ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೌನಿಯ ಆತ್ಮಾಹುತಿ

Last Updated 22 ಜುಲೈ 2017, 19:30 IST
ಅಕ್ಷರ ಗಾತ್ರ

ಆ ಕಿಶೋರಿ ನಮ್ಮ ಕಾಲೇಜಿನ ಪ್ರಥಮ ಪಿಯುಸಿ ಕಲಾ ವಿಭಾಗದ ವಿದ್ಯಾರ್ಥಿನಿಯಾಗಿದ್ದಳು. ಆಕೆ ಓದಿನಲ್ಲಿ ಮಾತ್ರವಲ್ಲದೆ, ಕಲಾವಿದೆಯಾಗಿಯೂ ಗುರುತಿಸಿಕೊಂಡಿದ್ದಳು. ಆಕೆ ಉತ್ತಮ ಕಲಾವಿದೆ ಎಂಬುದನ್ನು ಕಾಲೇಜಿನ ಸೂಚನಾ ಫಲಕದಲ್ಲಿನ ಅವಳ ಹಲವಾರು ಚಿತ್ರಗಳು ಸಾಬೀತುಪಡಿಸಿದ್ದವು.

ಕಾಲೇಜು ಜೀವನದ ಪ್ರಾರಂಭದ ದಿನಗಳಲ್ಲಿ ಆಕೆಯಲ್ಲಿದ್ದ ಪಾದರಸ ಸದೃಶ ವ್ಯಕ್ತಿತ್ವವು ಕ್ರಮೇಣ ಮಂಕಾಯಿತು. ಸದಾ ಮೌನವಾಗಿ ಇರಲಾರಂಭಿಸಿದಳು. ಆಕೆ ಮುಖಭಾವ ಶೋಕ ಮಡುಗಟ್ಟಿದಂತೆ ಇರುತ್ತಿತ್ತು. ಆದರೆ ಉಪನ್ಯಾಸಕರಾದ ನಾವ್ಯಾರೂ ಅವಳ ಮೌನ ಕೆದಕಲಿಲ್ಲ. ಕರೆದು ಕಾರಣ ವಿಚಾರಿಸಲೂ ಇಲ್ಲ.

ಸ್ವಾತಂತ್ರ್ಯೋತ್ಸವದ ಮರುದಿನ ಅವಳು ಗೈರುಹಾಜರಾಗಿದ್ದಳು. ಅವಳ ಬಗ್ಗೆ ಸುದ್ದಿಯೊಂದು ಬಂತು. ಸ್ವಾತಂತ್ರ್ಯೋತ್ಸವದ ರಾತ್ರಿ ಮನೆಯ ಬಾವಿಯು ನೊಂದ ಈ ಹೆಣ್ಣಿಗೆ ಆಸರೆ ನೀಡಿತ್ತು. ತಾಯಿ ಇಲ್ಲದಾಕೆಗೆ ಮಮತೆಯ ಸೆಲೆಯಿಲ್ಲದ ಮನೆ ಎಂಬ ‘ಮನೆ’, ಅಲ್ಲಿ ತಂದೆ, ಚಿಕ್ಕಮ್ಮ ಇಬ್ಬರಿಂದಲೂ ನಿರಂತರ ಶೋಷಣೆ. ನಿತ್ಯ ರಂಪ ರಾಮಾಯಣ. ಕೈಲಾಗದ ಅಜ್ಜಿಯೊಬ್ಬರು ಮಾತ್ರ ಅವಳ ಪರ. ಅವರಿಂದಲೇ ದೊರೆತದ್ದು ದೂರವಾಣಿ ಮೂಲಕ ಈ ವಿವರ.

ಮೌನವಾಗಿ ನೋವುಂಡು ಬೇಸತ್ತ ಬಡ ಜೀವ ತನ್ನ ಬಾಳಿಗೆ ತಾನೇ ಅಂತ್ಯ ಹಾಡಿಕೊಂಡಿತ್ತು! ಭವಿಷ್ಯದಲ್ಲಿ ವಿದ್ಯಾವಂತೆ, ಸದ್ಗೃಹಿಣಿ, ಉತ್ತಮ ಚಿತ್ರ ಕಲಾವಿದೆ.. ಏನಾದರೂ ಆಗಿ ರೂಪುಗೊಳ್ಳಬಹುದಾಗಿದ್ದ ಬಡ ಕಿಶೋರಿಯು ಸ್ವರ್ಗಲೋಕದ ಚಿತ್ತಾರವಾಗಿಬಿಟ್ಟಿದ್ದಳು. ಬಹು ಕಾಲ ಆ ನೋವು ನನ್ನನ್ನು ಕಾಡುತ್ತಿತ್ತು.

ಸುಶೀಲಾ.ಆರ್. ರಾವ್, ಉಡುಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT