ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಮಿಗೆ ಕಶ್ಯಪ್‌, ಪ್ರಣಯ್‌

Last Updated 22 ಜುಲೈ 2017, 19:30 IST
ಅಕ್ಷರ ಗಾತ್ರ

ಅನಹೀಮ್‌, ಅಮೆರಿಕ: ಅಮೆರಿಕ ಓಪನ್‌ ಗ್ರ್ಯಾನ್‌ ಪ್ರಿ ಗೋಲ್ಡ್‌  ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಭಾರತದ ಪರುಪಳ್ಳಿ ಕಶ್ಯಪ್‌ ಮತ್ತು ಎಚ್‌.ಎಸ್‌. ಪ್ರಣಯ್‌ ಅವರು ಗೆಲುವಿನ ಓಟ ಮುಂದುವರಿಸಿದ್ದಾರೆ. ಇವರು ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.

ಪುರುಷರ ಡಬಲ್ಸ್‌ ವಿಭಾಗದಲ್ಲಿ ಭಾರತದ ಸವಾಲು ಎತ್ತಿ ಹಿಡಿದಿರುವ ಮನು ಅತ್ರಿ ಮತ್ತು ಬಿ. ಸುಮೀತ್‌ ರೆಡ್ಡಿ ಅವರೂ ನಾಲ್ಕರ ಘಟ್ಟ ಪ್ರವೇಶಿಸಿದ್ದಾರೆ.

ಶನಿವಾರ ನಡೆದ ಸಿಂಗಲ್ಸ್‌ ವಿಭಾಗದ ಕ್ವಾರ್ಟರ್‌ ಫೈನಲ್‌ ಹಣಾಹಣಿಯಲ್ಲಿ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದಿರುವ ಕಶ್ಯಪ್‌ 21–13, 21–16ರ ನೇರ ಗೇಮ್‌ಗಳಿಂದ ಸಮೀರ್‌ ವರ್ಮಾ ಅವರನ್ನು ಸೋಲಿಸಿದರು.

ಇದರೊಂದಿಗೆ ಏಳು ತಿಂಗಳ ನಂತರ ಟೂರ್ನಿಯೊಂದರಲ್ಲಿ ಸೆಮಿಫೈನಲ್‌ ಪ್ರವೇಶಿಸಿದರು. ಹೋದ ವರ್ಷದ ಡಿಸೆಂಬರ್‌ನಲ್ಲಿ ನಡೆದಿದ್ದ ಕೊರಿಯಾ ಓಪನ್‌ ಬಳಿಕ ಕಶ್ಯಪ್‌ ಅವರು ಒಮ್ಮೆಯೂ ನಾಲ್ಕರ ಘಟ್ಟ ತಲುಪಿರಲಿಲ್ಲ.

ಹಿಂದಿನ ಪಂದ್ಯಗಳಲ್ಲಿ ಬಲಿಷ್ಠ ಎದುರಾಳಿಗಳ ಸವಾಲು ಮೀರಿ ನಿಂತು ವಿಶ್ವಾಸದಿಂದ ಪುಟಿಯುತ್ತಿದ್ದ ಕಶ್ಯಪ್‌ ಅವರು ಸಮೀರ್‌ ವಿರುದ್ಧವೂ ಪ್ರಾಬಲ್ಯ ಮೆರೆದರು.

ಮೊದಲ ಗೇಮ್‌ನ ಶುರುವಿನಿಂದಲೇ ಚುರುಕಿನ ಆಟಕ್ಕೆ ಒತ್ತು ನೀಡಿದ ಅವರು ಆಕರ್ಷಕ ಸರ್ವ್‌ಗಳನ್ನು ಮಾಡಿ ಪಾಯಿಂಟ್ಸ್‌ ಕಲೆಹಾಕಿದರು. ಇನ್ನೊಂದೆಡೆ ಸಮೀರ್‌ ಕೂಡ ದಿಟ್ಟ ಹೋರಾಟ ನಡೆಸಿದರು. ಹೀಗಾಗಿ ಗೇಮ್‌ನಲ್ಲಿ 13–13ರ ಸಮಬಲ ಕಂಡುಬಂತು.

ಆ ನಂತರ ಕಶ್ಯಪ್‌ ಆಟ ಕಳೆಗಟ್ಟಿತು. ಎದುರಾಳಿ ಆಟಗಾರ ನೆಟ್‌ನಿಂದ ದೂರ ನಿಂತು ಆಡುತ್ತಿದ್ದುದನ್ನು ಗಮನಿಸಿದ ಅವರು ಷಟಲ್‌ ಅನ್ನು ನೆಟ್‌ನ ಸಮೀಪದಲ್ಲಿ ಡ್ರಾಪ್‌ ಮಾಡುವ ತಂತ್ರ ಅನುಸರಿಸಿ ಸಫಲರಾದರು. ಜೊತೆಗೆ ಮನಮೋಹಕ ಕ್ರಾಸ್‌ಕೋರ್ಟ್‌ ಹೊಡೆತ ಗಳ ಮೂಲಕ ಸಮೀರ್‌ ಅವರನ್ನು ಕಂಗೆಡಿಸಿ ಗೇಮ್‌ ಗೆದ್ದುಕೊಂಡರು.

ಆರಂಭಿಕ ಹಿನ್ನಡೆಯಿಂದ ಸಮೀರ್‌ ಎದೆಗುಂದಲಿಲ್ಲ. ಎರಡನೇ ಗೇಮ್‌ನಲ್ಲಿ ದಿಟ್ಟ ಆಟ ಆಡಿದ ಅವರು ಕಶ್ಯಪ್‌ಗೆ ಪ್ರಬಲ ಪೈಪೋಟಿ ಒಡ್ಡಿದರು. ಹೀಗಾಗಿ 16–16ರಲ್ಲಿ ಸಮಬಲ ಕಂಡುಬಂದಿತ್ತ ಲ್ಲದೆ ಆಟದ ರೋಚಕತೆಯೂ ಹೆಚ್ಚಿತ್ತು.

ಒತ್ತಡದ ಸನ್ನಿವೇಶದಲ್ಲಿ ಕಶ್ಯಪ್‌ ಮಿಂಚಿದರು. ಬ್ಯಾಕ್‌ ಹ್ಯಾಂಡ್‌ ಮತ್ತು ಫೋರ್‌ ಹ್ಯಾಂಡ್‌ ಹೊಡೆತಗಳ ಮೂಲಕ  ಸತತ ಐದು ಪಾಯಿಂಟ್ಸ್‌ ಕಲೆಹಾಕಿದ ಅವರು ಸಂಭ್ರಮದ ಹೊಳೆಯಲ್ಲಿ ಮಿಂದೆದ್ದರು. ಈ ಹೋರಾಟ 40 ನಿಮಿಷಗಳ ಕಾಲ ನಡೆಯಿತು. ಸೆಮಿಫೈನಲ್‌ನಲ್ಲಿ ಕಶ್ಯಪ್‌ ಅವರು ಕೊರಿಯಾದ ಕ್ವಾಂಗ್‌ ಹೀ ಹಿವೊ ವಿರುದ್ಧ ಸೆಣಸಲಿದ್ದಾರೆ.

ಪ್ರಣಯ್‌ ಮಿಂಚು: ಎರಡನೇ ಶ್ರೇಯಾಂಕಿತ ಆಟಗಾರ ಪ್ರಣಯ್‌ ಅವರು ಕ್ವಾರ್ಟರ್ ಫೈನಲ್‌ನಲ್ಲಿ 10–21, 21–15, 21–18ರಲ್ಲಿ ಜಪಾನ್‌ನ ಕಂಟಾ ಸುನೆಯಾಮ ಅವರನ್ನು ಸೋಲಿಸಿದರು.

ಮೊದಲ ಗೇಮ್‌ನಲ್ಲಿ ಎದುರಾದ ನಿರಾಸೆಯಿಂದ ವಿಶ್ವಾಸ ಕಳೆದುಕೊಳ್ಳದ ಪ್ರಣಯ್‌ ಅವರು ಎರಡು ಮತ್ತು ಮೂರನೇ ಗೇಮ್‌ಗಳಲ್ಲಿ ಆಕ್ರಮಣಕಾರಿ ಆಟದ ಮೂಲಕ ಜಪಾನ್‌ನ ಆಟಗಾರನ್ನು ತಬ್ಬಿಬ್ಬುಗೊಳಿಸಿ ಗೆಲುವು ತಮ್ಮದಾಗಿಸಿಕೊಂಡರು. ನಾಲ್ಕರ ಘಟ್ಟದ ಹಣಾಹಣಿಯಲ್ಲಿ ಪ್ರಣಯ್‌ ಅವರು ವಿಯೆಟ್ನಾಂನ 15ನೇ ಶ್ರೇಯಾಂಕಿತ ಆಟಗಾರ ತಿಯೆನ್‌ ಮಿನ್ಹ್‌ ಜುಯೆನ್‌ ವಿರುದ್ಧ ಆಡಲಿದ್ದಾರೆ.

ಡಬಲ್ಸ್‌ ವಿಭಾಗದ ಎಂಟರ ಘಟ್ಟದ ಹೋರಾಟದಲ್ಲಿ ಮೂರನೇ ಶ್ರೇಯಾಂಕಿತ ಜೋಡಿ ಮನು ಅತ್ರಿ ಮತ್ತು ಬಿ. ಸುಮಿತ್‌ ರೆಡ್ಡಿ 21–18, 22–20ರ ನೇರ ಗೇಮ್‌ಗಳಿಂದ ಜಪಾನ್‌ನ ಹಿರೊಕಿ  ಒಕಾಮುರಾ ಮತ್ತು ಮಸಾಯುಕಿ ಒನೊಡೆರಾ ಅವರನ್ನು ಸೋಲಿಸಿದರು.

ಮುಂದಿನ ಪಂದ್ಯದಲ್ಲಿ ಮನು ಮತ್ತು ಸುಮಿತ್‌ ಅವರು ಚೀನಾ ತೈಪೆಯ ಅಗ್ರ ಶ್ರೇಯಾಂಕದ ಜೋಡಿ ಲು ಚಿಂಗ್‌ ಯಾವೊ ಮತ್ತು ಯಾಂಗ್‌ ಪೊ ಹಾನ್‌ ವಿರುದ್ಧ ಪೈಪೋಟಿ ನಡೆಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT