ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಳನಾದ ನಾಯಕ ದಿಲೀಪ್‌

Last Updated 22 ಜುಲೈ 2017, 19:45 IST
ಅಕ್ಷರ ಗಾತ್ರ

ಗೋಪಾಕೃಷ್ಣನ್‌ ಪದ್ಮನಾಭನ್‌ ಪಿಳ್ಳೆ: ಈ ವ್ಯಕ್ತಿಯ  ಪರಿಚಯ ಬಹುಶಃ ಮಲಯಾಳ ಸಿನಿಮಾ ಅಭಿಮಾನಿಗಳಿಗೆ ಇರಲಾರದು. ಆದರೆ ‘ದಿಲೀಪ್‌’ ಎಂದ ತಕ್ಷಣ ಪ್ರತಿ ಮಲಯಾಳಿಯ ಚಿತ್ತದಲ್ಲಿ ಆ ನಟನ ಚಿತ್ರ ಮಿಂಚುತ್ತದೆ. ಕಳೆದ ಒಂದು ದಶಕದಲ್ಲಿ ದಿಲೀಪ್‌ ಮಲಯಾಳ ಚಿತ್ರರಂಗವನ್ನು ಆವರಿಸಿಕೊಂಡ ಪರಿ ಅದು.

ನಿನ್ನೆ–ಮೊನ್ನೆಯವರೆಗೆ ಮಲಯಾಳಿಗಳಿಗೆ ನೆರೆಮನೆಯ ಹುಡುಗನಂತೆ, ಹತ್ತಿರದ ಸಂಬಂಧಿಯೋ ಎಂಬಂತೆ, ಆಪತ್ಕಾಲದ ಬಾಂಧವನಂತೆ, ಪೆದ್ದುಪೆದ್ದು ನಡೆಯ ನಿಷ್ಕಲ್ಮಷ ಹೃದಯಿ ಹುಡುಗನಂತೆ ಕಾಣುತ್ತಿದ್ದ (ಅವರ ಚಿತ್ರಗಳ ಪ್ರಭಾವ) ದಿಲೀಪ್‌ ಒಮ್ಮೆಲೇ ಖಳನಾಯಕನಾಗಿದ್ದಾರೆ.

ನಟಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಸಂಚು ರೂಪಿಸಿದ ಆರೋಪದ ಮೇಲೆ ದಿಲೀಪ್‌ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಬೇರೆ ಯಾವ ತಪ್ಪು ಮಾಡಿದ್ದರೂ ಜನರು ಅವರನ್ನು ಕ್ಷಮಿಸುತ್ತಿದ್ದರೇನೋ, ಆದರೆ ದಿಲೀಪ್‌ ಅಭಿಮಾನಿಗಳು ಮತ್ತು ಮಲಯಾಳ ಚಿತ್ರ ರಸಿಕರಿಗೆ ಇದು ಹೇಳಲೂ ಆಗದ, ಅನುಭವಿಸಲೂ ಆಗದ ನೋವಿನಂತಾಗಿದೆ. ಮನಸ್ಸು ಒಪ್ಪಲು ಸಿದ್ಧವಿಲ್ಲದಿದ್ದರೂ, ‘ದಿಲೀಪ್‌ ತಪ್ಪು ಮಾಡಿದ್ದಾನೆ’ ಎಂದು ಅವರ ವಿವೇಕ ಹೇಳುತ್ತಿದೆ.

ಎರ್ನಾಕುಳಂ ಜಿಲ್ಲೆ ಆಲುವಾ ಪಟ್ಟಣದ ಪದ್ಮನಾಭನ್‌ ಪಿಳ್ಳೆ ಹಾಗೂ ಸರೋಜಮ್ಮ ದಂಪತಿಯ ಹಿರಿಯ ಮಗನಾದ ದಿಲೀಪ್‌, ಹುಟ್ಟಿದ್ದು 1968ರ ಅಕ್ಟೋಬರ್‌ 27ರಂದು. ಇವರಿಗೆ ಒಬ್ಬ ತಂಗಿ ಹಾಗೂ ಒಬ್ಬ ತಮ್ಮ ಇದ್ದಾರೆ. ಊರಿನಲ್ಲೇ ಪಿ.ಯು.ಸಿ.ವರೆಗಿನ ಶಿಕ್ಷಣ ಮುಗಿಸಿ, ಎರ್ನಾಕುಳಂನ ಮಹಾರಾಜಾಸ್‌ ಕಾಲೇಜ್‌ನಲ್ಲಿ ಇತಿಹಾಸ ವಿಷಯದಲ್ಲಿ ಪದವಿಯನ್ನೂ ಮುಗಿಸಿದ್ದಾರೆ.

ಕಾಲೇಜಿನಲ್ಲಿದ್ದಾಗಲೇ ಮಿಮಿಕ್ರಿ ಕಲೆಯನ್ನು ಕರಗತ ಮಾಡಿಕೊಂಡ ದಿಲೀಪ್‌, ಅದರಲ್ಲಿ ಮಹಾರಥರಾದರು. ಈ ಕಲೆಯನ್ನೇ ನೆಚ್ಚಿಕೊಂಡು ಜೀವನ ನಡೆಸುವ ತೀರ್ಮಾನ ಮಾಡಿದರು. ಮಿಮಿಕ್ರಿ ಕ್ಷೇತ್ರದಲ್ಲಿ ಹೆಸರು ಮಾಡಲು ಬಯಸುವ ಕೇರಳದ ಕಲಾವಿದರ ಕನಸೆಂದರೆ ‘ಕಲಾಭವನ’ ಸಂಸ್ಥೆ ಸೇರುವುದು.

ಈ ಸಂಸ್ಥೆ ಅದೆಷ್ಟೋ ಮಂದಿಗೆ ಯಶಸ್ಸು, ಕೀರ್ತಿ ಮತ್ತು ಹಣವನ್ನು ತಂದುಕೊಟ್ಟಿದೆ. ದಿಲೀಪ್‌ಗೂ ಈ ಸಂಸ್ಥೆಯಲ್ಲಿ ಪ್ರವೇಶ ಸಿಕ್ಕಿತು. ಅವರ ಕಲಾ ಜೀವನಕ್ಕೆ ಇದು ಗಟ್ಟಿ ಅಡಿಪಾಯವಾಯಿತು. ಓಣಂ ಆಧರಿತ ಹಾಸ್ಯ ಆಲ್ಬಂ ‘ದೇ ಮಾವೇಲಿ ಕೊಂಬತ್ತ್‌’ಗೆ ಧ್ವನಿ ನೀಡುವ ಮೂಲಕ ದಿಲೀಪ್‌ ವೃತ್ತಿ ಜೀವನಕ್ಕೆ ಪದಾರ್ಪಣೆ ಮಾಡಿದರು.

ಮಿಮಿಕ್ರಿ ಪ್ರದರ್ಶನಗಳ ಜೊತೆಯಲ್ಲೇ ಕೆಲವು ಕಾರ್ಯಕ್ರಮಗಳಿಗೆ ಸಹಾಯಕ ನಿರ್ದೇಶಕರಾಗಿಯೂ ಕೆಲಸ ಮಾಡಲು ಆರಂಭಿಸಿದರು. ಈ ನಡುವೆ ನಟನೆಗೂ ಸಣ್ಣಪುಟ್ಟ ಅವಕಾಶಗಳು ಲಭಿಸಿದವು. ಕಮಲ್‌ ನಿರ್ದೇಶನದ ‘ಎನ್ನೋಡ್ ಇಷ್ಟಂ ಕೂಡಾಮೋ’ ಚಿತ್ರದಲ್ಲಿ ಮಾಡಿದ್ದ ಸಣ್ಣ ಪಾತ್ರ ಅವರೊಳಗೊಬ್ಬ ನಟ ಇದ್ದಾನೆ ಎಂಬುದನ್ನು ಸಾಬೀತುಪಡಿಸಿತು.

ಆನಂತರ ಸ್ವತಃ ಕಮಲ್‌ ಅವರೇ ಅನೇಕ ನಿರ್ದೇಶಕರಿಗೆ ನಾಯಕ ನಟನ ಪಾತ್ರಕ್ಕೆ ಇವರ ಹೆಸರನ್ನು ಪ್ರಸ್ತಾಪಿಸಿದ್ದು ಇದೆ. ಸುನಿಲ್‌ ನಿರ್ದೇಶನದ ‘ಮಾನತ್ತೆ ಕೊಟ್ಟಾರಂ’ (1994) ಚಿತ್ರದಲ್ಲಿ ದಿಲೀಪ್‌ ಗಮನಾರ್ಹ ಪಾತ್ರ ನಿರ್ವಹಿಸಿ ಮೆಚ್ಚುಗೆ ಗಳಿಸಿದರು. ನಂತರ 2000ನೇ ಇಸವಿಯವರೆಗಿನ ಅವಧಿಯಲ್ಲಿ ‘ಪಿಡಕ್ಕೋಳಿ ಕೂವುನ್ನ ನೂಟ್ಟಾಂಡ್‌’, ‘ಉಳ್ಳಡಕ್ಕಂ’, ‘ತೂವಲ್‌ ಕೊಟ್ಟಾರಂ’, ‘ಈ ಪುಳಯುಂ ಕಡನ್ನ್’, ‘ಚಂದ್ರನುದಿಕ್ಕುನ್ನ ದಿಕ್ಕಿಲ್‌’ ಮುಂತಾದ ಚಿತ್ರಗಳು ಅವರ ಯಶಸ್ಸಿಗೆ ಒಂದೊಂದೇ ಮೆಟ್ಟಿಲುಗಳಾದವು.

2000ನೇ ಸಾಲಿನ ನಂತರ ಮಲಯಾಳ ಚಿತ್ರೋದ್ಯಮದಲ್ಲಿ ಅವರ ಹಿಡಿತ ಇನ್ನಷ್ಟು ಗಟ್ಟಿಯಾಯಿತು. ಒಂದು ದಶಕದ ಕಾಲ ಅವರು ಯಶಸ್ಸು ಮತ್ತು ಸೋಲನ್ನು ಸಮನಾಗಿ ಉಂಡರು. ‘ಮಿಸ್ಟರ್‌ ಬಟ್ಲರ್‌’, ‘ಡಾರ್ಲಿಂಗ್‌ ಡಾರ್ಲಿಂಗ್‌’, ‘ಜೋಕರ್‌’, ‘ಇಷ್ಟಂ ಮಳತ್ತುಳ್ಳಿ ಕಿಲುಕ್ಕಂ’ ಮುಂತಾದ ಚಿತ್ರಗಳು ಗೆದ್ದರೆ, ಕೆಲವು ಚಿತ್ರಗಳು ನಿರೀಕ್ಷಿತ ಯಶಸ್ಸು ಕಾಣಲಿಲ್ಲ. ಆದರೆ ಒಬ್ಬ ನಟನಾಗಿ ತನ್ನನ್ನು ಸಾಬೀತುಪಡಿಸುವಲ್ಲಿ ಮತ್ತು ಮಲಯಾಳ ಸಿನಿಮಾ ಪ್ರೇಕ್ಷಕರ ಮನಸ್ಸಿನಲ್ಲಿ ಬೇರೂರಲು ಅವರಿಗೆ ಸಾಧ್ಯವಾಯಿತು.

2002ರಲ್ಲಿ ಬಿಡುಗಡೆಯಾದ ‘ಮೀಶ ಮಾಧವನ್‌’ ಚಿತ್ರದಲ್ಲಿ ಕಳ್ಳನ ಪಾತ್ರದ ಮೂಲಕ ದಿಲೀಪ್‌ ಪ್ರತಿ ಮಲಯಾಳಿಯ ಹೃದಯಕ್ಕೆ ಕನ್ನ ಹಾಕಿದರು. ರಾತ್ರಿ ಬೆಳಗಾಗುವುದರೊಳಗೆ ದಿಲೀಪ್‌ ಮಲಯಾಳ ಚಿತ್ರರಂಗದ ಸೂಪರ್‌ ಸ್ಟಾರ್‌ ಎನಿಸಿಕೊಂಡರು. ಅದೇ ವರ್ಷಾಂತ್ಯದಲ್ಲಿ ಬಿಡುಗಡೆಯಾದ ‘ಕುಂಜಿಕ್ಕೂನನ್‌’ನಲ್ಲಿ ಅಭಿನಯಿಸಿದ ಕುಂಜನ್‌ ಪಾತ್ರಕ್ಕೆ ಅವರು ವಿಶೇಷ ಜ್ಯೂರಿ ಪ್ರಶಸ್ತಿ ಪಡೆದರು. ‘ಸಿ.ಐ.ಡಿ. ಮೂಸ’ ಚಿತ್ರವಂತೂ ಮಕ್ಕಳಿಂದ ಮುದಿ ವಯಸ್ಸಿನವರೆಗೆ ಎಲ್ಲರನ್ನೂ ಆಕರ್ಷಿಸಿತು.

2010ರ ನಂತರ ಮಲಯಾಳ ಚಿತ್ರೋದ್ಯಮ ದಿಲೀಪ್‌ ಕೈಗೊಂಬೆಯಂತಾಯಿತು ಎಂದು ವಿಶ್ಲೇಷಿಸುವವರಿದ್ದಾರೆ. ಒಂದೆಡೆ ಹಿಟ್‌ ಮೇಲೆ ಹಿಟ್‌ ಚಿತ್ರಗಳು, ಇನ್ನೊಂದೆಡೆ ಚಿತ್ರೋದ್ಯಮದ ಮೇಲೆ ಸಂಪೂರ್ಣ ಹಿಡಿತ. ಮಲಯಾಳ ಚಿತ್ರೋದ್ಯಮ ದಿಲೀಪ್‌ ತಾಳಕ್ಕೆ ಹೆಜ್ಜೆಹಾಕಲು ಆರಂಭಿಸಿತ್ತು. ಮಲಯಾಳ ಚಲನಚಿತ್ರ ಕಲಾವಿದರ ಸಂಘದಲ್ಲೂ (ಅಮ್ಮ) ದಿಲೀಪ್‌ ಮಾತೇ ಅಂತಿಮ ಎಂಬಂತಾಯಿತು.

ಹಣ ಮತ್ತು ಅಧಿಕಾರದ ಅಮಲು ನಿಧಾನಕ್ಕೆ ದಿಲೀಪ್‌ ತಲೆಗೆ ಏರಲು ಆರಂಭವಾಯಿತು. ಈ ನಡುವೆ ದಿಲೀಪ್‌ ಚಿತ್ರ ನಿರ್ಮಾಣವನ್ನೂ ಆರಂಭಿಸಿದರು. ಚಿತ್ರ ಮಂದಿರ ಖರೀದಿಸಿದರು. ರಿಯಲ್‌ ಎಸ್ಟೇಟ್‌, ಉಡುಪಿನ ವ್ಯವಹಾರ… ಹೀಗೆ ವಿವಿಧ ಕ್ಷೇತ್ರಗಳಿಗೆ ವ್ಯವಹಾರ ವಿಸ್ತರಿಸುತ್ತ ಹೋದರು.

ದಿಲೀಪ್‌ ಅವರ ನೂರನೇ ಚಿತ್ರ ‘ಕಾರ್ಯಸ್ಥನ್‌’ ಮೆಗಾ ಹಿಟ್‌ ಎನಿಸಿಕೊಂಡಿತು. ಈ ನಡುವೆ ‘ಮರ್ಯಾದಕ್ಕೊರು ಕುಂಜನಾಡ್‌’, ‘ಕ್ರಿಶ್ಚಿಯನ್‌ ಬ್ರದರ್ಸ್’, ‘ಚೈನಾ ಟೌನ್‌’ ಮುಂತಾದ ಹಿಟ್‌ ಚಿತ್ರಗಳನ್ನೂ ನೀಡಿದರು. ‘ಓರ್ಮ ಮಾತ್ರಂ’(2011) ಚಿತ್ರದ ನಟನೆಗಾಗಿ ರಾಜ್ಯ ಪ್ರಶಸ್ತಿಯನ್ನೂ ಪಡೆದುಕೊಂಡರು. ಹೀಗೆ ಯಶಸ್ಸಿನ ಉತ್ತುಂಗದಲ್ಲಿದ್ದಾಗಲೇ ದಿಲೀಪ್‌ ಅತ್ಯಾಚಾರಕ್ಕೆ ಸಂಚು ರೂಪಿಸಿದ ಕಳಂಕ ಅಂಟಿಸಿಕೊಂಡು ಪಾತಾಳಕ್ಕೆ ಬೀಳುವಂತಾಗಿದ್ದು ದುರಂತ.

ಯಶಸ್ಸಿನ ಮೆಟ್ಟಿಲುಗಳನ್ನು ಹತ್ತಲು ಆರಂಭಿಸಿದಾಗಲೇ ದಿಲೀಪ್‌, ನಟಿ ಮಂಜು ವಾರಿಯರ್ (1998ರಲ್ಲಿ) ಅವರನ್ನು ಪ್ರೀತಿಸಿ ವಿವಾಹವಾದರು. ಇವರಿಗೆ ಒಬ್ಬ ಮಗಳೂ ಇದ್ದಾಳೆ. ಆದರೆ ಇವರ ದಾಂಪತ್ಯ ಜೀವನ 2014ರಲ್ಲಿ ವಿಚ್ಛೇದನದಲ್ಲಿ ಕೊನೆಗೊಂಡಿತು. ಇವರ ವಿಚ್ಛೇದನಕ್ಕೂ, ನಟಿಯ ಅಪಹರಣ ಹಾಗೂ ದೌರ್ಜನ್ಯ ಘಟನೆಗೂ ಸಂಬಂಧವಿದೆ ಎಂದು ಹೇಳಲಾಗುತ್ತದೆ.

ವೃತ್ತಿ ಜೀವನದ ಉತ್ತುಂಗದಲ್ಲಿದ್ದ ದಿಲೀಪ್‌ ಇನ್ನೊಬ್ಬ ನಟಿಯ ಜೊತೆ ಸಲುಗೆ ಬೆಳೆಸಿದ್ದರು, ಅತ್ಯಾಚಾರಕ್ಕೆ ಒಳಗಾದ ನಟಿ ಆ ವಿಚಾರವನ್ನು ಮಂಜು ವಾರಿಯರ್‌ ಕಿವಿಯವರೆಗೆ ತಲುಪಿಸಿದ್ದರು. ಇದೇ ಲೈಂಗಿಕ ದೌರ್ಜನ್ಯ ಸಂಚಿನ ಹಿಂದಿನ ಕಾರಣ ಎಂಬ ಮಾತೂ ಕೇಳಿಬಂದಿದೆ.

ದಿಲೀಪ್‌ 2016ರಲ್ಲಿ ಇನ್ನೊಬ್ಬ ಯಶಸ್ವೀ ನಟಿ ಕಾವ್ಯಾ ಮಾಧವನ್‌ ಅವರನ್ನು ವರಿಸಿದರು. ಆದರೆ ತನ್ನ ಸಂಸಾರ ಹಾಳು ಮಾಡಿದ ನಟಿಗೆ ಬುದ್ಧಿ ಕಲಿಸಬೇಕೆಂಬ ಹಟಕ್ಕೆ ಬಿದ್ದರು. ದುಡ್ಡಿನ ಬಲ, ಉದ್ದಿಮೆ ಮೇಲಿನ ಬಿಗಿ ಹಿಡಿತ ಹಾಗೂ ಕೈ ಇಟ್ಟ ಕಡೆಯೆಲ್ಲ ಲಭಿಸುತ್ತಿದ್ದ ಯಶಸ್ಸಿನಿಂದ ದಿಲೀಪ್‌ ವಾಸ್ತವ ಮರೆತರು. ತನ್ನ ಮಾತನ್ನು ಯಾವ ನಿರ್ದೇಶಕರೂ ಮೀರುವುದಿಲ್ಲ ಎಂಬುದು ಖಚಿತವಾಗಿದ್ದರಿಂದ ‘ಆ ನಟಿ’ಗೆ ಸಿಕ್ಕ ಅವಕಾಶಗಳಿಗೆಲ್ಲ ಕತ್ತರಿ ಹಾಕುತ್ತ ಬಂದರು. ಆಕೆ ಅದನ್ನು ತನ್ನ ಸ್ನೇಹಿತೆಯೊಬ್ಬರ ಮುಂದೆ ಹೇಳಿ ಕಣ್ಣೀರಿಟ್ಟರು. ಆದರೆ ದಿಲೀಪ್‌ ಅವರನ್ನು ವಿರೋಧಿಸುವ ಶಕ್ತಿ ಮೋಹನ್‌ಲಾಲ್‌, ಮಮ್ಮೂಟ್ಟಿಯಂಥ ನಟರಿಗೂ ಇರಲಿಲ್ಲ.

ದಿಲೀಪ್‌ ಅವರ ‘ಅಹಂ’ಗೆ ಅಂಕುಶ ಹಾಕುವ ಘಟನೆ ನಡೆದದ್ದು ಇದೇ ವರ್ಷದ ಫೆಬ್ರುವರಿ 17ರಂದು. ಅದು ಅವರೇ  ಆಹ್ವಾನಿಸಿಕೊಂಡ ದುರಂತ. ಮಲಯಾಳ ಸೇರಿದಂತೆ ಹಲವು ಭಾಷೆಗಳ ಚಿತ್ರಗಳಲ್ಲಿ ನಟಿಸುವ ಕಲಾವಿದೆಯೊಬ್ಬರ ಮೇಲೆ ಕಾರಿನಲ್ಲಿ ಲೈಂಗಿಕ ದೌರ್ಜನ್ಯ ನಡೆಯಿತು. ಸಾಲದೆಂಬಂತೆ ದುರುಳರು ಅದನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿಯೂ ಬಿಟ್ಟರು. ಘಟನೆಯ ಜೊತೆ ದಿಲೀಪ್‌ ಹೆಸರೂ ತಳಕು ಹಾಕಿಕೊಂಡಿತು.

ಅತ್ಯಾಚಾರಕ್ಕೆ ಪ್ರಯತ್ನಿಸಿದವರು ದಿಲೀಪ್‌ ಸ್ನೇಹಿತರು ಎಂಬುದು ಬಯಲಾಯಿತು. ಘಟನೆಯ ಚಿತ್ರೀಕರಣಕ್ಕೆ ಬಳಸಿದ್ದ ಮೊಬೈಲ್‌ ದಿಲೀಪ್‌ ಅವರಲ್ಲೇ ಇದೆ ಎಂಬುದನ್ನು ಪೊಲೀಸರು ಪತ್ತೆ ಮಾಡಿದರು. ‘ನನ್ನನ್ನು ಬ್ಲ್ಯಾಕ್‌ಮೇಲ್‌ ಮಾಡಲಾಗುತ್ತಿದೆ’ ಎಂದು ದಿಲೀಪ್‌ ಹೇಳಿದರೂ ಅದಕ್ಕೆ ಸಾಕ್ಷ್ಯ ಒದಗಿಸಲು ಅವರಿಂದ ಸಾಧ್ಯವಾಗಲಿಲ್ಲ. ಜುಲೈ 10ರಂದು ಅವರನ್ನು ಪೊಲೀಸರು ಬಂಧಿಸಿದರು.

ಈಗ ದಿಲೀಪ್‌ ಅವರ ಎಲ್ಲ ವಹಿವಾಟುಗಳನ್ನೂ ತನಿಖೆಗೆ ಒಳಪಡಿಸಲಾಗುತ್ತಿದೆ. ಕೆಲವು ವರ್ಷಗಳ ಹಿಂದೆ ಅಸಹಜ ಸಾವನ್ನಪ್ಪಿದ ನಟ ಕಲಾಭವನ್‌ ಮಣಿಯ ಸಾವಿನ ಹಿಂದೆಯೂ ದಿಲೀಪ್‌ ಸಂಚು ಇದೆ ಎಂಬ ಆರೋಪವೂ ಬಲವಾಗುತ್ತಿದ್ದು, ಪೊಲೀಸರು ಆ ಬಗ್ಗೆಯೂ ತನಿಖೆ ನಡೆಸುತ್ತಿದ್ದಾರೆ.

ಮಲಯಾಳ ಚಿತ್ರೋದ್ಯಮದಲ್ಲಿ ಈಗ ಗೊಂದಲ ಇದೆ. ಹಿರಿಯ ಕಲಾವಿದರು ಮಾತನಾಡಲಾಗದ ಸ್ಥಿತಿಯಲ್ಲಿದ್ದಾರೆ. ದಿಲೀಪ್‌ ಅವರಿಂದ ತುಳಿತಕ್ಕೊಳಗಾದ ನಟರು, ಕಲಾವಿದರು ಬಂಡಾಯದ ಮೂಡ್‌ನಲ್ಲಿದ್ದಾರೆ.

ದಿಲೀಪ್‌ ಅವರ  ವೆಬ್‌ಸೈಟ್‌ ಪುಟ www.dileeponline.com ಗೆ ಭೇಟಿ ಕೊಟ್ಟರೆ ‘We’ll be back soon! Sorry for the inconvenience but we’re performing some maintenance at the moment. we’ll be back online shortly! ಎಂಬ ಸಂದೇಶ ಬರುತ್ತಿದೆ. ದಿಲೀಪ್‌ ಮಲಯಾಳ ಚಿತ್ರೋದ್ಯಮಕ್ಕೆ ಮರಳಿ ಬರಲು ಸಾಧ್ಯವೇ ಎಂಬುದನ್ನು ಕಾಲವೇ ಹೇಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT