ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಟ್ಟಿಗೆಹಾರದ ನೀರ್‌ದೋಸೆ ಸವಿಯದಿದ್ದರೆ...

Last Updated 22 ಜುಲೈ 2017, 19:30 IST
ಅಕ್ಷರ ಗಾತ್ರ

ಧರ್ಮಸ್ಥಳ ಅಥವಾ ಉಜಿರೆ ಕಡೆಯಿಂದ ಹೊರಟು ಚಾರ್ಮಾಡಿ ಘಾಟಿ ಏರಿ, ಘಟ್ಟದ ಮೇಲಿನ ಊರುಗಳಿಗೆ ಬರುವವರಿಗೆ ಹಾಗೂ ಮೂಡಿಗೆರೆ ಮಾರ್ಗವಾಗಿ ಘಟ್ಟದ ಕೆಳಗಿನ ಊರುಗಳಿಗೆ ತೆರಳುವವರಿಗೆ ಕೊಟ್ಟಿಗೆಹಾರ ಎಂಬ ಪುಟ್ಟ ಊರಿನ ಬಗ್ಗೆ ಖಂಡಿತ ತಿಳಿದಿರುತ್ತದೆ.

ಚಾರ್ಮಾಡಿ ಘಾಟಿ ಹತ್ತಿದ ನಂತರ ದಣಿವಾರಿಸಿಕೊಳ್ಳಲು ಒಂದು ನಿಲ್ದಾಣ ಬೇಕು ಹಾಗೂ ಈ ಘಾಟಿ ಇಳಿಯುವ ಮೊದಲು ಅರೆಕ್ಷಣ ನಿಂತು ಮನಸ್ಸು ಸಜ್ಜುಗೊಳಿಸಿಕೊಳ್ಳಲು ಒಂದು ಜಾಗ ಬೇಕು ಎಂಬ ಉದ್ದೇಶದಿಂದಲೇ ಈ ಪುಟ್ಟ ಊರು ಸೃಷ್ಟಿಯಾಯಿತೇನೊ ಎನ್ನುವಂತಿದೆ! ಇಲ್ಲಿ ವಾಹನ ನಿಲ್ಲಿಸಿ, ಕೆಳಕ್ಕೆ ಇಳಿದ ತಕ್ಷಣ ಕೇಳಿಸುವುದು ದೋಸೆ ಹುಯ್ಯುವ ಸದ್ದು, ಮೂಗಿಗೆ ಬಡಿಯುವುದು ರುಚಿ ರುಚಿ ನೀರ್‌ದೋಸೆಯ ಪರಿಮಳ! ’ಕೊಟ್ಟಿಗೆಹಾರ ಅಂದರೆ ನೀರ್‌ದೋಸೆ, ನೀರ್‌ದೋಸೆ ಅಂದರೆ ಕೊಟ್ಟಿಗೆಹಾರ’ ಎನ್ನುವಷ್ಟರ ಮಟ್ಟಿಗೆ ಇಲ್ಲಿನ ನೀರ್‌ದೋಸೆ ಜನಪ್ರಿಯ!

’ಕೊಟ್ಟಿಗೆಹಾರದ ಬಹುತೇಕ ಹೋಟೆಲ್‌ಗಳಲ್ಲಿ ನೀರ್‌ದೋಸೆ ಸಿಗುತ್ತದೆ. ಇಲ್ಲಿನ ವೈಶಿಷ್ಟ್ಯವೆಂದರೆ ನೀರ್‌ದೋಸೆ ಹೋಟೆಲ್‌ಗಳು ದಿನದ ಇಪ್ಪತ್ತನಾಲ್ಕು ಗಂಟೆಗಳೂ ತೆರೆದಿರುತ್ತವೆ. ಎಷ್ಟು ಹೊತ್ತಿಗೇ ಬಂದರೂ ನೀರ್‌ದೋಸೆ ಇಲ್ಲ ಎಂಬ ಮಾತು ಇಲ್ಲಿಲ್ಲ' ಎನ್ನುತ್ತಾರೆ ಸ್ಥಳೀಯರಾದ ಸಂಜಯ್ ಗೌಡ. ಬೇರೆ ಬೇರೆ ಊರುಗಳಿಂದ ಚಾರ್ಮಾಡಿ ಮಾರ್ಗವಾಗಿ ಧರ್ಮಸ್ಥಳ, ಉಜಿರೆ, ಹೊರನಾಡು ಕಡೆ ಹೋಗುವ ಪ್ರವಾಸಿಗರು ಕೊಟ್ಟಿಗೆಹಾರದಲ್ಲಿ ತುಸು ವಿರಾಮವಾಗಿ ನೀರ್‌ದೋಸೆ ಸವಿಯುತ್ತಾರೆ.

ಹಾಗೆಯೇ, ಉಜಿರೆ ಹಾಗೂ ಬೆಳ್ತಂಗಡಿ ಸುತ್ತಲಿನ ಜನ ನೀರ್‌ದೋಸೆ ತಿನ್ನಲಿಕ್ಕೆಂದೇ ಚಾರ್ಮಾಡಿ ಘಾಟಿ ಏರಿ ಬರುವುದೂ ಇದೆ ಎನ್ನುತ್ತಾರೆ ಸಂಜಯ್. ಕೊಟ್ಟಿಗೆಹಾರಕ್ಕೆ ಬಂದು ಬಿಸಿ ಬಿಸಿ ನೀರ್‌ದೋಸೆಯನ್ನು ಬಾಯಿಗಿಟ್ಟುಕೊಂಡರೆ ಘಾಟಿ ಪ್ರಯಾಣದ ಸುಸ್ತು ಮಾಯವಾಗುವುದರಲ್ಲಿ ಸಂಶಯವೇ ಇಲ್ಲ! ಇಲ್ಲಿಗೆ ಬಂದಾಗ ಒಂದೇ ಏಟಿಗೆ ಹದಿನೆಂಟರಿಂದ ಇಪ್ಪತ್ತು ದೋಸೆ ತಿನ್ನುವವರೂ ಇದ್ದಾರೆ.

ಸಸ್ಯಾಹಾರಿಗಳಿಗೆ ನೀರ್‌ದೋಸೆ ಜೊತೆ ಚಟ್ನಿ, ಬಿಸಿ ಬಿಸಿ ಸಾರು ನೀಡುತ್ತಾರೆ. ಮಾಂಸಾಹಾರಿಗಳಿಗೆ ಪುಳಿಮಂಚಿ (ಮೀನಿನ ಸಾರು), ಚಿಕನ್ ಸಾರು ಲಭ್ಯ. ನಿಜ ಹೇಳಬೇಕೆಂದರೆ, ನೀರ್‌ದೋಸೆಯನ್ನು ಮೀನು ಸಾರು ಅಥವಾ ಚಿಕನ್ ಸಾರಿನ ಜೊತೆ ನೆಂಚಿಕೊಂಡು ತಿನ್ನಬೇಕು. ಆಗಲೇ ಅದರ ಪೂರ್ಣ ರುಚಿ ಸವಿದಂತೆ! ಸಸ್ಯಾಹಾರಿಗಳಿಗೇನಿದ್ದರೂ ಸಿಗುವುದು ಅರ್ಧ ರುಚಿ ಮಾತ್ರ.ಇದು ಬಲ್ಲವರ ಮಾತು.

ನೀವು ಮಾಂಸಾಹಾರಿ ಆಗಿದ್ದರೂ, ಸಸ್ಯಾಹಾರಿ ಆಗಿದ್ದರೂ ಹೂವಿನ ದಳಗಳಷ್ಟು ಮೃದುವಾದ ನೀರ್‌ದೋಸೆಯನ್ನು ಬಾಯಲ್ಲಿಟ್ಟುಕೊಳ್ಳಬೇಕು. ಅದರ ರುಚಿಯನ್ನು ಆಸ್ವಾದಿಸಬೇಕು. ಜೊತೆಯಲ್ಲೇ ದೋಸೆಯ ಘಮವನ್ನು ಅನುಭವಿಸಬೇಕು. ಮಳೆಗಾಲ ಹಾಗೂ ಚಳಿಗಾಲದ ವೇಳೆಯಲ್ಲಂತೂ, ಇಲ್ಲಿನ ನೀರ್‌ದೋಸೆಯ ನೆನಪೇ ಬಾಯಲ್ಲಿ ನಿರೂರಿಸುತ್ತದೆ.

ಕೊಟ್ಟಿಗೆಹಾರದ ಸುತ್ತಮುತ್ತ ಹಲವು ಹೋಮ್‌ಸ್ಟೇಗಳು ಆರಂಭವಾಗಿವೆ. ಅಲ್ಲಿಗೆ ಬರುವ ಪ್ರವಾಸಿಗರು ಕೂಡ ಬೆಳಿಗ್ಗೆ ತಿಂಡಿಗೆ ನೀರ್‌ದೋಸೆ ಕೇಳುತ್ತಾರೆ ಎಂದು ಸ್ಥಳೀಯರು ಹೇಳುತ್ತಾರೆ. ಇಲ್ಲಿನ ದೋಸೆ ಅಂದಾಜು ಮೂವತ್ತು ವರ್ಷಗಳಿಂದ ಹೆಸರುವಾಸಿಯಂತೆ.

’ಕೊಟ್ಟಿಗೆಹಾರದಲ್ಲಿ ಸಿಗುವಷ್ಟು ರುಚಿಕರವಾದ ನೀರ್‌ದೋಸೆ ತಾರಾ ಹೋಟೆಲ್‌ಗಳಲ್ಲೂ ಸಿಗುವುದಿಲ್ಲ. ಅಮೆರಿಕದಲ್ಲಿರುವ ನನ್ನ ಮಗ ಭಾರತಕ್ಕೆ ಬಂದಾಗ, ನೀರ್‌ದೋಸೆ ತಿನ್ನಲು ಕೊಟ್ಟಿಗೆಹಾರಕ್ಕೆ ಹೋಗೋಣ ಎನ್ನುತ್ತಾನೆ’ ಎಂದರು ಲೇಖಕಿ ಚೂಡಿ ಶಿವರಾಂ. ಅವರಿಗೂ ಇಲ್ಲಿನ ನೀರ್‌ದೋಸೆ ಬಹು ಇಷ್ಟವಂತೆ. ಈ ಊರಿನ ಆಹ್ಲಾದಕರ ವಾತಾವರಣ ಕೂಡ ಈ ದೋಸೆಗೆ ಇಷ್ಟೊಂದು ರುಚಿ ತಂದುಕೊಟ್ಟಿರಬಹುದು ಎನ್ನುತ್ತಾರೆ ಅವರು.
***

ಈ ದೋಸೆ ಬಗ್ಗೆ ಮೆಚ್ಚುಗೆಯ ಮಾತನ್ನು ಸ್ನೇಹಿತರಿಂದ ಸಾಕಷ್ಟು ಬಾರಿ ಕೇಳಿದ್ದೇನೆ. ಒಮ್ಮೆ ದೋಸೆ ತಿನ್ನಲಿಕ್ಕೇ ಅಲ್ಲಿಗೆ ಹೋಗಬೇಕು ಅಂದುಕೊಂಡಿದ್ದೇನೆ
      ಸಂದೇಶ್ ನಾಯಕ್, ಬೆಂಗಳೂರಿನಲ್ಲಿ ಐ.ಟಿ. ಕಂಪೆನಿಯೊಂದರಲ್ಲಿ ಉದ್ಯೋಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT