ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುತೂಹಲ ಮೂಡಿಸಿದ ನಿತೀಶ್–ರಾಹುಲ್ ಭೇಟಿ

Last Updated 22 ಜುಲೈ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ಬಿಹಾರದ ಮಹಾ ಮೈತ್ರಿಕೂಟದಲ್ಲಿ ಕಾಣಿಸಿಕೊಂಡ ಬಿಕ್ಕಟ್ಟಿನ ಸಂದರ್ಭದಲ್ಲಿ ನಿತೀಶ್ ಕುಮಾರ್ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಚರ್ಚಿಸಿರುವುದು ರಾಜಕೀಯ ವಲಯದಲ್ಲಿ ಕತೂಹಲ ಮೂಡಿಸಿದೆ.

ತುಘಲಕ್ ಮಾರ್ಗದಲ್ಲಿ ಇರುವ ರಾಹುಲ್ ನಿವಾಸಕ್ಕೆ ತೆರಳಿದ ನಿತಿಶ್, ಪ್ರಸಕ್ತ ರಾಜ್ಯದ ರಾಜಕೀಯ ಬೆಳವಣಿಗೆಗಳ ಬಗ್ಗೆ 40 ನಿಮಿಷ ಚರ್ಚಿಸಿದರು.

ಬಿಹಾರದ ಉಪ ಮುಖ್ಯಮಂತ್ರಿ ಮತ್ತು ಲಾಲು ಪ್ರಸಾದ್ ಅವರ ಪುತ್ರ ತೇಜಸ್ವಿ ವಿರುದ್ಧದ ಭ್ರಷ್ಟಾಚಾರ ಆಪಾದನೆಯ ಬಗ್ಗೆಯೂ ಚರ್ಚೆ ನಡೆಯಿತು ಎಂದು ಜೆಡಿಯು ಮೂಲಗಳು ತಿಳಿಸಿವೆ.

ನಿರ್ಗಮಿಸುತ್ತಿರುವ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಗೌರವಾರ್ಥ ಪ್ರಧಾನಿ ಮೋದಿ ಅವರು ಏರ್ಪಡಿಸಿದ್ದ ಔತಣ ಕೂಟದಲ್ಲಿ ಪಾಲ್ಗೊಳ್ಳಲು ದೆಹಲಿಗೆ ಬಂದಿರುವ ನಿತೀಶ್ ಇದೇ ಸಂದರ್ಭ ಬಳಸಿಕೊಂಡು ರಾಹುಲ್ ಜತೆ ರಾಜಕೀಯ ಚರ್ಚೆ ನಡೆಸಿರುವುದು ಮಹತ್ವದ ಬೆಳವಣಿಗೆ ಎಂದು ಹೇಳಲಾಗುತ್ತಿದೆ.

‘ಮೋದಿ ಸರ್ಕಾರವು ರಾಜಕೀಯ ಉದ್ದೇಶದಿಂದ ತೇಜಸ್ವಿ ವಿರುದ್ಧ ಎಫ್‌ಐಆರ್ ದಾಖಲಿಸಿರಬಹುದು. ಅದೊಂದೇ ಕಾರಣಕ್ಕೆ ಅವರ ರಾಜೀನಾಮೆಗೆ ಒತ್ತಾಯಿಸುವುದು ಸರಿಯಲ್ಲ’ ಎಂದು ರಾಹುಲ್ ಗಾಂಧಿ ಅವರು ನಿತೀಶ್ ಅವರಿಗೆ ಸಲಹೆ ಮಾಡಿದರು ಎಂದು ತಿಳಿದುಬಂದಿದೆ.

ತೇಜಸ್ವಿ ಸಂಪುಟದಲ್ಲಿ ಮುಂದು ವರಿದರೆ ತಮ್ಮ ಸರ್ಕಾರದ ಭ್ರಷ್ಟಾಚಾರ ವಿರೋಧಿ ಧೋರಣೆಗೆ ಧಕ್ಕೆ ಬರುತ್ತದೆ ಹಾಗೂ ಈ ತಿಂಗಳ 28ರಿಂದ ಆರಂಭವಾಗುವ ವಿಧಾನಸಭೆ ಅಧಿವೇಶನದಲ್ಲಿ ಸರ್ಕಾರ ಮುಜುಗರ ಎದುರಿಸಬೇಕಾಗುತ್ತದೆ ಎಂದು ನಿತೀಶ್  ತಮ್ಮ ನಿಲುವು ಸ್ಪಷ್ಟಪಡಿಸಿದರು ಎನ್ನಲಾಗಿದೆ.

ಪುತ್ರನ ರಾಜೀನಾಮೆಗೆ ಒತ್ತಾಯಿಸಿರುವುದು ಮತ್ತು ರಾಷ್ಟ್ರಪತಿ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ರಾಮನಾಥ ಕೋವಿಂದ್ ಅವರನ್ನು ನಿತೀಶ್‌ ಬೆಂಬಲಿಸಿದ ಬಗ್ಗೆ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ ತೀವ್ರ ಅಸಮಾಧಾನ ಹೊಂದಿದ್ದಾರೆ. ಲಾಲು ಅವರ ಕೋಪ ಮಹಾ ಮೈತ್ರಿಕೂಟದ ಸರ್ಕಾರಕ್ಕೆ ಅಪಾಯ ಒಡ್ಡಬಹುದು ಎಂಬ ಆತಂಕ ಕಾಡುತ್ತಿರುವ ಸಂದರ್ಭದಲ್ಲಿ ರಾಹುಲ್ ಮತ್ತು ನಿತೀಶ್  ಮಾತುಕತೆ ರಾಜಕೀಯವಾಗಿ ಬಹಳ ಮಹತ್ವ ಪಡೆದುಕೊಂಡಿದೆ.

ವ್ಯರ್ಥ: ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರನ್ನು ಭೇಟಿಯಾದ ಬಿಹಾರ  ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು ಸುಮ್ಮನೆ ತಮ್ಮ ಸಮಯವನ್ನು ವ್ಯರ್ಥ ಮಾಡುತ್ತಿದ್ದಾರೆ ಎಂದು ಬಿಹಾರ ಬಿಜೆಪಿ ಘಟಕ ಟೀಕಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT