ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ವಋತು ಜೋಗ ಬೇಕೆ?

Last Updated 22 ಜುಲೈ 2017, 19:30 IST
ಅಕ್ಷರ ಗಾತ್ರ

ಪರಿಸರ ತನ್ನ ತಪಸ್ಸಿಗಾಗಿ, ಸಂತಸಕ್ಕಾಗಿ, ನಿಗೂಢತೆ ಮೆರೆಸಲು, ಜನಸಾಮಾನ್ಯರನ್ನು ಅಚ್ಚರಿಯಲ್ಲಿ ಕೆಡವಲು, ತನ್ನ ವಿಶೇಷತೆ ಸಾರಲು, ಜನರ ಮುಂದೆ ಒಂದು ಸವಾಲಿನಂತೆ ನಿಲ್ಲಲು ಕೆಲವೊಂದು ತಾಣಗಳನ್ನು ತನ್ನಲ್ಲಿ ಮೀಸಲಾಗಿ ಇರಿಸಿಕೊಳ್ಳುತ್ತದೆ. ಅಂತಹ ತಾಣಗಳನ್ನು ಸುರಕ್ಷಿತವಾಗಿ ಕಾಪಾಡಿಕೊಂಡು ಬರುವಲ್ಲಿ ಪ್ರಯತ್ನಿಸುತ್ತದೆ. ಈ ತಾಣಗಳು ಸದಾ ಆಧುನಿಕತೆಯಿಂದ, ಜನಸಂದಣಿಯಿಂದ ದೂರವಿರಬೇಕು ಎಂದು ಕೂಡ ಬಯಸುತ್ತದೆ. ಅಂತಹುದೇ ಕೆಲವು ತಾಣಗಳು ಬೇರೆಡೆ ಇರುವಂತೆಯೇ ಕರ್ನಾಟಕದಲ್ಲಿಯೂ ಇವೆ.

ಕೊಡಚಾದ್ರಿ ಬೆಟ್ಟ, ಮಲೆಮಹದೇಶ್ವರ ಬೆಟ್ಟ, ಬಿಳಿಗಿರಿರಂಗನಬೆಟ್ಟ, ತಲಕಾವೇರಿ, ಬಾಬಾ ಬುಡನ್‌ಗಿರಿ, ಯಾಣ, ಶಿವನಸಮುದ್ರ– ಇವೆಲ್ಲ ಈ ತರಹದ ತಾಣಗಳು. ಈ ತಾಣಗಳು ನಮ್ಮ ನಡುವೆ ಯಾವುದೇ ವಿಕಾರಕ್ಕೆ ಒಳಗಾಗದೆ ಇರಬೇಕು ಅನ್ನುವುದು ಕೂಡ ಮುಖ್ಯವೇ. ಏಕಾಂತದಲ್ಲಿ ಇರುವ ಒಂದು ಬೆಟ್ಟ, ಸುಂದರವಾಗಿ ಧುಮುಕುವ ಒಂದು ಜಲಪಾತ, ಆಳವಾದ ಕಣಿವೆಯಲ್ಲಿ ಇರುವ ಒಂದು ಗುಡಿ, ಎಲ್ಲೋ ಗುಪ್ತವಾಗಿ ಹುಟ್ಟಿ ಹರಿಯುವ ನದಿಯ ಮೂಲ, ಇವುಗಳೆಲ್ಲ ನಿಜವಾಗಿಯೂ ಈ ದೇಶದ ಸಂಪತ್ತು. ಒಂದು ನಾಡಿನ ಪ್ರಕೃತಿ ಸಂಪತ್ತಿನ ಬಗ್ಗೆ ಮಾತನಾಡುವಾಗ ಇವುಗಳನ್ನು ಉಲ್ಲೇಖಿಸುವುದರ ಜೊತೆಗೆ ಹೋಗಿ ನೋಡುವುದು ಒಂದು ಉತ್ತಮವಾದ ಹವ್ಯಾಸವೇ. ಈ ಸ್ಥಳಗಳನ್ನು ಆಧುನಿಕ ವಿಕಾರಗಳಿಗೆ ಬಲಿ ಕೊಡದ ಹಾಗೆ ಕಾಪಾಡಿಕೊಂಡು ಬರಬೇಕಾದ್ದು ಕೂಡ ಮುಖ್ಯವೇ.

ಆದರೆ, ನಮ್ಮ ಸರ್ಕಾರ ಈ ಕೆಲಸವನ್ನು ಹೇಗೆ ಮಾಡುತ್ತಿದೆ ಅನ್ನುವುದಕ್ಕೆ ಇಲ್ಲೊಂದು ಉದಾಹರಣೆ ಇದೆ. ಯಾವುದನ್ನು ತನ್ನಿಂದ ಸೃಷ್ಟಿ ಮಾಡಲು ಸಾಧ್ಯವಿಲ್ಲವೋ ಅಂತಹದನ್ನು ಮುಟ್ಟಲು ಸರ್ಕಾರ ಹೋಗಬಾರದು. ಆದರೆ, ಶಿವಮೊಗ್ಗ ಜಿಲ್ಲೆಯ ಜೋಗ ಜಲಪಾತವನ್ನು ಅಭಿವೃದ್ಧಿಯ ಹೆಸರಿನಲ್ಲಿ ಹಾಳು ಗೆಡವಿದ ಸರ್ಕಾರ ಅದರ ಸಂಪೂರ್ಣ ನಾಶಕ್ಕೆ ಈಗ ಮುಂದಾಗಿದೆ.

ಜೋಗ ಜಲಪಾತ ಈವರೆಗೆ ಆಧುನಿಕತೆಯ ಯಾವುದೇ ದಾಳಿಗೆ ಗುರಿಯಾಗದೆ ದಟ್ಟವಾದ ಕಾಡನ್ನು, ಆಳವಾದ ಕಣಿವೆಯನ್ನು, ಭಾರೀ ಬಂಡೆ ಬೆಟ್ಟಗಳನ್ನು ಹೊಂದಿ ವಿಶ್ವವಿಖ್ಯಾತಿಗೆ ಕಾರಣವಾಗಿತ್ತು. ವಿದೇಶಿಯರಿಂದ ಪ್ರಪಂಚಕ್ಕೆ ಪರಿಚಿತವಾದ ಇದು ಮೊನ್ನೆ ಮೊನ್ನೆಯವರೆಗೆ ಆಧುನಿಕತೆಯ ಯಾವುದೇ ಸ್ಪರ್ಶಕ್ಕೆ ಬಲಯಾಗದೆ ಶುದ್ಧ ಪರಿಸರವನ್ನು ತನ್ನ ಸುತ್ತ ಉಳಿಸಿಕೊಂಡಿತ್ತು.

ಆದರೆ , ಇದೀಗ ‘ಕೃತಕ ಜಲಪಾತ’ವನ್ನು ಇಲ್ಲಿ ಸೃಷ್ಟಿ ಮಾಡಬೇಕು ಅನ್ನುವ ಕೆಲವರ ಪ್ರಯತ್ನದಿಂದಾಗಿ ಮುಂದಿನ ದಿನಗಳಲ್ಲಿ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುವ ದಿಕ್ಕಿನತ್ತ ಸಾಗಿದೆ. ವರ್ಷದ 365 ದಿನವೂ ಜಲಪಾತ ಧುಮುಕುತ್ತ ಇರಬೇಕು ಅನ್ನುವುದು ಕೆಲವು ಪರಿಸರ ವಿರೋಧಿಗಳ ವಿಚಾರ.

ಹಿಂದೆ ಯಾವತ್ತೂ ಈ ಜಲಪಾತ ವರ್ಷದ 365 ದಿನವೂ ಮೈದುಂಬುತ್ತಿರಲಿಲ್ಲ. ಮೇನಿಂದ ಜುಲೈವರೆಗೆ ಮಲೆನಾಡಿನಲ್ಲಿ ಮಳೆಗಾಲ ಪ್ರಾರಂಭವಾದ ಕೂಡಲೇ ಕಾಣಿಸಿಕೊಳ್ಳುತ್ತಿದ್ದ ಜಲಪಾತ ಅಕ್ಟೋಬರ್‌ವರೆಗೆ ಅಸ್ತಿತ್ವದಲ್ಲಿ ಇರುತ್ತಿತ್ತು. ಆನಂತರ ಕ್ರಮೇಣ ಕಾಣೆಯಾಗುತ್ತಿತ್ತು. ಈ ಸಂದರ್ಭದಲ್ಲಿಯೇ ಜನ ಬಂದು ನೋಡಿ ಸಂತಸ ಪಡುತ್ತಿದ್ದರು. ಈಗ ಕೂಡ ಪ್ರವಾಸಿಗಳು ಈ ಸಮಯದಲ್ಲಿಯೇ ಜಲಪಾತ ನೋಡುವ ಅಭ್ಯಾಸ ರೂಢಿಸಿಕೊಂಡಿದ್ದಾರೆ.

ಇಲ್ಲಿ ಇನ್ನೂ ಒಂದು ಕಾರಣವಿದೆ. ಮಲೆನಾಡಿನಲ್ಲಿ ಮೇ ತಿಂಗಳಲ್ಲಿ ಪ್ರಾರಂಭವಾಗುವ ಮಳೆಗಾಲ ಜಲಪಾತದ ಅಕ್ಕಪಕ್ಕದ ಬಂಡೆ, ಬೆಟ್ಟಗಳನ್ನು ಹಸಿರಾಗಿಸುತ್ತದೆ. ಹಲವಾರು ಚಿಕ್ಕಪುಟ್ಟ ಜಲಪಾತಗಳು ಇಲ್ಲಿ ಕಾಣಿಸಿಕೊಳ್ಳುತ್ತವೆ. ಮಳೆಗಾಲದ ದಿನವಾದ್ದರಿಂದ ಸುತ್ತ ಹಿತಕರವಾದ ವಾತಾವರಣ ಇರುತ್ತದೆ.

ಹಲವಾರು ಹಕ್ಕಿಗಳು, ಪ್ರಾಣಿಗಳು ಈ ಸಮಯದಲ್ಲಿ ಇಲ್ಲಿಗೆ ಬರುತ್ತವೆ. ಈ ಸಮಯ ಜಲಪಾತ ವೀಕ್ಷಣೆಗೆ ಯೋಗ್ಯವಾದದ್ದು. ಇಂತಹ ಒಂದು ಸಂದರ್ಭ ವರ್ಷದ ಅಷ್ಟೂ ದಿನ ಇಲ್ಲಿ ಇರುವುದಿಲ್ಲ ಅನ್ನುವುದನ್ನು ವರ್ಷವಿಡೀ ಜಲಪಾತದ ಮಾತನಾಡುವ ಪ್ರಭೃತಿಗಳು ಅರ್ಥ ಮಾಡಿಕೊಳ್ಳಬೇಕು. ಬೇಸಿಗೆ ಬಂದರೆ ಕರಿಬಂಡೆ ಬಿಸಿಯಾಗುತ್ತದೆ. ಕಾಡು ಒಣಗುತ್ತದೆ. ಹಳ್ಳಗಳು ಕಾಣೆಯಾಗಿ ಇಡೀ ಪ್ರದೇಶ ಹಾಳು ಸುರಿಯುತ್ತದೆ. ಆಗ ಜಲಪಾತವನ್ನು ಸವಿಯಲು ಯಾರೂ ಮುಂದಾಗುವುದಿಲ್ಲ.

ಇನ್ನು ಕೃತಕ ಜಲಪಾತ ಅನ್ನುವ ಮಾತೇ ಹೇಸಿಗೆ ಹುಟ್ಟಿಸುವಂತಹದು. ಪ್ರಪಂಚದಲ್ಲಿ ಎಲ್ಲಿಯೂ ಕೃತಕ ಜಲಪಾತಗಳಿಲ್ಲ. ಅಲ್ಲದೆ ಇಲ್ಲಿ ಯಾರೂ ಕೃತಕ ಜಲಪಾತದ ಬೇಡಿಕೆ ಮುಂದೆ ಇಟ್ಟವರಿಲ್ಲ. ಹಣ ಮಾಡುವ ಒಂದು ಸಂಚು ಈ ಯೋಜನೆಯ ಹಿಂದೆ ಇದೆ. ಅಲ್ಲದೆ ಕೃತಕ ಜಲಪಾತವನ್ನು ಸೃಷ್ಟಿ ಮಾಡಲು ನಮ್ಮ ತಂತ್ರಜ್ಞರು ಕೈಗೊಂಡಿರುವ ಕ್ರಮ ಜಲಪಾತವನ್ನೇ ವಿರೂಪಗೊಳಿಸುವಂತಹದು.

ಜಲಪಾತಕ್ಕೆ ನೀರುಣಿಸಲು ಎರಡು ಜಲಾಶಯಗಳನ್ನು ನಿರ್ಮಿಸುವ ಇರಾದೆ ಇದೆ. ಒಂದು ಜಲಪಾತ ಧುಮುಕುವ ಕಣಿವೆಯಲ್ಲಿ, ಇನ್ನೊಂದು ಇಂದಿನ ಸೀತಾ ಕಟ್ಟೆ ಸೇತುವೆ ಬಳಿ. ಜಲಪಾತದಿಂದ ಧುಮುಕುವ ನೀರನ್ನು ಮೊದಲು ಕಣಿವೆಯಲ್ಲಿ ಕಟ್ಟಲಾಗುವ ಅಣೆಕಟ್ಟೆಯಲ್ಲಿ ಸಂಗ್ರಹಿಸಿ, ಅಲ್ಲಿಂದ ಅದನ್ನು ಮೇಲಿನ ಕಟ್ಟೆಗೆ ಹಾಯಿಸಲಾಗುತ್ತದಂತೆ.

ಹೀಗೆ ನೀರನ್ನ ಹಾಯಿಸಲು ರಾಜಾ ಜಲಪಾತದ ಬಳಿಯೇ 2.6 ಕಿಮೀ. ಉದ್ದದ ಸುರಂಗ ಕೊರೆದು, ಪೆನ್ ಸ್ಟಾಕ್‌ಪೈಪುಗಳ ಮೂಲಕ ನೀರನ್ನು ಮೇಲಿನ ಜಲಾಶಯಕ್ಕೆ ಹರಿಸುವ ಯೋಜನೆ. ಇದೇ ನೀರಿನಿಂದ ವಿದ್ಯುತ್‌ ಉತ್ಪಾದಿಸಬಹುದು ಅನ್ನುವ ಮಾತನ್ನು ಹೇಳಲಾಗುತ್ತದೆ. ಈ ಎಲ್ಲ ಕಾಮಗಾರಿಗಳು ಇಲ್ಲಿ ನಡೆಯುತ್ತವೆ. ಅಂದರೆ ಇಲ್ಲಿ ಸಿಡಿಮದ್ದು ಬಳಸಿ ಬಂಡೆಗಳನ್ನು ಸಿಡಿಸುವ ಕೆಲಸ ನಡೆಯುತ್ತದೆ. ಹೊಸ ಕಟ್ಟಡಗಳು, ವಿದ್ಯುತ್ ವಾಹಕ ತಂತಿ ಮಾರ್ಗ, ನೀರು ಸಾಗಿಸುವ ಕೊಳವೆಗಳು, ಇದರಿಂದ ಆಗುವ ನಿರಂತರ ಕಂಪನ, ಇದೆಲ್ಲವನ್ನು ಜೋಗದ ಬಂಡೆ ಸಹಿಸಿಕೊಳ್ಳಬೇಕಾಗುತ್ತದೆ. ಅಂದರೆ ಜೋಗದ ಅಸ್ತಿತ್ವ ಇಂದಿನಂತೆಯೇ ಮುಂದುವರೆಯುತ್ತದೆಯೇ ಎಂಬ ಪ್ರಶ್ನೆ ಕೇಳಬೇಕಾಗುತ್ತದೆ.

ನಾಳೆ ಜೋಗ ಜಲಪಾತದ ಮುಂದಿನ ವೀಕ್ಷಕ ಆಸನಗಳ ಮೇಲೆ ಕುಳಿತು ನೋಡಿದರೆ ಕಾಣಿಸುವುದು ಜಲಪಾತವಲ್ಲ, ಸುರಂಗ, ನೀರಿನ ಪೈಪುಗಳು. ಈ ಸುರಂಗದಿಂದ ಹೊರತಂದು ಹಾಕಿದ ಬಂಡೆ ರಾಶಿ, ಮಣ್ಣು, ಕಟ್ಟಡಗಳು, ವಿದ್ಯುದಾಗಾರ, ವಿದ್ಯುತ್ ತಂತಿ ಮಾರ್ಗ, ಇನ್ನೂ ಏನೇನೋ. ಇದಕ್ಕಾಗಿ ನಾವು ನಾಲ್ಕು ಕೋಟಿ ಹಣವನ್ನು ಇಲ್ಲಿ ತಂದು ಸುರಿದು ಯಾರಿಗೋ ಲಾಭ ಮಾಡಿಕೊಡಬೇಕೆ? ನಮ್ಮ ಒಂದು ಸುಂದರ ನಿಸರ್ಗ ತಾಣವನ್ನ ಬಲಿ ಕೊಡಬೇಕೆ?

ಜೋಗದ ಬಂಡೆಯಲ್ಲಿ ಇರುವ ಒಂದು ಲಕ್ಷಣ ಎಂದರೆ ಅದು ಬಿರುಕು ಬಿಟ್ಟು ಆಗಾಗ್ಗೆ ಬೀಳುವುದು. ಹಯವದನ ರಾಯರು ತಮ್ಮ ಗೆಜಿಟಿಯರಿನಲ್ಲಿ ಹೀಗೆ ಉದುರಿ ಬಿದ್ದ ಬಂಡೆಯೊಂದರ ಬಗ್ಗ ಉಲ್ಲೇಖಿಸುತ್ತಾರೆ. 2007ರಲ್ಲಿ ಇಂದಿನ ಅಂಬುತೀರ್ಥ ವಿದ್ಯುತ್ ಉತ್ಪಾದನಾ ಘಟಕದ ಕಾಮಗಾರಿ ಇಲ್ಲಿ ನಡೆಯುವಾಗ ಜಲಪಾತದ ಬಂಡೆಯಿಂದ ದೊಡ್ಡದೊಂದು ಬಂಡೆ ಕಳಚಿ ಕಣಿವೆಗೆ ಬಿದ್ದಿತು.

ಅದೇ ಸಮಯದಲ್ಲಿ ಅಪ್ಪಿಕೋ ಚಳವಳಿಯ ಬಹುಗುಣ ಅವರನ್ನು ಇಲ್ಲಿಗೆ ಕರೆದೊಯ್ಯಲಾಗಿತ್ತು. ಕಣಿವೆಗೆ ಕಳಚಿ ಬಿದ್ದ ಬಂಡೆಯ ವಿಷಯ ಕೇಳಿ ಅವರು ಇದು ಸಾಮಾನ್ಯ ಎಂದು ಹೇಳಿದ್ದರು. ಜಲಪಾತದ ಸುತ್ತಮುತ್ತ ಬಂಡೆ ಸಿಡಿಸುವ ಕಾಮಗಾರಿ ನಡೆದರೆ ಹೀಗೆ ಆಗುತ್ತದೆ ಅನ್ನುವುದು ಅವರ ಅಭಿಪ್ರಾಯವಾಗಿತ್ತು.

ಇದೀಗ ಆರು ತಿಂಗಳ ಹಿಂದೆ ಜಲಪಾತದ ಬಂಡೆಯೊಂದು ಕುಸಿದಿದೆ ಅನ್ನುವ ಸುದ್ದಿ ಪತ್ರಿಕೆಗಳಲ್ಲಿ ಬಂದಿದೆ. ನಾಳೆ ಜಲಪಾತದ ಸುತ್ತ ಬಂಡೆ ಸಿಡಿಸುವ, ನೀರನ್ನು ಮೇಲಕ್ಕೆ ಪಂಪ್ ಮಾಡುವ ಯಂತ್ರಗಳ ನಿರಂತರ ಕಂಪನ ನಡೆದರೆ, ವಿದ್ಯುತ್ ತಯಾರಿಸುವ ಯಂತ್ರಗಳು ಸದಾ ತಿರುಗುತ್ತಿದ್ದರೆ, ಇಲ್ಲಿ ವಾಹನಗಳ, ಜನರ ಓಡಾಟ ಹೆಚ್ಚಿದರೆ ಜಲಪಾತದ ಬಂಡೆಗಳು ಸಡಿಲಗೊಳ್ಳಬಹುದು.

ಇದನ್ನ ಸರ್ವಋತು ಜಲಪಾತದ ಬಗ್ಗೆ ಮಾತನಾಡುವ ಎಲ್ಲರೂ ಯೋಚಿಸಬೇಕಿದೆ. ಅಲ್ಲದೆ ಇದಕ್ಕಾಗಿ ಇಲ್ಲಿ ಕೂರಿಸುವ ಯಂತ್ರಗಳು ಜಲಪಾತದ ಒಟ್ಟು ಸೊಬಗಿಗೆ ಮಾರಕವಾಗುತ್ತವೆ. ಜಲಪಾತದ ಇಂದಿನ ಏಕಾಂತ ಬಯಲಾಗಿ ಅದೊಂದು ಯಂತ್ರಗಳ, ಜನರ ಆಗರವಾಗುವ ಸಾಧ್ಯತೆ ಇದೆ.

ಇಲ್ಲಿ ಇನ್ನೂ ಒಂದು ಅಂಶವಿದೆ. ಜಲಪಾತಕ್ಕೆ ಹೆಸರು ಬಂದಿರುವುದು ಅದು ಎತ್ತರದಿಂದ ಬೀಳುತ್ತದೆ ಅನ್ನುವ ಕಾರಣಕ್ಕೆ ಅಲ್ಲ. ರಾಜಾ, ರೋರರ್, ರಾಕೆಟ್ ಲೇಡಿ ಎಂಬ ಅದರ ನಾಲ್ಕು ಟಿಸಿಲುಗಳಿಂದಾಗಿ ಏನು ವೈವಿಧ್ಯ, ವಿಶೇಷ ಇದೆಯೊ ಇದರಿಂದಾಗಿ ಜೋಗಕ್ಕೆ ಹೆಸರು ಬಂದಿದೆ.

ಇದೇ ನಾಶವಾಗುತ್ತದೆ ಅಂದರೆ ಈ ಜಲಪಾತ ಯಾರಿಗೆ ಬೇಕು? ಜಲಪಾತಕ್ಕೆ ಕೆಲ ಕಿ.ಮೀ ದೂರ ಇದೆ ಅನ್ನುವಾಗ ನದಿ ಪ್ರತಿ ಟಿಸಿಲಿಗೂ ನೀರನ್ನ ಹಂಚುವುದರಿಂದ ಜಲಪಾತಕ್ಕೆ ಈ ಸೊಬಗು ವೈವಿಧ್ಯ ಬಂದಿದೆ. ನಾಳೆ ಸೀತಾಕಟ್ಟೆ ಅಣೆಕಟ್ಟೆಯಿಂದ ಗೇಟು ತೆರೆದು ನೀರು ಬಿಟ್ಟರೆ ಅದು ಇಂದಿನ ಕ್ರಮದಲ್ಲಿಯೇ ಬೀಳುತ್ತದೆ ಎಂಬುದು ಖಚಿತವೆ? ಈ ಕ್ರಮದಲ್ಲಿ ನೀರು ಬೀಳುವುದಿಲ್ಲ ಅನ್ನುವುದನ್ನು ನಾವು ಮಳೆಗಾಲದಲ್ಲಿ ನೋಡುತ್ತೇವೆ.

ನಾಳೆ ಈ ಜಲಪಾತದಲ್ಲಿ ರಾಜಾ ರೋರರ್, ರಾಕೆಟ್ ಲೇಡಿಗಳಿಲ್ಲ ಅಂದ ಮೇಲೆ ನಾವು ಜೋಗ ಜಲಪಾತವನ್ನು ಕಳೆದುಕೊಂಡಂತೆಯೇ ಅಲ್ಲವೆ? ಈಗಲೂ ಲಿಂಗನಮಕ್ಕಿ ಅಣೆಕಟ್ಟು ತುಂಬಿ ಹರಿದಾಗ ಜೋಗದಲ್ಲಿ ಅಷ್ಟೂ ನೀರು ಒಂದಾಗಿ ಬೀಳುತ್ತದೆ. ಆಗ ಜಲಪಾತಕ್ಕೆ ಯಾವ ಸೊಬಗೂ ಇರುವುದಿಲ್ಲ. ಇಂತಹ ಸ್ಥಿತಿ ಜಲಪಾತಕ್ಕೆ ಬರಬೇಕೆ?

ಅಲ್ಲದೆ ಅಣೆಕಟ್ಟು ನಿರ್ಮಿಸಲು ಅಕ್ಕಪಕ್ಕದಲ್ಲಿ ಎರಡು ಗುಡ್ಡಗಳಿದ್ದು ಇವೆರಡನ್ನೂ ಸೇರಿಸಿ ಅಣೆಕಟ್ಟು ನಿರ್ಮಿಸುವುದು ಸುರಕ್ಷಿತ ಹಾಗೂ ತಾಂತ್ರಿಕವಾಗಿ ಸರಿ. ಆದರೆ ಇದೀಗ ನೀಡಿರುವ ವರದಿಯ ಪ್ರಕಾರ ನದಿಯ ಅಕ್ಕಪಕ್ಕದ ಎರಡೂ ದಂಡೆಗಳ ಮೇಲೆ 5.5 ಮೀ. ಉದ್ದದ 5 ಕಿ.ಮೀ. ಎತ್ತರದ ಗೋಡೆಗಳನ್ನ ಕಟ್ಟುತ್ತಾರಂತೆ. ಈ ಗೋಡೆಗಳಿಂದಾಗಿ ಎರಡೂ ಕಡೆಯಿಂದ ಹರಿದು ಬರುವ ಹಳ್ಳಗಳು ಎತ್ತ ಹೋಗಬೇಕು? ನೀರು ಕುಡಿಯಲು ಬರುವ ಪ್ರಾಣಿಗಳ ಕತೆ ಏನು?

ಇನ್ನು ಈ ವರದಿಯಲ್ಲಿ ಈ ಯೋಜನೆಯಿಂದ ಹಾನಿಗೆ ಒಳಗಾಗುವ ಕಾಡು, ಪ್ರಾಣಿ, ಪಕ್ಷಿ, ಮೀನುಗಳ ಉಲ್ಲೇಖ ಮಾಡಲಾಗಿದೆ. ಆದರೆ, ಇದರಿಂದ ಮುಳುಗಡೆ ಆಗಲಿರುವ ಹಳ್ಳಿಗಳ, ಜಮೀನಿನ ಉಲ್ಲೇಖವಿಲ್ಲ. ಸುಮಾರು ಇಪ್ಪತ್ತು ಹಳ್ಳಿಗಳು ಇಲ್ಲಿವೆ. 500 ಜನರು ಇದ್ದಾರೆ. ಇವರೆಲ್ಲ
ಹಿಂದಿನ ಮಡೇನೂರು, ಲಿಂಗನಮಕ್ಕಿ ಅಣೆಕಟ್ಟುಗಳಲ್ಲಿ ಮುಳುಗಡೆಯಾದವರು. ಇವರನ್ನು ಮತ್ತೆ ಅನಾಥರನ್ನಾಗಿ ಮಾಡಲು ಹೊರಟಿದೆ ಸರ್ಕಾರ. ಈ ಅಂಶವನ್ನು ಸರಕಾರದ ಕಣ್ಣಿನಿಂದ ಮುಚ್ಚಿಟ್ಟು ಈ ಕಂಪೆನಿ ಕಣ್ಣಾಮುಚ್ಚಾಲೆ ಆಡುತ್ತಿದೆ.

ಈ ಎಲ್ಲ ಯೋಜನೆಯನ್ನು ಒಂದು ಖಾಸಗಿ ಕಂಪೆನಿ ಸರ್ಕಾರದ ಮುಂದೆ ಇಟ್ಟಿದೆ ಎಂದು ಹೇಳಲಾಗಿದೆ. ಈ ಕಾಮಗಾರಿಯ ಅನುಷ್ಠಾನಕ್ಕೆ ಮುಂದಿನ 60 ವರ್ಷಗಳಿಗೆ ಜಲಪಾತದ ಸುತ್ತಲಿನ 2 ಹೆಕ್ಟೇರ್ ಜಮೀನು ಮತ್ತು 350 ಎಕರೆ ಕಾಡನ್ನು ತನಗೆ ನೀಡಬೇಕು ಅನ್ನುವುದು ಈ ಕಂಪೆನಿಯ ಕರಾರು. ಅಂದರೆ ಇಲ್ಲೊಂದು ಈಸ್ಟ್‌ ಇಂಡಿಯಾ ಕಂಪೆನಿ ತೆರೆದುಕೊಳ್ಳಲಿದೆ. ಈ ಕಂಪೆನಿಯ ರೆಸಾರ್ಟ್‌ಗಳು, ಹೋಟೆಲ್‌ಗಳು, ಕ್ಲಬ್ಬುಗಳು, ಟೆನಿಸ್‌ ಕೋರ್ಟ್‌ಗಳು, ಈಜುಕೊಳ ತೆರೆಯಲಿವೆ.

ಜಲಪಾತ ನೋಡಲು ತಲಾ ₹ 200ರಿಂದ ₹ 350 ಟಿಕೆಟ್‌, ಒಳಗೆ ಫೋಟೊ ತೆಗೆಯುವಂತಿಲ್ಲ, ಹೊರಗಿನ ತಿಂಡಿ ತೀರ್ಥ ಒಳಗೆ ತೆಗೆದು ಕೊಂಡುಹೋಗುವಂತಿಲ್ಲ ಮೊದಲಾದ ನಿಯಮಗಳು, ಸೆಕ್ಯೂರಿಟಿಯವರ ಕಾಟ ಇಲ್ಲಿ ತಲೆ ಎತ್ತಲಿದೆ. ಮತ್ತೆ ಏನೇನು ನಿಯಮಗಳನ್ನು ಆ ಕಂಪೆನಿ ವಿಧಿಸುತ್ತದೋ ಕಾದು ನೋಡಬೇಕು. ಏಕೆಂದರೆ ಬೇರೆಡೆಗಳಲ್ಲಿ ಇರುವ ಇಂತಹ ಕಂಪೆನಿಗಳು ಬಡವರನ್ನು ದೋಚುತ್ತಿವೆ, ಶ್ರೀಮಂತರನ್ನು ಪೋಷಿಸುತ್ತಿವೆ. ಪ್ರಕೃತಿ ಉಚಿತವಾಗಿ ನೀಡಿದುದನ್ನ ಹಣ ಮಾಡುವ ಸಾಧನವನ್ನಾಗಿ ಮಾಡಿಕೊಳ್ಳುವ ಈ ಮನೋಭಾವಕ್ಕೆ ಧಿಕ್ಕಾರ ಇರಲಿ.

ಹಿಮಾಲಯದ ಸಾಲಿನಲ್ಲಿ ಇರುವ ಅಮರನಾಥದ ಶಿವಲಿಂಗ ವರ್ಷದಲ್ಲಿ ಕೆಲವೇ ದಿನ ಕಾಣಿಸಿಕೊಳ್ಳುತ್ತದೆ. ಭಕ್ತರು ಈ ಸಮಯದಲ್ಲಿ ಹೋಗಿ ಅದನ್ನ ನೋಡಿ ಬರುತ್ತಾರೆ. ಹಾಗೆಯೇ ಜೋಗದ ಅಭಿಮಾನಿಗಳು ಜುಲೈ ತಿಂಗಳಿನಿಂದ ಅಕ್ಟೋಬರ್‌ವರೆಗೆ ಜೋಗ ನೋಡಿ, ಸುತ್ತಲಿನ ಹಸಿರನ್ನು ನೋಡಿ ಸಂತಸಪಡುವುದನ್ನು ಈಗ ಒಂದು ಅಭ್ಯಾಸ ಮಾಡಿಕೊಂಡಿದ್ದಾರೆ. ಇದಕ್ಕೆ ಹಣ ಕೊಡಬೇಕಿಲ್ಲ, ಸೆಕ್ಯುರಿಟಿಯವರ ಗದ್ದಲ ಇಲ್ಲ, ಹೀಗೆಯೇ ಇಲ್ಲೂ ಮುಂದುವರೆಯಲಿ. ಯಾರಿಗೇನು ನಷ್ಟ?

ಲಿಂಗನಮಕ್ಕಿ ಅಣೆಕಟ್ಟನ್ನು ನಿರ್ಮಿಸುವಾಗ ಯಾವುದೇ ಪರಿಸ್ಥಿತಿಯಲ್ಲಿ ಜೋಗ ಜಲಪಾತಕ್ಕೆ 200 ಕ್ಯುಸೆಕ್‌ ನೀರನ್ನು ಬಿಟ್ಟುಕೊಡುವುದಾಗಿ ಹೇಳಿದ ಸರ್ಕಾರ ಅಣೆಕಟ್ಟೆಯ ಕಾಮಗಾರಿ ಮುಗಿದ ಎರಡನೆಯ ವರ್ಷಕ್ಕೇನೆ ಜಲಪಾತಕ್ಕೆ ನೀರು ಬಿಡುವುದನ್ನು ನಿಲ್ಲಿಸಿತು. ಲಿಂಗನಮಕ್ಕಿ ಅಣೆಕಟ್ಟು ನಿರ್ಮಾಣಕ್ಕೆ ಸಾವಿರಾರು ಎಕರೆ ಕಾಡು ಕಡಿದದ್ದರಿಂದ 320 ಇಂಚು ಬೀಳುತ್ತಿದ್ದ ಮಳೆ ವರ್ಷಕ್ಕೆ 70 ಇಂಚಿಗೆ ಬಂದು ನಿಂತಿತು. ಈಗ ಲಿಂಗನಮಕ್ಕಿ ಜಲಾಶಯ ಬರಿದೋ ಬರಿದು. ಹೀಗಿರುವಾಗ ಜೋಗ ಜಲಪಾತಕ್ಕೆ ಸರಕಾರ ಎಲ್ಲಿಂದ ನೀರನ್ನ ತರುತ್ತದೆ?

ಜೋಗ ಅಭಿವೃದ್ಧಿ ಪ್ರಾಧಿಕಾರ ಇಲ್ಲಿ ಏನನ್ನೂ ಸರಿಯಾಗಿ ನೋಡಿಕೊಂಡಿಲ್ಲ. ಇಲ್ಲಿದ್ದ ವಿಶ್ವದರ್ಜೆಯ ಈಜುಕೊಳವನ್ನು ಮುಚ್ಚಿ ಹಾಕಿತು. ಸಂಗೀತ ಕಾರಂಜಿ ಮೌನವಾಗಿದೆ. ಲೇಸರ್‌  ಕಾರ್ಯಕ್ರಮ ನಡೆಯುತ್ತಿಲ್ಲ. ಜನ ನೀರು, ಶೌಚಾಲಯ ಇಲ್ಲದೆ ಪರದಾಡುತ್ತಾರೆ. ಸರಿಯಾದ ಊಟ ತಿಂಡಿ ಇಲ್ಲಿ ಸಿಗುವುದಿಲ್ಲ. ಕೆಳಗೆ ಇಳಿಯುವ ಮೆಟ್ಟಿಲ ದಾರಿಗೆ ಬೀಗ ಹಾಕಿದ್ದಾರೆ. ಇಲ್ಲಿ ಕೆಲಸ ಮಾಡುವ ಹವ್ಯಾಸಿ ಛಾಯಾಚಿತ್ರಗ್ರಾಹಕರಿಗೆ ಇಲ್ಲದ ಕಿರುಕುಳ, ಜಲಪಾತದಲ್ಲಿ ನೀರು ಇಲ್ಲದಿರುವಾಗಲೂ ಜನರಿಂದ ತಲೆಗಂದಾಯ ವಸೂಲಿ ನಡೆದಿದೆ.

ಈ ಅನನುಕೂಲತೆಯನ್ನು ಸರ್ಕಾರ ಮೊದಲು ಸರಿಪಡಿಸಲಿ. ಇದರ ಬದಲು ಜಲಪಾತವನ್ನು ಶಾಶ್ವತವಾಗಿ ನಾಶ ಮಾಡುವ ಸಾಹಸ ಬೇಡ. ಪಶ್ಚಿಮ ಘಟ್ಟದ ಒಂದು ಸುಂದರ ತಾಣ ಜೋಗ. ಅದನ್ನ ಉಳಿಸಿ. ನವ ದೆಹಲಿಯಲ್ಲಿ ಇರುವ ‘ಕೇಂದ್ರ ಪರಿಸರ ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ’ ಹಾಗೂ ‘ನದಿ ಕಣಿವೆ ಮತ್ತು ಜಲ ವಿದ್ಯುತ್ ಯೋಜನೆಗಳ ನಿರ್ಮಾಪಕ ಸಮಿತಿ’ ಈ ಅಂಶವನ್ನು ಯಾವುದೇ ಮುಲಾಜಿಲ್ಲದೆ ಪರಿಶೀಲಿಸಿ ಪರಿಸರಕ್ಕೆ ಆಗಲಿರುವ ಈ ಆಘಾತವನ್ನು ತಡೆಯಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT