ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆ್ಯಪ್ ಅಭಿವೃದ್ಧಿಪಡಿಸಲು ಸರಗಳ್ಳತನಕ್ಕಿಳಿದ!

ಜಯನಗರ ಪೊಲೀಸ್ ಬಲೆಗೆ ಬಿದ್ದ ಇಬ್ಬರು ಸರಗಳ್ಳರು
Last Updated 22 ಜುಲೈ 2017, 19:49 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿರುವ ಶಾಲೆಗಳ ಬಗ್ಗೆ ಸಮಗ್ರ ಮಾಹಿತಿ ಒದಗಿಸುವಂಥ ‘ಸ್ಕೂಲ್ ಆ್ಯಪ್’ ಅಭಿವೃದ್ಧಿಪಡಿಸಲು ಸರಗಳ್ಳತನದ ಹಾದಿ ತುಳಿದಿದ್ದ ವ್ಯಕ್ತಿಯೊಬ್ಬ, ಈಗ ಪೊಲೀಸರಿಗೆ ಸಿಕ್ಕಿಬಿದ್ದು ಗೆಳೆಯನ ಜತೆ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾನೆ.

ಎಚ್‌ಎಸ್‌ಆರ್‌ ಲೇಔಟ್‌ನ ತಬ್ರೇಜ್ ಅಲಿಯಾಸ್ ಜಬೀವುಲ್ಲ (30) ಹಾಗೂ ಮಹಾಲಕ್ಷ್ಮಿಲೇಔಟ್‌ನ ಅರುಣ್‌ಕುಮಾರ್ (36) ಎಂಬುವರನ್ನು ಬಂಧಿಸಿರುವ ಜಯನಗರ ಪೊಲೀಸರು, ₹ 35 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಿದ್ದಾರೆ.

ಇವರಿಬ್ಬರೂ ಕೆಲ ದಿನಗಳ ಹಿಂದೆ ರಾಜರಾಜೇಶ್ವರಿನಗರದಲ್ಲಿ ಮಹಿಳೆಯೊಬ್ಬರ ಸರ ಕಿತ್ತುಕೊಂಡು ಪರಾರಿಯಾಗಿದ್ದರು. ಆ ಪ್ರದೇಶದ ಸಿ.ಸಿ ಟಿ.ವಿ ಕ್ಯಾಮೆರಾ ನೀಡಿದ ಸುಳಿವಿನಿಂದ ಪೊಲೀಸರು ತನಿಖೆಗಿಳಿದಾಗ ಚಾಲಾಕಿಗಳು ಸಿಕ್ಕಿಬಿದ್ದಿದ್ದಾರೆ.

‘ಆ್ಯಪ್‌’ಗೆ ಹಣ ಬೇಕಿತ್ತು: ಸೋದರ ಸಂಬಂಧಿಯನ್ನು ಹತ್ಯೆಗೈದ ಆರೋಪದಡಿ ಕಾಮಾಕ್ಷಿಪಾಳ್ಯ ಪೊಲೀಸರು ಅರುಣ್‌ನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಇದೇ ಸಂದರ್ಭದಲ್ಲಿ ತಬ್ರೇಜ್ ಸಹ ಸರಗಳವು ಪ್ರಕರಣದಲ್ಲಿ ಕಾರಾಗೃಹ ಸೇರಿದ್ದ. ಪರಸ್ಪರರ ನಡುವೆ ಅಲ್ಲಿಂದಲೇ ಗೆಳೆತನ ಶುರುವಾಗಿತ್ತು.

ಇದೇ ಮಾರ್ಚ್‌ನಲ್ಲಿ ಜಾಮೀನಿನ ಮೇಲೆ ಜೈಲಿನಿಂದ ಹೊರಬಂದ ಅರುಣ್, ಹೊಸ ಜೀವನ ಕಟ್ಟಿಕೊಳ್ಳುವ ಚಿಂತನೆಯಲ್ಲಿದ್ದ. ಆಗ ಆತನಿಗೆ  ಶಾಲಾ–ಕಾಲೇಜುಗಳ ಸಮಗ್ರ ಮಾಹಿತಿ ಒದಗಿಸುವಂಥ ಮೊಬೈಲ್ ಆ್ಯಪ್ ಅಭಿವೃದ್ಧಿಪಡಿಸಬೇಕೆಂಬ ಯೋಚನೆ ಹೊಳೆದಿತ್ತು.

ಕೂಡಲೇ ಆತ ಸಾಫ್ಟ್‌ವೇರ್ ಅಭಿವೃದ್ಧಿಪಡಿಸುವ ಎಂಜಿನಿಯರ್‌ವೊಬ್ಬರನ್ನು ಸಂಪರ್ಕಿಸಿ, ತನ್ನ ನಿರ್ಧಾರದ ಕುರಿತಾಗಿ ಚರ್ಚಿಸಿದ್ದ. ಅದಕ್ಕೆ ಅವರು, ‘ಆ್ಯಪ್ ಅಭಿವೃದ್ಧಿಪಡಿಸಲು ₹2 ಲಕ್ಷ ವೆಚ್ಚವಾಗುತ್ತದೆ. ನೀವು ಹಣ ನೀಡುವುದಾದರೆ ಕೆಲಸ ಪ್ರಾರಂಭಿಸುತ್ತೇನೆ’ ಎಂದಿದ್ದರು.

ಹಣ ಹೊಂದಿಸಿಕೊಂಡು ಬರುವುದಾಗಿ ಹೇಳಿ ಎಂಜಿನಿಯರ್ ಕಚೇರಿಯಿಂದ ಹೊರಬಂದಿದ್ದ ಅರುಣ್, ಇತ್ತೀಚೆಗೆ  ಜೈಲಿನಿಂದ ಬಿಡುಗಡೆಯಾಗಿದ್ದ ಗೆಳೆಯ ತಬ್ರೇಜ್‌ನನ್ನು ಸಂಪರ್ಕಿಸಿ ಹಣಕಾಸಿನ ನೆರವು ಕೇಳಿದ್ದ. ತನ್ನ ಬಳಿ ಸದ್ಯಕ್ಕೆ ಹಣವಿಲ್ಲ ಎಂದಿದ್ದ ಆತ, ಸರಗಳ್ಳತನದ ಮೂಲಕ ಸಂಪಾದನೆ ಮಾಡುವ ಉಪಾಯ ಹೇಳಿದ್ದ ಎಂದು ಪೊಲೀಸರು ಹೇಳಿದ್ದಾರೆ. 

ಮೊದಲು ಸ್ಕೂಟರ್ ಕದ್ದರು: ಸ್ನೇಹಿತನ ಸಲಹೆಯನ್ನು ಪಾಲಿಸಲು ಸಜ್ಜಾದ ಅರುಣ್, ಮಲ್ಲೇಶ್ವರ ಸಮೀಪದ ಮಾಲ್‌ ಎದುರು ಮಹಿಳೆಯೊಬ್ಬರು ನಿಲ್ಲಿಸಿದ್ದ ಸ್ಕೂಟರನ್ನು ನಕಲಿ ಕೀ ಬಳಸಿ ಕಳವು ಮಾಡಿದ್ದ.

ನಂತರ ಅದರ ನಂಬರ್ ಪ್ಲೇಟ್ ಬದಲಾಯಿಸಿದ ಆರೋಪಿಗಳು, ಒಂಟಿ ಮಹಿಳೆಯರ ಸರ ದೋಚಲು ರಸ್ತೆಗಿಳಿದಿದ್ದರು.  ಮೂರೇ ತಿಂಗಳಲ್ಲಿ ಜೆ.ಪಿ.ನಗರ, ಸಿದ್ದಾಪುರ, ಜಯನಗರ, ಬನಶಂಕರಿ, ಕೋಣನಕುಂಟೆ, ಸುಬ್ರಹ್ಮಣ್ಯಪುರ, ವಿ.ವಿ.ಪುರ, ಚಂದ್ರಾಲೇಔಟ್, ರಾಜರಾಜೇಶ್ವರಿನಗರ, ವಿಜಯನಗರ, ಬಸವೇಶ್ವರನಗರ, ಮಹಾಲಕ್ಷ್ಮೀ ಲೇಔಟ್, ಮಲ್ಲೇಶ್ವರ, ರಾಜಾಜಿನಗರ, ಸುಬ್ರಹ್ಮಣ್ಯನಗರ, ಮೈಕೋ ಲೇಔಟ್ ಹಾಗೂ ಯಲಹಂಕ ಉಪ ನಗರ ಠಾಣೆಗಳ ವ್ಯಾಪ್ತಿಯಲ್ಲಿ 29 ಸರಗಳನ್ನು ದೋಚಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸಿಕ್ಕಿಬಿದ್ದಿದ್ದು ಹೀಗೆ?

ತಮ್ಮ ವಿಭಾಗದಲ್ಲಿ ನಡೆಯುತ್ತಿದ್ದ ಸರಣಿ ಸರಗಳವು ಪ್ರಕರಣಗಳಿಂದ ಎಚ್ಚೆತ್ತ ಡಿಸಿಪಿ (ದಕ್ಷಿಣ) ಎಸ್‌.ಡಿ.ಶರಣಪ್ಪ, ಸರಗಳ್ಳರ ಬೇಟೆಗೆ ಜಯನಗರ ಇನ್‌ಸ್ಪೆಕ್ಟರ್ ಉಮಾ ಮಹೇಶ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿದ್ದರು. ಆ ತಂಡವು ಕೃತ್ಯ ನಡೆದ ಎಲ್ಲ ಪ್ರದೇಶಗಳ ಸಿ.ಸಿ ಟಿ.ವಿ ಕ್ಯಾಮೆರಾಗಳನ್ನು ವಶಕ್ಕೆ ಪಡೆದು ಪರಿಶೀಲಿಸಿದಾಗ ರಾಜರಾಜೇಶ್ವರಿನಗರ ವ್ಯಾಪ್ತಿಯ ಕ್ಯಾಮೆರಾವೊಂದರಲ್ಲಿ ತಬ್ರೇಜ್‌ನ ಚಹರೆ ಸಿಕ್ಕಿತ್ತು.

ಆಗ ಜಯನಗರ ಠಾಣೆಯ ಕ್ರೈಂ ಸಿಬ್ಬಂದಿ, ‘ಸರ್ ಇವನು ತಬ್ರೇಜ್‌ನಂತೆ ಕಾಣಿಸುತ್ತಾನೆ. ಸರಗಳವು ಪ್ರಕರಣದಲ್ಲಿ ಹಿಂದೆ ನಾವೇ ಈತನನ್ನು ಬಂಧಿಸಿದ್ದೆವು’ ಎಂದು ಅಧಿಕಾರಿಗಳಿಗೆ ತಿಳಿಸಿದ್ದಾರೆ. ನಂತರ ಆ ಚಹರೆಯನ್ನು ಸಾಫ್ಟ್‌ವೇರ್‌್ ಮೂಲಕ ಅಭಿವೃದ್ಧಿಪಡಿಸಿದಾಗ, ತಬ್ರೇಜ್‌ನ ಮುಖ ಸ್ಪಷ್ಟವಾಗಿ ಕಾಣಿಸಿದೆ.

ನಂತರ ಸಿಬ್ಬಂದಿ ಮೊಬೈಲ್ ಕರೆ ವಿವರ (ಸಿಡಿಆರ್) ಆಧರಿಸಿ ತಬ್ರೇಜ್‌ನನ್ನು ವಶಕ್ಕೆ ಪಡೆದಿದ್ದಾರೆ. ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ತಪ್ಪೊಪ್ಪಿಕೊಂಡಿದ್ದಾನೆ. ಆತ ನೀಡಿದ ಸುಳಿವಿನಿಂದ ಪೊಲೀಸರು ಅರುಣ್‌ನನ್ನು ವಶಕ್ಕೆ ಪಡೆದಾಗ, ಸರಗಳ್ಳತನ ಹಿಂದಿರುವ  ‘ಸ್ಕೂಲ್ ಆ್ಯಪ್’ ಸಂಗತಿಯೂ ಬಯಲಾಗಿದೆ.

* 2011ರಿಂದ ಅಪರಾಧ ಕೃತ್ಯ ಪ್ರಾರಂಭಿಸಿದ ತಬ್ರೇಜ್ ವಿರುದ್ಧ ಕೊಲೆ, ಸುಲಿಗೆ, ಸರಗಳವು ಸೇರಿದಂತೆ 49 ಅಪರಾಧ ಪ್ರಕರಣಗಳು ದಾಖಲಾಗಿವೆ

–ಎಸ್‌.ಡಿ.ಶರಣಪ್ಪ, ಡಿಸಿಪಿ, ದಕ್ಷಿಣ ವಿಭಾಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT