ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗಾಯತ: ಸಮಾಜ ಒಡೆಯುವ ಪದವಿದು!

ಸ್ವತಂತ್ರ ಧರ್ಮ
Last Updated 22 ಜುಲೈ 2017, 19:45 IST
ಅಕ್ಷರ ಗಾತ್ರ

* ಲಿಂಗಾಯತ ಸ್ವತಂತ್ರ ಧರ್ಮ ಎಂಬ ನಿಲುವಿಗೆ ನಿಮ್ಮ ಬೆಂಬಲವಿದೆಯೇ?
‘ಲಿಂಗಾಯತ’ ಹೆಸರಿನಲ್ಲಿ ಸ್ವತಂತ್ರ  ಧರ್ಮ ಮನ್ನಣೆ ಪ್ರಸ್ತಾವಕ್ಕೆ ನಾವು ಬೆಂಬಲ ನೀಡುವುದಿಲ್ಲ.
ವಾಸ್ತವವಾಗಿ ಲಿಂಗಾಯತ ಪದ ಧರ್ಮವಾಚಕ ಪರಿಭಾಷೆಯೇ ಅಲ್ಲ. ಅದೊಂದು ದೀಕ್ಷಾ ಸಂಸ್ಕಾರ. ಲಿಂಗ ಧರಿಸಿ ಅದಕ್ಕೆ ಅಧೀನವಾಗಿ ಬದುಕುವವನೇ ವೀರಶೈವ. ಅಷ್ಟಾವರಣಗಳಿಂದ ಕೂಡಿದ ಶಿವಭಕ್ತನಿಗೆ ಅದು ರಕ್ಷಾ ಕವಚವಿದ್ದಂತೆ (Antivirus). ಹಾಗಾಗಿ ಅದೇ ಪದ ಬಳಕೆ ಸೂಕ್ತ. ಆದರೆ, ನಮ್ಮದು ಸಮಗ್ರ ದೃಷ್ಟಿ. ವೀರಶೈವ–ಲಿಂಗಾಯತ ಎರಡೂ ಪದ ಬಳಸಿ ಪ್ರಸ್ತಾವ ಸಲ್ಲಿಸಿದರೆ ಬೆಂಬಲ ನೀಡುತ್ತೇವೆ.

* ವೀರಶೈವ ಪದ ಬಳಕೆ ಮಾಡಿದಲ್ಲಿ ಸ್ವತಂತ್ರ ಧರ್ಮದ ಮನ್ನಣೆ  ಸಿಗುವುದೇ?
ಅದೆಲ್ಲಾ ಕಾಲ್ಪನಿಕ. ಒಪ್ಪಲು ಆಗುವುದಿಲ್ಲ. ಬಸವಣ್ಣ ತಾವೇ ಗುರು, ಧರ್ಮ ಸ್ಥಾಪಕ ಎಂದು ಎಲ್ಲಿಯೂ ಹೇಳಿಕೊಂಡಿಲ್ಲ. ಲಿಂಗಾಯತ ಪದವನ್ನೂ ಉಲ್ಲೇಖ ಮಾಡಿಲ್ಲ. ಅವರ ವಚನಗಳಲ್ಲೂ ಕಾಣಸಿಗುವುದಿಲ್ಲ. ಬಸವಣ್ಣ ಹೇಳಲಾರದ್ದನ್ನು ಅವನ ಹೆಸರು ಹೇಳಿಕೊಂಡು ಕೆಲವರು ಹೇಳುತ್ತಾರೆ. ಅವರ ಮಾತು ಯಾಕೆ ನಂಬಬೇಕು? ವೀರಶೈವ ಸನಾತನ ಧರ್ಮ. ಸ್ಕಂದ ಪುರಾಣದ ಶಂಕರ ಸಂಹಿತೆಯಲ್ಲಿನ ವ್ಯಾಖ್ಯಾನದಲ್ಲಿ ವೀರಶೈವ ಧರ್ಮದ ಉಲ್ಲೇಖವಿದೆ. ಪಂಚಾಚಾರ್ಯರು ಅದರ ಸಂಸ್ಥಾಪಕರು. ಬಸವಣ್ಣ ಅದರ ಮುಂಚೂಣಿ ಪ್ರಚಾರಕರು. ನಾನು ಶೈವನಿದ್ದೆ. ವೀರಶೈವನಾದೆ ಎಂದು ಸ್ವತಃ ಬಸವಣ್ಣನೇ ಹೇಳಿಕೊಂಡಿದ್ದಾರೆ.

6ನೇ ಶತಮಾನದಲ್ಲಿಯೇ ಕಾಶಿಯಲ್ಲಿ ವೀರಶೈವ ಪೀಠ ಇತ್ತು. ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು 1942ರಲ್ಲಿ ಅಲಹಾಬಾದ್ ಹೈಕೋರ್ಟ್ ದೃಢೀಕರಿಸಿದೆ. ಬಸವಣ್ಣ ಪ್ರತಿಪಾದಿಸಿದ  ವಿಚಾರಗಳು ಆಗಮಗಳಲ್ಲಿ ಮೊದಲೇ ಇತ್ತು. 

24 ಸಾವಿರ ವಚನಗಳಿದ್ದರೂ ಅವೆಲ್ಲಾ ಬಿಡಿ ಸಂಗ್ರಹ. ಆಯಾ ಸಂದರ್ಭಕ್ಕೆ ಒಂದೊಂದು ವಿಷಯದ ಬಗ್ಗೆ ಮಾತ್ರ ಹೇಳುತ್ತವೆ. ಸಮಗ್ರತೆ ಇಲ್ಲ.
ಧರ್ಮದ ಲಕ್ಷಣ, ಆಚಾರ, ವಿಚಾರ, ನಡೆ–ನುಡಿ, ನೀತಿ, ವ್ಯವಹಾರವನ್ನು ಹೇಳುವುದೇ ಧಾರ್ಮಿಕ ಗ್ರಂಥ. ವೇದ, ಆಗಮ, ಶಾಸ್ತ್ರಗಳ ಮೂಲವಾಗಿರುವ ಸಿದ್ಧಾಂತ ಶಿಖಾಮಣಿಯಲ್ಲಿ ಈ ಎಲ್ಲಾ ವಿಚಾರಗಳ ಉಲ್ಲೇಖವಿದೆ. ಅದು ವೀರಶೈವ ಧರ್ಮದ ಗ್ರಂಥ.

* ಸಿದ್ಧಾಂತ ಶಿಖಾಮಣಿ ಅದೊಂದು ಸಮನ್ವಯ ಗ್ರಂಥ ಎನ್ನಲಾಗುತ್ತಿದೆ. ಸಂಶೋಧಕ ಡಾ.ಎಂ.ಚಿದಾನಂದ ಮೂರ್ತಿ ಕೂಡ ಅದನ್ನು ಪುರಾತನ ಗ್ರಂಥ ಎಂದು ಈಗ ಒಪ್ಪಿಕೊಳ್ಳುವುದಿಲ್ಲ ...
ಸಿದ್ಧಾಂತ ಶಿಖಾಮಣಿ 8ನೇ ಶತಮಾನದ ಗ್ರಂಥ. ಕ್ರಿ.ಶ.1050ರಲ್ಲಿ ಶ್ರೀಪತಿ ಪಂಡಿತಾರಾಧ್ಯರು ಶ್ರೀಕರ ಭಾಷ್ಯ ಬರೆದರು. ಬ್ರಹ್ಮಸೂತ್ರದ ಮೇಲೆ  ಬರೆದ ವೀರಶೈವ ಭಾಷ್ಯದಲ್ಲಿ ಸಿದ್ಧಾಂತ ಶಿಖಾಮಣಿಯ ಬಗ್ಗೆ ಉಲ್ಲೇಖಿಸಿದ್ದಾರೆ. ಉತ್ತರಭಾರತದ ಅನೇಕ ಸಂಶೋಧಕರು ಇದನ್ನು ಒಪ್ಪಿಕೊಂಡಿದ್ದಾರೆ.

ಕಾಶಿಯ ಬಲದೇವ ಉಪಾಧ್ಯ ತಮ್ಮ ಭಾರತೀಯ ದಾರ್ಶನಿಕ ಇತಿಹಾಸ ಕೃತಿಯಲ್ಲಿ 11ನೇ ಶತಮಾನಕ್ಕೂ ಮುನ್ನವೇ ಸಿದ್ಧಾಂತ ಶಿಖಾಮಣಿ ಒಂದು ಪ್ರಾಮಾಣಿಕ (Refrence) ಗ್ರಂಥವಾಗಿ ಪ್ರಸಿದ್ಧವಾಗಿದ್ದನ್ನು ಪ್ರಸ್ತಾಪಿಸಿದ್ದಾರೆ. ಅದು ಸಂಸ್ಕೃತದಲ್ಲಿರುವ ಗ್ರಂಥ. ಚಿದಾನಂದಮೂರ್ತಿ ಕನ್ನಡದ ಸಂಶೋಧಕರು. ಸಂಸ್ಕೃತದಲ್ಲಿ ಅಭ್ಯಸಿಸಿದವರೇ ಆ ಬಗ್ಗೆ ಹೇಳಬೇಕು.

*  ವೀರಶೈವರು ಮೂಲತಃ ಆಂಧ್ರಪ್ರದೇಶದಿಂದ ಬಂದ ಆರಾಧ್ಯರು. ಲಿಂಗಿ ಬ್ರಾಹ್ಮಣರಾದ ಅವರು ಬಸವಣ್ಣನನ್ನು ಒಪ್ಪುವುದಿಲ್ಲ ಎಂದು ಹೇಳಲಾಗುತ್ತದೆ?
ಮಹಾಭಾರತದಲ್ಲಿ ಜಂಗಮರಿಗೆ ಲಿಂಗಿ ಬ್ರಾಹ್ಮಣರು ಎಂಬ ಪದ ಬಳಕೆ ಮಾಡಲಾಗಿದೆ. ಜಗತ್ತಿಗೆ ಸರ್ವೋತ್ಕೃಷ್ಟವಾದುದನ್ನು ಹೇಳುವ ಜ್ಞಾನಿ ವಾಚಕವೇ ಬ್ರಾಹ್ಮಣ. ಹಾಗಾಗಿ ಜಂಗಮ ಮತ್ತು ಬ್ರಾಹ್ಮಣ ಎರಡೂ ಒಂದೇ ಅರ್ಥ ಹೊಂದಿವೆ. ಬಸವಣ್ಣ ವೀರಶೈವ ಧರ್ಮದ ಉದ್ಧಾರಕ ಎಂಬುದನ್ನು ಒಪ್ಪಿಕೊಳ್ಳುತ್ತೇವೆ. ಪಂಚಪೀಠಗಳನ್ನು ವಿರೋಧ ಮಾಡುವ ಸಲುವಾಗಿಯೇ ಒಂದು ಗುಂಪು ಹುಟ್ಟಿಕೊಂಡಿದೆ. ಅವರು ಈ ರೀತಿ ಸುಳ್ಳು ಹೇಳುತ್ತಾರೆ.

* ಇದು ಗುರು–ವಿರಕ್ತರ ನಡುವಿನ ಸಂಘರ್ಷದ ಮುಂದುವರಿದ ಭಾಗವೇ? ನೀವು ವಿರಕ್ತರೊಂದಿಗೆ ಸಮಾನ ಆಸನದಲ್ಲಿ ಕೂರುವುದಿಲ್ಲ. ಅದು ಬಸವಣ್ಣನ ಸಮಾನತೆ ತತ್ವಕ್ಕೆ ವಿರುದ್ಧವಲ್ಲವೇ?
ಹಾನಗಲ್ ಕುಮಾರಸ್ವಾಮಿ ವಿರಕ್ತರು. ಅವರೂ ವೀರಶೈವ ಪದವನ್ನು ಒಪ್ಪಿಕೊಂಡು ಅಖಿಲ ಭಾರತ ವೀರಶೈವ ಮಹಾಸಭಾ ಸ್ಥಾಪಿಸಿದ್ದಾರೆ. 1904ರಲ್ಲಿ ಧಾರವಾಡದಲ್ಲಿ ನಡೆದ ಮಹಾಸಭಾದ ಮೊದಲ ಸಭೆಯ ಠರಾವಿನಲ್ಲಿ ವೀರಶೈವ ಧರ್ಮ ಎಂದೇ ಉಲ್ಲೇಖಿಸಲಾಗಿದೆ. ಇದರಲ್ಲಿ ಸಂಘರ್ಷದ ಪ್ರಶ್ನೆಯೇ ಇಲ್ಲ. ಸಮಾನ ಆಸನದಲ್ಲಿ ಕೂರುವ ವಿಚಾರದಲ್ಲಿ ಈಗ ಪರಿವರ್ತನೆ ಆಗಿದೆ. 2004ರಲ್ಲಿ ಕೂಡಲಸಂಗಮ, ನಂತರ ಸುತ್ತೂರು ಮಠದಲ್ಲಿ ನಡೆದ ವೀರಶೈವ ಮಹಾಸಭಾದ ಅಧಿವೇಶನದಲ್ಲಿ ನಾವೂ ಪಾಲ್ಗೊಂಡು ವಿರಕ್ತರೊಂದಿಗೆ ಸಮಾನವಾಗಿ ವೇದಿಕೆ ಹಂಚಿಕೊಂಡಿದ್ದೇವೆ.

* ಲಿಂಗಾಯತ ಪದ ಬಳಕೆ ವಿಚಾರದಲ್ಲಿ ಬಹಿರಂಗ ಚರ್ಚೆಗೆ ಬರುವಂತೆ ಮಾತೆ ಮಹಾದೇವಿ ಸವಾಲು ಹಾಕಿದ್ದಾರೆ. ಅದನ್ನು ಸ್ವೀಕರಿಸುವಿರಾ?
ಅಖಿಲ ಭಾರತ ವೀರಶೈವ ಮಹಾಸಭಾದ ವೇದಿಕೆಯಲ್ಲಿ ಈ ಬಗ್ಗೆ ಚರ್ಚೆಗೆ ಆಹ್ವಾನಿಸಿದರೆ ನಮ್ಮ ಪ್ರತಿನಿಧಿಗಳನ್ನು ಕಳುಹಿಸುತ್ತೇವೆ. ನಾವೇ ಹೋಗುವ ಅನಿವಾರ್ಯತೆ ಬಂದರೆ ಆಗ ನೋಡೋಣ.

* ವೈಯಕ್ತಿಕವಾಗಿ ಲಿಂಗಾಯತ ಧರ್ಮ ಎಂಬುದೇ ಸೂಕ್ತ ಎಂದು ಮುಖ್ಯಮಂತ್ರಿ ಧಾರವಾಡದಲ್ಲಿ ಹೇಳಿದ್ದಾರಲ್ಲಾ?
ಸಿದ್ದರಾಮಯ್ಯ ಕೇವಲ ಒಂದು ಗುಂಪಿನ ಅಭಿಪ್ರಾಯ ಮಾತ್ರ ಕೇಳುವುದು ಬೇಡ.  ಸಮಾಜದ ಅಧಿಕೃತ ಸಂಸ್ಥೆಯಾದ ಅಖಿಲ ಭಾರತ ವೀರಶೈವ ಮಹಾಸಭಾದ ಅಭಿಪ್ರಾಯ ತಿರಸ್ಕರಿಸಿ ಮುಂದುವರೆದರೆ ಅವರೇ ಸಮಾಜ ಒಡೆದಂತಾಗುತ್ತದೆ. ಇದರ ಬದಲು ಒಗ್ಗೂಡಿಸುವ ಕೆಲಸ ಮಾಡಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT