ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಎಫ್‌ಡಿಸಿ ಲಾಭ ₹2.26 ಕೋಟಿ

Last Updated 22 ಜುಲೈ 2017, 19:30 IST
ಅಕ್ಷರ ಗಾತ್ರ

ಮಂಗಳೂರು: ಹಲವು ವರ್ಷಗಳಿಂದ ನಷ್ಟದ ಸುಳಿಗೆ ಸಿಲುಕಿದ್ದ ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮ (ಕೆಎಫ್‌ಡಿಸಿ) ತನ್ನ ಸಂಚಿತ ನಷ್ಟದ ಹೊರೆಯನ್ನು ಸಂಪೂರ್ಣವಾಗಿ ತೀರಿಸಿ, 2016–17ನೇ ವರ್ಷದಲ್ಲಿ ₹2.26 ಕೋಟಿ ನಿವ್ವಳ ಲಾಭ ದಾಖಲಿಸಿದೆ.

ಪಾಲು ಬಂಡವಾಳ ಒದಗಿಸಿರುವ ರಾಜ್ಯ ಸರ್ಕಾರಕ್ಕೆ ₹ 17 ಲಕ್ಷ ಲಾಭಾಂಶ ಪಾವತಿಸಲು ನಿಗಮ ಸಿದ್ಧವಾಗಿದೆ.

ಕೇಂದ್ರ ಕಚೇರಿಯಲ್ಲಿ ಶನಿವಾರ ನಡೆದ ಆಡಳಿತ ಮಂಡಳಿ ಸಭೆ ಬಳಿಕ ಸುದ್ದಿಕಾಗೋಷ್ಠಿಯಲ್ಲಿ ಮಾತನಾಡಿದ ಕೆಎಫ್‌ಡಿಸಿ ಅಧ್ಯಕ್ಷ ರಾಜೇಂದ್ರ ನಾಯಕ್‌, ‘2006–07ರಲ್ಲಿ ನಿಗಮದ ಸಂಚಿತ ನಷ್ಟದ ಮೊತ್ತ ₹ 9.45 ಕೋಟಿ ತಲುಪಿತ್ತು. 2007–08ರಲ್ಲಿ ನಿಗಮ ₹ 42 ಲಕ್ಷ ನಿವ್ವಳ ಲಾಭ ದಾಖಲಿಸಿತ್ತು. ಆದರೆ, ಸಂಚಿತ ನಷ್ಟದ ಕಾರಣದಿಂದ ಸಂಸ್ಥೆ ಆರ್ಥಿಕ ಸಂಕಷ್ಟದಿಂದ ಹೊರಬಂದಿರಲಿಲ್ಲ. ಕಳೆದ ವರ್ಷ ₹ 4.36 ಕೋಟಿ ನಿವ್ವಳ ಲಾಭ ದಾಖಲಿಸಿದೆ. ಸಂಚಿತ ನಷ್ಟದಲ್ಲಿನ ಬಾಕಿ ಮೊತ್ತ ಭರಿಸಿದ ಬಳಿಕ ₹ 2.26 ಕೋಟಿ ಉಳಿದಿದೆ’ ಎಂದರು.

1970ರಲ್ಲಿ ಸ್ಥಾಪನೆಯಾದ ನಿಗಮವು 2003–04ರವರೆಗೆ ನಿರಂತರವಾಗಿ ನಷ್ಟದಲ್ಲಿತ್ತು. 2006–07ರಲ್ಲಿ ವಿವಿಧ ಬಾಬ್ತುಗಳಿಗಾಗಿ ₹ 4.12 ಕೋಟಿ ಅಗತ್ಯವಿತ್ತು. ಆಗ ನಿಗಮವನ್ನು ರೋಗಗ್ರಸ್ತ ಸಂಸ್ಥೆ ಎಂದು ಘೋಷಿಸಿ ಮುಚ್ಚುವ ಪ್ರಸ್ತಾವವಿತ್ತು. ಮೀನುಗಾರರ ಬೇಡಿಕೆಯಂತೆ ಸಂಸ್ಥೆಯನ್ನು ರಕ್ಷಿಸಲು ಮುಂದಾದ ರಾಜ್ಯ ಸರ್ಕಾರ ₹ 4.12 ಕೋಟಿಯನ್ನು ಪಾಲು ಬಂಡವಾಳದ ರೂಪದಲ್ಲಿ ಒದಗಿಸಿತ್ತು. 2016–17ರಲ್ಲಿ ಮೀನು, ಮಂಜುಗಡ್ಡೆ ಮತ್ತು ಡೀಸೆಲ್‌ ಮಾರಾಟದ ವಹಿವಾಟು ₹ 200 ಕೋಟಿಯನ್ನು ದಾಟಿದೆ ಎಂದು ವಿವರ ನೀಡಿದರು.

ಸಂಸ್ಥೆ ನಷ್ಟದಲ್ಲಿದ್ದ ಕಾರಣದಿಂದ ಸ್ವಯಂ ನಿವೃತ್ತಿ ಪಡೆದಿದ್ದ ನೌಕರರಿಗೆ ಕೊಡಬೇಕಿದ್ದ ₹ 1.75 ಕೋಟಿ ಬಾಕಿ ಪಾವತಿ, ನಿಗಮದಲ್ಲಿನ 160 ಹೊರಗುತ್ತಿಗೆ ನೌಕರರಿಗೆ ಕನಿಷ್ಠ ವೇತನ ಪಾವತಿ, ಕಾಯಂ ನೌಕರರಿಗೆ ಕಾಲಮಿತಿ ಮುಂಬಡ್ತಿ ವೇತನ ಮಂಜೂರಾತಿ, ನಿಗಮದಲ್ಲಿ ವ್ಯವಹಾರ ನಡೆಸುತ್ತಿದ್ದ ದೋಣಿ ಮಾಲೀಕರು ಮತ್ತು ವ್ಯಾಪಾರಿಗಳು ಹೊಂದಿರುವ ₹ 50 ಲಕ್ಷ ಸಾಲದ ಮೊತ್ತವನ್ನು ಮನ್ನಾ ಮಾಡಲು ಆಡಳಿತ ಮಂಡಳಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT