ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಲಮಟ್ಟಿಗೆ 1.40 ಲಕ್ಷ ಕ್ಯುಸೆಕ್‌ ನೀರು; ಹಾರಂಗಿಯಿಂದ ಯಾವುದೇ ಕ್ಷಣದಲ್ಲಿ ನೀರು ಬಿಡುಗಡೆ

Last Updated 22 ಜುಲೈ 2017, 20:15 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಕರಾವಳಿ ಮತ್ತು ಮಲೆನಾಡಿನಲ್ಲಿ ಶನಿವಾರ ಮಳೆಯ ಪ್ರಮಾಣ ಕಡಿಮೆಯಾಗಿದೆ. ಆದರೆ ಆಲಮಟ್ಟಿ ಜಲಾಶಯದ ಒಳಹರಿವು  1.40 ಲಕ್ಷ ಕ್ಯುಸೆಕ್‌ಗೆ ಏರಿಕೆಯಾಗಿದೆ.

ಮುಳುಗಡೆ ಸ್ಥಿತಿಯಲ್ಲಿ ಏಳು ಸೇತುವೆಗಳು: ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್‌ನಿಂದ 1.14 ಲಕ್ಷ ಕ್ಯುಸೆಕ್‌, ದೂಧ್‌ಗಂಗಾ ನದಿಯಿಂದ 26,000 ಕ್ಯುಸೆಕ್‌ ನೀರು ಕೃಷ್ಣಾ ನದಿ ಸೇರುತ್ತಿದೆ. ಚಿಕ್ಕೋಡಿ ತಾಲ್ಲೂಕಿನ ಆರು ಸೇತುವೆಗಳು ಹಾಗೂ ಗೋಕಾಕ ತಾಲ್ಲೂಕಿನ ಸಿಂಗಳಾಪುರ ಸೇತುವೆ ಮುಳುಗಿದ ಸ್ಥಿತಿಯಲ್ಲಿಯೇ ಇವೆ. ರಾಯಬಾಗ ತಾಲ್ಲೂಕಿನ ಕುಡುಚಿ ಸೇತುವೆ ಮುಳುಗಡೆಗೆ ಕೇವಲ ಒಂದು ಅಡಿ ಬಾಕಿ ಇದೆ.

ಆಲಮಟ್ಟಿ ಜಲಾಶಯಕ್ಕೆ ಒಂದೇ ದಿನ  6.5 ಟಿಎಂಸಿ ಅಡಿಯಷ್ಟು ನೀರು ಬಂದಿದೆ ಎಂದು ಕೆಬಿಜೆಎನ್‌ಎಲ್‌ ಮೂಲಗಳು ತಿಳಿಸಿವೆ.

ನಾಲ್ಕು ಟಿಎಂಸಿ ಅಡಿ ನೀರು: ಹೊಸಪೇಟೆಯ ತುಂಗಭದ್ರಾ ಜಲಾಶಯದ ಒಳಹರಿವಿನಲ್ಲಿ ಭಾರಿ ಹೆಚ್ಚಳವಾಗಿದ್ದು, ಶನಿವಾರ ಒಂದೇ ದಿನ
ನಾಲ್ಕು ಟಿಎಂಸಿ ಅಡಿಯಷ್ಟು ನೀರು ಬಂದಿದೆ.

ಶನಿವಾರ ಒಳಹರಿವು 44,649 ಕ್ಯುಸೆಕ್‌  ಇತ್ತು. ಕಳೆದ ಮೂರು ದಿನಗಳಲ್ಲಿ ಜಲಾಶಯಕ್ಕೆ ಏಳು ಟಿ.ಎಂ.ಸಿ. ಅಡಿಗಿಂತಲೂ ಹೆಚ್ಚು ನೀರು ಹರಿದು ಬಂದಿದೆ.  ಒಳಹರಿವು ಇನ್ನೂ ಕೆಲವು ದಿನ ಹೀಗೆಯೇ ಇರಲಿದೆ ಎಂದು  ಅಧಿಕಾರಿಗಳು ತಿಳಿಸಿದ್ದಾರೆ.

ಸೂಪಾ ಜಲಾಶಯದ ಒಳಹರಿವಿನ ಪ್ರಮಾಣ ಕಡಿಮೆಯಾಗಿದೆ. ಶುಕ್ರವಾರ 35167 ಕ್ಯುಸೆಕ್‌ ಇದ್ದ ಹರಿವಿನ ಪ್ರಮಾಣವು ಶನಿವಾರ 30,764 ಕ್ಯುಸೆಕ್‌ಗೆ ಇಳಿದಿದೆ.

ಮಲಪ್ರಭಾ ಹಾಗೂ ಘಟಪ್ರಭಾ ನದಿಗಳ ನೀರಿನ ಒಳಹರಿವಿನಲ್ಲಿ ಶನಿವಾರ ಹೆಚ್ಚಳವಾಗಿದೆ. ಮಲಪ್ರಭಾ ಒಳಹರಿವಿನ ಪ್ರಮಾಣವು ಶನಿವಾರ 20,113ಕ್ಕೆ (1.726 ಟಿಎಂಸಿ ಅಡಿ) ಹೆಚ್ಚಾಗಿದೆ. ಘಟಪ್ರಭಾ ನದಿಯ ಒಳಹರಿವು 28, 575ಕ್ಕೆ (2.542 ಟಿಎಂಸಿ ಅಡಿ)  ಹೆಚ್ಚಿದೆ.

ತಗ್ಗಿದ ಮಳೆ: ಶಿವಮೊಗ್ಗ ಜಿಲ್ಲೆಯಾದ್ಯಂತ ಶನಿವಾರ ಮಳೆ ಇಳಿಮುಖವಾಗಿದ್ದು, ಜಲಾಶಯಗಳ ಒಳಹರಿವಿನಲ್ಲಿ ಕುಸಿತ ಉಂಟಾಗಿದೆ.

ಲಿಂಗನಮಕ್ಕಿ ಜಲಾಶಯದ ಒಳಹರಿವು 24,021 ಕ್ಯುಸೆಕ್‌ಗೆ ಇಳಿಕೆಯಾಗಿದೆ. ಹೊರಹರಿವನ್ನು ಸ್ಥಗಿತಗೊಳಿಸಲಾಗಿದೆ. ಭದ್ರಾ ಜಲಾಶಯದ ಒಳಹರಿವು 10,609 ಕ್ಯುಸೆಕ್‌ಗೆ ಕುಸಿದಿದೆ.

ತೀರ್ಥಹಳ್ಳಿ ತಾಲ್ಲೂಕಿನ ತ್ರಿಯಂಬಕಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ನಿರ್ಮಾಣ ಹಂತದಲ್ಲಿರುವ ರಸ್ತೆ ಕುಸಿದಿದೆ ಎಂದು ತಾಲ್ಲೂಕು ಕಚೇರಿ ಸಿಬ್ಬಂದಿ ತಿಳಿಸಿದ್ದಾರೆ.

ಹಾರಂಗಿ ಬಹುತೇಕ ಭರ್ತಿ

ಕಾವೇರಿ ಕಣಿವೆಯ ಹಾರಂಗಿ ಜಲಾಶಯ ಬಹುತೇಕ ಭರ್ತಿ ಯಾಗಿದ್ದು, ಯಾವುದೇ ಕ್ಷಣದಲ್ಲಿ ನದಿಗೆ ನೀರು ಬಿಡುವ ಸಾಧ್ಯತೆಯಿದೆ.

ಗರಿಷ್ಠ 2,859 ಅಡಿ ಸಾರ್ಮರ್ಥ್ಯದ ಜಲಾಶಯದಲ್ಲಿ ಶನಿವಾರ ಸಂಜೆ ವೇಳೆಗೆ 2,855.85 ಅಡಿ ನೀರಿನ ಸಂಗ್ರಹವಿತ್ತು. ಒಳಹರಿವು 8,500 ಕ್ಯುಸೆಕ್‌ ಆಗಿದ್ದು ಶನಿವಾರ ರಾತ್ರಿ ಅಥವಾ ಭಾನುವಾರ ಮುಂಜಾನೆ ವೇಳೆಗೆ ಗರಿಷ್ಠ ಮಟ್ಟ ತಲುಪಲಿದೆ ಎಂದು ಮೂಲಗಳು ತಿಳಿಸಿವೆ.

ಕೊಡಗು ಜಿಲ್ಲೆಯಾದ್ಯಂತ ಸಾಧಾರಣ ಮಳೆ ಮುಂದುವರಿದಿದೆ. ಕೆಆರ್‌ಎಸ್‌ ಜಲಾಶಯದ ಒಳಹರಿವು ಕಡಿಮೆಯಾಗಿದೆ.

ರಾಜ್ಯದ ಹಲವೆಡೆ ಸಾಧಾರಣ ಮಳೆ

ಶನಿವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ ರಾಜ್ಯ ಕರಾವಳಿ, ಹಾಗೂ ಒಳನಾಡಿನ ಹಲವೆಡೆ ಮಳೆಯಾಗಿದೆ.

ಆಗುಂಬೆಯಲ್ಲಿ 9 ಸೆಂ.ಮೀ. ಮಳೆಯಾಗಿದೆ. ಕಮ್ಮರಡಿಯಲ್ಲಿ 7 ಸೆಂ.ಮೀ., ಯಲ್ಲಾಪುರದಲ್ಲಿ 6 ಸೆಂ.ಮೀ., ಮಂಕಿ, ಲೋಂಡ, ಭಾಗಮಂಡಲದಲ್ಲಿ ತಲಾ 5 ಸೆಂ.ಮೀ., ಬೆಳ್ತಂಗಡಿ, ಸಿದ್ದಾಪುರ, ಹುಂಚದಕಟ್ಟೆ, ಶೃಂಗೇರಿ, ಕೊಟ್ಟಿಗೇಹಾರದಲ್ಲಿ ತಲಾ 4 ಸೆಂ.ಮೀ., ಮಳೆಯಾಗಿದೆ.

ಹವಾಮಾನ ಮುನ್ಸೂಚನೆ: ಮುಂದಿನ 48 ಗಂಟೆಗಳಲ್ಲಿ ರಾಜ್ಯ ಕರಾವಳಿಯ ಬಹುತೇಕ ಪ್ರದೇಶಗಳಲ್ಲಿ ಹಾಗೂ ಒಳನಾಡಿನ ಕೆಲವೆಡೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಮುಖ್ಯಾಂಶಗಳು

* ಬೆಳಗಾವಿ ಜಿಲ್ಲೆಯಲ್ಲಿ ಮುಳುಗಿದ ಸ್ಥಿತಿಯಲ್ಲಿಯೇ ಏಳು ಸೇತುವೆಗಳು

* ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ತಗ್ಗಿದ ಮಳೆ
* ಆಗುಂಬೆಯಲ್ಲಿ 101.4 ಮಿ.ಮೀ. ವರ್ಷಧಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT