ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊರ ರಾಜ್ಯದವರಿಗೆ ಮಣೆ: ಕರ್ನಾಟಕದ ಕೈತಪ್ಪುತ್ತಿರುವ 551 ವೈದ್ಯಕೀಯ ಸೀಟುಗಳು!

Last Updated 22 ಜುಲೈ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ಸರ್ಕಾರದ ಉದಾರ ನಡೆಯಿಂದಾಗಿ ಖಾಸಗಿ ಕಾಲೇಜುಗಳಲ್ಲಿನ 551 ವೈದ್ಯಕೀಯ ಸೀಟುಗಳು ಹೊರರಾಜ್ಯದ ವಿದ್ಯಾರ್ಥಿಗಳ ಪಾಲಾಗುತ್ತಿವೆ. ಈ ಸೀಟು ಪಡೆಯುವುದಕ್ಕಾಗಿ ಹೊರ ರಾಜ್ಯಗಳ 20,071 ವಿದ್ಯಾರ್ಥಿಗಳು ರಾಜ್ಯದಲ್ಲಿ ದಾಖಲಾತಿ ಪರಿಶೀಲನೆ ಮಾಡಿಸಿಕೊಂಡಿದ್ದಾರೆ.

‘ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಇತ್ತೀಚೆಗೆ ಪ್ರಕಟಿಸಿರುವ ಸೀಟು ವಿವರದಲ್ಲಿ (ಸೀಟ್‌ ಮ್ಯಾಟ್ರಿಕ್ಸ್‌) ‘ಓಪನ್ ಸೀಟ್’ ವಿಭಾಗದಡಿ 551 ಸೀಟು ಇವೆ. ಈ ಸೀಟುಗಳಿಗಾಗಿ ಕರ್ನಾಟಕದವರಷ್ಟೇ ಅಲ್ಲದೆ, ದೇಶದ ಯಾವುದೇ ಭಾಗದ ವಿದ್ಯಾರ್ಥಿ ಅರ್ಜಿ ಸಲ್ಲಿಸಬಹುದು. ನೀಟ್‌ ಮೆರಿಟ್‌ನಲ್ಲಿ ಉತ್ತರ ಭಾರತದ ವಿದ್ಯಾರ್ಥಿಗಳು ಮುಂದಿದ್ದು, ಈ ಸೀಟುಗಳು ಸುಲಭವಾಗಿ ಅವರ ಪಾಲಾಗಬಹುದು ಎಂಬುದು ರಾಜ್ಯ ವಿದ್ಯಾರ್ಥಿಗಳ ಪೋಷಕರ ಆಕ್ಷೇಪ.

‘ಅನೇಕ ರಾಜ್ಯಗಳು ಅಖಿಲ ಭಾರತ ಕೋಟಾದ ಸೀಟುಗಳನ್ನು ಬಿಟ್ಟು ಉಳಿದೆಲ್ಲಾ ಸೀಟುಗಳನ್ನು ತಮ್ಮ ರಾಜ್ಯದ ವಿದ್ಯಾರ್ಥಿಗಳಿಗೇ ಮೀಸಲಿಟ್ಟಿವೆ. ಇದರಿಂದಾಗಿ ಕರ್ನಾಟಕದ ವಿದ್ಯಾರ್ಥಿಗಳು ಮಹಾರಾಷ್ಟ್ರ, ಕೇರಳ ಅಥವಾ ಬೇರೆ ಯಾವುದೇ ರಾಜ್ಯದಲ್ಲಿ ಸೀಟು ಪಡೆಯುವುದಕ್ಕೆ ಸಾಧ್ಯವಾಗುತ್ತಿಲ್ಲ. ಆದರೆ, ಇಲ್ಲಿ ಮಾತ್ರ ಎಲ್ಲ ರಾಜ್ಯದವರನ್ನು ಕರೆದು ಸೀಟು ಕೊಡಲಾಗುತ್ತಿದೆ’ ಎಂಬುದು ಪೋಷಕರ ಆರೋಪ.

‘ಖಾಸಗಿ ಕಾಲೇಜುಗಳಿಗೆ ಸರ್ಕಾರ ನಿಗದಿ ಮಾಡಿದಷ್ಟು ಶುಲ್ಕ ಕೊಡಲು ನಾವು ಸಿದ್ಧವಿದ್ದರೂ ಸೀಟು ಕೊಡುವುದಿಲ್ಲ’ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

20,071 ವಿದ್ಯಾರ್ಥಿಗಳು: ಈ ಸೀಟುಗಳ ಮೇಲೆ ಕಣ್ಣಿಟ್ಟಿರುವ  ಹೊರ ರಾಜ್ಯಗಳ ಸಾವಿರಾರು ವಿದ್ಯಾರ್ಥಿಗಳು ಈಗಾಗಲೇ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ ದಾಖಲಾತಿ ಪರಿಶೀಲನೆ ಪೂರ್ಣಗೊಳಿಸಿದ್ದಾರೆ. ಜೂನ್‌ 13ರಿಂದ ಒಂದು ವಾರ ಮಧ್ಯರಾತ್ರಿವರೆಗೂ ದಾಖಲಾತಿ ಪರಿಶೀಲನೆ ಮಾಡಲಾಗಿದೆ. ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಮಾಹಿತಿ ಪ್ರಕಾರ ಹೊರರಾಜ್ಯಗಳ 20,071 ವಿದ್ಯಾರ್ಥಿಗಳು ದಾಖಲಾತಿ ಪರಿಶೀಲನೆ  ಮಾಡಿಸಿ ಅರ್ಹತೆ ಪಡೆದಿದ್ದಾರೆ.

ರ‍್ಯಾಂಕ್‌ ಬದಲು: ‘551 ಸೀಟುಗಳಿಗೆ ಅಖಿಲ ಭಾರತ ರ‍್ಯಾಂಕ್‌ ಪ್ರಕಟಿಸಲಾಗಿದೆ. ಉದಾಹರಣೆಗೆ  ಹೇಳುವುದಾದರೆ, ಕರ್ನಾಟಕದ ಮೆರಿಟ್‌ ಪಟ್ಟಿಯಲ್ಲಿ ಮೊದಲ ರ‍್ಯಾಂಕ್‌ ಪಡೆದ ವಿದ್ಯಾರ್ಥಿ ಅಖಿಲ ಭಾರತ ಮೆರಿಟ್‌ ಪಟ್ಟಿಯಲ್ಲಿ 47ನೇ ರ‍್ಯಾಂಕ್‌ಗೆ ಕುಸಿಯುತ್ತಾನೆ. ಹೀಗಾಗಿ 551 ಸೀಟುಗಳ ಪೈಕಿ ಮೆರಿಟ್‌ ಆಧಾರದ ಮೇಲೆ ಹೆಚ್ಚೆಂದರೆ ರಾಜ್ಯದ 20 ವಿದ್ಯಾರ್ಥಿಗಳಿಗೆ ಮಾತ್ರ ಎಂಬಿಬಿಎಸ್ ಸೀಟು ಸಿಗಬಹುದು’ ಎಂದು ಪೋಷಕರು ಮಾಹಿತಿ ನೀಡಿದರು.

‘ಮೆರಿಟ್‌ ಆಧಾರದ ಮೇಲೆ ಸೀಟು ಸಿಗಬೇಕು ಎಂಬ ಉದ್ದೇಶದಿಂದ ನೀಟ್‌ ಕಡ್ಡಾಯ ಮಾಡಲಾಗಿದೆ. ಅದರಂತೆ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಶೇ 15ರಷ್ಟು ಸೀಟುಗಳನ್ನು ಅಖಿಲ ಭಾರತ ಕೋಟಾದಡಿ ಸಂಪೂರ್ಣ ಮೆರಿಟ್‌ ಆಧಾರದಲ್ಲಿ ಹಂಚಿಕೆ ಮಾಡಲಾಗುತ್ತದೆ. ಇದಲ್ಲದೆ, ಅನಿವಾಸಿ ಭಾರತೀಯ (ಎನ್‌ಆರ್‌ಐ) ಮತ್ತು ಆಡಳಿತ ಮಂಡಳಿ ಕೋಟಾದಡಿ ಹೆಚ್ಚಿನ ಶುಲ್ಕ ಪಾವತಿಸುವ ಸಾಮರ್ಥ್ಯ ಇರುವವರು ಸೀಟು ಪಡೆಯುತ್ತಾರೆ. ಉಳಿದ ಸೀಟುಗಳನ್ನು ಮೆರಿಟ್‌ ಆಧಾರದ ಮೇಲೆ ರಾಜ್ಯದವರಿಗೆ ಮೀಸಲಿಡಬೇಕು’ ಎಂಬುದು ಪೋಷಕರ ಒತ್ತಾಯ.

‘ಶೇ 70ರಷ್ಟು ಸೀಟು ರಾಜ್ಯದ ವಿದ್ಯಾರ್ಥಿಗಳಿಗೆ’

‘ಎಂಬಿಬಿಎಸ್‌ನಲ್ಲಿ ಶೇ 70ರಷ್ಟು ಸೀಟುಗಳು ರಾಜ್ಯದ ವಿದ್ಯಾರ್ಥಿಗಳಿಗೆ ಲಭ್ಯವಾಗಲಿವೆ. ಈ ವಿಚಾರದಲ್ಲಿ ಇತರೆ ರಾಜ್ಯಗಳಿಗಿಂತ ಕರ್ನಾಟಕ ಮುಂದಿದೆ’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ ಪಾಟೀಲ ಹೇಳಿದರು.

‘ತಮಿಳುನಾಡು ಸರ್ಕಾರವು ಅಖಿಲ ಭಾರತ ಕೋಟಾ ಬಿಟ್ಟು ಶೇ85ರಷ್ಟು ಸೀಟುಗಳನ್ನು ತನ್ನ ರಾಜ್ಯದವರಿಗೆ ಮೀಸಲಿಟ್ಟಿತ್ತು. ಆದರೆ,ಸುಪ್ರೀಂ ಕೋರ್ಟ್‌ ರದ್ದು ಮಾಡಿದೆ. ಎಲ್ಲ ಸೀಟುಗಳನ್ನು ನಮ್ಮ ರಾಜ್ಯದವರಿಗೇ  ಮೀಸಲಿಡಲು ಅಸಾಧ್ಯ’ ಎಂದರು.

ಈ ಕುರಿತು ಪ್ರತಿಕ್ರಿಯೆ ಪಡೆಯಲು ವೈದ್ಯಕೀಯ ಶಿಕ್ಷಣ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಿ. ಮಂಜುಳಾ ಅವರಿಗೆ ಶನಿವಾರ ರಾತ್ರಿ (9.40ಕ್ಕೆ) ಕರೆ ಮಾಡಿದಾಗ, ‘ಬಹಳ ಲೇಟ್‌ ಆಗಿ ಕರೆ ಮಾಡಿದ್ದೀರಿ. ನಾಳೆ ಮಾತನಾಡುತ್ತೇನೆ’ ಎಂದು ಕರೆ ಕಡಿತಗೊಳಿಸಿದರು.

ಮುಖ್ಯಾಂಶಗಳು

* 28 ಖಾಸಗಿ ಕಾಲೇಜುಗಳ ಸೀಟು
* ಪೋಷಕರ ಆಕ್ರೋಶ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT