನ್ನ ಅತೀವ ಸೌಂದರ್ಯಕ್ಕೆ ಶ್ಲಾಘನೆಯನ್ನು ಗಳಿಸುತ್ತಾಳೆ. ಈ ಮೂಲಕವೇ ದೊರೆತ ಒಬ್ಬ ಅನಾಮಿಕ ಗೆಳೆಯ ಬಹಳ ಆಪ್ತನಾಗುತ್ತಾನೆ. ಆತನ ಇಚ್ಛೆಯಂತೆ ಆಕೆ ವೆಬ್‌ಕ್ಯಾಮ್‌ನಲ್ಲಿ ತನ್ನ ನಗ್ನದೇಹವನ್ನು ತೋರಿಸುತ್ತಾಳೆ.

ಇದಾದ ಸುಮಾರು ಒಂದು ವರುಷದ ನಂತರ ಇನ್ನೊಬ್ಬ ಅನಾಮಿಕ ಆಕೆಯ ಇದೇ ನಗ್ನ ಚಿತ್ರವನ್ನು ಬಂಡವಾಳ ಮಾಡಿಕೊಂಡು ವೆಬ್‌ಕ್ಯಾಮ್‌ನ ಮೂಲಕ ಮತ್ತೆ ಅವಳ ದೇಹ ಪ್ರದರ್ಶನ ಮಾಡಬೇಕೆಂದು, ಇಲ್ಲವಾದಲ್ಲಿ ಆಕೆಯ ನಗ್ನ ಛಾಯಾಚಿತ್ರವನ್ನು ಎಲ್ಲ ಜಾಲ ತಾಣಗಳಲ್ಲಿ ಹರಿಯಬಿಡುವುದಾಗಿ ಬೆದರಿಸುತ್ತಾನೆ.

ಇದಾದ ಸ್ವಲ್ಪ ಸಮಯದಲ್ಲೇ ಇವೇ ಛಾಯಾಚಿತ್ರಗಳನ್ನು ಬಳಸಿಕೊಂಡು ಫೇಸ್‌ಬುಕ್‌ನಲ್ಲಿ ಇನ್ನೊಬ್ಬ ಅನಾಮಿಕ ನೀನು ನನಗೆ ನಿನ್ನ ದೇಹದ ಪ್ರದರ್ಶನ ನೀಡಬೇಕು ಎಂದು ಬೆದರಿಸುತ್ತಾನೆ ಹಾಗೂ ಮುಂದೆ ಒಂದು ಫೇಸ್‌ಬುಕ್‌ ಖಾತೆ ತೆರೆದು ಅದಕ್ಕೆ ಇವಳ ಎದೆ ಎತ್ತಿ ತೋರಿಸುವ ನಗ್ನಚಿತ್ರವನ್ನು ಪ್ರೊಫೈಲ್‌ ಚಿತ್ರವನ್ನಾಗಿಸಿ ಆಕೆಯ ಎಲ್ಲಾ ಸಂಬಂಧಿಕರಿಗೆ, ಸ್ನೇಹಿತರಿಗೆ ತಿಳಿಯುವಂತೆ ಮಾಡುತ್ತಾನೆ.

ಆತನಲ್ಲಿ ಈಕೆಯ ಎಲ್ಲಾ ವಿವರಗಳು ಇದ್ದವು. ಹೊಸ ಶಾಲೆಗಳಿಗೆ ಹೋದಾಗ್ಯೂ ಈ ಬಾಧೆ ತಪ್ಪುವುದಿಲ್ಲ. ಹೀಗೆ ಈ ಅನಾಮಿಕರಿಗೆ ತನ್ನ ಛಾಯಾಚಿತ್ರ, ಶಾಲೆ, ಮನೆ, ಸ್ನೇಹಿತರ ವಿವರ, ವಿಳಾಸ ಎಲ್ಲಾ ಹೇಗೆ ದೊರಕುತ್ತಿದೆ ಎಂದು ತಿಳಿಯದೆ ದಂಗಾದಳು. ಅದರ ಜೊತೆಗೆ ಹೋದ ಕಡೆಯೆಲ್ಲಾ ಅವಮಾನ, ನಿಂದನೆ, ಮಾನಸಿಕ ಹಿಂಸೆ ಸಹಿಸಲಾರದೆ ಅಮಾಂಡ ಆತಂಕ ಹಾಗೂ ಖಿನ್ನತೆಗೆ ಒಳಗಾಗಿ ಮಾದಕ ದ್ರವ್ಯಗಳ ವ್ಯಸನಕ್ಕೂ ಇಳಿಯುತ್ತಾಳೆ.

ಇದೇ ತರಹದ ಬೆದರಿಕೆ, ಕಿರುಕುಳ ಮುಂದುವರೆದು, ತನ್ನ ಹದಿನೈದನೆಯ ವಯಸ್ಸಿನಲ್ಲಿ ಅಮಾಂಡ ಯೂಟ್ಯೂಬ್‌ನಲ್ಲಿ ತನ್ನ ಕಥೆಯನ್ನು ಫ್ಮ್ಯಾಶ್‌ಕಾರ್ಡ್ (ಮಿಂಚು ಪಟ್ಟಿ) ಮುಖಾಂತರ ಹೇಳಿ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. (ಯೂಟ್ಯೂಬ್‌ನಲ್ಲಿ ‘ಅಮಾಂಡಾಸ್‌ ಸುಸೈಡ್‌ ನೋಟ್’ ಎಂದು ಟೈಪ್‌ ಮಾಡಿದರೆ ಆಕೆಯ ಈ ವಿಡಿಯೋ ಲಭ್ಯವಾಗುತ್ತದೆ).

ಇದು ಕೆನಡಾದ ಘಟನೆ ನಮ್ಮಲ್ಲಿ ಹೀಗೆ ನಡೆಯುತ್ತದೆಯೇ? ಎಂಬ ಪ್ರಶ್ನೆ ಹುಟ್ಟಬಹುದು. ಕೇರಳದಲ್ಲಿ ಕಳೆದ ತಿಂಗಳು ತನ್ನ ಹಾಗೂ ಪ್ರೇಯಸಿಯ ಖಾಸಗಿ ಕ್ಷಣಗಳನ್ನು ಚಿತ್ರಿಸಿಕೊಂಡು ಮುಂದೆ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ ಯುವಕನಿಂದಾಗಿ ಮನನೊಂದು ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಒಂದು ವರ್ಷದ ಹಿಂದೆ ಮುಂಬೈಯಲ್ಲಿ ಹುಡುಗನೊಬ್ಬ ಸಹಪಾಠಿ ಯುವತಿಯೊಬ್ಬಳು ತನ್ನ ಬೇಡಿಕೆಗಳಿಗೆ ಸ್ಪಂದಿಸಲಿಲ್ಲ ಎಂಬ ಕಾರಣಕ್ಕೆ ಅವಳ ಹೆಸರಿನಲ್ಲೂ ಖಾತೆ ತೆರೆದು ಅನಾಚಾರ ಮಾಡಿದ್ದರಿಂದ ಆಕೆಯು ಆತ್ಮಹತ್ಯೆ ಮಾಡಿಕೊಂಡಿದ್ದಳು. ಇದೇ ಮುಂಬೈಯಲ್ಲಿ ಇನ್ನೊಬ್ಬ ಯುವಕ ತನ್ನ ಪ್ರೇಯಸಿಯ ನಗ್ನಚಿತ್ರಗಳನ್ನು ಫೇಸ್‌ಬುಕ್‌ನಲ್ಲಿ ಹಾಕುವುದಾಗಿ ಬೆದರಿಸಿ ಫಿನಾಯಿಲ್‌ ಕುಡಿದು ಆತ್ಮಹತ್ಯೆಗೆ ಯತ್ನಿಸುವಂತೆ ಮಾಡಿದ್ದ. ಹೀಗೆ ಅನೇಕ ಘಟನೆಗಳನ್ನು ಉದಾಹರಿಸಬಹುದು.

ಈ ಎಲ್ಲಾ ಘಟನೆಗಳ ಭವಿಷ್ಯದ ಆವೃತ್ತಿಯಾದ ವ್ಯವಸ್ಥಿತ ಜಾಲವೇ ಈ ಲೇಖನದಲ್ಲಿ ಚರ್ಚಿಸಲಿರುವ ವಿಷಯ. ಅದಕ್ಕೊಂದು ಹೆಸರಿದೆ, ತಂಡವಿದೆ. ಭವಿಷ್ಯದ ಆವೃತ್ತಿ ಅಂದಾಕ್ಷಣ ಹಾಗೆಂದು ಇದು ಈಗ ನಡೆಯುತ್ತಿಲ್ಲ ಎಂದೇನೂ ಇಲ್ಲ. ‘ಮರ್ಯಾದೆ ಪ್ರಶ್ನೆ’ ಎಂಬ ಕಾರಣದಿಂದಾಗಿ ಪ್ರಕರಣಗಳು ಬೆಳಕಿಗೆ ಬರುತ್ತಿಲ್ಲ ಅಷ್ಟೇ. ಇಂಟೆಲ್ಸೆಕ್ಯೂರಿಟಿಯ ಅಧ್ಯಯನ ವರದಿಯ ಪ್ರಕಾರ ಭಾರತದಲ್ಲಿನ ಎಂಟರಿಂದ ಹದಿನಾರು ವಯಸ್ಸಿನವರಲ್ಲಿ ಶೇಕಡ 81ರಷ್ಟು ಯುವಕ, ಯುವತಿಯರು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿದ್ದು, ಅವರಲ್ಲಿ ಶೇಕಡ 22ರಷ್ಟು ಅಂತರ್ಜಾಲದ ಪೀಡನೆಗೆ (cyberbullying) ಬಲಿಯಾಗಿದ್ದಾರೆ. ಭಾರತದ ಯುವಜನತೆ ಎಷ್ಟು ಪ್ರಮಾಣದಲ್ಲಿ ವಿಡಿಯೋ ಚಾಟ್‌ಗಳಲ್ಲಿ ತೊಡಗಿಕೊಂಡಿದ್ದಾರೆ ಎಂಬ ಕುರಿತಾದ ನಿಖರ ಮಾಹಿತಿ ಒದಗಿಸುವ ಯಾವುದೇ ಅಧ್ಯಯನಗಳು ಈವರೆಗೆ ನಡೆದಿಲ್ಲ.

ಆದರೆ, ನಿತ್ಯ ಬೇರೆ ಬೇರೆ ವೇದಿಕೆಗಳಲ್ಲಿ ನಾನು ಹದಿಹರೆಯದವರ ಜೊತೆಗೆ ಸಂವಹನ ನಡೆಸುತ್ತೇನೆ. ಆವಾಗ ತಿಳಿದುಬರುವುದೇನಂದರೆ, ನಗರ ಪ್ರದೇಶದ ಹೆಚ್ಚಿನ ವಿದ್ಯಾರ್ಥಿಗಳು ಗುಂಪು ವಿಡಿಯೋ ಚಾಟ್‌ಗಳಲ್ಲಿಯೂ, ಗ್ರಾಮೀಣ ಭಾಗದ ಹೆಚ್ಚಿನ ಹಾಗೂ ನಗರ ಭಾಗದ ಬಹುತೇಕ ಎಲ್ಲಾ ವಿದ್ಯಾರ್ಥಿಗಳು ಫೇಸ್‌ಬುಕ್‌ನಲ್ಲೂ ಹಾಗೂ ವಾಟ್ಸಾಪ್‌ ಮೂಲಕ ಖಾಸಗಿ ವಿಡಿಯೋ ಚಾಟ್‌ನಲ್ಲಿ ತೊಡಗುತ್ತಾರೆ. ಹಾಗಾಗಿ, ನಾವೇನು ಇಂತಹುದಕ್ಕೆ ಬಲಿಯಾಗುವ ಅವಕಾಶಗಳಿಂದ ದೂರವಿಲ್ಲ.

ಒಂಟಿತನ ಅಥವಾ ಬೇಸರ ಕಳೆಯಲು ತೊಡಗಿಕೊಳ್ಳುವ ಈ ಚಾಟ್‌್ಗಳು ತೀರ ವೈಯಕ್ತಿಕವಾಗಿಯೂ ಆಪ್ತವಾಗಿಯೂ ಮುಂದುವರಿದಂತೆಲ್ಲಾ ವಯಸ್ಸಿನ ಸಾಮಾನ್ಯ ಆಕರ್ಷಣೆಯಿಂದಾಗಿ ‘ಟೆಕ್ಸ್ಟಿಂಗ್’ನಿಂದ ‘ಸೆಕ್ಸ್ಟಿಂಗ್’ ಆಗಿ ರೂಪಾಂತರ ಹೊಂದುತ್ತದೆ. ಸೆಕ್ಸ್ಟಿಂಗ್ ಎಂದರೆ ಲೈಂಗಿಕ ಸನ್ನಿವೇಶಗಳ ಕಲ್ಪನೆಯಲ್ಲಿ ತಮ್ಮನ್ನು ತಾವು ಊಹಿಸಿಕೊಂಡು ಆ ಕುರಿತಾಗಿ ಸಂದೇಶ ವಿನಿಮಯ ಮಾಡಿಕೊಳ್ಳುವುದು. ಇದು ಒಂದು ತರಹಕ್ಕೆ ವರ್ಚುವಲ್ ಲೈಂಗಿಕ ಕ್ರಿಯೆ ನಡೆಸಿದಂತೆ. ಹೀಗೆ ಮುಂದುವರೆದು ತಮ್ಮ ಅರೆನಗ್ನ ನಗ್ನ ಛಾಯಾಚಿತ್ರ ಮತ್ತು ವಿಡಿಯೋ ಸಂದೇಶಗಳ ವಿನಿಮಯದಲ್ಲೂ ತೊಡಗುತ್ತಾರೆ. ಇದು ವಾಟ್ಸಾಪ್ ಮತ್ತು ಮೆಸೆಂಜರ್‌ಗಳ ಮೂಲಕ ಖಾಸಗಿಯಾಗಿಯೂ ನಡೆಯಬಹುದು ಅಥವಾ ಕೆಲವು ಲೈವ್ ಸ್ಟ್ರೀಮ್ ಅಪ್ಲಿಕೇಷನ್‌ಗಳ ಮೂಲಕ ಗುಂಪಾಗಿಯೂ ನಡೆಯಬಹುದು.

ಇದು ಖಾಸಗಿಯಾಗಿಯೂ, ಇಬ್ಬರ ಅಥವಾ ಗುಂಪಿನ ಪರಸ್ಪರ ಒಪ್ಪಂದದಿಂದಲೂ ನಡೆಯುವುದರಿಂದ ಇದರಿಂದ ಏನು ಸಮಸ್ಯೆ ಆಗುತ್ತದೆ? ಎಂದು ಕೇಳಬಹುದು. ಆದರೆ, ಸಮಸ್ಯೆ ಇರುವುದೇ ಇಲ್ಲಿ. ಅಂತರ್ಜಾಲದಲ್ಲಿ ಖಾಸಗಿ ಎನ್ನುವುದು ಒಂದು ಭ್ರಮೆ. ಗೊತ್ತೋ ಗೊತ್ತಿಲ್ಲದೆಯೋ ಅಂತರ್ಜಾಲಕ್ಕೆ ಹರಿಯಬಿಟ್ಟ ಪ್ರತಿಯೊಂದೂ ನಮ್ಮ ಕೈತಪ್ಪಿದಂತೆ. ಅದನ್ನು ನಾವು ಹಿಂಬಾಲಿಸಲು, ಹಿಡಿಯಲೂ ಆಗದ ಮಾತು, ಒಂದು ಕಡೆ ಅಳಿಸಿದರೆ ಇನ್ನೊಂದು ಕಡೆ ಇನ್ಯಾರೋ ಅಪ್ಲೋಡ್ ಮಾಡುತ್ತಾರೆ. ಆದರೂ, ಇಲ್ಲಿ ಖಾಸಗಿಯಾಗಿರಬೇಕಾದ್ದು ಕೈತಪ್ಪುವುದು ಹೇಗೆ? ಈ ಸಮಸ್ಯೆ ಇನ್ನೂ ಜಟಿಲವಾಗಿದೆ. ಇದು ಅನೇಕ ಮಾರ್ಗಗಳಲ್ಲಿ ನಡೆಯಬಹುದು.

ಹಿಂಸೆಗೆ ದಾರಿ

ಗುಂಪು ಚಾಟ್‌ಗಳಲ್ಲಿ ರಹಸ್ಯವಾಗಿದ್ದುಕೊಂಡು ಸೂಕ್ತ ಸಂದರ್ಭಕ್ಕಾಗಿ ಕಾಯುವ ಇವರು ಯಾರಾದರೂ ಹುಡುಗಿಯರು ತಮ್ಮ ದೇಹ ಪ್ರದರ್ಶನದಲ್ಲಿ ತೊಡಗಿಕೊಂಡರೆ ಸ್ಕ್ರೀನ್ ಶಾಟ್ ಮೂಲಕ ಸೆರೆ ಹಿಡಿಯುತ್ತಾರೆ. ಆವರಿಗೆ ‘ಕ್ಯಾಪರ್ಸ್’ ಗಳೆಂದು ಕರೆಯುತ್ತಾರೆ. ಅವರು ಮುಂದೆ ಈ ಚಿತ್ರಗಳನ್ನು ಬಳಸಿಕೊಂಡು ಮತ್ತೆ ವೆಬ್‌ಕ್ಯಾಮ್‌ಗಳಲ್ಲಿ ನಗ್ನ ವಿಡಿಯೋ ಪ್ರದರ್ಶನ ನೀಡಬೇಕು ಎಂದು ಬೆದರಿಸುತ್ತಾರೆ. ಇವರ ಭಾಷೆಯಲ್ಲಿ ಈ ಪ್ರದರ್ಶನಗಳಿಗೆ ‘ಷೋ’ ಎಂದೂ, ಈ ರೀತಿ ಷೋ ಪಡೆಯುವಲ್ಲಿ ಯಶಸ್ಸು ಸಾಧಿಸುವುದನ್ನು ‘ವಿನ್’ ಎಂದೂ ಕರೆಯುತ್ತಾರೆ.

ವಿಪರ್ಯಾಸ ಎಂದರೆ ಇಲ್ಲಿಯವರೆಗೆ ಸೆರೆಸಿಕ್ಕ ಎಲ್ಲಾ ಕ್ಯಾಪರ್‌ಗಳು ಹದಿಹರೆಯದ ವಯಸ್ಸಿನವರೇ ಆಗಿದ್ದಾರೆ. ಇದು ಗುಂಪು ವಿಡಿಯೋ ಚಾಟ್‌ಗಳಲ್ಲಾದರೆ ಇನ್ನು ಖಾಸಗಿ ಚಾಟ್‌ಗಳಲ್ಲಿ ಪೀಡಿತರ ಖಾತೆಗಳನ್ನು ಹ್ಯಾಕ್ ಮಾಡಿ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆಗಳ ಮುಖಾಂತರ ಹುಡುಗಿಯರ ಸ್ನೇಹ ಸಂಪಾದಿಸಿ, ಪ್ರಚೋದಿಸಿ ಅವರ ನಗ್ನ ವಿಡಿಯೋ ಅಥವಾ ಛಾಯಾಚಿತ್ರಗಳನ್ನು ಪಡೆದು ಈ ಕೃತ್ಯವನ್ನು ಎಸಗುತ್ತಾರೆ.

ಒಟ್ಟಾರೆ ಈ ಅಂತರ್ಜಾಲ ಯುಗವನ್ನು ಕಾಡುತ್ತಿರುವ ಈ ಸಮಸ್ಯೆಯನ್ನು ಸೆಕ್ಸ್ಟಾರ್ಶನ್ (Sextortion) ಎಂದು ಗುರುತಿಸಿದ್ದಾರೆ. ಸೆಕ್ಸ್ಟಾರ್ಶನ್ ಎಂದರೆ ತಮ್ಮ ಲೈಂಗಿಕ ಬಯಕೆಗಳನ್ನು ಪೂರೈಸಿಕೊಳ್ಳಲು ಯಾವುದೇ ದೈಹಿಕ ಹಿಂಸೆ ನೀಡದೆ ಅವರ ದೌರ್ಬಲ್ಯಗಳನ್ನೇ ಬಳಸಿಕೊಂಡು ಬೆದರಿಸಿ ಲೈಂಗಿಕ ಹಾಗೂ ಮಾನಸಿಕ ಹಿಂಸೆ ನೀಡುವುದು.

ಇದಕ್ಕೆಲ್ಲಾ ಕಾರಣ ಮತ್ತು ಪರಿಹಾರೋಪಾಯಗಳನ್ನು ಅನೇಕ ಮಜಲುಗಳಲ್ಲಿ ಕಂಡುಕೊಳ್ಳಬೇಕಾಗುತ್ತದೆ. ಈ ಕೃತ್ಯವೆಸಗುವವರು ಹೆಚ್ಚಾಗಿ ಹಣದಾಸೆಗಿಂತ ತಮ್ಮ ಲೈಂಗಿಕ ತೃಷೆಗಾಗಿ ಮತ್ತು ಲೈಂಗಿಕ ಹಾಗೂ ಮಾನಸಿಕ ಕಿರುಕುಳದಿಂದ ಪಡೆವ ವಿಕೃತ ಆನಂದಕ್ಕಾಗಿ ಮಾಡುವುದೇ ಹೆಚ್ಚು. ಇಂತಹವರನ್ನು ಹಿಡಿಯಲು, ನಕಲಿ ಖಾತೆಗಳನ್ನು ಪತ್ತೆ ಹಚ್ಚಲು ಮತ್ತು ದಿನಕ್ಕೊಂದರಂತೆ ಬರುವ ಹೊಸ ಹೊಸ ತಂತ್ರಜ್ಞಾನವನ್ನು ಭೇದಿಸಿ ಈ ಜಾಲವನ್ನು ಪತ್ತೆಹಚ್ಚುವ ವ್ಯವಸ್ಥೆ ಇಲ್ಲದಿರುವುದು ಇವರಿಗೆ ಇನ್ನಷ್ಟು ಪುಷ್ಟಿಕೊಟ್ಟಿದೆ.

ಕೆನಡಾದಂತಹ ಮುಂದುವರಿದ ರಾಷ್ಟ್ರದಲ್ಲಿ ಅಮಾಂಡಾಳ ಪ್ರಕರಣದ ಕಾರಣಿಕರ್ತನನ್ನು ಪತ್ತೆಹಚ್ಚಲು ಎರಡು ವರ್ಷ ಹಿಡಿದಿತ್ತು. ಈ ಕುರಿತು ನಮ್ಮ ಕಾನೂನು ಹಾಗೂ ಆರಕ್ಷಕ ವ್ಯವಸ್ಥೆ ಕಾರ್ಯಪ್ರವೃತ್ತರಾಗಬೇಕಾಗಿದೆ. ತಮ್ಮ ತಂತ್ರಜ್ಞಾನ ನವೀಕರಣ ಮಾತ್ರವಲ್ಲದೆ ಸಂತ್ರಸ್ತರು ಮುಕ್ತವಾಗಿ ಮತ್ತು ಧೈರ್ಯವಾಗಿ ಆರಕ್ಷಕರನ್ನು ಸಂಪರ್ಕಿಸುವ ಮತ್ತು ಸೂಕ್ತ ಸ್ಪಂದನೆ ಸಿಗುವಂತೆ ಜನಸ್ನೇಹಿ ಮಾಡಬೇಕಾಗುತ್ತದೆ.

ಈ ಜಾಲಕ್ಕೆ ಬಲಿ ಆಗುವವರಿಗೆ ಸರಿಯಾದ ಅರಿವು ಮತ್ತು ಮಾರ್ಗದರ್ಶನ ಇಲ್ಲದಿರುವುದೇ ಮುಖ್ಯವಾದ ಕಾರಣ. ಹದಿಹರೆಯದಲ್ಲಿ ವೈಯಕ್ತಿಕ ಗಮನ ಒಂದು ಸಾಮಾನ್ಯ ಬಯಕೆ. ತನ್ನ ಮನೆ ಹಾಗೂ ಶಾಲೆಯಲ್ಲಿ ಈ ಗಮನ ಸಿಗದೇ ಇದ್ದಾಗ ಸುಲಭವಾಗಿ ಮತ್ತು ಆಕರ್ಷಕವಾಗಿ ಕೈಗೆಟುಕುವುದು ಈ ಜಾಲತಾಣಗಳು. ಹೆಸರಿನಂತೆ ಇದೊಂದು ಜಾಲವೇ ಸರಿ. ಒಳನುಗ್ಗಿದರೆ ತಪ್ಪಿಸಿಕೊಂಡು ಹೊರಬರುವುದು ಬಲು ಕಷ್ಟ.

ಅಲ್ಲಿ ಹಠಾತ್ತನೆ ಸಿಗುವ ಮನ್ನಣೆ, ಲೈಕು, ಹೊಸ ಹೊಸ ಮುಖಗಳು, ಸ್ವಲ್ಪ ರೂಪವಿದ್ದರಂತೂ ಸಿಗುವ ಶ್ಲಾಘನೆ, ಇವೆಲ್ಲವೂ ಅಂತರ್ಜಾಲವನ್ನೇ ವ್ಯಸನವನ್ನಾಗಿಸಿ ಜಾಲತಾಣಗಳಲ್ಲೇ ಬಂದಿ ಆಗುವಂತೆ ಮಾಡುತ್ತವೆ. ಹಿಂದೆ ತಿಳಿಸಿದ ಅಮಾಂಡಳ ಘಟನೆಯಲ್ಲೂ ಪದೇ ಪದೇ ಇದರಿಂದ ತೊಂದರೆ ಆಗುತ್ತಿದ್ದರೂ ಆಕೆ ತನ್ನ ದುಃಖವನ್ನು ಹಂಚಿಕೊಳ್ಳಲು ಮತ್ತೆ ಮೊರೆಹೋಗಿದ್ದು ವಿಡಿಯೋ ಚಾಟನ್ನೇ. ಇದೆಲ್ಲದರಿಂದ ಮಕ್ಕಳನ್ನು ರಕ್ಷಿಸುವಲ್ಲಿ ಹೆತ್ತವರ ಪಾತ್ರ ಮುಖ್ಯವಾಗುತ್ತದೆ. ಎಲ್ಲಾ ಸೌಕರ್ಯ, ಸೌಲಭ್ಯಗಳನ್ನು ಒದಗಿಸುವುದಷ್ಟೇ ಪೋಷಕರ ಕರ್ತವ್ಯವಲ್ಲ. ತಮ್ಮ ಹದಿಹರೆಯದ ಮಕ್ಕಳೊಂದಿಗೆ ಸಮಯ ಕಳೆಯಬೇಕು.

ಮಕ್ಕಳು ಪ್ರಾಪ್ತ ವಯಸ್ಸಿಗೆ ಬರುವ ತನಕ ಅಂತರ್ಜಾಲದಲ್ಲಿ ಕಳೆಯುವ ಕ್ಷಣಗಳ ಕುರಿತು ನಿಗಾವಹಿಸಬೇಕಾಗುತ್ತದೆ. ಇದರರ್ಥ ಗೂಢಚಾರವೆಂದಲ್ಲ. ಅವರ ಕೆಲಸಗಳು ಅವರಿಗೆ ಮುಳುವಾಗದಂತೆ ಎಚ್ಚರವಹಿಸಿ ಮಾರ್ಗದರ್ಶನ ನೀಡುವುದು ಮುಖ್ಯ. ಅಂತರ್ಜಾಲ ಸೇವೆ ಒದಗಿಸುವಾಗ ಮಕ್ಕಳಿಗೆ ಅಂತರ್ಜಾಲ ಸುರಕ್ಷತೆಯ ಕುರಿತು ಹೇಳಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಅವರಿಗೆ ನಾವು ಕಿವಿಯಾಗಬೇಕಾಗುತ್ತದೆ. ಗಂಡು ಹೆಣ್ಣೆನ್ನದೆ ಎಲ್ಲವನ್ನೂ ಮುಕ್ತವಾಗಿ ಹಂಚಿಕೊಳ್ಳಲು, ಲೈಂಗಿಕತೆಯ ಕುರಿತು ಚರ್ಚಿಸಲು ಅವಕಾಶ ಮಾಡಿಕೊಡಬೇಕು. ಅವರನ್ನು ಬಂಧನದಿಂದ, ಶಿಸ್ತಿನ ಹೇರಿಕೆಯಿಂದ ಸರಿದಾರಿಗೆ ತರಲು ಅಸಾಧ್ಯ. ಅದು ಶೋಭೆಯೂ ಅಲ್ಲ. ಬದಲಾಗಿ ಅವರನ್ನು ಒಳಿತು ಕೆಡುಕುಗಳನ್ನು ವಿಚಾರ ಮಾಡುವ ಪ್ರಜ್ಞಾವಂತರನ್ನಾಗಿ ಮಾಡಬೇಕಾಗಿದೆ. ಅಗತ್ಯವಿದ್ದಲ್ಲಿ ಯಾವುದೇ ಮಡಿವಂತಿಕೆಗೆ ಒಳಗಾಗದೆ ಆಪ್ತ ಸಮಾಲೋಚಕರ, ಮಾನಸಿಕ ತಜ್ಞರ ಹಾಗೂ ಆರಕ್ಷಕರ ಸಹಾಯ ಪಡೆಯಬೇಕು.

ಸಾಮಾಜಿಕ ನೆಲೆಯಲ್ಲಿ ಸಮುದಾಯವಾಗಿ ಇಂತಹ ಗಂಭೀರವಾದ ಸಮಸ್ಯೆಗಳಿಗೆ ಹೇಗೆ ಪ್ರತಿಕ್ರಿಯಿಸುತ್ತೇವೆ ಎನ್ನುವುದು ಮುಖ್ಯವಾಗುತ್ತದೆ. ನಮ್ಮ ನೈತಿಕ ಹಾಗೂ ಸಾಮಾಜಿಕ ಬದ್ಧತೆಯ ಪರಿಧಿಯನ್ನು ಅಂತರ್ಜಾಲದ ವ್ಯಾಪ್ತಿಗೂ ತರಬೇಕಾಗುತ್ತದೆ. ಬರೇ ಅಂಕ ಹಾಗೂ ಸ್ಪರ್ಧಾತ್ಮಕ ನೆಲೆಗಟ್ಟಿನಲ್ಲಿ ರೂಪಿತವಾಗಿರುವ ನಮ್ಮ ಶಿಕ್ಷಣ ವ್ಯವಸ್ಥೆಗಿಂತ ಅಂತರ್ಜಾಲ ಹಾಗೂ ಮಾಧ್ಯಮಗಳು ಮಕ್ಕಳಿಗೆ ಹೆಚ್ಚು ರಂಜಕವಾಗಿರುವುದು ಈ ಕಾಲದ ದುರಾದೃಷ್ಟ.

ಕಲೆ, ನಾಟಕ, ಸಾಹಿತ್ಯದಂತಹ ರಂಗದಲ್ಲಿ ಹದಿಹರೆಯದವರು ಹೆಚ್ಚು ಸಮಯ ಕಳೆಯುವಂತೆ ಅವಕಾಶ ಕಲ್ಪಿಸಬೇಕು. ಕಲೆಯು ಸೃಜನಶೀಲತೆಯನ್ನು ಬೆಳೆಸುವುದು ಮಾತ್ರವಲ್ಲದೆ, ಅನೇಕ ಜೀವನ ಸೂಕ್ಷ್ಮಗಳನ್ನು ಕೊಡಮಾಡಿ ಮಕ್ಕಳ ಬದುಕನ್ನು ಅರಳಿಸುತ್ತದೆ. ನಮಗೆ ನಮ್ಮ ಸುತ್ತಲಿನ ಪ್ರಪಂಚ, ಪರಿಸರ ಹೆಚ್ಚು ಆಪ್ತವಾಗಬೇಕೆ ವಿನಾ ಸದಾ ನಿಗೂಢವಾಗಿರುವ, ಅಸುರಕ್ಷತೆ ಹಾಗೂ ಅಭದ್ರತೆಯ ಶಂಕೆಯಲ್ಲೇ ಜೀವಿಸಬೇಕಾಗುವ ಈ ಭ್ರಮಾ (ವರ್ಚುವಲ್) ಅಂತರ್ಜಾಲ ಪ್ರಪಂಚವಲ್ಲ.

***

‘ಸಾಮಾಜಿಕ ಜಾಲತಾಣಗಳ ದಾಸರಾಗಿ ವಂಚನೆಗೆ ಒಳಗಾಗುತ್ತಿರುವ ಯುವತಿಯರ ಸಂಖ್ಯೆ ಹೆಚ್ಚಾಗುತ್ತಿದೆ. ಪ್ರತಿ ತಿಂಗಳು ಇಂಥ ಹತ್ತಕ್ಕೂ ಹೆಚ್ಚು ಪ್ರಕರಣಗಳು ಸೈಬರ್ ವಿಭಾಗಕ್ಕೆ ಬರುತ್ತವೆ. ಅಪರಿಚಿತನ ಪರಿಚಯವಾಗಿ ಕೆಲವರು ನಗ–ನಾಣ್ಯವನ್ನು ಮಾತ್ರ ಕಳೆದುಕೊಂಡರೆ, ಮತ್ತೆ ಕೆಲವರು ಆತನಿಗಾಗಿ ಎಲ್ಲ ರೀತಿಯ ‘ತ್ಯಾಗ’ಗಳನ್ನೂ ಮಾಡಿರುತ್ತಾರೆ’ ಎನ್ನುತ್ತಾರೆ ಸೈಬರ್ ಅಧಿಕಾರಿಗಳು.

‘ಇಂಥ ಪ್ರಕರಣಗಳ ತನಿಖಾ ಕಾಲದಲ್ಲಿ ಸಂತ್ರಸ್ತೆಯ ಮನಸ್ಥಿತಿ ಒಂದೇ ರೀತಿ ಇರುವುದಿಲ್ಲ. ‘ಅಷ್ಟೊಂದು ನಂಬಿಕೆ ಇಟ್ಟವಳಿಗೆ ವಂಚಿಸಿಬಿಟ್ಟನಲ್ಲ’ ಎಂಬ ಸಿಟ್ಟಿನಲ್ಲಿ ಆಕೆ ಆರಂಭದಲ್ಲಿ ದೂರು ಕೊಟ್ಟಿರುತ್ತಾಳೆ. ಆದರೆ, ಆರೋಪಿ ಬಂಧನವಾದ ಬಳಿಕ ಆಕೆಯ ಸಿಟ್ಟು ಸಂಪೂರ್ಣ ಇಳಿದು ಹೋಗಿರುತ್ತದೆ. ನ್ಯಾಯಾಲಯದ ವಿಚಾರಣಾ ಕಾಲದಲ್ಲಿ ಸಂತಸ್ತೆಯನ್ನು ಹುಡುಕಿಕೊಂಡು ನಾವೇ ತಿರುಗಾಡಬೇಕಾದ ಪರಿಸ್ಥಿತಿ ಬಂದುಬಿಡುತ್ತದೆ’ ಎನ್ನುತ್ತಾರೆ ಅವರು.

‘ಇನ್ನು ಕೆಲವರು ಮರ್ಯಾದೆಗೆ ಅಂಜಿ ಪೊಲೀಸರನ್ನು ಸಂಪರ್ಕಿಸುವುದೇ ಇಲ್ಲ. ಪೊಲೀಸರು ತಮ್ಮ ಹೆಸರನ್ನು ಗೋಪ್ಯವಾಗಿಟ್ಟು ತನಿಖೆ ನಡೆಸುತ್ತಾರೆಂಬ ನಂಬಿಕೆಯನ್ನೂ ಈಗ ಅವರು ಕಳೆದುಕೊಂಡಿದ್ದಾರೆ’ ಎಂದು ಸೈಬರ್ ಪೊಲೀಸರು ಹೇಳುತ್ತಾರೆ.

ಬಂಧನವೂ ಕಷ್ಟ

‘ಎಲ್ಲೋ ಕುಳಿತು ಫೇಸ್‌ಬುಕ್‌ ಗೆಳತಿಯರಿಗೆ ವಂಚಿಸುವವರನ್ನು ಪತ್ತೆ ಮಾಡುವುದೂ ಸುಲಭದ ಕೆಲಸವಲ್ಲ. ಆತ ಸಂತ್ರಸ್ತೆಯನ್ನು ಮೊಬೈಲ್ ಮೂಲಕ ಒಮ್ಮೆ ಸಂಪರ್ಕಿಸಿದ್ದರೂ, ಕರೆ ವಿವರ (ಸಿಡಿಆರ್) ಆಧರಿಸಿ ಆತನನ್ನು ಪತ್ತೆ ಮಾಡಿಬಿಡಬಹುದು. ಆದರೆ, ಈಗ ವಂಚಕರೂ ಚಾಣಾಕ್ಷರಾಗಿದ್ದಾರೆ. ಯಾವುದೇ ಕಾರಣಕ್ಕೂ ಅವರು ಗೆಳತಿಯರಿಗೆ ಮೊಬೈಲ್ ಸಂಖ್ಯೆ ನೀಡುವುದಿಲ್ಲ. ಹೀಗಾಗಿ, ಕೇವಲ ಐಪಿ ವಿಳಾಸ ಆಧರಿಸಿ ಆ ಚಾಲಾಕಿಗಳನ್ನು ಹಿಡಿಯಬೇಕಾಗುತ್ತದೆ. ಇದಕ್ಕೆ ತುಂಬ ಸಮಯ ಹಿಡಿಯುತ್ತದೆ’ ಎಂದು ಪರಿಸ್ಥಿತಿಯನ್ನು ಬಿಚ್ಚಿಟ್ಟರು.

ಸಿಕಂದರಬಾದ್‌ನ ಖಾಸಗಿ ಬ್ಯಾಂಕ್ ವ್ಯವಸ್ಥಾಪಕನೊಬ್ಬ ಯಾವುದೋ ಬೆತ್ತಲೆ ಫೋಟೊಗೆ ಬೆಂಗಳೂರು ವಿದ್ಯಾರ್ಥಿನಿಯೊಬ್ಬಳ ಮುಖವನ್ನು ಹೊಂದಿಸಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದ ಪ್ರಕರಣ ಇತ್ತೀಚೆಗೆಷ್ಟೇ ವರದಿಯಾಯಿತು. ಆ ಅಪರಿಚಿತನ ಜತೆ ಒಂದೆರಡು ಬಾರಿ ಫೇಸ್‌ಬುಕ್‌ ಚಾಟ್ ಮಾಡಿದ್ದು ಬಿಟ್ಟರೆ, ವಿದ್ಯಾರ್ಥಿನಿ ಬೇರಾವುದೇ ತಪ್ಪು ಮಾಡಿರಲಿಲ್ಲ. ಆದರೂ, ತನ್ನ ಬೇಡಿಕೆಗೆ ಆಕೆ ಒಪ್ಪಲಿಲ್ಲವೆಂಬ ಕಾರಣಕ್ಕೆ ಆತ ಆ ರೀತಿಯಾಗಿ ವಿಕೃತ ಆನಂದ ಅನುಭವಿಸಿದ್ದ. ಐಪಿ ವಿಳಾಸ ಆಧರಿಸಿ ಈತನನ್ನು ಪತ್ತೆ ಮಾಡಲು ಒಂದೂವರೆ ವರ್ಷ ಬೇಕಾಯಿತು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT