ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಪ್ಪ ‘ಅಪ್ಪ’ ಆಗದಾಗ ಬಿತ್ತೆರಡು ಹೆಣ!

Last Updated 22 ಜುಲೈ 2017, 19:30 IST
ಅಕ್ಷರ ಗಾತ್ರ

ಮನುಷ್ಯನಿಗೆ ತಾನು ಶ್ರೇಷ್ಠನಾಗಬೇಕು ಎನ್ನುವ ಭಾವನೆ ಸಹಜವಾದದ್ದೇ. ಆದರೆ ಅದು ಆಸೆ ಮಿತಿಮೀರಿದರೆ ಎಂಥೆಂಥ ಅನಾಹುತಕ್ಕೆ ಕಾರಣವಾಗಬಲ್ಲದು ಎಂದು ಊಹಿಸುವುದು ಕಷ್ಟ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ...

***
ಕುನ್ನಪ್ಪ, ತನ್ನ ತಂದೆಯ ವೆಲ್ಡಿಂಗ್ ಶಾಪ್‌ನಲ್ಲಿಯೇ ಕೆಲಸ ಮಾಡುತ್ತಾ ಅದರಲ್ಲಿ ನಿಪುಣನಾದಾತ. ಹಣ, ಮನೆ, ಕಾರು ಮುಂತಾದ ವಿಶೇಷ ಸವಲತ್ತುಗಳು ಅವನಿಗೆ ಒಲಿದವು. ಅವನ ಹೆಂಡತಿ ನೀಲವೇಣಿ. ತಮಿಳುನಾಡಿನವಳು. ಕುನ್ನಪ್ಪನ ಅಕ್ಕಪಕ್ಕದವರು, ‘ಕುನ್ನಪ್ಪ ನೋಡೋಕೆ ಹೇಗಿದ್ದರೇನು, ಸುಂದರಿಯನ್ನು ಮದ್ರಾಸಿನಿಂದ ಹೊಡ್ಕೊಂಡ್ ಬಂದ್ ತನ್ನ ಕುರೂಪ ಮರೆಮಾಚ್ಕೊಂಡ’ ಎಂದು ಅಸೂಯೆ ಪಡುವಷ್ಟು ಚೆಲುವೆ ಆಕೆ.

ಈ ದಂಪತಿಗೊಬ್ಬಳು ಮಗಳು ಚಂದ್ರಾಣಿ, ಕುನ್ನಪ್ಪನ ಜೀವದ ಗೆಳೆಯ ದಯಾಕರ. ಕುನ್ನಪ್ಪನ ಹಣಕಾಸಿನ ವ್ಯವಹಾರದಲ್ಲಿ ನಷ್ಟ ಅನುಭವಿಸದಂತೆ ಅವನಿಗೆ ನೆರವಾಗುತ್ತಿದ್ದ ಈತ. ಬೆಚ್ಚನಾ ಮನೆ, ವೆಚ್ಚಕ್ಕೆ ಹೊನ್ನು, ಇಚ್ಛೆ ಅರಿತು ನಡೆವ ಸತಿ... ಕುನ್ನಪ್ಪನ ಬದುಕು ಸ್ವರ್ಗವೇ ಆಗಿತ್ತು.

ಕುನ್ನಪ್ಪ ತನ್ನ ಜೀವಕ್ಕಿಂತ ಹೆಚ್ಚಾಗಿ  ಪ್ರೀತಿಸುತ್ತಿದ್ದ ಚಂದ್ರಾಣಿಗೆ 1983ಕ್ಕೆ ಹತ್ತು ವರ್ಷ ತುಂಬಿತ್ತು. ಅವಳನ್ನು ಅಷ್ಟೇ ಪ್ರೀತಿ ಮಾಡುತ್ತಿದ್ದ ದಯಾಕರನನ್ನು ಚಂದ್ರಾಣಿ ಬಾಯ್ತುಂಬಾ ‘ಚಿಕ್ಕಪ್ಪಾ’ ಎಂದು ಕರೆಯುತ್ತಿದ್ದಳು.

1983ರಲ್ಲಿಯೇ ಅದೊಂದು ದಿನ ಡಂಕಣಿಕೋಟೆಯಿಂದ ಕಾರಿನಲ್ಲಿ ಬರುವಾಗ ಸಂಭವಿಸಿದ ರಸ್ತೆ ಅಪಘಾತದಲ್ಲಿ ಕುನ್ನಪ್ಪ ಮೃತನಾದ. ನೀಲವೇಣಿ ದಿಕ್ಕೆಟ್ಟಳು. ಕುನ್ನಪ್ಪನೊಂದಿಗೆ ಪ್ರೇಮ ವಿವಾಹವಾಗಿದ್ದರಿಂದ ಆಗಲೇ ದೂರವಾಗಿದ್ದ ಸಂಬಂಧಿಕರಾರೂ ನೆರವಿಗೆ ಬರಲಿಲ್ಲ. ಸಹಾಯಕ್ಕೆ ಇದ್ದವನೊಬ್ಬನೇ – ಅದು ದಯಾಕರ. ನೀಲವೇಣಿಯ ಮಾನಸಿಕ ಸ್ಥಿತಿ ಸುಧಾರಿಸುವ ಹೊತ್ತಿಗೆ ಹಲವು ತಿಂಗಳುಗಳೇ ಕಳೆದವು.

ಆಕೆಗೆ ತನ್ನ ಭವಿಷ್ಯದ ಬಗ್ಗೆ ಯೋಚಿಸುವಾಗಲೆಲ್ಲಾ ದಯಾಕರ ಕಣ್ಣಮುಂದೆ ನಿಲ್ಲುತ್ತಿದ್ದ. ಆಳವಾಗಿ ಯೋಚಿಸಿದ ನಂತರ ತನ್ನ ಭಾವನೆಗಳಿಗೆ ಸ್ಪಷ್ಟ ರೂಪಕೊಟ್ಟು ದಯಾಕರ ತನ್ನನ್ನು ಮದುವೆಯಾಗುವಂತೆ ಒಪ್ಪಿಸಿದಳು ಮತ್ತು ಚಂದ್ರಾಣಿಯನ್ನು ಅವಳ ಅಪ್ಪ ನೋಡಿಕೊಳ್ಳುತ್ತಿದ್ದಂತೆಯೇ ನೋಡಿಕೊಳ್ಳುವ ಭರವಸೆಯನ್ನೂ ಪಡೆದಳು.

ಕುನ್ನಪ್ಪನ ಸ್ಥಾನದಲ್ಲಿ ದಯಾಕರ ಸ್ಥಾಪಿತನಾದ. ಹರಿದು ಬರುತ್ತಿದ್ದ ಹಣದ ಹುಚ್ಚು ಹೊಳೆಯಲ್ಲಿ ದಯಾಕರನ ಒಳ್ಳೆಯತನವೆಲ್ಲ ಕೊಚ್ಚಿಹೋಗಿತ್ತು. ಬಿಗುಮಾನ ಮತ್ತು ದರ್ಪ ಹೆಚ್ಚಾಗಿ ಗರ್ವಿಷ್ಠನಾದ. ಚಂದ್ರಾಣಿಯ ಬಾಯಲ್ಲಿ ‘ಅಪ್ಪ’ ಅನಿಸಿಕೊಳ್ಳಬೇಕೆನ್ನುವುದು ಕೇವಲ ಪ್ರೀತಿಯ ಬಯಕೆಯಾಗದೆ ಸ್ವಮೋಹದ ಅಮಲಾಯಿತು. ಚಿಕ್ಕಪ್ಪ ಎಂದು ರೂಢಿಮಾಡಿಕೊಂಡಿದ್ದ ಚಂದ್ರಾಣಿಗೆ ದಯಾಕರನನ್ನು ಅಪ್ಪ ಎಂದು ಕರೆಯಲು ಸಾಧ್ಯವಾಗುತ್ತಿರಲಿಲ್ಲ. ದಯಾಕರ ಚಂದ್ರಾಣಿಯಿಂದ ಅಪ್ಪನೆಂದು ಕರೆಸಿಕೊಳ್ಳಬೇಕೆಂಬ ಪ್ರಯತ್ನ ಮಾಡಿದಾಗಲೆಲ್ಲಾ ನೀಲವೇಣಿ ಕೈಮುಗಿದು, ‘ದಯವಿಟ್ಟು ಅವಳ ಇಷ್ಟದಂತೆ ಬಿಟ್ಟುಬಿಡಿ’ ಎಂದು ಬೇಡಿಕೊಳ್ಳುತ್ತಿದ್ದಳು. ಆದರೆ ದಯಾಕರ ಹಟ ಬಿಡಲಿಲ್ಲ.  ಅಪ್ಪ ಎಂದು ಕರೆಯುವಂತೆ ಚಂದ್ರಾಣಿಯನ್ನು ಪೀಡಿಸುವ ಸಂದರ್ಭಗಳು ನಿರಂತರವಾದವು.

ಅದೊಂದು ದಿನ, ಶಾಲೆಯವರು ಕಾರ್ಯಕ್ರಮವೊಂದರ ಆಚರಣೆಗೆ ಹಣ ತರಲು ಹೇಳಿದ್ದರು. ಚಂದ್ರಾಣಿ ಅಡುಗೆಮನೆಯಲ್ಲಿದ್ದ ಅಮ್ಮನನ್ನು ಕೇಳಿದಳು. ‘ಹೋಗಿ, ಚಿಕ್ಕಪ್ಪನ ಹತ್ರ ತಗೋ’ ಅಂದಳು ನೀಲವೇಣಿ. ಚಂದ್ರಾಣಿ ‘ಚಿಕ್ಕಪ್ಪ ದುಡ್ಡು ಬೇಕು’ ಅಂದಳು. ‘ಚಿಕ್ಕಪ್ಪ’ ಎಂಬ ಸಂಬೋಧನೆಯಿಂದ ರೇಗಿಹೋದ ದಯಾಕರ ‘ಅಪ್ಪಾ  ದುಡ್ಡು ಕೊಡು ಅನ್ನು. ಇಲ್ಲದಿದ್ದರೆ ಕೊಡೊಲ್ಲ’ ಎಂದ.

ಚಂದ್ರಾಣಿ ಶೂನ್ಯದಲ್ಲಿ ನೋಡುತ್ತಿದ್ದಳು. ‘ಅಪ್ಪಾ, ಅನ್ನೋದಿಕ್ಕೆ ನಿನಗೇನು ರೋಗ, ನಾನು ನಿನ್ನ ಅಮ್ಮನ ಗಂಡ ಅಲ್ವಾ, ನಿನಗೆ ಹೇಗೆ ಚಿಕ್ಕಪ್ಪನಾಗ್ತೀನಿ, ಅಪ್ಪ  ಆಗ್ಬೇಕಲ್ವಾ? ಹಾಗಂತ ಕರಿ, ಕೊಡ್ತೀನಿ’ ಎಂದು ಗದರಿದ. ‘ಇವತ್ತು ನೀನು ನನ್ನ ಅಪ್ಪಾ ಅಂತ ಕರೀದೆ ಹೋದ್ರೆ ನಿನ್ನ ಸುಮ್ನೆ ಬಿಡಲ್ಲ’ ಎನ್ನುತ್ತಾ ವಿಕಾರವಾಗಿ ಕೆಕ್ಕರಿಸುತ್ತಿದ್ದ.

ಈ ಅಬ್ಬರ ಕೇಳಿದ ನೀಲವೇಣಿ ಕೈಲಿದ್ದ ಸೌಟು ಹಿಡಿದುಕೊಂಡೇ ಅಲ್ಲಿಗೆ ಬಂದಳು. ‘ಅಪ್ಪಾ ಅನ್ನುವ ವಿಚಾರವನ್ನೇ ಒಂದು ಸಮಸ್ಯೆಯಾಗಿ ಮಾಡಿಟ್ಟಿದ್ದೀರ. ನಾನು ಎಷ್ಟು ಬಾರಿ ಎಷ್ಟು ರೀತಿಯಲ್ಲಿ ಹೇಳಿದ್ದೀನಿ. ಮನಸ್ಸು ಮಾಡಿ, ಅದನ್ನ ಬಿಟ್ಟು ಬಿಡಿ’ ಎಂದು ಅಂಗಲಾಚಿ ಕೇಳಿಕೊಂಡಳು. ದಯಾಕರ ಅವಳ ಮಾತನ್ನು ಕೇಳಿಸಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ.

‘ನನ್ನಲ್ದೆ  ಇನ್ಯಾರನ್ನಾದ್ರೂ ಕರೀಬೇಕೂಂತ ಮಡುಕೊಂಡಿದ್ದೀಯೇನು?’ ಎನ್ನುತ್ತಾ ತನ್ನೆಲ್ಲ ಸಿಟ್ಟಿನ ಶಕ್ತಿಯೊಂದಿಗೆ ಚಂದ್ರಾಣಿಯ ಕಪಾಳಕ್ಕೆ ಬಾರಿಸಿದ.  ಅಷ್ಟೇ... ಚಂದ್ರಾಣಿ ಶವವಾಗಿ ನೆಲಕ್ಕೆ ಕುಸಿದಳು. ಮಗಳನ್ನು ಕಂಡು ದಂಗಾದ ನೀಲವೇಣಿಗೆ  ತಾನೇನು ಮಾಡುತ್ತಿದ್ದೇನೆ ಎಂಬ ಅರಿವೇ ಇಲ್ಲದೇ ಕೈಯಲ್ಲಿದ್ದ ಸೌಟಿನಿಂದ ದಯಾಕರನ ಕುತ್ತಿಗೆಯ ಎಡಭಾಗಕ್ಕೆ ಹೊಡೆದೇ ಬಿಟ್ಟಳು. ಪೆಟ್ಟು ಕಪಾಲ ನರದ ಮೇಲೆ ಬೀಳುತ್ತಿದ್ದಂತೆ  ಕುಸಿದು ಬಿದ್ದ ದಯಾಕರ ಮತ್ತೆ ಮೇಲೇಳಲಿಲ್ಲ. ಕ್ಷಣಾರ್ಧದಲ್ಲಿ ಇಬ್ಬರನ್ನೂ ಕಳೆದುಕೊಂಡ ಆಘಾತದಲ್ಲಿ ನೀಲವೇಣಿ ಪ್ರಜ್ಞಾಹೀನಳಾದಳು.

ಮುಖದ  ಮೇಲೆ  ನೀರ ಹನಿಗಳು ಬಿದ್ದಾಗ  ಕಣ್ಣು  ತೆರೆದ  ನೀಲವೇಣಿ ತಕ್ಷಣವೇ ಯಾರನ್ನೂ ಮಾತನಾಡಿಸದೆ ಅಲ್ಲಿಂದ ಕೂಗಳತೆ ದೂರದ ಪರಿಚಿತ  ವಕೀಲ  ಬಾಲಕೃಷ್ಣನ್  ಅವರ ಮನೆಗೆ  ಓಡಿದಳು.

ಬಾಲಕೃಷ್ಣ ಅವರಿಗೆ ನಡೆದುದನ್ನೆಲ್ಲ ವಿವರಿಸಿ ತನ್ನ ಪರ ವಕಾಲತ್ತು ವಹಿಸುವಂತೆ ಒಪ್ಪಿಸಿಕೊಂಡಳು. ಅಲ್ಲಿಂದ ಹೊರಗೆ ಬರುತ್ತಿದ್ದಂತೆ ಶ್ರೀರಾಂಪುರ ಪೊಲೀಸರು ಆಕೆಯನ್ನು ದಸ್ತಗಿರಿ ಮಾಡಿದರು.

ಆಕೆಯ ಸ್ವಇಚ್ಛಾ ಹೇಳಿಕೆಯಲ್ಲಿ ವಕೀಲ ಬಾಲಕೃಷ್ಣ ಅವರಲ್ಲಿ ಎಕ್ಸ್‌ಟ್ರಾ ಜ್ಯುಡಿಷಿಯಲ್‌ ಕನ್‌ಫೆಷನ್‌ (ನ್ಯಾಯಾಲಯದ ಹೊರಗಡೆ ತಪ್ಪೊಪ್ಪಿಕೊಳ್ಳುವುದು) ಮಾಡಿರುವುದು ಪೊಲೀಸರಿಗೆ ತಿಳಿಯಿತು. ಎರಡೂ ‘ಕೊಲೆ’ಗಳನ್ನು ಪ್ರತ್ಯಕ್ಷ ಕಂಡಿದ್ದ ನೀಲವೇಣಿ ಆರೋಪಿ ಸ್ಥಾನದಲ್ಲಿದ್ದರೂ ಆಕೆ ಬಾಲಕೃಷ್ಣ ಅವರಲ್ಲಿ ಯಾವ ವಿಷಯಗಳನ್ನು ವಿವರಿಸಿದ್ದಳೋ ಅಷ್ಟನ್ನೇ ಪೊಲೀಸರು ದೂರಿನಲ್ಲಿ ಉಲ್ಲೇಖಿಸಿಕೊಂಡರು. ನೀಲವೇಣಿಯ ವಿರುದ್ಧ ದೂರು ದಾಖಲಿಸಿ ವಕೀಲ ಬಾಲಕೃಷ್ಣ ಅವರನ್ನು ಪ್ರಮುಖ ಸಾಕ್ಷಿದಾರರನ್ನಾಗಿಸಿದ ಪೊಲೀಸರು ಕೋರ್ಟ್‌ಗೆ ಅಂತಿಮ ದೋಷಾರೋಪ ಪಟ್ಟಿ ಸಲ್ಲಿಸಿದರು.

ಈ ಕೇಸಿನಲ್ಲಿ ಬಾಲಕೃಷ್ಣನ್ ಅವರು  ಪೊಲೀಸ್‌ ದಾಖಲೆಯಲ್ಲಿ ಪ್ರಮುಖ ಸಾಕ್ಷಿಯಾಗಿದ್ದರಿಂದ ನೀಲವೇಣಿ ಪರವಾಗಿ ವಕಾಲತ್ತನ್ನು ವಹಿಸುವಂತಿರಲಿಲ್ಲ. ಆದ್ದರಿಂದ ಅವರು ನನ್ನನ್ನು ಭೇಟಿಯಾಗಿ ಕೇಸಿನ ವಿವರಗಳನ್ನು ತಿಳಿಸಿ ನೀಲವೇಣಿಯ ಪರ ವಕೀಲನಾಗಬೇಕೆಂದು  ಕೇಳಿಕೊಂಡರು, ನಾನು ಒಪ್ಪಿದೆ.

ಪ್ರಕರಣವು ವಿಚಾರಣೆಯ ಹಂತ ತಲುಪಿತು. ವಕೀಲನೊಬ್ಬನನ್ನು ಸಾಕ್ಷಿದಾರನನ್ನಾಗಿ ಮಾಡಿಕೊಂಡ ಬಗ್ಗೆ ಪೊಲೀಸ್‌ ಮತ್ತು ಅಭಿಯೋಜನೆಯ ವಲಯಗಳಲ್ಲಿ ಪರ ವಿರೋಧದ ನಿಲುವುಗಳಿದ್ದವು. ಬಾಲಕೃಷ್ಣನ್ ಅವರನ್ನು ಆರೋಪಿ ಪರ ವಕೀಲನಾದ ನಾನು ಹೇಗೆ ವಿಚಾರಣೆಗೆ ಒಳಪಡಿಸುತ್ತೇನೆ ಎಂದು ಕುತೂಹಲ ತಾಳಿದ್ದ ಕಿರಿಯ ವಕೀಲರು ಆ ದಿನಕ್ಕಾಗಿ ಕಾತರದಿಂದ ಕಾಯುತ್ತಿದ್ದರು.

ಆ ದಿನ ಬಂತು. ಬಾಲಕೃಷ್ಣನ್ ಅವರನ್ನು ಒಬ್ಬ ಸಾಕ್ಷಿದಾರನನ್ನಾಗಿ  ಪರಿಗಣಿಸುವುದು ಸರಿಯಲ್ಲ ಎಂದು  ನಾನು ನ್ಯಾಯಾಧೀಶರ ಮುಂದೆ ಆಕ್ಷೇಪ ತೆಗೆದೆ. ‘ಭಾರತೀಯ ಸಾಕ್ಷ್ಯ ಸಂಹಿತೆ’ಯ  126ನೇ ಕಲಮು ಮತ್ತು ‘ಭಾರತ ವಕೀಲರ ಪರಿಷತ್‌’ನ ಚಾಪ್ಟರ್ 2 –ರೂಲ್ 13 ಇವುಗಳಲ್ಲಿರುವ ಅಂಶಗಳನ್ನು ಕೋರ್ಟ್‌ ಮುಂದಿಟ್ಟೆ. ನ್ಯಾಯಾಧೀಶರು ಮತ್ತು ಸರ್ಕಾರದ ಪರ ವಕೀಲರು ಕೂಡಲೇ ಈ ನಿಯಮಗಳತ್ತ ಕಣ್ಣು ಹಾಯಿಸಿದರು.

ನಂತರ ಗಂಭೀರರಾದ ನ್ಯಾಯಾಧೀಶರು ಪ್ರಾಸಿಕ್ಯೂಟರ್‌ ಅವರನ್ನು ಉದ್ದೇಶಿಸಿ ‘ಹನುಮಂತರಾಯ ಅವರ ತಕರಾರು ವಿಶೇಷವಾಗಿರುವುದೆಂದು ನನಗೆ ಕಾಣಿಸುತ್ತಿದೆ, ವಾದ ಪ್ರತಿವಾದವನ್ನು ಕೇಳಿ ಒಂದು ನಿರ್ಣಯವನ್ನು ಕೊಡಬೇಕಾದ ಜರೂರು ಇದೆ, ನಾಳೆ ಕೇಳುತ್ತೇನೆ’ ಎನ್ನುತ್ತಾ ವಿಚಾರಣೆಯನ್ನು ಮುಂದೂಡಿದರು.

ಮಾರನೆಯ ದಿನ ನಾನು ವಾದ ಶುರುಮಾಡಿದೆ. ‘ಕಾನೂನು ಸಲಹೆಗಾರನಾಗಿ, ಕಕ್ಷಿದಾರನೊಂದಿಗೆ ವಕೀಲನು ನಡೆಸುವ ವೃತ್ತಿಪರ ಸಂವಹನ ರಹಸ್ಯವಾಗಿ ಉಳಿಯುವಂತೆ ರಕ್ಷಣೆ ನೀಡಬೇಕು ಎನ್ನುತ್ತದೆ ‘ಭಾರತೀಯ ಸಾಕ್ಷ್ಯ ಸಂಹಿತೆ’ ಮತ್ತು ‘ಭಾರತ ವಕೀಲರ ಪರಿಷತ್‌’ನ ನಿಯಮಗಳು. ಗೌಪ್ಯ ಮಾಹಿತಿಯನ್ನು ವಕೀಲರೊಂದಿಗೆ ಹಂಚಿಕೊಳ್ಳುವ ಹಕ್ಕನ್ನು ಕಕ್ಷಿದಾರರಿಗೆ ಇವು ನೀಡುತ್ತವೆ.

ಯಾವುದೇ ಸಂದರ್ಭದಲ್ಲಿ ಕಕ್ಷಿದಾರ ತನ್ನ ವಕೀಲರೊಂದಿಗೆ ಮಾಡಿದ ಸಮಾಲೋಚನೆ, ಪಡೆದುಕೊಂಡ ತಿಳಿವಳಿಕೆಗಳನ್ನು ವಕೀಲ ಬಹಿರಂಗಪಡಿಸಬಾರದೆಂಬ ನಿರ್ಬಂಧಕ್ಕೆ ಒಳಪಡಿಸುತ್ತವೆ. ಅವರಿಬ್ಬರ ಮಧ್ಯೆ ನಡೆಯುವ ವಿಚಾರ ವಿನಿಮಯಗಳನ್ನು ಒಬ್ಬ ವೃತ್ತಿಪರ ವಕೀಲ ರಕ್ಷಿಸದಿದ್ದಲ್ಲಿ ಯಾವ ಕಕ್ಷಿದಾರನೂ ವಕೀಲರನ್ನು ಸಂಪರ್ಕಿಸುವುದಿಲ್ಲ.

ಅವರ ನಡುವೆ ನಡೆಯುವ ಚಿಂತನೆ ಬಹಿರಂಗಗೊಂಡರೆ ಯಾವುದೇ ಕಕ್ಷಿದಾರ ಸುರಕ್ಷಿತವಾಗಿ  ನ್ಯಾಯಾಲಯಕ್ಕೆ  ಬರಲು  ಸಾಧ್ಯವಿಲ್ಲ. ವಕೀಲನಿಂದ ಪರಿಹಾರ ಪಡೆಯಲು  ಮತ್ತು  ತಾನು ಬಿಟ್ಟುಕೊಟ್ಟಿರುವ ರಹಸ್ಯಗಳನ್ನು ಉಳಿಸಿಕೊಳ್ಳಲು ಕಾನೂನಿನ ರಕ್ಷಣೆಯನ್ನು ಒಂದು ಹಕ್ಕಾಗಿ ಈ ನಿಯಮಗಳು ಕಕ್ಷಿದಾರನಿಗೆ  ಒದಗಿಸುತ್ತವೆ. ಒಬ್ಬ ಪಾದ್ರಿಯ ಅಥವಾ ಮಠಾಧೀಶರ ಮುಂದೆ ಭಕ್ತನು ಮಾಡಿಕೊಳ್ಳುವ ಪಾಪನಿವೇದನೆಗೆ ಇಂತಹ ಕಾನೂನಿನಲ್ಲಿ ಮನ್ನಣೆ ಇರುವುದಿಲ್ಲ.

ಕೊಲೆಗಾರನೊಬ್ಬ ಅಂಥವರ ಮುಂದೆ ತನ್ನ ಅಕೃತ್ಯವನ್ನು ನಿವೇದಿಸಿಕೊಂಡಿರುವುದು ಪೊಲೀಸ್  ತನಿಖಾಧಿಕಾರಿಯ ಗಮನಕ್ಕೆ ಬಂದರೆ ಆ ಪಾದ್ರಿ ಅಥವಾ ಮಠಾಧೀಶನನ್ನು ಸಾಕ್ಷಿದಾರನನ್ನಾಗಿ ಮಾಡಿಕೊಳ್ಳಬಹುದು. ಅವರು ತಮ್ಮ ಭಕ್ತರು ತಿಳಿಸಿದ ಅಪರಾಧಿಕ ವಿಚಾರಗಳನ್ನು ತನಿಖಾಧಿಕಾರಿಗೆ ತಿಳಿಸಬೇಕಾಗುತ್ತದೆ. ಆದರೆ ಇದು ವಕೀಲ ಮತ್ತು ಆರೋಪಿಗೆ ಅನ್ವಯಿಸುವುದಿಲ್ಲ. ಕಾನೂನು ಬಾಹಿರ ಉದ್ದೇಶವನ್ನು ಮುಂದುವರೆಸುವ ಕಾರಣಕ್ಕಾಗಿ ಮಾಡುವ ಸಂವಹನ ಮಾತ್ರ ಈ ಕಲಮಿಗೆ ಒಂದು ಅಪವಾದವಾಗಬಹುದು’ ಎಂದೆ.

‘ಈ ಪ್ರಕರಣದಲ್ಲಿ ನೀಲವೇಣಿ, ವಕೀಲ ಬಾಲಕೃಷ್ಣ ಅವರಿಗೆ ತಾನು ಕೊಲೆ ಮಾಡಿರುವುದಾಗಿಯೂ, ಅದಕ್ಕೆ ಇರಬಹುದಾದ ಕಾರಣಗಳನ್ನು ಮತ್ತು ಉಪಯೋಗಿಸಿದ ಆಯುಧವನ್ನು ಇಟ್ಟಿರುವ ಜಾಗ ಮುಂತಾದ ವಿಷಯಗಳನ್ನು ತಿಳಿಸಿದ್ದಿರಬಹುದು. ಅವುಗಳನ್ನು ವಕೀಲ ಬಾಲಕೃಷ್ಣನ್ ನ್ಯಾಯಾಲಯದ ಮುಂದೆ ಸಾಕ್ಷ್ಯರೂಪದಲ್ಲಿ ತಿಳಿಸಲು ಬರುವುದಿಲ್ಲ.

ಕೊಲೆಯಾದ  ನಂತರ ನೀಲವೇಣಿ ತನ್ನ ವಕೀಲರಿಗೆ ಈ ವಿಚಾರಗಳನ್ನು ತಿಳಿಸಿದ್ದು, ಕೊಲೆಯಾಗುವ ಮುಂಚೆ ಕೊಲೆಯನ್ನು ಏಕೆ ಮಾಡಬೇಕು, ಹೇಗೆ ಮಾಡಬೇಕು ಎಂದು ಸಲಹೆ ಪಡೆದುಕೊಂಡವಳಲ್ಲ. ಹೀಗಾಗಿ ಬಾಲಕೃಷ್ಣನ್ ಮತ್ತು ನೀಲವೇಣಿ ನ್ಯಾಯಬದ್ಧ ವಿಚಾರಗಳನ್ನು ಪರ್ಯಾಲೋಚಿಸಿಕೊಂಡವರಾಗಿ ಕಂಡುಬರುವುದರಿಂದ ಈ ಕಲಮು ಹಾಗೂ ನಿಯಮಗಳ ರಕ್ಷಣೆ ಬಾಲಕೃಷ್ಣ ಅವರಿಗೆ  ದೊರಕಲೇಬೇಕಾಗುತ್ತದೆ’ ಎಂದು ತಿಳಿಸಿದೆ.

ಸರ್ಕಾರದ ಪರವಾಗಿ ಪ್ರತಿವಾದ ಮಂಡಿಸಲು ನಿಂತ ರಾಮಚಂದ್ರರಾವ್‌  ಅವರು ಏನು ಹೇಳಬಹುದೆಂಬ ಕುತೂಹಲ ನನ್ನನ್ನು ಕಾಡುತ್ತಿತ್ತು. ಅವರು ಎದ್ದುನಿಂತವರೇ, ‘ಸ್ವಾಮಿ, ಈ ವಿಷಯಕ್ಕೆ ಸಂಬಂಧಪಟ್ಟಂತೆ ಹನುಮಂತರಾಯ ಅವರು ಉಲ್ಲೇಖಿಸಿರುವ ಅಂಶಗಳನ್ನು ನಾನು ಆಸಕ್ತಿಯಿಂದ ಅಧ್ಯಯನ ಮಾಡಿದ್ದೇನೆ. ಅವರ ವಾದಕ್ಕೆ ವಿರುದ್ಧವಾಗಿ ಏನನ್ನೂ ಹೇಳುವುದು ಸರಿಯಲ್ಲ. ಮಿಥ್ಯವಾಗಿ ವಾದ ಮಾಡಿ ಅಭಿಯೋಜನೆಯ ಘನತೆಗೆ ಕುಂದು ತರಲಾರೆ. ಅವರ ವಾದವು ಕಾನೂನುಬದ್ಧವಾಗಿದೆಯೆಂದು ಒಪ್ಪುತ್ತೇನೆ’ ಎಂದು ಘನತೆಯಿಂದ ಹೇಳಿ ಕುಳಿತರು.

ಅವರ ನಿಷ್ಪಕ್ಷಪಾತ ಮತ್ತು ವಸ್ತುನಿಷ್ಠ ಧೋರಣೆ ನನಗೆ ಕಾನೂನಿಗಿಂತ ದೊಡ್ಡದಾಗಿ ಕಂಡಿತು. ನ್ಯಾಯಾಧೀಶರು ಅವರ ನಿಲುವನ್ನು ಪ್ರಶಂಸಿಸಿದರು ಮತ್ತು ಬಾಲಕೃಷ್ಣನ್ ಅವರು ಪ್ರಾಸಿಕ್ಯೂಷನ್ ಪರವಾಗಿ ಸಾಕ್ಷ್ಯ ಕೊಡಲು ಸಾಧ್ಯವಿಲ್ಲವೆಂದು ನಿರ್ಣಯಿಸಿದರು. ಅಲ್ಲಿಗೆ ನನ್ನ ಕೆಲಸ ಮುಗಿಯಿತು.

ಆರೋಪಿಯ ಪರವಾಗಿ ಮುಂದಿನ ವಿಚಾರಣೆಯಲ್ಲಿ ಬಾಲಕೃಷ್ಣನ್ ಹಾಜರಾಗುವಂತೆ ಒಪ್ಪಿಸಿ ನಾನು  ಅಲ್ಲಿಂದ ಹೊರನಡೆದೆ. ನೀಲವೇಣಿಯು ಕೊಲೆ ಆರೋಪದಿಂದ ಮುಕ್ತಗೊಂಡ ದಿನ ಆಕೆ ಮತ್ತು ಬಾಲಕೃಷ್ಣನ್ ನನಗೆ ವಂದನೆಗಳನ್ನು ತಿಳಿಸಲು ಬಂದರು.

ಕುನ್ನಪ್ಪನ ಸಾವು, ದಯಾಕರನೊಂದಿಗೆ ನೀಲವೇಣಿಯ ಮದುವೆ,  ಮಗಳ ಅಕಾಲಿಕ ಮರಣ, ಆಕಸ್ಮಿಕವಾಗಿ ಆದ ಗಂಡನ ಕೊಲೆ, ಇದರ ಜೊತೆಗೆ ಕೋರ್ಟ್‌ ಕೇಸು... ಇವುಗಳನ್ನೆಲ್ಲಾ ಮೆಲುಕು ಹಾಕುತ್ತಾ ನೋವುಗಳಿಂದ ಬೆಂದು ಹೋಗಿದ್ದ ಆ ಹೆಣ್ಣುಮಗಳ ಬದುಕಿಗೆ ಮರುಜೀವ ತಂದುಕೊಟ್ಟಿದ್ದೇ ಈ ವಕೀಲಿ ವೃತ್ತಿ... ಎಂಬ ಧನ್ಯತೆ ನಮ್ಮಿಬ್ಬರನ್ನು ಅಪ್ಪಿಕೊಂಡಿತ್ತು.
(ಹೆಸರುಗಳನ್ನು ಬದಲಾಯಿಸಲಾಗಿದೆ)
ಲೇಖಕ ಹೈಕೋರ್ಟ್‌ ವಕೀಲ

*

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT